ಸಂವಿಧಾನಾತ್ಮಕ ದೇಶಭಕ್ತಿಯ ಪ್ರಣವ್‌ ಪಾಠ ಅನುರಣಿಸಲಿ

7

ಸಂವಿಧಾನಾತ್ಮಕ ದೇಶಭಕ್ತಿಯ ಪ್ರಣವ್‌ ಪಾಠ ಅನುರಣಿಸಲಿ

Published:
Updated:
ಸಂವಿಧಾನಾತ್ಮಕ ದೇಶಭಕ್ತಿಯ ಪ್ರಣವ್‌ ಪಾಠ ಅನುರಣಿಸಲಿ

ರಾಷ್ಟ್ರ, ರಾಷ್ಟ್ರೀಯತಾವಾದ ಹಾಗೂ ರಾಷ್ಟ್ರಭಕ್ತಿಗೆ ತಮ್ಮದೇ ವ್ಯಾಖ್ಯಾನಗಳನ್ನು ನೀಡುತ್ತಲೇ ಸಹಿಷ್ಣುತೆಯ ಮಹತ್ವವನ್ನು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‍ಎಸ್‍ಎಸ್) ಕೇಂದ್ರಕಚೇರಿಯಲ್ಲಿ ಎತ್ತಿಹೇಳಿದ್ದಾರೆ. ಕಳೆದ ಸುಮಾರು 50 ವರ್ಷಗಳಿಂದ ಕಾಂಗ್ರೆಸ್‍ ಜೊತೆ ಗುರುತಿಸಿಕೊಂಡಿರುವ ಪ್ರಣವ್ ಅವರು, ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿಚಾರ, ವಿವಿಧ ವಲಯಗಳಲ್ಲಿ ಟೀಕೆಗಳಿಗೆ ಕಾರಣವಾಗಿತ್ತು. ಕಾಂಗ್ರೆಸ್ ಪಕ್ಷವಷ್ಟೇ ಅಲ್ಲ, ಸ್ವತಃ ಪ್ರಣವ್ ಅವರ ಮಗಳು ಶರ್ಮಿಷ್ಠಾ ಮುಖರ್ಜಿಯವರಿಂದಲೂ ವಿರೋಧ ವ್ಯಕ್ತವಾಗಿತ್ತು. ಆದರೆ ಸಮಾಜದ ವಿವಿಧ ವರ್ಗಗಳ ಜೊತೆ ಹೆಚ್ಚಿನ ಸಂವಾದಗಳ ಅಗತ್ಯವನ್ನು ಪ್ರಣವ್ ಅವರು ಆರ್‌ಎಸ್‌ಎಸ್‌ ಕೇಂದ್ರಕಚೇರಿಯಲ್ಲಿ ಮಾಡಿದ ಭಾಷಣದಲ್ಲಿ ಪ್ರತಿಪಾದಿಸಿರುವುದು ಈ ಟೀಕೆಗಳಿಗೆ ಉತ್ತರ ನೀಡಿದಂತಿದೆ. ಸಾರ್ವಜನಿಕ ವಾಗ್ವಾದಗಳಲ್ಲಿ ವಿಭಿನ್ನ ನಿಲುವುಗಳನ್ನು ಗುರುತಿಸುವುದು ಅಗತ್ಯ ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಿಗೂ 83 ವರ್ಷದ ಈ ಹಿರಿಯ ಮುತ್ಸದ್ದಿ ನೀಡಿದ್ದಾರೆ. ವಿಶ್ವವಾದ, ಸಮನ್ವಯ ಮತ್ತು ಸಹಬಾಳ್ವೆಯಿಂದಲೇ ಭಾರತದ ರಾಷ್ಟ್ರೀಯತೆ ರೂಪುಗೊಂಡಿದೆ. ರಾಷ್ಟ್ರೀಯತೆಯನ್ನು ಅಸಹಿಷ್ಣುತೆ ದುರ್ಬಲಗೊಳಿಸುತ್ತದೆ ಎಂಬಂತಹ ಅವರ ಮಾತುಗಳು ಮನನ ಯೋಗ್ಯ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ವೈಯಕ್ತಿಕ ದ್ವೇಷ ಸಾಧಿಸದೆಯೂ ಹೊಂದುವುದು ಸಾಧ್ಯ ಎಂಬಂತಹ ಪಾಠ ಇಲ್ಲಿದೆ. ಬಹುತ್ವ ಹಾಗೂ ಸಹಿಷ್ಣುತೆ ಭಾರತದ ಆತ್ಮ ಎಂದು ಅವರು ಒತ್ತಿಹೇಳಿದ್ದಾರೆ. ರಾಜಕಾರಣಿ, ಸಂಸದೀಯಪಟು ಹಾಗೂ ಸಾರ್ವಜನಿಕ ಆಡಳಿತಗಾರರಾಗಿ ಐದು ದಶಕಗಳ ಅನುಭವದ ಹಿನ್ನೆಲೆಯಲ್ಲಿ ಹೇಳಿರುವ ಈ ಮಾತುಗಳು ಸದ್ಯದ ಸನ್ನಿವೇಶದಲ್ಲಿ ಅತ್ಯಂತ ಪ್ರಸ್ತುತ.

ರಾಷ್ಟ್ರಪತಿಯಾಗಿ ಪ್ರಣವ್ ಮುಖರ್ಜಿ ಅವರು ನರೇಂದ್ರ ಮೋದಿಯವರ ಜೊತೆ ಒಳ್ಳೆಯ ಕಾರ್ಯಸಂಬಂಧ ಹೊಂದಿದ್ದರು ಎಂಬುದು ನಿಜ. ಪ್ರಣವ್ ಮುಖರ್ಜಿ ಬಗ್ಗೆ ಮೋದಿಯವರೂ ಅದೇ ಸದ್ಭಾವನೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿಯೂ ಇದ್ದಾರೆ. ಆದರೆ, ಹಿಂದುತ್ವ ಶಕ್ತಿಗಳಿಂದಾಗಿ ರಾಷ್ಟ್ರದಲ್ಲಿ ಅಸಹಿಷ್ಣುತೆಯ ಪರಿಸರ ಸೃಷ್ಟಿಯಾದ ಸಂದರ್ಭಗಳಲ್ಲಿ ತೀವ್ರ ಟೀಕೆಗಳನ್ನೂ ರಾಷ್ಟ್ರಪತಿಯಾಗಿದ್ದ ಪ್ರಣವ್ ಮಾಡಿದ್ದಾರೆ ಎಂಬುದನ್ನು ಮರೆಯಲಾಗದು. ಈಗಲೂ, 45 ನಿಮಿಷಗಳ ಭಾಷಣದಲ್ಲಿ ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ರವೀಂದ್ರನಾಥ ಟ್ಯಾಗೋರರ ಮಾತುಗಳನ್ನು ಉಲ್ಲೇಖಿಸಿದ್ದಾರೆ. ದಿನನಿತ್ಯದ ಬದುಕಲ್ಲಿ 122ಕ್ಕೂ ಹೆಚ್ಚು ಭಾಷೆಗಳು, 1600 ಉಪಭಾಷೆಗಳಲ್ಲಿ ಮಾತನಾಡುತ್ತಾ ಏಳು ಪ್ರಮುಖ ಧರ್ಮಗಳನ್ನು ಅನುಸರಿಸುತ್ತಾ, ಮೂರು ಪ್ರಮುಖ ಜನಾಂಗೀಯ ಗುಂಪುಗಳಿಗೆ ಸೇರಿದವರಾಗಿ ಒಂದೇ ವ್ಯವಸ್ಥೆ, ಒಂದೇ ಧ್ವಜದಡಿ ಭಾರತೀಯ ಎಂಬ ಏಕೈಕ ಅಸ್ಮಿತೆಯಡಿ 130 ಕೋಟಿ ಭಾರತೀಯರು ಬದುಕುತ್ತಿರುವ ನಿರಂತರತೆಯನ್ನು ಎತ್ತಿಹಿಡಿಯುತ್ತಲೇ ವೈವಿಧ್ಯದಲ್ಲಿ ಏಕತೆಯ ಪಾಠವನ್ನು ಪ್ರಣವ್ ಅವರು ನೆನಪಿಸಿರುವುದು ಸಕಾಲಿಕ. ಪ್ರತಿದಿನ ನಮ್ಮ ಸುತ್ತಲೂ ಹಿಂಸೆ ಹೆಚ್ಚುತ್ತಿರುವುದನ್ನೂ ಪ್ರಣವ್ ಪ್ರಸ್ತಾಪಿಸಿದ್ದಾರೆ. ‘ನಮ್ಮ ಸಾರ್ವಜನಿಕ ಸಂವಾದವನ್ನು ಎಲ್ಲಾ ಬಗೆಯ ದೈಹಿಕ ಅಥವಾ ಮೌಖಿಕ ಹಿಂಸೆಗಳಿಂದ ಮುಕ್ತವಾಗಿರಿಸಬೇಕು. ಆಕ್ರೋಶ ಹಾಗೂ ಹಿಂಸೆಯಿಂದ ದೂರ ಸರಿದು ಸೌಹಾರ್ದ ಹಾಗೂ ಸಂತೋಷದತ್ತ ಸಾಗಬೇಕು’ ಎಂಬಂಥ ಅರ್ಥಪೂರ್ಣ ಮಾತುಗಳನ್ನು ಇಂದು ತೀವ್ರವಾಗಿ ವಿಭಜಿತಗೊಳ್ಳುತ್ತಿರುವ ಸಮಾಜ ಕೇಳಿಸಿಕೊಳ್ಳುವುದೇ? ಹಿಂದೂ ಯುವವಾಹಿನಿಯ ಅಕೃತ್ಯಗಳು, ಮಾಂಸಾಹಾರ ಸೇವನೆ ಅಥವಾ ಅಂತರಧರ್ಮೀಯ ವಿವಾಹಗಳ ಬಗ್ಗೆ ವ್ಯಕ್ತವಾಗುತ್ತಿರುವ ತೀವ್ರ ಅಸಹಿಷ್ಣುತೆಯ ಈ ಕಾಲದಲ್ಲಿ ಪ್ರಣವ್ ಅವರ ಮಾತು ಹೊಸ ಚಿಂತನೆಗಳಿಗೆ ಪ್ರೇರಕವಾಗುವುದೇ? ಸಾಂಸ್ಕೃತಿಕ ರಾಷ್ಟ್ರೀಯತಾವಾದವನ್ನು ಎತ್ತಿ ಹಿಡಿಯುವ ಆರ್‍ಎಸ್‍ಎಸ್ ಪಾಳಯದಲ್ಲಿ ಸಂವಿಧಾನಾತ್ಮಕ ರಾಷ್ಟ್ರಭಕ್ತಿಯನ್ನು ಪ್ರಣವ್ ಅವರು ಎತ್ತಿ ಹಿಡಿದಿರುವುದು ಮಹತ್ವದ್ದು. ಹಾಗೆಯೇ, ಆರ್‍ಎಸ್‍ಎಸ್‍ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್‍ ಅವರ ಹುಟ್ಟಿದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ‘ಭಾರತಮಾತೆಯ ಶ್ರೇಷ್ಠ ಪುತ್ರನಿಗೆ ಗೌರವ ಮತ್ತು ನಮನ ಸಲ್ಲಿಸುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ’ಎಂದು ಪ್ರಣವ್ ಬರೆದಿರುವುದು ಆರ್‍ಎಸ್‍ಎಸ್‌ಗೆ ಹೆಚ್ಚಿನ ನೈತಿಕಶಕ್ತಿಯನ್ನು ತುಂಬುವಂತಹದ್ದು. ಈ ಭೇಟಿಯ ದೃಶ್ಯಗಳೂ ದೀರ್ಘಕಾಲ ಉಳಿಯುವಂತಹವು. ಹೀಗಾಗಿ, ಪ್ರಣವ್  ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಹೇಳಿದಂತೆ ಪ್ರಣವ್ ಅವರ ಭಾಷಣ ಮರೆತುಹೋಗಿ ಭೇಟಿಯ ದೃಶ್ಯಗಳಷ್ಟೇ ವಿವಿಧ ವ್ಯಾಖ್ಯಾನಗಳೊಂದಿಗೆ ಬಳಕೆಯಾಗುತ್ತವೆಯೇ? ಆ ಪ್ರಯತ್ನ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭವಾಗಿದೆ. ಬರಲಿರುವ ದಿನಗಳಲ್ಲಿ ಇವು ಯಾವ ಬಗೆಯ ರಾಜಕೀಯ ಲಾಭ ಗಳಿಕೆಗೆ ಬಳಕೆಯಾಗುತ್ತವೆ ಎಂಬುದನ್ನು ಕಾದು ನೋಡಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry