ಪ್ರಣವ್‌ ಮುಖರ್ಜಿ ಆರ್‌ಎಸ್‌ಎಸ್‌ ಕಚೇರಿ ಭೇಟಿಗೆ ಮತ್ತೊಂದು ತಿರುವು

7

ಪ್ರಣವ್‌ ಮುಖರ್ಜಿ ಆರ್‌ಎಸ್‌ಎಸ್‌ ಕಚೇರಿ ಭೇಟಿಗೆ ಮತ್ತೊಂದು ತಿರುವು

Published:
Updated:
ಪ್ರಣವ್‌ ಮುಖರ್ಜಿ ಆರ್‌ಎಸ್‌ಎಸ್‌ ಕಚೇರಿ ಭೇಟಿಗೆ ಮತ್ತೊಂದು ತಿರುವು

ನವದೆಹಲಿ : ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿದ್ದಾಗ ಆರ್‌ಎಸ್‌ಎಸ್‌ ಶೈಲಿಯಲ್ಲಿ ವಂದನೆ ಸಲ್ಲಿಸುತ್ತಿರುವ ತಿರುಚಿದ ಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ.

ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಇದಕ್ಕೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿದರೆ, ವಿಭಜನಕಾರಿ ಶಕ್ತಿಗಳು ಈ ಕೃತ್ಯ ಎಸಗಿವೆ ಎಂದು ಆರ್‌ಎಸ್‌ಎಸ್‌ ಹೇಳಿದೆ.

‘ಬಿಜೆಪಿ–ಆರ್‌ಎಸ್‌ಎಸ್‌ನ ‘ಕುತಂತ್ರ ಇಲಾಖೆ’ ಪೂರ್ಣಾವಧಿ ಕೆಲಸ ಆರಂಭಿಸಿದೆ. ಇಂತಹುದು ನಡೆಯಬಹುದು ಎಂದು ತಂದೆಯನ್ನು ಮೊದಲೇ ಎಚ್ಚರಿಸಿದ್ದೆ’ ಎಂದು ಪ್ರಣವ್‌ ಅವರ ಮಗಳು, ಕಾಂಗ್ರೆಸ್‌ ನಾಯಕಿ ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಕಚೇರಿಗೆ ಪ್ರಣವ್‌ ಅವರು ಭೇಟಿ ನೀಡುವುದನ್ನು ಶರ್ಮಿಷ್ಠಾ ಅವರು ವಿರೋಧಿಸಿದ್ದರು. ಈ ಬಗ್ಗೆ ಟ್ವಿಟರ್‌ನಲ್ಲಿ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ‘ನಾನು ಬಿಜೆಪಿ ಸೇರಲು ನಿರ್ಧರಿಸಿದ್ದೇನೆ ಎಂಬ ವದಂತಿ ಹರಿದಾಡುತ್ತಿದೆ. ಅದು ಸುಳ್ಳು ಮತ್ತು ಬಿಜೆಪಿಯ ಕುತಂತ್ರ ವಿಭಾಗದ ಕೆಲಸ’ ಎಂದೂ ಶರ್ಮಿಷ್ಠಾ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಟೀಕೆ: ಪ್ರಣವ್‌ ಅವರ ತಿರುಚಿದ ಫೋಟೊವನ್ನು ಸಾಮಾಜಿಕ ಜಾಲ ತಾಣದಲ್ಲಿ ಪ್ರಚಾರ ಮಾಡಿರುವುದರ ಹಿಂದೆ ‘ವಿಭಜನಕಾರಿ ರಾಜಕೀಯ ಶಕ್ತಿಗಳಿವೆ’ ಎಂದು ಆರ್‌ಎಸ್‌ಎಸ್‌ ಹೇಳಿದೆ. ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪ್ರಣವ್‌ ಭಾಗವಹಿಸುವುದನ್ನು ತಡೆಯಲು ಮೊದಲು ಪ್ರಯತ್ನಿಸಲಾಯಿತು. ಈಗ, ಆರ್‌ಎಸ್‌ಎಸ್‌ಗೆ ಕಳಂಕ ಹಚ್ಚುವುದಕ್ಕಾಗಿ ತಿರುಚಿದ ಚಿತ್ರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರ್‌ಎಸ್‌ಎಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್‌ ವೈದ್ಯ ಹೇಳಿದ್ದಾರೆ.

*

‘ಭಿನ್ನಾಭಿಪ್ರಾಯಕ್ಕೆ ಹಿಂಜರಿಕೆ ಇಲ್ಲ’ 

ತಮ್ಮ ತಂದೆ, ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಜತೆಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ತಮಗೆ ಯಾವುದೇ ಹಿಂಜರಿಕೆ ಇಲ್ಲ. ಯಾಕೆಂದರೆ ತಮ್ಮದು ಪ್ರಜಾಸತ್ತಾತ್ಮಕ ಮತ್ತು ಸಂವಾದಶೀಲ ಕುಟುಂಬ ಎಂದು ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ. ಪ್ರಣವ್‌ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದನ್ನು ಮತ್ತು ಭಾಗವಹಿಸಿದ್ದನ್ನು ಶರ್ಮಿಷ್ಠಾ ಬಹಿರಂಗವಾಗಿಯೇ ಟೀಕಿಸಿದ್ದರು. ಇದು ತಮ್ಮ ತಂದೆಯಿಂದಲೇ ಕಲಿತ ಗುಣ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಅವರ ಹೇಳಿಕೆಗೆ ಶರ್ಮಿಷ್ಠಾ ಹೀಗೆ ಪ್ರತಿಕ್ರಿಯಿಸಿದ್ದಾರೆ.

‘ಇದು ಎಲ್ಲರೂ ಗಳಿಸಿಕೊಳ್ಳಬೇಕಾದ ಪ್ರಬುದ್ಧತೆ. ನನ್ನ ಮಗಳು ನನ್ನ ನಿಲುವುಗಳನ್ನು ಒಪ್ಪುವುದಿಲ್ಲ. ಹಾಗೆಯೇ ಅವಳ ನಿಲುವುಗಳನ್ನು ನಾನೂ ಒಪ್ಪುವುದಿಲ್ಲ. ಹಾಗಿದ್ದರೂ ನಮ್ಮದು ಸಂತುಷ್ಟ ಕುಟುಂಬ. ಪ್ರತಿ ವ್ಯಕ್ತಿಗೂ ಸ್ವಂತ ಅಭಿಪ‍್ರಾಯ ಇರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕು’ ಎಂದು ಸ್ವಾಮಿ ಹೇಳಿದ್ದರು.

‘ನಾನು ಬೆಳೆದದ್ದು ಹೀಗೆಯೇ. ಹಾಗಾಗಿಯೇ ಭಿನ್ನಾಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ನನಗೆ ಯಾವ ಸಮಸ್ಯೆಯೂ ಆಗಲಿಲ್ಲ’ ಎಂದು ಸ್ವಾಮಿ ಹೇಳಿಕೆಗೆ ಪೂರಕವಾಗಿ ಶರ್ಮಿಷ್ಠಾ ಹೇಳಿದ್ದಾರೆ.

*

ಭವ್ಯ ಇತಿಹಾಸ ನಿರ್ಮಿಸಿದ ಪ್ರಣವ್‌: ಆರ್‌ಎಸ್‌ಎಸ್‌

ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಪ್ರಣವ್‌ ಮುಖರ್ಜಿ ಅವರು ಮಾಡಿದ ಭಾಷಣವು ಭಾರತದ ಭವ್ಯ ಭವಿಷ್ಯಕ್ಕೆ ಬೆಳಕು ಚೆಲ್ಲಿತು. ಎಲ್ಲರ ಒಳಗೊಳ್ಳುವಿಕೆ, ಬಹುತ್ವ, ಏಕತೆಯಲ್ಲಿ ವೈವಿಧ್ಯತೆ ನಮ್ಮ ದೇಶದ ತಳಪಾಯ ಎಂಬುದನ್ನು ಅವರು ನೆನಪಿಸಿದ್ದಾರೆ ಎಂದು ಆರ್‌ಎಸ್‌ಎಸ್‌ ಹೇಳಿದೆ.

‘ಭಾರತಕ್ಕೆ ಐದು ಸಾವಿರ ವರ್ಷಗಳ ಸಾಂಸ್ಕೃತಿಕ ಪರಂಪರೆ ಇದೆ. ನಮ್ಮ ಆಡಳಿತ ವ್ಯವಸ್ಥೆ ಬದಲಾಗಿರಬಹುದು, ಆದರೆ ಮೌಲ್ಯಗಳು ಹಾಗೆಯೇ ಉಳಿದಿವೆ’ ಎಂದು ಆರ್‌ಎಸ್‌ಎಸ್‌ ಪ್ರಚಾರ ಪ್ರಮುಖ (ಅಧಿಕೃತ ವಕ್ತಾರ) ಅರುಣ್ ಕುಮಾರ್‌ ಹೇಳಿದ್ದಾರೆ.

‘ನಮ್ಮ ಕಚೇರಿಗೆ ಬಂದು, ರಾಷ್ಟ್ರ, ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿ ಬಗೆಗಿನ ಸಂವಾದವನ್ನು ಗಟ್ಟಿಗೊಳಿಸಿದ್ದಕ್ಕೆ ಅವರಿಗೆ ಕೃತಜ್ಞತೆ’ ಎಂದು ತಿಳಿಸಿದ್ದಾರೆ.

‘ಧರ್ಮ, ದ್ವೇಷ, ಸಿದ್ಧಾಂತ ಮತ್ತು ಅಸಹಿಷ್ಣುತೆಯ ಆಧಾರದಲ್ಲಿ ದೇಶವನ್ನು ವ್ಯಾಖ್ಯಾನಿಸಲು ಹೊರಟರೆ ಅದು ಭಾರತವನ್ನು ದುರ್ಬಲಗೊಳಿಸುತ್ತದೆ. ಬಹುತ್ವ ಮತ್ತು ಸಹಿಷ್ಣುತೆಯಲ್ಲಿ ಭಾರತದ ಆತ್ಮ ಇದೆ’ ಎಂದು ಆರ್‌ಎಸ್‌ಎಸ್‌ ಕಚೇರಿಯ ಕಾರ್ಯಕ್ರಮದಲ್ಲಿ ಪ್ರಣವ್‌ ಹೇಳಿದ್ದರು.

*

ಕೆಲವರ ಮೆಚ್ಚುಗೆ, ಕೆಲವರ ಆಕ್ರೋಶ

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿಗೆ ಭೇಟಿ ನೀಡಿ, ಭಾಷಣ ಮಾಡಿದ್ದಕ್ಕೆ ಕಾಂಗ್ರೆಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕಾಂಗ್ರೆಸ್‌ನಲ್ಲಿ ಕೆಲವರು ಪ್ರಣವ್ ಅವರ ಸೈದ್ಧಾಂತಿಕ ಬದ್ಧತೆಯನ್ನು ಪ್ರಶಂಸಿಸಿದ್ದಾರೆ. ಪ್ರಣವ್ ಅಲ್ಲಿಗೆ ಹೋಗಲೇ ಬಾರದಿತ್ತು ಎಂದು ಇನ್ನು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪ್ರಣವ್ ಭಾಗವಹಿಸಿದ್ದನ್ನು ಕಾಂಗ್ರೆಸ್‌ನ ಮನೀಷ್ ತಿವಾರಿ ಕಟುವಾಗಿ ಟೀಕಿಸಿದ್ದಾರೆ. ‘ನಮಗೆಲ್ಲಾ ತರಬೇತಿ ನೀಡುವಾಗ ಆರ್‌ಎಸ್‌ಎಸ್‌ ಬಗ್ಗೆ ನೀವು ಮತ್ತು ನಿಮ್ಮ ತಲೆಮಾರಿನವರು ಎಚ್ಚರಿಕೆ ನೀಡಿದ್ದಿರಿ. ಆರ್‌ಎಸ್‌ಎಸ್‌ನ ಉದ್ದೇಶ, ಕಾರ್ಯಸೂಚಿಗಳ ಬಗ್ಗೆ ವಿವರಿಸಿದ್ದಿರಿ. ಆದರೆ ಈಗ ನೀವೇ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿ’ ಎಂದು ಮನೀಷ್ ಟ್ವೀಟ್‌ನಲ್ಲಿ ಆಗ್ರಹಿಸಿದ್ದಾರೆ.

‘1972 ಮತ್ತು 1992ರಲ್ಲಿ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿದ್ದ ಸರ್ಕಾರದಲ್ಲಿ ನೀವೂ ಇದ್ದಿರಿ. ಆಗ

ಆರ್‌ಎಸ್‌ಎಸ್‌ನಲ್ಲಿ ಅಂತಹ ಕೆಡುಕು ಏನಿತ್ತು? ಮತ್ತು ಈಗ ಆರ್‌ಎಸ್‌ಎಸ್‌ನ ಯಾವ ಸದ್ಗುಣ ನಿಮಗೆ ಕಾಣಿಸಿತು ಎಂಬುದನ್ನು ನಮಗೆಲ್ಲಾ ವಿವರಿಸಬೇಕು ಎಂದು ನಿಮಗೆ ಅನಿಸುತ್ತಿಲ್ಲವೇ’ ಎಂದು ಮನೀಷ್ ಪ್ರಶ್ನಿಸಿದ್ದಾರೆ.

‘ಯಾವುದೇ ವ್ಯಕ್ತಿಗೆ ಬರುವ ಅಹ್ವಾನಗಳ ಆಧಾರದಲ್ಲಿ ಅವರನ್ನು ಟೀಕಿಸಬೇಡಿ, ಅವರು ಅಲ್ಲಿ ಏನು ಮಾತನಾಡುತ್ತಾರೆ ಎಂಬುದು ಮುಖ್ಯ ಎಂದು ನಾನು ಹೇಳುತ್ತಲೇ ಇದ್ದೆ. ಪ್ರಣವ್ ಮುಖರ್ಜಿ ಈ ಮಾತನ್ನು ದೃಢೀಕರಿಸಿದ್ದಾರೆ. ಆರ್‌ಎಸ್‌ಎಸ್‌ಗೆ ಪಾಠ ಮಾಡಿದ ಮೊದಲ ಮಾಜಿ ಕಾಂಗ್ರೆಸ್ಸಿಗ ಪ್ರಣವ್’ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

ತೊಗಾಡಿಯಾ ಆಕ್ಷೇಪ: ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪ್ರಣವ್ ಮುಖರ್ಜಿ ಅವರು ಪ್ರತಿಪಾದಿಸಿದ ರಾಷ್ಟ್ರೀಯತೆ ಪರಿಪೂರ್ಣವಾದುದಲ್ಲ ಎಂದು ವಿಶ್ವ ಹಿಂದೂ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಪ್ರತಿಪಾದಿಸಿದ್ದಾರೆ.

‘ಭಾರತದಲ್ಲಿ ಎರಡು ರೀತಿಯ ರಾಷ್ಟ್ರೀಯತೆ ಇದೆ. ಅದರಲ್ಲಿ ಒಂದನ್ನು ಮಾತ್ರ ಪ್ರಣವ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು’ ಎಂದು ತೊಗಾಡಿಯಾ ಹೇಳಿದ್ದಾರೆ.

*

ಯಾರು ಏನೆಂದರು?.....

ನೀವು ಅಲ್ಲಿ ಏನನ್ನೇ ಮಾತನಾಡಿದ್ದರೂ, ಭಾರತದ ಜಾತ್ಯತೀತ ಮತ್ತು ಬಹುತ್ವದ ಪ್ರಜ್ಞೆಯಲ್ಲಿ ಆರ್‌ಎಸ್‌ಎಸ್‌ ಅನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಿಯೇ ನಿಮ್ಮ ಭೇಟಿಯನ್ನು ಬಿಂಬಿಸಲಾಗುತ್ತದೆ.

ಮನೀಷ್ ತಿವಾರಿ, ಕಾಂಗ್ರೆಸ್ ಮುಖಂಡ

ಕಾಂಗ್ರೆಸ್‌ನ ಸಿದ್ಧಾಂತಗಳೇಕೆ ಸರಿ ಎಂಬುದನ್ನು ಆರ್‌ಎಸ್‌ಎಸ್‌ಗೆ ಪ್ರಣವ್ ತಿಳಿಸಿದ್ದಾರೆ. ಆರ್‌ಎಸ್‌ಎಸ್‌ನ ಸಿದ್ಧಾಂತಗಳಲ್ಲಿನ ತಪ್ಪೇನು ಎಂಬುದನ್ನು ತಮ್ಮದೇ ರೀತಿಯಲ್ಲಿ ಮುಟ್ಟಿಸಿದ್ದಾರೆ.

ಪಿ.ಚಿದಂಬರಂ, ಕಾಂಗ್ರೆಸ್‌ ಮುಖಂಡ

ಪ್ರಣವ್ ಹೇಳಿದ್ದರಲ್ಲಿ ಆರ್‌ಎಸ್‌ಎಸ್‌ ಸ್ವಲ್ಪವನ್ನಾದರೂ ಅಳವಡಿಸಿಕೊಳ್ಳಲಿ. ಶಿಕ್ಷಕರನ್ನಾಗಿ ಕರೆಸಿದವರಿಂದ ಆರ್‌ಎಸ್‌ಎಸ್ ಸ್ವಲ್ಪವಾದರೂ ಕಲಿಯಲಿ.

ಅಭಿಷೇಕ್ ಮನು ಸಿಂಘ್ವಿ, ಕಾಂಗ್ರೆಸ್‌ ಮುಖಂಡ

ಜಾತ್ಯತೀತ, ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವಲ್ಲಿನ ನಿಮ್ಮ ಬದ್ಧತೆ ಮತ್ತು ನೈತಿಕ ಪ್ರಜ್ಞೆ ಬಗ್ಗೆ ಸಂದೇಹಗಳು ಉಳಿದಿಲ್ಲ. ನಾಗಪುರದಲ್ಲಿ ನೀವು ಬಹಳ ಎತ್ತರಕ್ಕೆ ಏರಿದ್ದೀರಿ.

ಆನಂದ್ ಶರ್ಮಾ, ಕಾಂಗ್ರೆಸ್‌ ಮುಖಂಡ

ಮಹಾತ್ಮ ಗಾಂಧಿ–ನೆಹರೂ ಅವರ ರಾಷ್ಟ್ರೀಯತೆ ಬಗ್ಗೆ ಮಾತ್ರ ಪ್ರಣವ್ ಮಾತನಾಡಿದರು. ಹೆಡಗೇವಾರ್ ಮತ್ತು ಸಾವರ್ಕರ್ ಅವರ ರಾಷ್ಟ್ರೀಯತೆ ಬಗ್ಗೆ ಅವರು ಮಾತನಾಡಲೇ ಇಲ್ಲ.

ಪ್ರವೀಣ್ ತೊಗಾಡಿಯಾ, ವಿಶ್ವ ಹಿಂದೂ ಪರಿಷತ್‌ನ ಮಾಜಿ ಅಧ್ಯಕ್ಷ

ಪ್ರಣವ್ ಅವರು ಭಾರತೀಯ ರಾಷ್ಟ್ರೀಯತೆಯ ಧ್ಯೇಯಗಳನ್ನು ವಿವರಿಸಿದರು. ಅವರ ಈ ಭೇಟಿ ಭಾರತದ ಸಮಕಾಲೀನ ಇತಿಹಾಸದ ಮಹತ್ವದ ಅಂಶ.

ಲಾಲ್ ಕೃಷ್ಣ ಅಡ್ವಾಣಿ,ಬಿಜೆಪಿಯ ಹಿರಿಯ ನಾಯಕ

ನನಗೆ ಯಾವುದರ ಭಯ ಇತ್ತೋ, ಯಾವುದರ ಬಗ್ಗೆ ತಂದೆಗೆ ಎಚ್ಚರಿಕೆ ಕೊಟ್ಟಿದ್ದೆನೋ ಅದೇ ಆಗಿದೆ. ಕೆಲವೇ ತಾಸುಗಳಲ್ಲಿ ಬಿಜೆಪಿ/ಆರ್‌ಎಸ್‌ಎಸ್‌ನ ಕುತಂತ್ರ ಇಲಾಖೆ ಕೆಲಸ ಮಾಡಿದೆ.

ಶರ್ಮಿಷ್ಠಾ ಮುಖರ್ಜಿ, ಪ್ರಣವ್‌ ಮುಖರ್ಜಿ ಮಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry