ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ನಾ ಅಲ್ಲ ಸೌಲಭ್ಯ ಕೊಡಿ

Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

ಇತ್ತೀಚಿನ ರಾಜಕೀಯ ವಿದ್ಯಮಾನವನ್ನು ನೋಡುವಾಗ ರೈತರ ಸಾಲ ಮನ್ನಾ ಎಂಬುದು ಚುನಾವಣಾ ತಂತ್ರ ಎಂಬುದು ಎಂಥ ಮೂರ್ಖನಿಗೂ ಅರ್ಥವಾಗುತ್ತದೆ. ಯಾವ ರಾಜಕಾರಣಿಗೂ ರೈತರ ಬಗ್ಗೆ ನೈಜ ಕಾಳಜಿ ಇಲ್ಲ. ಇದ್ದಿದ್ದರೆ ಅವರು ರೈತರನ್ನು ಸಾಲದ ಕೂಪಕ್ಕೆ ತಳ್ಳುವಂಥ ವಿಚಾರ ಮಾಡುತ್ತಿರಲಿಲ್ಲ. ಒಬ್ಬ ರೈತ ಮಹಿಳೆಯಾಗಿ ನಾನು ಹೇಳುವುದೇನೆಂದರೆ, ನಮಗೆ ಸಾಲಮನ್ನಾ ಬೇಡ. ಬದಲಿಗೆ ನಾವು ಬೆಳೆಯುವ ಬೆಳೆಗೆ ವೈಜ್ಞಾನಿಕ ದರ ನಿಗದಿ ಮಾಡಿ. ಆ ಮೂಲಕ ನಾವು ಗೌರವದಿಂದ ಬದುಕಲು ಸಾಧ್ಯವಾಗುವಂತೆ ಮಾಡಿ. ನಾವು ಕಷ್ಟಪಟ್ಟು ಬೆಳೆಸಿದ ದವಸಧಾನ್ಯವನ್ನೋ, ಹಣ್ಣು–ತರಕಾರಿಗಳನ್ನೋ ಮಾರುಕಟ್ಟೆಗೆ ಒಯ್ದರೆ ನಮಗೆ ಸಿಗುವುದು ಅತ್ಯಲ್ಪ. ಆದರೆ ಮಧ್ಯವರ್ತಿಗಳು ಅದನ್ನು ಮಾರಾಟ ಮಾಡುವಾಗ ಅದಕ್ಕೆ ದುಪ್ಪಟ್ಟು ದರ ವಿಧಿಸುತ್ತಾರೆ. ಉದಾಹರಣೆಗೆ ರೈತರು ಬಾಳೆಹಣ್ಣು ಮಾರಾಟ ಮಾಡಿದಾಗ ಅವರಿಗೆ ಸಿಗುವುದು ಕೆ.ಜಿ.ಗೆ ₹ 16. ವ್ಯಾಪಾರಿಗಳು ಅದನ್ನು ₹ 30ಕ್ಕೆ ಮಾರಾಟ ಮಾಡುತ್ತಾರೆ.

ಕೆಲವೊಮ್ಮೆ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತೆ ಫಸಲು ಕೊಯ್ಲಿಗೆ ಬರುವ ಸಂದರ್ಭದಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸರ್ವನಾಶವಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಕೊಡಬೇಕು. ಇವುಗಳ ಜೊತೆಗೆ ಸಕಾಲದಲ್ಲಿ ವಿದ್ಯುತ್ ಮತ್ತು ನೀರನ್ನು ಒದಗಿಸಿದರೆ ರೈತರು ಬೇರೇನನ್ನೂ ಕೇಳುವುದಿಲ್ಲ.

ರೈತರು ಸಾಲ ಮಾಡದೆ ಜೀವನ ನಡೆಸಲು ಸಾಧ್ಯವಿಲ್ಲವೇ? ಸಾಲಮನ್ನಾ ಬಿಟ್ಟು ಬೇರೆ ಯಾವ ಯೋಜನೆಯ ಮೂಲಕ ರೈತರನ್ನು ಮೇಲೆತ್ತಬಹುದು ಎಂಬ ನಿಟ್ಟಿನಲ್ಲಿ ರಾಜಕಾರಣಿಗಳು ಚಿಂತನೆ ಮಾಡಬೇಕು. ಇಲ್ಲದಿದ್ದರೆ ರೈತರು ಇರುವವರೆಗೂ ಸಾಲಮನ್ನಾ ಎಂಬ ತುಪ್ಪವನ್ನು ರೈತರ ಮೂಗಿಗೆ ಸವರುವ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಹೇಗೂ ಸಾಲ ಮನ್ನಾ ಆಗುತ್ತದೆ ಎಂದು ರೈತರು ಅಗತ್ಯ ಇದ್ದೋ ಇಲ್ಲದೆಯೋ ಸಾಲ ಮಾಡುತ್ತಲೇ (ಅಪವಾದ ಇರಬಹುದು) ಇರುತ್ತಾರೆ.

– ಸಹನಾ ಕಾಂತಬೈಲು, ಬಾಲಂಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT