ಏಷ್ಯಾ ಕಪ್‌ ಟ್ವೆಂಟಿ–20 ಕ್ರಿಕೆಟ್ ಟೂರ್ನಿ: ಭಾರತ ತಂಡಕ್ಕೆ ಏಳು ವಿಕೆಟ್‌ ಜಯ

7

ಏಷ್ಯಾ ಕಪ್‌ ಟ್ವೆಂಟಿ–20 ಕ್ರಿಕೆಟ್ ಟೂರ್ನಿ: ಭಾರತ ತಂಡಕ್ಕೆ ಏಳು ವಿಕೆಟ್‌ ಜಯ

Published:
Updated:
ಏಷ್ಯಾ ಕಪ್‌ ಟ್ವೆಂಟಿ–20 ಕ್ರಿಕೆಟ್ ಟೂರ್ನಿ: ಭಾರತ ತಂಡಕ್ಕೆ ಏಳು ವಿಕೆಟ್‌ ಜಯ

ಕ್ವಾಲಾಲಂಪುರ: ಆಲ್‌ರೌಂಡ್ ಸಾಮರ್ಥ್ಯ ತೋರಿದ ಭಾರತ ಮಹಿಳಾ ತಂಡದವರು ಏಷ್ಯಾ ಕಪ್‌ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಜಯ ಸಾಧಿಸಿದರು. ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಗೆದ್ದಿತು.

ಎಡಗೈ ಸ್ಪಿನ್ನರ್ ಏಕ್ತಾ ಬಿಶ್ಟ್ ಅವರ ಉತ್ತಮ ದಾಳಿ ಮತ್ತು ಫೀಲ್ಡಿಂಗ್‌ನಲ್ಲಿ ಮಾಡಿದ ಉತ್ತಮ ಸಾಧನೆಯ ನೆರವಿ ನಿಂದ ಗುರುವಾರ ಶ್ರೀಲಂಕಾವನ್ನು 107 ರನ್‌ಗಳಿಗೆ ಭಾರತ ಕಟ್ಟಿ ಹಾಕಿತು. ಗುರಿ ಬೆನ್ನತ್ತಿದ ಭಾರತ ಏಳು ಎಸೆತಗಳು ಬಾಕಿ ಇರುವಾಗಲೇ ಜಯ ಸಾಧಿಸಿತು.

ಆರಂಭಿಕ ಆಟಗಾರ್ತಿಯರಾದ ಮಿಥಾಲಿ ರಾಜ್ ಮತ್ತು ಸ್ಮೃತಿ ಮಂದಾನ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಇವರಿಬ್ಬರು ಪೆವಿಲಿಯನ್ ಸೇರಿದಾಗ ತಂಡದ ಮೊತ್ತ 55 ಆಗಿತ್ತು. ನಂತರ ನಾಯಕಿ ಹರ್ಮನ್‌ಪ್ರೀತ್ ಕೌರ್‌ 24 ಎಸೆತಗಳಲ್ಲಿ 25 ರನ್ ಗಳಿಸಿದರು.

70 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ವೇದಾ ಕೃಷ್ಣಮೂರ್ತಿ ಮತ್ತು ಅನುಜಾ ಪಾಟೀಲ್‌ 32 ಎಸೆತಗಳಲ್ಲಿ 40 ರನ್‌ ಸೇರಿಸಿ ಸುಲಭ ಜಯಕ್ಕೆ ಕಾರಣರಾದರು.

ಭಾರತ, ಫೈನಲ್ ಪ್ರವೇಶಿಸಬೇಕಾ ದರೆ ಶನಿವಾರ ಪಾಕಿಸ್ತಾನ ವಿರುದ್ಧ ನಡೆಯುವ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 107 (ಯಶೋಧಾ ಮೆಂಡಿಸ್‌ 27, ಹಸಿನಿ ಪೆರೇರ 46; ಜೂಲನ್ ಗೋಸ್ವಾಮಿ 20ಕ್ಕೆ1, ಏಕ್ತಾ ಬಿಶ್ಟ್‌ 20ಕ್ಕೆ2, ಅನುಜಾ ಪಾಟೀಲ 19ಕ್ಕೆ1, ಪೂನಂ ಯಾದವ್‌ 23ಕ್ಕೆ1); ಭಾರತ: 18.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 110 (ಮಿಥಾಲಿ ರಾಜ್‌ 23, ಸ್ಮೃತಿ ಮಂದಾನ 12, ಹರ್ಮನ್‌ಪ್ರೀತ್ ಕೌರ್‌ 24, ವೇದಾ ಕೃಷ್ಣಮೂರ್ತಿ 29, ಅನುಜಾ ಪಾಟೀಲ್‌ 18). ಫಲಿತಾಂಶ: ಭಾರತ ತಂಡಕ್ಕೆ 7 ವಿಕೆಟ್‌ಗಳ ಜಯ. ಪಂದ್ಯದ ಶ್ರೇಷ್ಠ ಆಟಗಾರ್ತಿ: ಅನುಜಾ ಪಾಟೀಲ.

ಮಿಥಾಲಿ 2,000 ರನ್‌ ಒಡತಿ

ಮಿಥಾಲಿ ರಾಜ್‌ ಮಹಿಳೆಯರ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಎರಡು ಸಾವಿರ ರನ್‌ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ವುಮನ್ ಎಂಬ ಖ್ಯಾತಿಗೆ ಪಾತ್ರರಾದರು. ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಓಶಾಡಿ ರಣಸಿಂಗೆ ಅವರ ಎಸೆತದಲ್ಲಿ ಒಂಟಿ ರನ್‌ ಗಳಿಸಿ ಅವರು ಈ ಸಾಧನೆ ಮಾಡಿದರು. ಇದು ಅವರ 75ನೇ ಪಂದ್ಯ ಆಗಿತ್ತು. ಈಗ ಮಿಥಾಲಿ ಖಾತೆಯಲ್ಲಿ 2,015 ರನ್‌ಗಳಿವೆ. ಅಪರೂಪದ ಸಾಧನೆ ಮಾಡಿದ ಅವರನ್ನು ಬಿಸಿಸಿಐ ಅಭಿನಂದಿಸಿದೆ.

ಟ್ವೆಂಟಿ–20 ಕ್ರಿಕೆಟ್‌ನಲ್ಲಿ 2,000 ರನ್‌ ದಾಟಿದ ವಿಶ್ವದ ಏಳನೇ ಬ್ಯಾಟ್ಸ್‌ವುಮನ್ ಆಗಿದ್ದಾರೆ ಮಿಥಾಲಿ. 2,605 ರನ್‌ ಗಳಿಸಿರುವ ಇಂಗ್ಲೆಂಡ್‌ನ ಚಾರ್ಲೊಟ್‌ ಎಡ್ವರ್ಡ್ಸ್‌ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಜಮೈಕಾದ ಸ್ಟೆಫಾನಿ ಟೇಲರ್‌ (2,582) ಮತ್ತು ನ್ಯೂಜಿಲೆಂಡ್‌ನ ಸೂಸಿ ಬೇಟ್ಸ್‌ (2,515) ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry