ತೆರಿಗೆ ವಂಚಿಸಿದ ಉದ್ಯಮಿಗೆ 4 ವರ್ಷ ಜೈಲು

7

ತೆರಿಗೆ ವಂಚಿಸಿದ ಉದ್ಯಮಿಗೆ 4 ವರ್ಷ ಜೈಲು

Published:
Updated:
ತೆರಿಗೆ ವಂಚಿಸಿದ ಉದ್ಯಮಿಗೆ 4 ವರ್ಷ ಜೈಲು

ಬೆಂಗಳೂರು: ಬ್ಯಾಂಕ್‌ಗಳಲ್ಲಿ ₹ 9.62 ಕೋಟಿ ಠೇವಣಿ ಇಟ್ಟು, ಅದರಿಂದ ಬಂದ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಗೆ ತೋರಿಸದೆ ಬಚ್ಚಿಟ್ಟು ವಂಚಿಸಿದ ಆರೋಪದ ಮೇಲೆ ರಾಜಕೀಯ ಕುಟುಂಬವೊಂದಕ್ಕೆ ಸೇರಿದ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ ಇಲ್ಲಿನ ಆರ್ಥಿಕ ಅಪರಾಧಗಳ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ವಿಶ್ವಾಸ್‌ ಉದಯಸಿಂಗ್‌ ಲಾಡ್‌ ಶಿಕ್ಷೆಗೊಳಗಾಗಿರುವ ಉದ್ಯಮಿ. ಇವರು ‘ತಹ ಮೈನ್ಸ್‌ ಅಂಡ್‌ ಮಿನೆರಲ್ಸ್‌’, ‘ವಿ.ಎಸ್‌.ಎಲ್‌ ಸ್ಟೀಲ್ಸ್‌’, ’ವಿ.ಎಸ್‌.ಎಸ್‌.ಲ್ಯಾಂಡ್‌ ಡೆವಲಪರ್ಸ್‌ ಅಂಡ್‌ ಕನ್‌ಸ್ಟ್ರಕ್ಷನ್ಸ್‌’, ‘ವಿಎಸ್‌ಎಲ್‌ಬಿ ಪ್ರಾಜೆಕ್ಟ್ಸ್‌’, ‘ನೆಸ್ಟರ್‌ ಇನ್‌ಫೋಟೆಕ್‌ ಸೊಲ್ಯೂಷನ್‌ ಪ್ರೈ.ಲಿ’. ಸೇರಿದಂತೆ ಅನೇಕ ಕಂಪೆನಿಗಳ ನಿರ್ದೇಶಕರು ಹಾಗೂ ಪಾಲುದಾರರಾಗಿದ್ದಾರೆ.

ಲಾಡ್‌, ತುಮಕೂರು ಗ್ರೈನ್‌ ಮರ್ಚೆಂಟ್ಸ್ ಸಹಕಾರಿ ಬ್ಯಾಂಕ್‌ ಸೇರಿದಂತೆ ಅನೇಕ ಬ್ಯಾಂಕುಗಳಲ್ಲಿ 2010–11, 2011–12 ಮತ್ತು 2012–13ನೇ ಸಾಲಿನಲ್ಲಿ ₹ 9.62 ಕೋಟಿಯನ್ನು ಮೂರು ಹೆಸರಿನಲ್ಲಿ 103 ಖಾತೆಗಳಲ್ಲಿ ತಲಾ ಹತ್ತು ಲಕ್ಷಕ್ಕಿಂತಲೂ ಕಡಿಮೆ ಠೇವಣಿ ಇಟ್ಟಿದ್ದರು. ಅದರಿಂದ ₹ 69.34 ಲಕ್ಷ ಬಡ್ಡಿ ಪಡೆದಿದ್ದರು. ಆದಾಯ ತೆರಿಗೆ ಇಲಾಖೆ ಮಾಹಿತಿ ರವಾನೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದರು.

ಇದನ್ನು ಪತ್ತೆ ಮಾಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಶ್ವಾಸ್‌ ಉದಯ್‌ಸಿಂಗ್‌ ಲಾಡ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆರ್ಥಿಕ ಅಪರಾಧಗಳ ನ್ಯಾಯಾಲಯದ ನ್ಯಾಯಾಧೀಶ ಎಂ. ಶಾಂತಣ್ಣ ಆಳ್ವ, 2010–11ನೇ ಸಾಲಿನ ವಂಚನೆಗೆ ಎರಡು ವರ್ಷ, 2011–12 ಹಾಗೂ 2012–13ನೇ ಸಾಲಿಗೆ ತಲಾ ಒಂದು ವರ್ಷ ಕಠಿಣ ಸಜೆ ನೀಡಿ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ತೆರಿಗೆ ವಂಚನೆ ಪ್ರಕರಣದಲ್ಲಿ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ ನೀಡಲಾಗಿರುವ ಗರಿಷ್ಠ ಶಿಕ್ಷೆ ಇದಾಗಿದೆ. ಆದಾಯ ತೆರಿಗೆ ಇಲಾಖೆ ತೆರಿಗೆ ವಂಚನೆ ಪ್ರಕರಣದ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. ಪ್ರತಿಷ್ಠಿತ ಕಂಪೆನಿಗಳು ತೆರಿಗೆ ವಂಚಿಸಿರುವ ಅನೇಕ ಪ್ರಕರಣಗಳು ವಿಚಾರಣೆ ಹಂತದಲ್ಲಿದೆ ಎಂದು ಐ.ಟಿ ಇಲಾಖೆ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry