ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನ ಸಸಿ ಉತ್ಪಾದನೆ, ಮಾರಾಟ ಕುಸಿತ

‘ಪ್ರಾತ್ಯಕ್ಷಿಕೆ ಮತ್ತು ಬೀಜೋತ್ಪಾದನಾ ಫಾರಂ’ನಲ್ಲಿ ಸಸಿ ಕೊರತೆ
Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ಲೋಕಸರ ಗ್ರಾಮದಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಸ್ಥಾಪಿಸಿರುವ ‘ಪ್ರಾತ್ಯಕ್ಷಿಕೆ ಮತ್ತು ಬೀಜೋತ್ಪಾದನಾ ಫಾರಂ’ ಉತ್ತಮ ಜಾತಿಯ ತೆಂಗು ತಳಿ ಅಭಿವೃದ್ಧಿಪಡಿಸುವಲ್ಲಿ ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಿದೆ. ಆದರೆ ನುಸಿಪೀಡೆ, ಸುಳಿ ರೋಗ ಹಾಗೂ ನೀರಿನ ಕೊರತೆಯಿಂದಾಗಿ ಐದು ವರ್ಷಗಳಿಂದ ತೆಂಗಿನ ಸಸಿ ಉತ್ಪಾದನೆ ಮತ್ತು ಮಾರಾಟದಲ್ಲಿ ವಿಪರೀತ ಕುಸಿತ ಕಂಡಿದೆ.

ರೋಗಬಾಧೆಯಿಂದ ತೆಂಗಿನ ಮರಗಳು ನಾಶ ಹೊಂದುತ್ತಿವೆ. ಭೀಕರ ಬರಗಾಲದಲ್ಲೂ ರೈತರಿಗೆ ಆರ್ಥಿಕವಾಗಿ ಪುನಶ್ಚೇತನ ನೀಡುತ್ತಿದ್ದ ಇವು ಹವಾಮಾನ ವೈಪರೀತ್ಯದಿಂದಾಗಿ ಸುಳಿ ಬಿದ್ದು ಒಣಗುತ್ತಿವೆ. ತೆಂಗಿನ ಸಸಿಯನ್ನು ಮಕ್ಕಳಂತೆ ಪೋಷಿಸುತ್ತಿದ್ದ ರೈತರು ಈಗ ತೆಂಗಿನ ಮರಗಳಿಂದ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಾತ್ಯಕ್ಷಿಕೆ ಮತ್ತು ಬೀಜೋತ್ಪಾದನಾ ಫಾರಂ’ನಲ್ಲಿ ತೆಂಗಿನ ಸಸಿಗಳ ಮಾರಾಟ ಕುಗ್ಗಿದೆ.

ತೆಂಗು ಮಾರಾಟ ಮಂಡಳಿ 1982ರಲ್ಲಿ ಲೋಕಸರ ಗ್ರಾಮದ 50 ಎಕರೆ ಫಲವತ್ತಾದ ಭೂಮಿಯಲ್ಲಿ ಈ ಫಾರಂ ಸ್ಥಾಪಿಸಿತು. ಇಲ್ಲಿ ಉತ್ಪಾದನೆಯಾದ ಉತ್ತಮ ಜಾತಿಯ ತೆಂಗಿನ ಸಸಿಗಳನ್ನು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ರೈತರೂ ಕೊಳ್ಳುತ್ತಾರೆ. ನಾಟಿ ಸಸಿ (ತಿಪಟೂರು ತೆಂಗು), ಗಿಡ್ಡ ತಳಿ (ಎಳನೀರು ಸಸಿ) ಹಾಗೂ ಹೈಬ್ರಿಡ್‌ ತಳಿ ಇಲ್ಲಿ ಉತ್ಪಾದನೆಯಾಗುತ್ತವೆ. 2011–12ನೇ ಸಾಲಿನಲ್ಲಿ ಈ ಕೇಂದ್ರದಲ್ಲಿ ಅತಿ ಹೆಚ್ಚು 4.3 ಲಕ್ಷ ತೆಂಗಿನ ಸಸಿ ಉತ್ಪಾದನೆ ಮಾಡಲಾಗಿದ್ದು ಅದರಲ್ಲಿ 2.58 ಲಕ್ಷ ಮಾರಾಟವಾಗಿವೆ.

ಆದರೆ, ಈಚೆಗೆ ಕೆಆರ್‌ಎಸ್‌ ಜಲಾಶಯ ತುಂಬದ ಕಾರಣ ತೆಂಗು ಉತ್ಪಾದನೆ ಹಾಗೂ ಮಾರಾಟ ಎರಡೂ ಕುಸಿತ ಕಂಡಿವೆ. 2017–18ನೇ ಸಾಲಿನಲ್ಲಿ 1.31 ಲಕ್ಷ ತೆಂಗಿನ ಸಸಿ ಉತ್ಪಾದಿಸಿದೆ. ಅದರಲ್ಲಿ ಕೇವಲ 97 ಸಾವಿರ ಸಸಿಗಳು ಮಾತ್ರ ಮಾರಾಟವಾಗಿವೆ. ಜೊತೆಗೆ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿದ್ದ ಕೊಬ್ಬರಿ ಎಣ್ಣೆ ಉತ್ಪಾದನಾ ಘಟಕವೂ ಸ್ಥಗಿತಗೊಂಡಿದೆ.

‘ಲೋಕಸರ ಫಾರಂನಲ್ಲಿ ಸಿಗುವ ತೆಂಗಿನ ಸಸಿಗಳಲ್ಲಿ ಕಳಪೆ ತಳಿ ಎನ್ನುವ ಪ್ರಶ್ನೆಯೇ ಇಲ್ಲ. ತೆಂಗಿನ ಸಸಿ ಅಭಿವೃದ್ಧಿಗೊಳಿಸಿದ ನಂತರ ತೋಟಗಾರಿಕೆ ವಿಜ್ಞಾನಿಗಳು ಅದರ ಗುಣಮಟ್ಟ ಪರೀಕ್ಷಿಸಿ ನಂತರ ರೈತರಿಗೆ ಮಾರಾಟ ಮಾಡುತ್ತಾರೆ. ಹೀಗಾಗಿ ಮೊದಲಿನಿಂದಲೂ ಇಲ್ಲಿಯ ಸಸಿಗಳಿಗೆ ಅಪಾರ ಬೇಡಿಕೆ ಇದೆ. ಆದರೆ, ತೆಂಗಿನ ಮರಗಳಿಗೆ ವಿವಿಧ ರೋಗಗಳು ಕಾಡಿದ ಕಾರಣ ರೈತರು ಕಲ್ಪವೃಕ್ಷದ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ತೆಂಗಿನ ಸಸಿ ಉತ್ಪಾದನೆ ಮತ್ತು ಮಾರಾಟ ಕಡಿಮೆಯಾಗಿದೆ’ ಎಂದು ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್‌ ತಿಳಿಸಿದರು.

ಬೇಡಿಕೆ ಇದೆ, ಸಸಿ ಇಲ್ಲ
ಈ ಬಾರಿ ಉತ್ತಮ ಮಳೆಯಾಗುತ್ತಿದ್ದು ರೈತರು ಮತ್ತೆ ತೆಂಗಿನ ಸಸಿ ಕೊಳ್ಳಲು ಫಾರಂನತ್ತ ಬರುತ್ತಿದ್ದಾರೆ. ಆದರೆ, ಬೇಡಿಕೆಗೆ ಅನುಗುಣವಾಗಿ ತೆಂಗಿನ ಸಸಿ ಉತ್ಪಾದನೆಯಾಗಿಲ್ಲ. ಕೇಂದ್ರಕ್ಕೆ ಬಂದ ರೈತರು ಸಸಿ ಸಿಗದೆ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.

‘ಮಳೆಯಾಗಿರುವ ಕಾರಣ ನುಸಿ ಪೀಡೆ, ಸುಳಿ ರೋಗ ನಿಯಂತ್ರಣಕ್ಕೆ ಬರುತ್ತಿದೆ. ಎಂಟು ವರ್ಷಗಳ ಹಿಂದೆ ಇದೇ ಫಾರಂನಲ್ಲಿ 100 ಸಸಿ ಕೊಂಡು ನೆಟ್ಟಿದ್ದೆ. ಮರಗಳು ಉತ್ತಮ ಫಲ ಕೊಡುತ್ತಿವೆ. ಈಗ 100 ಸಸಿ ಕೊಳ್ಳಲು ಬಂದೆ. ಆದರೆ ಜುಲೈ 1ರ ವರೆಗೆ ಸಸಿ ಇಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಕೆ.ಆರ್‌.ನಗರ ತಾಲ್ಲೂಕಿನಿಂದ ಫಾರಂಗೆ ಬಂದಿದ್ದ ತೆಂಗು ಬೆಳೆಗಾರ ರವಿಕುಮಾರ್‌ ತಿಳಿಸಿದರು.

ಮೂರು ರೀತಿಯಲ್ಲಿ ಮಾರಾಟ
‘ಪ್ರಾತ್ಯಕ್ಷಿಕೆ ಮತ್ತು ಬೀಜೋತ್ಪಾದನಾ ಫಾರಂ’ ಉತ್ಪಾದಿಸಿದ ತೆಂಗಿನ ಸಸಿಗಳನ್ನು ಮೂರು ರೀತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ನೋಂದಾಯಿಸಿಕೊಂಡ ಫಲಾನುಭವಿಗಳಿಗೆ ಉಚಿತವಾಗಿ ಸಸಿ ಹಂಚಿಕೆ ಮಾಡಲಾಗುತ್ತದೆ.

ನೋಂದಾಯಿಸಿದ ‘ತೆಂಗು ಬೆಳೆಗಾರರ ಸಹಕಾರ ಸಂಘ’ಗಳಿಗೂ ಫಾರಂ ಉಚಿತವಾಗಿ ಸಸಿ ವಿತರಣೆ ಮಾಡುತ್ತದೆ. ಜೊತೆಗೆ ಸಂಘಗಳ ಸದಸ್ಯರಿಗೆ ಗೊಬ್ಬರ, ಕೀಟನಾಶಕಗಳನ್ನೂ ಉಚಿತವಾಗಿ ನೀಡುತ್ತದೆ. ಅಲ್ಲದೆ ರೈತರು ನೇರವಾಗಿ ಫಾರಂಗೆ ಬಂದು ಹಣ ಕೊಟ್ಟು ಸಸಿ ಕೊಳ್ಳಬಹುದು.

ಒಂದು ನಾಟಿ ಸಸಿಗೆ ₹ 50, ಗಿಡ್ಡ ತಳಿಗೆ ₹ 60, ಹೈಬ್ರಿಡ್‌ ತೆಂಗಿನ ಸಸಿಗೆ ₹ 200 ಬೆಲೆ ಇದೆ.

‘ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಕಾಡಿದ್ದು, ಉತ್ಪಾದನೆ ಕಡಿಮೆಯಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಮೊದಲ ಆದ್ಯತೆಯಾಗಿ ಸಸಿ ವಿತರಣೆ ಮಾಡುತ್ತೇವೆ. ಫಲಾನುಭವಿಗಳಿಗೆ ವಿತರಿಸಿ ಉಳಿದರೆ ಮಾತ್ರ ನೇರವಾಗಿ ಮಾರಾಟ ಮಾಡುತ್ತೇವೆ. ಈ ವರ್ಷ ಇಲ್ಲಿಯವರೆಗೆ 50 ಸಾವಿರ ಸಸಿ ಫಾರಂನಲ್ಲಿ ಇವೆ. 25 ಸಾವಿರ ಮಾರಾಟವಾಗಿವೆ. ಸದ್ಯ ಫಲಾನುಭವಿಗಳಿಗೆ ಮಾತ್ರ ಸಸಿ ವಿತರಣೆ ಮಾಡುತ್ತಿದ್ದೇವೆ. ಜುಲೈ 1ರಿಂದ ನೇರವಾಗಿ ಮಾರಾಟ ಮಾಡುತ್ತೇವೆ’ ಎಂದು ಕೇಂದ್ರದ ಸಹಾಯಕ ನಿರ್ದೇಶಕ ಬಿ.ಚಿನ್ನರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT