ಕಳಪೆ ಮೌಲ್ಯಮಾಪನ; ಶಿಕ್ಷಕರಿಗೆ ಇಲಾಖೆ ‘ಶಿಕ್ಷೆ’

7

ಕಳಪೆ ಮೌಲ್ಯಮಾಪನ; ಶಿಕ್ಷಕರಿಗೆ ಇಲಾಖೆ ‘ಶಿಕ್ಷೆ’

Published:
Updated:
ಕಳಪೆ ಮೌಲ್ಯಮಾಪನ; ಶಿಕ್ಷಕರಿಗೆ ಇಲಾಖೆ ‘ಶಿಕ್ಷೆ’

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರುಮೌಲ್ಯಮಾಪನದ ಫಲಿತಾಂಶದಲ್ಲಿ ಅಂಕಗಳ ವ್ಯತ್ಯಾಸ ಹೆಚ್ಚಾಗಿದೆ. ಇದಕ್ಕೆ ಶಿಕ್ಷಕರ ಬೇಜವಾಬ್ದಾರಿಯೇ ಪ್ರಮುಖ ಕಾರಣವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಅಂತಹ ಶಿಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಚಿಂತನೆ ನಡೆಸಿದೆ.

ಮರುಮೌಲ್ಯಮಾಪನದಿಂದ 6 ಅಂಕಗಳಿಂದ 20 ಅಂಕಗಳವರೆಗೆ ಏರಿಕೆಯಾಗಿದೆ. ಇಷ್ಟು ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಹಾಗೂ ಮೌಲ್ಯಮಾಪನ ನಿಖರವಾಗಿರುವಂತೆ ನೋಡಿಕೊಳ್ಳಲು ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ.

‘ಸುಮಾರು 60,000 ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದರು. ಯಾವ ಶಿಕ್ಷಕರು ಹೇಗೆ ಮೌಲ್ಯಮಾಪನ ಮಾಡಿದ್ದಾರೆ ಎನ್ನುವುದು ಫಲಿತಾಂಶದಿಂದ ತಿಳಿಯುತ್ತದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸುವುದಿಲ್ಲ. ಆದರೆ, ಮೌಲ್ಯಮಾಪನಕ್ಕೆ ಅಂತಹ ಶಿಕ್ಷಕರನ್ನು ಆಯ್ಕೆಯೇ ಮಾಡದಿರುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಏನೆಲ್ಲ ಕ್ರಮಕೈಗೊಳ್ಳಬಹುದು ಎಂಬುದನ್ನು ನಿರ್ಧರಿಸುತ್ತೇವೆ. ಮೌಲ್ಯಮಾಪನದಲ್ಲಿನ ತಪ್ಪುಗಳನ್ನು ಕಡಿಮೆ ಮಾಡುವುದು ನಮ್ಮ ಗುರಿ’ ಎಂದು ವಿವರಿಸಿದರು.

‘ಮೊದಲ ಮೌಲ್ಯಮಾಪನದಲ್ಲಿಯೇ ಸರಿಯಾದ ಅಂಕಗಳನ್ನು ನೀಡಿದರೆ, ವಿದ್ಯಾರ್ಥಿಗಳ ಹಾಗೂ ಪೋಷಕರ ಆತಂಕ ಅರ್ಧ ಕಡಿಮೆಯಾಗುತ್ತದೆ. ಅಲ್ಲದೆ, ಛಾಯಾಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರ ಪ್ರಮಾಣವೂ ತಗ್ಗುತ್ತದೆ’ ಎಂದರು.

ಕಂಪ್ಯೂಟರ್‌ ಟಚ್‌: ಮೌಲ್ಯಮಾಪನದ ಗುಣಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಈ ಬಾರಿ ಮೌಲ್ಯಮಾಪನ ಕೇಂದ್ರಗಳಲ್ಲಿ ಕಂಪ್ಯೂಟರೀಕೃತ ವ್ಯವಸ್ಥೆಯನ್ನು ಪರಿಚಯಿಸುವ ಆಲೋಚನೆಯನ್ನು ಮಂಡಳಿ ಹೊಂದಿದೆ. ಇದೇ ಪೂರಕ ಪರೀಕ್ಷೆಯ ಮೌಲ್ಯಮಾಪನದಲ್ಲಿ ಈ ವ್ಯವಸ್ಥೆ ಪರಿಚಯಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

‘ಇಲ್ಲಿಯವರೆಗೆ ಶಿಕ್ಷಕರು ಅಂಕಗಳನ್ನು ಎಎಂಎಲ್‌ ಹಾಳೆಯಲ್ಲಿ (ಹಾಜರಾತಿ ಮತ್ತು ಅಂಕಗಳ ಪಟ್ಟಿ) ದಾಖಲಿಸುತ್ತಿದ್ದರು. ಆ ಹಾಳೆಯಲ್ಲಿ ಮಕ್ಕಳ ಹೆಸರು ಮತ್ತು ನೋಂದಣಿ ಸಂಖ್ಯೆ ಮೊದಲೇ ಮುದ್ರಿತವಾಗಿರುತ್ತದೆ. ಅದರ ಎದುರು ಒಂದರಿಂದ ಹತ್ತರವರೆಗೆ ಸಂಖ್ಯೆಗಳು ಇರುತ್ತವೆ. ಅಲ್ಲಿ ಪಡೆದ ಅಂಕಗಳನ್ನು ಗುರುತಿಸಬೇಕಿತ್ತು’ ಎಂದು ಸುಮಂಗಲಾ ತಿಳಿಸಿದರು.

ವಿದ್ಯಾರ್ಥಿಯೊಬ್ಬ 25 ಅಂಕ ಪಡೆದಿದ್ದಲ್ಲಿ, 2 ಹಾಗೂ 5ರ ಬಳಿ ಗುರುತು ಹಾಕಬೇಕು. ಕಂಪ್ಯೂಟರ್‌ ಸ್ಕ್ಯಾನಿಂಗ್‌ಗೆ ಇದು ನೆರವಾಗುತ್ತದೆ. 2ರ ಬಳಿ ಸರಿಯಾಗಿ ಗುರುತು ಹಾಕದಿದ್ದರೆ, ಕಂಪ್ಯೂಟರ್‌ 5 ಅಂಕಗಳನ್ನಷ್ಟೇ ಪರಿಗಣಿಸುತ್ತದೆ. ಹೀಗಾದಾಗ ಅಂಕಗಳ ವ್ಯತ್ಯಾಸ ಹೆಚ್ಚಾಗುತ್ತದೆ ಎಂದರು. 

ಈ ಬಾರಿ ಕಂಪ್ಯೂಟರ್‌ಗೆ ನೇರವಾಗಿ ಅಂಕಗಳನ್ನು ದಾಖಲಿಸಲಾಗುತ್ತದೆ. ಅಂಕ ಮತ್ತು ಗುರುತು ಮಾಡಿದ್ದು ವ್ಯತ್ಯಾಸವಾದರೆ ತಕ್ಷಣ ಅದು ಗೋಚರಿಸುತ್ತದೆ. ತಪ್ಪುಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಲ್ಲದೆ, ಆಯಾ ದಿನದ ಮೌಲ್ಯಮಾಪನ ವರದಿ ಅಂದೇ ಮಂಡಳಿಗೆ ದೊರೆಯುತ್ತದೆ. ಶೀಘ್ರದಲ್ಲಿ ಫಲಿತಾಂಶ ನೀಡಲೂ ಇದು ನೆರವಾಗುತ್ತದೆ ಎಂದು ಹೇಳಿದರು.

*

ಮೌಲ್ಯಮಾಪನ ಭತ್ಯೆ ನೇರ ಬ್ಯಾಂಕ್‌ಗೆ 

ಈ ಬಾರಿಯಿಂದ ಪರೀಕ್ಷಾ ಮೌಲ್ಯಮಾಪನದ ಭತ್ಯೆಯನ್ನು ನೇರವಾಗಿ ಶಿಕ್ಷಕರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುವುದು ಎಂದು ಸುಮಂಗಲಾ ತಿಳಿಸಿದರು.

ಈಗಾಗಲೇ ಶಿಕ್ಷಕರ ದಾಖಲೆ ಹಾಗೂ ಅವರ ಬ್ಯಾಂಕ್‌ ವಿವರಗಳನ್ನು ಪಡೆಯಲಾಗಿದೆ. ಆಯಾ ಶಾಲೆಗಳಿಗೆ ಆ ವಿವರಗಳನ್ನು ಕಳುಹಿಸಿ, ಮತ್ತೊಮ್ಮೆ ಪರಿಶೀಲಿಸಿ ಮಂಡಳಿಗೆ ಕಳುಹಿಸಲು ಸೂಚಿಸಿದ್ದೇವೆ. ನಂತರ ಅವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸಲಾಗುವುದು ಎಂದು ವಿವರಿಸಿದರು.

*

ಕಳಪೆಯಾಗಿ ಮೌಲ್ಯಮಾಪನ ಮಾಡಿದ ಶಿಕ್ಷಕರನ್ನು ಕಪ್ಪುಪಟ್ಟಿಗೆ ಸೇರಿಸಿ, ಕೆಲ ವರ್ಷಗಳವರೆಗೆ ಮೌಲ್ಯಮಾಪನಕ್ಕೆ ಅವಕಾಶ ನೀಡದಿರುವ ಆಲೋಚನೆಯೂ ಇದೆ.

–ವಿ.ಸುಮಂಗಲಾ, ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ

*

ಎಸ್‌ಎಸ್‌ಎಲ್‌ಸಿ ಸಂಜಯ್‌ಗೆ 2ನೇ ರ್‍ಯಾಂಕ್‌ 

ಬೆಂಗಳೂರಿನ ಸೇಂಟ್‌ ಲಾರೆನ್ಸ್‌ ಪ್ರೌಢಶಾಲೆಯ ಆರ್‌.ಸಂಜಯ್‌ಗೆ ಮೊದಲ ಮೌಲ್ಯಮಾಪನದಲ್ಲಿ ಕಡಿಮೆ ಅಂಕಗಳಿಂದ ಕೈತಪ್ಪಿದ್ದ ರ್‍ಯಾಂಕ್‌ ಮರುಮೌಲ್ಯಮಾಪನದಿಂದ ಲಭಿಸಿದೆ.

614 ಅಂಕಗಳನ್ನು ಪಡೆದಿದ್ದ ಸಂಜಯ್‌ಗೆ ಮರುಮೌಲ್ಯಮಾಪನದಲ್ಲಿ ವಿಜ್ಞಾನ ವಿಷಯಲ್ಲಿ 10 ಅಂಕಗಳು ಹೆಚ್ಚಿಗೆ ದೊರೆತು, 624 ಅಂಕಗಳು ದೊರೆತಿದೆ. ಇದರಿಂದ ರಾಜ್ಯಮಟ್ಟದಲ್ಲಿ ದ್ವಿತೀಯ ರ್‍ಯಾಂಕ್‌ ಗಳಿಸಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

**

60,027

ಉತ್ತರಪತ್ರಿಕೆಗಳ ಛಾಯಾಪ್ರತಿಗೆ ಸಲ್ಲಿಸಿದ ಅರ್ಜಿಗಳು

13,865

ಮರುಮೌಲ್ಯಮಾಪಕ್ಕೆ ಸಲ್ಲಿಸಿದ ಅರ್ಜಿಗಳು

2,119

6ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸವಿರುವ ವಿದ್ಯಾರ್ಥಿಗಳ ಸಂಖ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry