ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನಿಂದ ಒಕ್ಕಲಿಗರಿಗೆ ಸಂಪುಟದಲ್ಲಿ ಸಿಂಹಪಾಲು

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಜೆಡಿಎಸ್‌ ಸಚಿವ ಸಂಪುಟದಲ್ಲೂ ಒಕ್ಕಲಿಗ ಶಾಸಕರಿಗೆ ಸಿಂಹ ಪಾಲು ನೀಡಿದೆ.

ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‌ಗೆ ಮುಖ್ಯಮಂತ್ರಿ ಹುದ್ದೆ ಸೇರಿ 12 ಸಚಿವ ಸ್ಥಾನಗಳನ್ನು ಪಡೆದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಇತರ ಆರು ಒಕ್ಕಲಿಗ ಶಾಸಕರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಬುಧವಾರ ಪ್ರಮಾಣ ವಚನ ಪಡೆದ 10 ಸಚಿವರಲ್ಲಿ ಒಕ್ಕಲಿಗರನ್ನು ಬಿಟ್ಟು ಲಿಂಗಾಯತ 2, ಕುರುಬ 1, ಪರಿಶಿಷ್ಟಜಾತಿಗೆ 1 ಸ್ಥಾನ ನೀಡಲಾಗಿದೆ. ಒಂದು ಸ್ಥಾನವನ್ನು ಭರ್ತಿ ಮಾಡದೇ ಉಳಿಸಿಕೊಂಡಿದೆ.

ಈ ಬಾರಿ ಜೆಡಿಎಸ್‌ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ತಲಾ 2 ಸಚಿವ ಸ್ಥಾನಗಳನ್ನು ನೀಡಿದೆ.

ಎಚ್‌.ಡಿ. ರೇವಣ್ಣ, ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಎಸ್‌.ಆರ್‌.ಶ್ರೀನಿವಾಸ್, ಸಿ.ಎಸ್‌.ಪುಟ್ಟರಾಜು ಮತ್ತು ಸಾ.ರಾ.ಮಹೇಶ್ ಸಂಪುಟದಲ್ಲಿ ಸ್ಥಾನ ಪಡೆದ ಒಕ್ಕಲಿಗ ಶಾಸಕರು.

ಇದೇ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಹಿರಿಯರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಈ ಹಿರಿಯ ಶಾಸಕರು ತಮ್ಮ ಕುಟುಂಬಕ್ಕೆ ನಿಷ್ಠರಾಗಿರುವುದರಿಂದ ಸದ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಮನವೊಲಿಸುವಲ್ಲಿ ದೇವೇಗೌಡರು ಯಶಸ್ವಿಯಾಗಿದ್ದಾರೆ. ಒಂದು ವೇಳೆ ಇವರು ಮುನಿಸಿಕೊಂಡರೂ ಪಕ್ಷ ಬಿಟ್ಟು ಹೋಗುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎಂಬ ಖಾತರಿ ದೇವೇಗೌಡರಿಗಿದೆ ಎಂದು ಮೂಲಗಳು ಹೇಳಿವೆ.

ಸಚಿವರ ಆಯ್ಕೆಯಲ್ಲಿ ದೇವೇಗೌಡ ಮಾತ್ರವಲ್ಲದೆ, ಕುಮಾರಸ್ವಾಮಿಯವರ ಪ್ರಭಾವವೂ ದಟ್ಟವಾಗಿದೆ. ಬಂಡೆಪ್ಪ ಕಾಶೆಂಪೂರ್ ಮತ್ತು ಸಾ.ರಾ.ಮಹೇಶ್‌ ಮುಖ್ಯಮಂತ್ರಿಗೆ ಆಪ್ತರು. ಸಾ.ರಾ. ಮಹೇಶ್ ಅವರನ್ನು ಚುನಾವಣೆಯಲ್ಲಿ ಸೋಲಿಸುವಂತೆ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ತಮ್ಮ ಆಪ್ತರಿಗೆ ಸಂದೇಶ ನೀಡಿದ್ದರು. ಆದರೆ, ಸಚಿವ ಸ್ಥಾನ ನೀಡುವ ಮೂಲಕ ಕುಮಾರಸ್ವಾಮಿ ಅವರ ಕೈ ಹಿಡಿದಿದ್ದಾರೆ.

ಲಿಂಗಾಯತ ಸಮುದಾಯದ ಮನವೊಲಿಸಲು ಎಂ.ಸಿ.ಮನಗೂಳಿ(ವಿಜಯಪುರ ಜಿಲ್ಲೆ) ಮತ್ತು ವೆಂಕಟರಾವ್‌ ನಾಡಗೌಡ(ರಾಯಚೂರು ಜಿಲ್ಲೆ) ಅವರಿಗೆ ಸ್ಥಾನ ನೀಡಲಾಗಿದೆ. ಯಡಿಯೂರಪ್ಪ ಮಾತ್ರವಲ್ಲ ತಾವೂ ಲಿಂಗಾಯತ ಶಾಸಕರಿಗೆ ಅವಕಾಶ ನೀಡಿ ಬೆಳೆಸುತ್ತೇವೆ ಎಂಬ ಸಂದೇಶ ರವಾನೆ ಮಾಡುವ ಇಂಗಿತ ಕುಮಾರಸ್ವಾಮಿಯವರಿಗಿತ್ತು. ಒಂದು ವೇಳೆ ಸಂಪುಟದಲ್ಲಿ ಸ್ಥಾನ ಸಿಗದೇ ಹೋಗಿದ್ದರೆ, ಇವರು ಬಿಜೆಪಿಗೆ ಜಿಗಿಯುವ ಸಾಧ್ಯತೆ ಇತ್ತು ಎಂದೂ ಮೂಲಗಳು ಹೇಳಿವೆ.

ಬಿಎಸ್ಪಿ ಶಾಸಕ ಮಹೇಶ್‌ (ಚಾಮರಾಜನಗರ ಜಿಲ್ಲೆ) ಅವರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಮಾಯಾವತಿಯವರನ್ನು ದೇವೇಗೌಡ ಸಂತೃಪ್ತಿಗೊಳಿಸಿದ್ದಾರೆ.

ಪಕ್ಷದಲ್ಲಿ ಅಸಮಾಧಾನಗೊಂಡ ಶಾಸಕರಿಗೆ ನಿಗಮ– ಮಂಡಳಿಗಳಲ್ಲಿ ಅವಕಾಶ ಕಲ್ಪಿಸುವುದಾಗಿ ದೇವೇಗೌಡರು ಭರವಸೆ ನೀಡಿದ್ದಾರೆ. ಬಂಡಾಯವೆದ್ದು ಪಕ್ಷಕ್ಕೆ ಮುಜುಗರ ತರುವವರು ಸದ್ಯಕ್ಕಂತೂ ಯಾರೂ ಇಲ್ಲ. ಅಷ್ಟರಮಟ್ಟಿಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಸುರಕ್ಷಿತ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT