ನಿರ್ಜನ ಪ್ರದೇಶದಲ್ಲಿ ಹಸುಗೂಸು ಬಿಟ್ಟು ಹೋದ ಮಹಿಳೆ: ಸಿಸಿಟಿವಿಯಲ್ಲಿ ಸೆರೆ

7

ನಿರ್ಜನ ಪ್ರದೇಶದಲ್ಲಿ ಹಸುಗೂಸು ಬಿಟ್ಟು ಹೋದ ಮಹಿಳೆ: ಸಿಸಿಟಿವಿಯಲ್ಲಿ ಸೆರೆ

Published:
Updated:

ಲಖನೌ: ಎರಡು ದಿನ ಹಿಂದಷ್ಟೇ ಹುಟ್ಟಿದ ಹಸುಗೂಸನ್ನು ಮಹಿಳೆಯೊಬ್ಬರು ನಿರ್ಜನಪ್ರದೇಶದಲ್ಲಿ ಬಿಟ್ಟು ತೆರಳಿದ ಪ್ರಕರಣ ಬುಧವಾರ ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ. ಮಹಿಳೆಯು ಕಾರಿನಲ್ಲಿ ಇಳಿದುಬಂದ ದೃಶ್ಯವು ಸನಿಹದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಮಗುವಿನ ಹೆತ್ತವರ ಹುಡುಕಾಟ ಮುಂದುವರಿಸಿದ್ದಾರೆ.

ಇಲ್ಲಿನ ಗುಲ್ಲಾರ್‌ವಾಲಿ ಪ್ರದೇಶದಲ್ಲಿ ಮಗುವಿಗೆ ಹೊದಿಕೆ ಸುತ್ತಿ ರಸ್ತೆಯಲ್ಲಿ ಬಿಟ್ಟು ತೆರಳಲಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ ಮಗು ಅಳುವುದನ್ನು ಕೇಳಿಸಿದ ಇಲ್ಲಿನ ನಿವಾಸಿ ಫೆಹ್ಮಿದಾ ಅವರು ಅದನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತಪಾಸಣೆ ನಡೆಸಿದ ವೈದ್ಯರು, ‘ನಿರ್ಜಲೀಕರಣದಿಂದ ಮಗು ಬಳಲುತ್ತಿದ್ದು, ಸಕ್ಕರೆ ಪ್ರಮಾಣವು ತೀವ್ರ ಕಡಿಮೆಯಿದೆ. ಆರೋಗ್ಯ ಸ್ಥಿರವಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಮಗು ಪೂರ್ತಿಯಾಗಿ ಚೇತರಿಸಿಕೊಳ್ಳಲಿದೆ’ ಎಂದು ತಿಳಿಸಿದ್ದಾರೆ.

‘ಸಿಸಿಟಿವಿ ದೃಶ್ಯಾವಳಿ ಪ್ರಕಾರ, ಮಹಿಳೆ ಬಂದ ಕಾರಿನ ನೋಂದಣಿ ಸಂಖ್ಯೆ ಹರಿಯಾಣಕ್ಕೆ ಸೇರಿದ್ದು. ಮಹಿಳೆಯು ಬೆಳಿಗ್ಗೆ ಕಾರಿನಲ್ಲಿ ಬಂದು ಅದನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ, ಮಗುವನ್ನು ಫೆಹ್ಮಿದಾ ಅವರ ಮನೆಯ ಮುಂದಿಟ್ಟು ಅಲ್ಲಿಂದ ತಕ್ಷಣವೇ ಹೊರಟುಹೋಗಿದ್ದಾರೆ’ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಕಾರಿನ ಮಾಲೀಕರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ, ಇದಾದ ಬಳಿಕ ಮಗುವಿನ ಹೆತ್ತವರನ್ನು ಕಂಡುಹಿಡಿಯಲಾಗುವುದು’ ಎಂದು ಮುಜಾಫರನಗರದ ಜಿಲ್ಲೆಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮಗು ಪತ್ತೆಯಾದ ವಿಷಯ ಬಹಿರಂಗಗೊಳ್ಳುತ್ತಿದ್ದಂತೆಯೇ, ಅನೇಕರು ದತ್ತು ಪಡೆಯಲು ಮುಂದೆಬಂದರು, ಆದರೆ ಮಗುವಿನ ಹೆತ್ತವರನ್ನು ಗುರುತಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ,’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry