ಪ್ಲಾಸ್ಟಿಕ್‌ ತ್ಯಾಜ್ಯದಿಂದ ಇಂಧನ ಉತ್ಪಾದನೆ

7

ಪ್ಲಾಸ್ಟಿಕ್‌ ತ್ಯಾಜ್ಯದಿಂದ ಇಂಧನ ಉತ್ಪಾದನೆ

Published:
Updated:
ಪ್ಲಾಸ್ಟಿಕ್‌ ತ್ಯಾಜ್ಯದಿಂದ ಇಂಧನ ಉತ್ಪಾದನೆ

ನವದೆಹಲಿ: ಪ್ಲಾಸ್ಟಿಕ್ ತ್ಯಾಜ್ಯವನ್ನು ಇಂಧನವಾಗಿ ಪರಿವರ್ತಿಸುವ ಯಂತ್ರವನ್ನು ಮದ್ರಾಸ್‌ ಐಐಟಿಯ ಸಂಶೋಧನಾ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

‘ಸಾಮಾನ್ಯವಾಗಿ ಮರುಬಳಕೆ ಮಾಡದ ಪ್ಲಾಸ್ಟಿಕ್ ಬಾಟಲಿ ಮತ್ತು ತೆಳು ಪ್ಲಾಸ್ಟಿಕ್‌ ಚೀಲಗಳನ್ನೂ ಈ ಯಂತ್ರದಲ್ಲಿ ಇಂಧನವನ್ನಾಗಿ ಪರಿವರ್ತಿಸಬಹುದು. ಎಲ್ಲ ಸ್ವರೂಪದ ಪ್ಲಾಸ್ಟಿಕ್‌ ತ್ಯಾಜ್ಯವನ್ನೂ ಇಂಧನವನ್ನಾಗಿಸುತ್ತದೆ. ಇದು ಸೌರ ವಿದ್ಯುತ್‌ನಿಂದ ಕಾರ್ಯನಿರ್ವಹಿಸುತ್ತದೆ. 300ರಿಂದ 550 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಪ್ಲಾಸ್ಟಿಕ್‌ನ ರಾಸಾಯನಿಕ ಸಂಯೋಜನೆಯನ್ನು ವಿಭಜಿಸಿ, ಇಂಧನವನ್ನಾಗಿಸುತ್ತದೆ. 1 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ನಿಂದ 0.7 ಲೀಟರ್‌ನಷ್ಟು ಇಂಧನ ದೊರೆಯುತ್ತದೆ’ ಎಂದು ಸಂಶೋಧನಾ ತಂಡದ ಸದಸ್ಯೆ ರಮ್ಯಾ ಸೆಲ್ವರಾಜ್ ವಿವರಿಸಿದ್ದಾರೆ.

‘ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯೇ ಈ ಯಂತ್ರವನ್ನು ಅಭಿವೃದ್ಧಿಪಡಿಸಿದ್ದರ ಹಿಂದಿನ ಮುಖ್ಯ ಉದ್ದೇಶ. ದೇಶದ ಹಲವೆಡೆ ಪ್ಲಾಸ್ಟಿಕ್ ಮರುಬಳಕೆ ಘಟಕಗಳಿವೆ. ಆದರೆ ಆ ಘಟಕಗಳಿಗೆ ತ್ಯಾಜ್ಯ ಸರಿಯಾಗಿ ಪೂರೈಕೆಯಾಗದೆ, ಅವು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಚಿಕ್ಕ ಯಂತ್ರ ಅಭಿವೃದ್ಧಿಪಡಿಸಿದ್ದೇವೆ. ಇದನ್ನು ಕಸ ಸಂಗ್ರಹ ಘಟಕಗಳಲ್ಲಿ ಬಳಸಬಹುದು’ ಎಂದು ಅವರು ವಿವರಿಸಿದ್ದಾರೆ.

‘ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಪ್ರಕ್ರಿಯೆಯನ್ನು ಈ ಯಂತ್ರದಿಂದ ವಿಕೇಂದ್ರೀಕರಿಸಬಹುದು. ಗಾತ್ರ ಚಿಕ್ಕದಾಗಿರುವುದರಿಂದ ಚಿಕ್ಕ ಜಾಗದಲ್ಲೂ ಅಳವಡಿಸಬಹುದು’ ಎಂದು ಅವರು ತಿಳಿಸಿದ್ದಾರೆ.

ನವದೆಹಲಿಯಲ್ಲಿ ವಿಶ್ವಸಂಸ್ಥೆ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಈ ಯಂತ್ರವನ್ನು ಪ್ರದರ್ಶಿಸಲಾಗಿತ್ತು.

**

ದುಬಾರಿ ಸಾಗಣೆ ವೆಚ್ಚದ ಕಾರಣ ಸಂಸ್ಕರಣ ಘಟಕಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಬರುತ್ತಿಲ್ಲ. ಹೀಗಾಗಿ ಕಸ ಇರುವೆಡೆಗೇ ಒಯ್ಯಬಹುದಾದ ಯಂತ್ರ ರೂಪಿಸಿದ್ದೇವೆ

  - ರಮ್ಯಾ ಸೆಲ್ವರಾಜ್, ಸಂಶೋಧನಾ ತಂಡದ ವಿದ್ಯಾರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry