ವರಿಷ್ಠರಿಂದ ಅಸಮಾಧಾನ ಶಮನ: ಮಲ್ಲಿಕಾರ್ಜುನ ಖರ್ಗೆ

7
ಲೋಕಸಭೆ ಚುನಾವಣೆ: ಜೆಡಿಎಸ್‌ ಜತೆ ಹೊಂದಾಣಿಕೆ

ವರಿಷ್ಠರಿಂದ ಅಸಮಾಧಾನ ಶಮನ: ಮಲ್ಲಿಕಾರ್ಜುನ ಖರ್ಗೆ

Published:
Updated:
ವರಿಷ್ಠರಿಂದ ಅಸಮಾಧಾನ ಶಮನ: ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ: ‘ಸಚಿವ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಅದನ್ನು ಹೈಕಮಾಂಡ್ ಶಮನಗೊಳಿಸಲಿದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಪಕ್ಷಕ್ಕಾಗಿ ಅನೇಕರು ದುಡಿದಿದ್ದಾರೆ. 3–4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಮಂತ್ರಿ ಆಗಬೇಕು ಎಂದು ಬಯಸುವುದು ಸಹಜ. ಹೈಕಮಾಂಡ್ ಪ್ರತಿನಿಧಿಯಾಗಿ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಅವರು ಸರಿಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ ಭಿನ್ನಾಭಿಪ್ರಾಯಕ್ಕೆ ಯಾರೂ ತುಪ್ಪ ಸುರಿಯುವ ಕೆಲಸ ಮಾಡಬಾರದು’ ಎಂದು ಮನವಿ ಮಾಡಿದರು.

ಒಟ್ಟಿಗೆ ಹೋಗುವುದು ಖಚಿತ: ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್–ಜೆಡಿಎಸ್ ಒಟ್ಟಿಗೆ ಹೋಗುವುದು ಖಚಿತ’ ಎಂದೂ ಹೇಳಿದರು.

‘ಕಾಂಗ್ರೆಸ್–ಜೆಡಿಎಸ್ ಒಗ್ಗೂಡಿ ಚುನಾವಣೆ ಎದುರಿಸುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಮಾಜ ವಿಭಜನೆ ಕೆಲಸ ಮಾಡುತ್ತಿವೆ. ಹೀಗಾಗಿ ಜಾತ್ಯತೀತ ತತ್ವ ಎತ್ತಿ ಹಿಡಿಯಲು, ಪ್ರಜಾಪ್ರಭುತ್ವ ಉಳಿಸಲು ಮತ್ತು ಸಂವಿಧಾನ ರಕ್ಷಿಸಲು ಒಟ್ಟಿಗೆ ಹೋಗುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಲು ಸಮ್ಮಿಶ್ರ ಸರ್ಕಾರ ರಚಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಈ ವಿಷಯದಲ್ಲಿ ನಮ್ಮ ಅಭಿಪ್ರಾಯ ಬದಿಗಿಟ್ಟು, ಹೈಕಮಾಂಡ್ ಸೂತ್ರ ಪಾಲಿಸುತ್ತಿದ್ದೇವೆ’ ಎಂದು ತಿಳಿಸಿದರು.

*

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂಬುದು ಊಹಾಪೋಹ. ಅವರಿಬ್ಬರೂ ಒಂದೇ ದಾರಿಯಲ್ಲಿ ಸಾಗುತ್ತಿದ್ದಾರೆ.

-ಮಲ್ಲಿಕಾರ್ಜುನ ಖರ್ಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry