ರ‍್ಯಾಂಕಿಂಗ್‌: ರಶೀದ್‌ಗೆ ಅಗ್ರ ಸ್ಥಾನ

7

ರ‍್ಯಾಂಕಿಂಗ್‌: ರಶೀದ್‌ಗೆ ಅಗ್ರ ಸ್ಥಾನ

Published:
Updated:
ರ‍್ಯಾಂಕಿಂಗ್‌: ರಶೀದ್‌ಗೆ ಅಗ್ರ ಸ್ಥಾನ

ದುಬೈ: ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್‌ ಅವರು ಐಸಿಸಿ ಶುಕ್ರವಾರ ಬಿಡುಗಡೆ ಮಾಡಿರುವ ಟ್ವೆಂಟಿ–20 ಕ್ರಿಕೆಟ್‌ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ್ದಾರೆ.

ಡೆಹ್ರಾಡೂನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಟ್ವೆಂಟಿ–20 ಕ್ರಿಕೆಟ್ ಸರಣಿಯಲ್ಲಿ ಒಟ್ಟು 12 ವಿಕೆಟ್ ಕಬಳಿಸಿದ್ದು ಅವರ ಈ ಸಾಧನೆಗೆ ಕಾರಣ. 54 ಪಾಯಿಂಟ್‌ ಗಳಿಸಿರುವ ರಶೀದ್ ಖಾನ್‌ ಬಗಲಲ್ಲಿ ಈಗ 813 ಪಾಯಿಂಟ್‌ಗಳು ಇವೆ. ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನದ ಶಾಬಾದ್ ಖಾನ್‌ 733 ಪಾಯಿಂಟ್ ಹೊಂದಿದ್ದಾರೆ.

ಬಾಂಗ್ಲಾದೇಶ ಎದುರಿನ ಸರಣಿಯನ್ನು 3–0ಯಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹಮ್ಮದ್ ನಬಿ ಮತ್ತು ಮುಜೀಬ್ ಉರ್ ರಹಿಮಾನ್ ಕೂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮಿಂಚಿದ್ದಾರೆ. ಮೊಹಮ್ಮದ್‌ ನಬಿ 11 ಪಾಯಿಂಟ್‌ಗಳನ್ನು ಗಳಿಸಿದ್ದು ಜೀವನಶ್ರೇಷ್ಠ ಎಂಟನೇ ರ‍್ಯಾಂಕ್ ಹೊಂದಿದ್ದಾರೆ. ಮುಜೀಬ್‌ 62 ಸ್ಥಾನಗಳ ಏರಿಕೆ ಕಂಡಿದ್ದು 51ನೇ ರ‍್ಯಾಂಕ್‌ ಗಳಿಸಿದ್ದಾರೆ.

ಸ್ಪಿನ್ನರ್‌ಗಳ ಕಾರುಬಾರು: ರ‍್ಯಾಂಕಿಂಗ್ ಪಟ್ಟಿಯ ಮೊದಲ ಒಂಬತ್ತು ಸ್ಥಾನಗಳಲ್ಲಿ ಸ್ಪಿನ್ನರ್‌ಗಳು ಇದ್ದು ಈ ಪೈಕಿ ಆರು ಮಂದಿ ಲೆಗ್ ಸ್ಪಿನ್ನರ್‌ಗಳು.

ಬ್ಯಾಟ್ಸ್‌ಮನ್‌ಗಳ ಪೈಕಿ ಅಫ್ಗಾನಿಸ್ತಾನದ ಆಲ್‌ರೌಂಡರ್‌ ಸಮೀವುಲ್ಲಾ ಶೇನ್‌ವಾರಿ 11 ಪಾಯಿಂಟ್‌ಗಳ ಏರಿಕೆಯೊಂದಿಗೆ 44ನೇ ಸ್ಥಾನ ತಲುಪಿದ್ದಾರೆ.

ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ ಅವರು ಒಟ್ಟು 118 ರನ್‌ ಕಲೆ ಹಾಕಿದ್ದರು. ಬಾಂಗ್ಲಾದೇಶದ ಮಹಮ್ಮದುಲ್ಲಾ ನಾಲ್ಕು ಸ್ಥಾನಗಳ ಏರಿಕೆಯೊಂದಿಗೆ 33ನೇ ರ‍್ಯಾಂಕ್‌ ಹೊಂದಿದ್ದು ಮುಷ್ಫಿಕುರ್ ರಹೀಮ್‌ ಮೂರು ಸ್ಥಾನಗಳ ಏರಿಕೆಯೊಂದಿಗೆ 41ನೇ ರ‍್ಯಾಂಕ್ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್‌ನ ಎವಿನ್‌ ಲೂಯಿಸ್‌ ಮತ್ತು ಕೆಸ್ರಿಕ್ ವಿಲಿಯಮ್ಸ್‌ ಹಾಗೂ ಶ್ರೀಲಂಕಾದ ಆಲ್‌ರೌಂಡರ್‌ ತಿಸಾರ ಪೆರೇರ ಕೂಡ ಉತ್ತಮ ಸಾಧನೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry