4

ಫೈನಲ್‌ ಪ್ರವೇಶಿಸಿದ ಡಾಮಿನಿಕ್‌

Published:
Updated:
ಫೈನಲ್‌ ಪ್ರವೇಶಿಸಿದ ಡಾಮಿನಿಕ್‌

ಪ್ಯಾರಿಸ್‌: ಅಮೋಘ ಆಟ ಆಡಿದ ಡಾಮಿನಿಕ್‌ ಥೀಮ್‌, ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಫಿಲಿಪ್‌ ಚಾಟ್ರಿಯರ್‌ ಅಂಗಳದಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಆಸ್ಟ್ರಿಯಾದ ಡಾಮಿನಿಕ್‌ 7–5, 7–6, 6–1ರಲ್ಲಿ ಇಟಲಿಯ ಮಾರ್ಕೊ ಸೆಚ್ಚಿನಾಟೊ ವಿರುದ್ಧ ಗೆದ್ದರು.

ಶ್ರೇಯಾಂಕ ರಹಿತ ಆಟಗಾರ ಸೆಚ್ಚಿನಾಟೊ ಮೊದಲ ಮತ್ತು ಎರಡನೇ ಸೆಟ್‌ನಲ್ಲಿ ಮಿಂಚು ಹರಿಸಿದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 72ನೇ ಸ್ಥಾನದಲ್ಲಿರುವ ಅವರು ಶರವೇಗದ ಸರ್ವ್‌ ಮತ್ತು ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಗೇಮ್‌ ಜಯಿಸಿ 5–5ರಲ್ಲಿ ಸಮಬಲ ಸಾಧಿಸಿದರು. ಆದರೆ ‘ಟೈ ಬ್ರೇಕರ್‌’ನಲ್ಲಿ ಡಾಮಿನಿಕ್‌ ಮೋಡಿ ಮಾಡಿದರು. ಸತತ ಎರಡು ಗೇಮ್‌ ಗೆದ್ದು ಸೆಟ್‌ ಕೈವಶ ಮಾಡಿಕೊಂಡರು.

ಎರಡನೇ ಸೆಟ್‌ನಲ್ಲೂ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. 24ರ ಹರೆಯದ ಥೀಮ್‌ ಅವರ ತಂತ್ರಗಳಿಗೆ ಪ್ರತಿ ತಂತ್ರ ಹೆಣೆದ ಸೆಚ್ಚಿನಾಟೊ, 6–6ರಲ್ಲಿ ಸಮಬಲ ಸಾಧಿಸಿದರು. ನಂತರ ಡಾಮಿನಿಕ್‌ ಪ್ರಾಬಲ್ಯ ಮೆರೆದರು.

ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲಿ ಥೀಮ್‌ ಅಬ್ಬರಿಸಿದರು. ಮಿಂಚಿನ ಸರ್ವ್‌ಗಳ ಮೂಲಕ ಸೆಚ್ಚಿನಾಟೊ ಅವರನ್ನು ಕಂಗೆಡಿಸಿದ ಅವರು ಸುಲಭವಾಗಿ ಗೇಮ್‌ ಜಯಿಸಿದರು. ನಂತರವೂ ‍‍ಪ್ರಾಬಲ್ಯ ಮುಂದುವರಿಸಿ ಏಕಪಕ್ಷೀಯವಾಗಿ ಸೆಟ್‌ ಜಯಿಸಿ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಡಾಮಿನಿಕ್‌ ಅವರು ಈ ಪಂದ್ಯದಲ್ಲಿ ಆರು ಏಸ್‌ಗಳನ್ನು ಸಿಡಿಸಿದರು. ಜೊತೆಗೆ ನಾಲ್ಕು ಬ್ರೇಕ್‌ ಪಾಯಿಂಟ್ಸ್‌ ಜಯಿಸಿದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ 6–4, 6–1, 6–2ರಲ್ಲಿ ಮಾರ್ಟಿನ್‌ ಡೆಲ್‌ ಪೊಟ್ರೊ ಅವರನ್ನು ಮಣಿಸಿದರು.

ಇಂದು ಮಹಿಳಾ ವಿಭಾಗದ ಫೈನಲ್‌

ರುಮೇನಿಯಾದ ಸಿಮೊನಾ ಹಲೆಪ್‌ ಮತ್ತು ಅಮೆರಿಕದ ಸ್ಲೊವಾನ್‌ ಸ್ಟೀಫನ್ಸ್‌ ಅವರು ಶನಿವಾರ ನಡೆಯುವ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ.

ಹಲೆಪ್‌ ಅವರು ಗ್ರ್ಯಾನ್‌ಸ್ಲಾಮ್‌ನಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಅವರು ಈ ಹಿಂದೆ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಎರಡು ಬಾರಿ ಫೈನಲ್‌ ಪ್ರವೇಶಿಸಿ ಸೋತಿದ್ದರು. ಈ ವರ್ಷ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ನಲ್ಲೂ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದ್ದರು.

ಸ್ಟೀಫನ್ಸ್‌ ವಿರುದ್ಧ 5–2ರ ಗೆಲುವಿನ ದಾಖಲೆ ಹೊಂದಿರುವ ಅವರು ಈ ಬಾರಿ ಚೊಚ್ಚಲ ಪ್ರಶಸ್ತಿಯ ಕನಸು ಸಾಕಾರಗೊಳಿಸಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ.

ಅಮೆರಿಕ ಓಪನ್‌ನಲ್ಲಿ ಚಾಂಪಿಯನ್‌ ಆಗಿರುವ ಸ್ಟೀಫನ್ಸ್‌ ಕೂಡ ಪ್ರಶಸ್ತಿಯ ಕನಸು ಕಾಣುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry