ಕ್ರೀಡಾಳುಗಳ ಆದಾಯದ ಮೇಲೆ ಸರ್ಕಾರದ ಕಣ್ಣು!

7
ಹರಿಯಾಣದ ನಿರ್ಧಾರದ ವಿರುದ್ಧ ಹರಿಹಾಯ್ದ ಪದಕ ವಿಜೇತರು: ಸುತ್ತೋಲೆಗೆ ತಡೆ

ಕ್ರೀಡಾಳುಗಳ ಆದಾಯದ ಮೇಲೆ ಸರ್ಕಾರದ ಕಣ್ಣು!

Published:
Updated:
ಕ್ರೀಡಾಳುಗಳ ಆದಾಯದ ಮೇಲೆ ಸರ್ಕಾರದ ಕಣ್ಣು!

ಚಂಡಿಗಡ: ಕ್ರೀಡೆ, ಜಾಹೀರಾತು ಮತ್ತು ಇತರ ಮೂಲಗಳಿಂದ ಕ್ರೀಡಾಪಟುಗಳು ಗಳಿಸುವ ಹಣದ ಮೇಲೆ ಹರಿಯಾಣ ಸರ್ಕಾರದ ಕಣ್ಣು ಬಿದ್ದಿದೆ!

ಸರ್ಕಾರಿ ಉದ್ಯೋಗದಲ್ಲಿರುವ ಕ್ರೀಡಾಪಟುಗಳು ತಮ್ಮ ಆದಾಯದ ಮೂರನೇ ಒಂದು ಭಾಗವನ್ನು ರಾಜ್ಯ ಕ್ರೀಡಾ ಮಂಡಳಿಗೆ ದೇಣಿಗೆ ನೀಡುವಂತೆ ಹರಿಯಾಣ ಸರ್ಕಾರ ಇತ್ತೀಚೆಗೆ ಹೊರಡಿಸಿದ್ದ ಸುತ್ತೋಲೆಗೆ ಭಾರಿ ಟೀಕೆ ವ್ಯಕ್ತವಾಗಿದೆ.

ಕ್ರೀಡಾವಲಯದಿಂದ ಭಾರಿ ಟೀಕೆಗಳು ಕೇಳಿ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಎಂ.ಎಲ್‌. ಖಟ್ಟರ್‌ ಅವರು ಸುತ್ತೋಲೆಯನ್ನು ತಡೆ ಹಿಡಿಯುವಂತೆ ಸೂಚಿಸಿದ್ದಾರೆ.

ಈ ಹಣವನ್ನು ರಾಜ್ಯದಲ್ಲಿ ಕ್ರೀಡೆಯ ಅಭಿವೃದ್ಧಿಗೆ ಬಳಸಲಾಗುವುದು ಎಂದು ಯುವಜನ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಶೋಕ್‌ ಖೇಮ್ಕಾ ಸುತ್ತೋಲೆಯಲ್ಲಿ ತಿಳಿಸಿದ್ದರು.

ಒಂದು ವೇಳೆ ಕರ್ತವ್ಯ ರಜೆಯ (ಒಒಡಿ) ಮೇಲೆ ತೆರಳುವ ಕ್ರೀಡಾಪಟುಗಳು ಈ ಅವಧಿಯಲ್ಲಿ ವೃತ್ತಿಪರ ಕ್ರೀಡೆ, ವಾಣಿಜ್ಯ ಚಟುವಟಿಕೆಗಳಿಂದ (ಜಾಹೀರಾತು) ಗಳಿಸುವ ಸಂಪೂರ್ಣ ಆದಾಯವನ್ನು ಮಂಡಳಿಗೆ ನೀಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಇದುವರೆಗೂ ಈ ಸುತ್ತೋಲೆ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಲಭ್ಯವಿಲ್ಲ.

ಪ್ರಸಿದ್ಧ ಬಾಕ್ಸರ್‌ಗಳಾದ ವಿಜೇಂದರ್‌ ಸಿಂಗ್‌ ಮತ್ತು ಅಖಿಲ್‌ ಕುಮಾರ್‌ ಅವರು ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿಗಳಾಗಿದ್ದಾರೆ. ಹಾಕಿ ತಂಡದ ನಾಯಕ ಸರ್ದಾರ್‌ ಸಿಂಗ್‌, ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಪೋಗಟ್‌ ಹರಿಯಾಣದ ಪೊಲೀಸ್‌ ಇಲಾಖೆಯ ನೌಕರರಾಗಿದ್ದಾರೆ.

ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಪದಕ ಗಳಿಸಿದ ರಾಜ್ಯದ ಕ್ರೀಡಾಪಟುಗಳಿಗೆ ಘೋಷಿಸಿದ್ದ ಬಹುಮಾನದ ಮೊತ್ತವನ್ನು ಕಡಿತಗೊಳಿಸಿ ಹರಿಯಾಣ ಸರ್ಕಾರ ಕೈಗೊಂಡಿದ್ದ ನಿರ್ಧಾರ ಈ ಮೊದಲು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಕ್ರೀಡಾಪಟುಗಳು ಬೆದರಿಕೆ ಹಾಕಿದ್ದರಿಂದ ಬಹುಮಾನದ ಹಣ ವಿತರಿಸುವ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು.

*

ಸರ್ಕಾರದ ವಿರುದ್ಧ ಸಿಡಿದೆದ್ದ ಪೋಗಟ್‌

ಹರಿಯಾಣ ಸರ್ಕಾರದ ಈ ಆದೇಶದ ವಿರುದ್ಧ ಕುಸ್ತಿಪಟು ಬಬಿತಾ ಪೋಗಟ್‌ ಅವರನ್ನು ಬಿಟ್ಟು ಬೇರೆ ಯಾವುದೇ ಕ್ರೀಡಾಪಟು ಧ್ವನಿ ಎತ್ತಿಲ್ಲ.

‘ಇದೊಂದು ತೀರಾ ನಿರಾಶಾದಾಯಕ ನಿರ್ಧಾರ. ನಾವು ಗಳಿಸುವ ಹಣದ ಮೇಲೆ ತೆರಿಗೆ ಕಟ್ಟುತ್ತೇವೆ. ಮತ್ತೆ ಇದೀಗ ಮೂರನೇ ಒಂದು ಭಾಗವನ್ನು ಕ್ರೀಡಾ ಮಂಡಳಿಗೆ ನೀಡಬೇಕು ಎನ್ನುವುದು ಯಾವ ನ್ಯಾಯ’ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

‘ಕ್ರೀಡಾಪಟುಗಳ ಸಿದ್ಧತೆಯ ಮೇಲೆ ಸರ್ಕಾರದ ಈ ನಿರ್ಧಾರ ದುಷ್ಪರಿಣಾಮ ಬೀರುತ್ತದೆ. ದೇಶಕ್ಕೆ ಒಂದು ಪದಕ ತರಲು ಒಬ್ಬ ಕ್ರೀಡಾಪಟು ಮತ್ತು ಅವರ ಕುಟುಂಬ ಎಷ್ಟು ಕಷ್ಟ ಪಡುತ್ತದೆ ಮತ್ತು ಎಷ್ಟು ತ್ಯಾಗ ಮಾಡುತ್ತದೆ ಎಂಬ ವಿಷಯ ಸರ್ಕಾರಕ್ಕೆ ಅರ್ಥವಾಗುವುದಿಲ್ಲ’ ಎಂದು ಪೋಗಟ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹರಿಯಾಣ ಸರ್ಕಾರ ತಕ್ಷಣ ಈ ನಿರ್ಧಾರವನ್ನು ವಾಪಸ್‌ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರದ ನೌಕರರಲ್ಲದ ಕೆಲವರು ಈ ನಿರ್ಧಾರದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಒಲಿಪಿಂಕ್ಸ್‌ನಲ್ಲಿ ಸ್ಪರ್ಧಿಸುವ ಹೆಚ್ಚಿನ ಕ್ರೀಡಾಪಟುಗಳು ಬಡ ಕುಟುಂಬದಿಂದ ಬಂದಿರುತ್ತಾರೆ ಎಂದು ರೈಲ್ವೆ ಉದ್ಯೋಗಿಯಾಗಿರುವ ಕುಸ್ತಿಪಟು ಸುಶೀಲ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

‘ದೇವರೇ, ವಿವೇಚನಾರಹಿತವಾಗಿ ಇಂತಹ ನಿರ್ಧಾರಕೈಗೊಳ್ಳುವ ಅಧಿಕಾರಿಗಳಿಂದ ನಮ್ಮನ್ನು ರಕ್ಷಿಸು. ರಾಜ್ಯದಲ್ಲಿ ಕ್ರೀಡೆಯ ಅಭಿವೃದ್ಧಿಗೆ ಇಂಥವರ ಕೊಡುಗೆ ಶೂನ್ಯ. ಆದರೆ, ಕ್ರೀಡೆಯನ್ನು ಹತ್ತಿಕ್ಕುವಲ್ಲಿ ಅವರ ಪಾತ್ರ ತುಂಬಾ ದೊಡ್ಡದು’ ಎಂದು ರೈಲ್ವೆ ಉದ್ಯೋಗಿಯಾಗಿರುವ ಮತ್ತೊಬ್ಬ ಕುಸ್ತಿಪಟು ಯೋಗೇಶ್ವರ್‌ ದತ್‌ ಲೇವಡಿ ಮಾಡಿದ್ದಾರೆ.

*

ಕ್ರೀಡಾಪಟುಗಳ ಆದಾಯದ ಮೇಲೆ ಕಣ್ಣು ಹಾಕಿರುವ ಹರಿಯಾಣ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕ್ರೀಡಾಪಟುಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕು.

–ಯೋಗೇಶ್ವರ್‌ ದತ್‌, ಒಲಿಪಿಂಕ್ಸ್‌ ಪದಕ ವಿಜೇತ ಕುಸ್ತಿಪಟು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry