ಬಗೆಹರಿಯುವುದೇ ಲೋಕಾಯುಕ್ತ– ಎಸಿಬಿ ಜಟಾಪಟಿ?

7

ಬಗೆಹರಿಯುವುದೇ ಲೋಕಾಯುಕ್ತ– ಎಸಿಬಿ ಜಟಾಪಟಿ?

Published:
Updated:
ಬಗೆಹರಿಯುವುದೇ ಲೋಕಾಯುಕ್ತ– ಎಸಿಬಿ ಜಟಾಪಟಿ?

ಮಂಗಳೂರು: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರಿಗೆ ಇದ್ದ ಅಧಿಕಾರವನ್ನು ಕಿತ್ತು ಪ್ರತ್ಯೇಕವಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿದ್ದ ಹಿಂದಿನ ಸರ್ಕಾರದ ನಿರ್ಧಾರವನ್ನು ಅಧಿಕಾರಕ್ಕೆ ಬರುತ್ತಲೇ ರದ್ದು ಮಾಡುವುದಾಗಿ ಜೆಡಿಎಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಈಗ ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ. ‘ಜನತಾ ಪ್ರಣಾಳಿಕೆ’ಯಲ್ಲಿ ನೀಡಿದ್ದ ವಾಗ್ದಾನದಂತೆ ಲೋಕಾಯುಕ್ತ ಮತ್ತು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಅವರು ಬಲ ತುಂಬುತ್ತಾರೆಯೇ? ಅಥವಾ ಮಿತ್ರಪಕ್ಷದ ಹಂಗಿಗೆ ಬಿದ್ದು ಯಥಾಸ್ಥಿತಿ ಕಾಯ್ದುಕೊಂಡು ಮುನ್ನಡೆಯುತ್ತಾರೆಯೇ ಎಂಬ ಕುತೂಹಲ ಈಗ ಗರಿಗೆದರಿದೆ.

ಲೋಕಾಯುಕ್ತ ಸಂಸ್ಥೆಯ ವಿಚಾರ ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಆರೋಪ, ಪ್ರತ್ಯಾರೋಪಗಳ ನಡುವೆ ಹೆಚ್ಚು ಬಳಕೆಯಾಗಿತ್ತು. ಭ್ರಷ್ಟಾಚಾರದ ವಿಷಯ ಪ್ರಸ್ತಾಪವಾದಾಗಲೆಲ್ಲ ಲೋಕಾಯುಕ್ತದ ವಿಚಾರವೂ ಸದ್ದು ಮಾಡಿತ್ತು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳ ಬಹುತೇಕ ಘಟಾನುಘಟಿ ನಾಯಕರೆಲ್ಲರೂ ಇದೇ ವಿಚಾರವನ್ನು ಮುಂದಿಟ್ಟುಕೊಂಡು ದಿನಗಟ್ಟಲೆ ವಾಕ್ಸಮರ ನಡೆಸಿದ್ದರು. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ದುರ್ಬಲಗೊಳಿಸಿದೆ ಎಂದು ಪದೇ ಪದೇ ಆರೋಪಿಸಿದ್ದ ಜೆಡಿಎಸ್‌ ಮತ್ತು ಬಿಜೆಪಿ, ಅಧಿಕಾರಕ್ಕೆ ಬಂದರೆ ಲೋಕಾಯುಕ್ತವನ್ನು ತಕ್ಷಣದಲ್ಲೇ ಬಲಪಡಿಸುವ ಭರವಸೆ ನೀಡಿದ್ದವು. ಜೆಡಿಎಸ್‌ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿತ್ತು. ಲೋಕಾಯುಕ್ತವನ್ನು ದುರ್ಬಲಗೊಳಿಸಲೆಂದೇ ಎಸಿಬಿಯನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದೆ ಎಂದು ನೇರವಾಗಿ ಪ್ರಣಾಳಿಕೆಯಲ್ಲೇ ವಾಗ್ದಾಳಿ ನಡೆಸಿತ್ತು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರಚನೆಯಾದ ಎಸಿಬಿಯನ್ನು ರದ್ದು ಮಾಡಿ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಇದ್ದ ಅಧಿಕಾರವನ್ನು ಮರುಸ್ಥಾಪನೆ ಮಾಡುವ ಭರವಸೆ ನೀಡಿತ್ತು. ಲೋಕಾಯುಕ್ತ ಪೊಲೀಸ್ ವಿಭಾಗವನ್ನು ಇನ್ನಷ್ಟು ಸ್ವತಂತ್ರಗೊಳಿಸಿ ನೇರವಾಗಿ ಲೋಕಾಯುಕ್ತ ಸುಪರ್ದಿಗೆ ನೀಡುವ ವಾಗ್ದಾನವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿತ್ತು. ಲೋಕಾಯುಕ್ತವನ್ನು ಪುನರುಜ್ಜೀವನಗೊಳಿಸಿ ಅದರ ಗತ ವೈಭವವನ್ನು ಮರಳಿ ಸ್ಥಾಪಿಸುವ ಭರವಸೆ ಜೆಡಿಎಸ್‌ ಪ್ರಣಾಳಿಕೆಯಲ್ಲಿ ಇತ್ತು.

1986ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಚುನಾವಣೆಯಲ್ಲಿ ಜನರಿಗೆ ನೀಡಿದ್ದ ಭರವಸೆಯಂತೆ ಲೋಕಾಯುಕ್ತ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದರು. ಆರಂಭದಲ್ಲಿ ಲೋಕಾಯುಕ್ತ ಎಂಬ ‘ಓಂಬುಡ್ಸ್‌ಮನ್‌’ ಹೆಚ್ಚು ಅಧಿಕಾರಯುತವಾಗಿತ್ತು. ಸಾರ್ವಜನಿಕರ ಕುಂದುಕೊರತೆಗಳು, ಸರ್ಕಾರಿ ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳಿಂದ ಆಗುವ ತೊಂದರೆ, ಸ್ವಜನಪಕ್ಷಪಾತ, ಕರ್ತವ್ಯಲೋಪದಂತಹ ವಿಚಾರಗಳ ಕುರಿತು ವಿಚಾರಣೆ ನಡೆಸುವ ಅಧಿಕಾರ ಮೊದಲನೆಯದ್ದು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲಂಚ ಪ್ರಕರಣಗಳು, ಅಕ್ರಮ ಆಸ್ತಿ ಸಂಪಾದನೆ ವಿರುದ್ಧ ಕಾರ್ಯಾಚರಣೆ ನಡೆಸುವ ಹೊಣೆ ಹೊತ್ತ ಪೊಲೀಸ್ ವಿಭಾಗವನ್ನೂ ಲೋಕಾಯುಕ್ತದ ಜೊತೆ ಜೋಡಿಸಲಾಗಿತ್ತು. ಈ ವಿಭಾಗ ನೇರವಾಗಿ ಲೋಕಾಯುಕ್ತರ ಸುಪರ್ದಿಯಲ್ಲಿ ಇರದಿದ್ದರೂ, ಲೋಕಾಯುಕ್ತದ ಪ್ರಭಾವದ ಪರಿಧಿಯಲ್ಲೇ ಕೆಲಸ ಮಾಡುತ್ತಿತ್ತು.

ಆರಂಭದ ದಿನಗಳಲ್ಲಿ ಮುಖ್ಯಮಂತ್ರಿಯವರೆಗೂ, ಯಾವುದೇ ಸರ್ಕಾರಿ ನೌಕರ/ ಚುನಾಯಿತ ಪ್ರತಿನಿಧಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವ ಅಧಿಕಾರ ಲೋಕಾಯುಕ್ತರಿಗೆ ಇತ್ತು. ಆದರೆ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ಎರಡೇ ವರ್ಷಗಳಲ್ಲಿ ಇದನ್ನು ಹಿಂದಕ್ಕೆ ಪಡೆಯಲಾಗಿತ್ತು. ಅದಾದ ಬಳಿಕವೂ ಲೋಕಾಯುಕ್ತ ಸಾಕಷ್ಟು ಬಲಿಷ್ಠವಾಗಿಯೇ ಇತ್ತು. 2001ರಿಂದ 2006ರವರೆಗೆ ನಿವೃತ್ತ ನ್ಯಾಯಮೂರ್ತಿ ಎನ್‌.ವೆಂಕಟಾಚಲಯ್ಯ ಅವರು ಲೋಕಾಯುಕ್ತರಾಗಿದ್ದ ಅವಧಿ ಮತ್ತು ನಂತರ ಬಂದ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಅವಧಿಯಲ್ಲಿ ಈ ಸಂಸ್ಥೆ ಹೆಚ್ಚು ಸದ್ದು ಮಾಡಿತ್ತು. ಸಂತೋಷ್‌ ಹೆಗ್ಡೆ ಅವರ ಅವಧಿಯಲ್ಲಿ ಲೋಕಾಯುಕ್ತದ ನ್ಯಾಯಾಂಗ ವಿಭಾಗ ಮತ್ತು ಪೊಲೀಸ್ ವಿಭಾಗಗಳು ನಡೆಸಿದ್ದ ಕಾರ್ಯಾಚರಣೆಗಳು ಸರ್ಕಾರಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ವಲಯದಲ್ಲಿ ನಡುಕ ಹುಟ್ಟಿಸಿದ್ದವು. ಈ ಅವಧಿಯಲ್ಲಿ ಲೋಕಾಯುಕ್ತರು ಮತ್ತು ಲೋಕಾಯುಕ್ತ ಪೊಲೀಸರಿಂದ ದೊರೆತ ಸ್ಪಂದನೆ ರಾಜ್ಯದ ಜನಮಾನಸದಲ್ಲಿ ಈ ವ್ಯವಸ್ಥೆಯ ಬಗೆಗಿನ ನಂಬಿಕೆಯನ್ನು ದುಪ್ಪಟ್ಟು ಮಾಡಿತ್ತು.

2006ರಿಂದ ಲೋಕಾಯುಕ್ತ ಸಂಸ್ಥೆಗೂ ಕರ್ನಾಟಕದ ರಾಜಕೀಯ ಬೆಳವಣಿಗೆಗಳಿಗೂ ಅವಿನಾಭಾವ ಸಂಬಂಧ ಬೆಳೆಯಿತು. ಲೋಕಾಯುಕ್ತರು ಮತ್ತು ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಗಳ ಪರಿಣಾಮವಾಗಿ ಸಚಿವರು ರಾಜೀನಾಮೆ ನೀಡಬೇಕಾಗಿ ಬಂತು. ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಲೋಕಾಯುಕ್ತರು ಸಲ್ಲಿಸಿದ ವರದಿಯಿಂದ ಅಂದಿನ ಮುಖ್ಯುಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಲೋಕಾಯುಕ್ತ ಸಂಸ್ಥೆಯ ಕಾರ್ಯಾಚರಣೆಗಳಿಂದ ಬಿಜೆಪಿಯ ಬೆನ್ನಿಗೆ ಅಂಟಿಕೊಂಡ ಭ್ರಷ್ಟಾಚಾರದ ಕಳಂಕ 2013ರ ಚುನಾವಣೆಯಲ್ಲಿ ಆ ಪಕ್ಷವನ್ನು ಅಧಿಕಾರದಿಂದ ದೂರ ನಿಲ್ಲಿಸಿತು. ಕಾಂಗ್ರೆಸ್‌ಗೆ ವರದಾನವಾಗಿಯೂ ಪರಿಣಮಿಸಿತು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತದೊಳಗೆ ಹಲವು ಅಹಿತಕರ ಘಟನೆಗಳು ನಡೆದವು. ನ್ಯಾಯಮೂರ್ತಿ ವೈ.ಭಾಸ್ಕರ್‌ ರಾವ್‌ ಅವರ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪ ಇಡೀ ಸಂಸ್ಥೆಯನ್ನೇ ಅನುಮಾನದ ಬಲೆಯೊಳಗೆ ಕೆಡವಿತು. ಆಗಲೇ ಲೋಕಾಯುಕ್ತ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ಅಂದಿನ ಸರ್ಕಾರ ಮುಂದಾಗಿತ್ತು. ಆದರೆ, ಪ್ರಬಲವಾದ ವಿರೋಧ ವ್ಯಕ್ತವಾದ ಬಳಿಕ ಆ ಪ್ರಯತ್ನವನ್ನು ಕೈಬಿಟ್ಟಿತ್ತು. 1998ರಲ್ಲಿ ಸಿ.ರಂಗಸ್ವಾಮಯ್ಯ ಮತ್ತು ಕರ್ನಾಟಕ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ಪ್ರತ್ಯೇಕವಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸುವಂತೆ ನೀಡಿದ್ದ ತೀರ್ಪು ಹೈಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆಯಲ್ಲಿ ಮುನ್ನೆಲೆಗೆ ಬಂದಿತ್ತು. ಅದನ್ನು ಆಧರಿಸಿ 2016ರಲ್ಲಿ ಆಡಳಿತಾತ್ಮಕ ನಿರ್ಧಾರವೊಂದನ್ನು ಕೈಗೊಂಡ ಸರ್ಕಾರ, ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಇದ್ದ ಅಧಿಕಾರವನ್ನು ಮೊಟಕುಗೊಳಿಸಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕಾರ್ಯಾಚರಣೆ ನಡೆಸುವುದಕ್ಕಾಗಿ ಪ್ರತ್ಯೇಕ ಎಸಿಬಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಎಸಿಬಿ ರಚನೆ ಕಾನೂನಿನ ಪರಿಮಿತಿಯಲ್ಲಿ ಸರಿಯೇ ಇದ್ದರೂ ಅದರಿಂದ ಲೋಕಾಯುಕ್ತಕ್ಕೆ ಇದ್ದ ಬಲ ಕಡಿಮೆ ಆಗಿರುವುದು ಸತ್ಯ. ಒಂದರ್ಥದಲ್ಲಿ ಈಗ ಲೋಕಾಯುಕ್ತ ಎಂಬುದು ಅಕ್ಷರಶಃ ಹಲ್ಲು ಕಿತ್ತ ಹಾವಿನಂತೆ ಆಗಿದೆ. ಕರ್ತವ್ಯಲೋಪ, ದುರಾಡಳಿತ, ಸ್ವಜನ ಪಕ್ಷಪಾತದಂತಹ ದೂರುಗಳ ವಿಚಾರಣೆಗೆ ಸೀಮಿತವಾಗಿದೆ. ಇತ್ತ ಎಸಿಬಿ ಕೂಡ ಪೂರ್ಣ ಪ್ರಮಾಣದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ಅದು ನೇರವಾಗಿ ಮುಖ್ಯಮಂತ್ರಿಯವರ ಸುಪರ್ದಿಯಲ್ಲಿ ಇದೆ. ತನಿಖಾ ಸಂಸ್ಥೆಯಲ್ಲಿನ ಅಧಿಕಾರಿಗಳ ವರ್ಗಾವಣೆಗೆ ಯಾವ ಅಡತಡೆಗಳೂ ಇಲ್ಲವಾಗಿದೆ. ಇದರಿಂದಾಗಿ ನಿಷ್ಪಕ್ಷಪಾತ ತನಿಖೆಯ ಸಾಧ್ಯತೆಯ ಬಗ್ಗೆಯೇ ಅನುಮಾನಗಳು ಎದ್ದು ನಿಂತಿವೆ.

ಇಂತಹ ಸಮಯದಲ್ಲಿ ಎಸಿಬಿಯನ್ನು ಸಂಪೂರ್ಣ ಬಲಗೊಳಿಸಿ ಅದನ್ನು ಲೋಕಾಯುಕ್ತರ ಅಧೀನಕ್ಕೆ ತಂದು ಸ್ವತಂತ್ರ ತನಿಖಾ ಸಂಸ್ಥೆಯನ್ನಾಗಿ ರೂಪಿಸುವ ಮಾತನ್ನು ಕುಮಾರಸ್ವಾಮಿ ಉಳಿಸಿಕೊಳ್ಳುವರೇ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ವಾರದಲ್ಲಿ (ಮೇ 1) ಹೈಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ಅಧಿಕೃತವಾಗಿ ನಿಲುವು ಪ್ರಕಟಿಸಿರುವ ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್‌, ಎಸಿಬಿ ರದ್ದು ಮಾಡುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಕಳೆದ ಅವಧಿಯಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೇರಿದಂತೆ ಸಂಪುಟದ ಸದಸ್ಯರಾಗಿದ್ದ ಹಲವರ ವಿರುದ್ಧ ಸಲ್ಲಿಕೆಯಾಗಿದ್ದ ದೂರುಗಳು ಲೋಕಾಯುಕ್ತದಲ್ಲಿ ಇವೆ. ಜೆಡಿಎಸ್‌ ಮತ್ತು ಬಿಜೆಪಿ ನಾಯಕರ ವಿರುದ್ಧವೂ ಅಂತಹ ದೂರುಗಳು ಬಾಕಿ ಇವೆ.

ಈಗ ಕುಮಾರಸ್ವಾಮಿ ಲೋಕಾಯುಕ್ತ ಬಲಗೊಳಿಸುವ ಪ್ರಯತ್ನಕ್ಕೆ ಕೈ ಹಾಕುವರೇ? ಈ ಕೆಲಸದಲ್ಲಿ ಕಾಂಗ್ರೆಸ್‌ ಪಕ್ಷದ ಬೆಂಬಲ ಪಡೆಯುವಲ್ಲಿ ಅವರು ಯಶಸ್ವಿಯಾಗುವರೆ? ಇಲ್ಲವೇ ‘ಸಾಂಧರ್ಭಿಕ ಶಿಶು’ವಿನ ವಾದ ಮಂಡಿಸಿ ಯಥಾಸ್ಥಿತಿಯನ್ನೇ ಪೋಷಿಸುತ್ತಾರಾ ಎಂಬುದು ರಾಜ್ಯದ ಮುಂದಿರುವ ಪ್ರಶ್ನೆ. ಕಾಂಗ್ರೆಸ್‌ ಸರ್ಕಾರ ಲೋಕಾಯುಕ್ತವನ್ನು ದುರ್ಬಲಗೊಳಿಸಿದೆ ಎಂದು ಚುನಾವಣಾ ಪ್ರಚಾರದುದ್ದಕ್ಕೂ ಆರೋಪ ಮಾಡುತ್ತಾ ಬಂದಿದ್ದ ಬಿಜೆಪಿ ಈ ವಿಚಾರದಲ್ಲಿ ಏನು ಮಾಡಬಹುದು ಎಂಬ ಪ್ರಶ್ನೆಯೂ ಈಗ ಮೂಡಿದೆ.

*

‘ಯಾರಿಗೂ ಬೇಡವಾದ ಕೂಸು’

‘ಚುನಾವಣೆಗೂ ಮೊದಲು ಲೋಕಾಯುಕ್ತ ಎಲ್ಲರಿಗೂ ಬೇಕಾಗಿತ್ತು. ರಾಜ್ಯದ ಜನರು ಈ ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯನ್ನು ಆಧರಿಸಿ ಎಲ್ಲ ಪಕ್ಷಗಳೂ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದವು. ಈಗ ಯಾರಾದರೂ ಲೋಕಾಯುಕ್ತ ಸಂಸ್ಥೆಯ ಬಲವರ್ಧನೆ ಬಗ್ಗೆ ಮಾತನಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ’ ಎನ್ನುತ್ತಾರೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ.

ಯಾರಿಗೂ ಲೋಕಾಯುಕ್ತವನ್ನು ಬಲಿಷ್ಠಗೊಳಿಸುವುದು ಬೇಡವಾಗಿದೆ. ಒಂದು ಅರ್ಥದಲ್ಲಿ ಈ ಸಂಸ್ಥೆ ಯಾರಿಗೂ ಬೇಡವಾದ ಕೂಸು. ಅಕ್ರಮ ಗಣಿಗಾರಿಕೆ ಕುರಿತ ತನಿಖಾ ವರದಿಯಲ್ಲಿ ಎಲ್ಲ ಪಕ್ಷದವರ ಹೆಸರುಗಳೂ ಇದ್ದವು. ಅಲ್ಲಿಂದಲೇ ಈ ಬಗೆಯ ದ್ವೇಷ ಆರಂಭವಾಯಿತು. ಚುನಾವಣೆಗೆ ಮೊದಲು ಬಲವರ್ಧನೆಯ ಮಾತನಾಡಿದವರು ಅಧಿಕಾರಕ್ಕೆ ಬಂದ ತಕ್ಷಣದಲ್ಲೇ ಲೋಕಾಯುಕ್ತವನ್ನು ದುರ್ಬಲಗೊಳಿಸಲು ಯತ್ನಿಸುತ್ತಾರೆ ಎಂದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೂಡ ಈ ಮಾತಿಗೆ ಹೊರತಲ್ಲ. ಜನಾಭಿಪ್ರಾಯದ ಒತ್ತಡಕ್ಕೆ ಮಣಿದು ಯುಪಿಎ ಸರ್ಕಾರ ಲೋಕಪಾಲ ಕಾಯ್ದೆ ಅಂಗೀಕರಿಸಿತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಲೋಕಪಾಲ ಅಸ್ತಿತ್ವಕ್ಕೆ ಬರಲಿಲ್ಲ. ಕುಂಟುನೆಪ ಹೇಳುತ್ತಾ ಕಾಲ ದೂಡಲಾಗುತ್ತಿದೆ. ಲೋಕಾಯುಕ್ತ ವಿಚಾರದಲ್ಲಿ ಆದದ್ದೇ ಲೋಕಪಾಲದ ವಿಷಯದಲ್ಲೂ ಆಗುತ್ತಿದೆ ಎಂದು ಹೇಳಿದರು.

*

ಪ್ರಣಾಳಿಕೆಯಲ್ಲಿನ ಭರವಸೆಗಳು

* ಭ್ರಷ್ಟಾಚಾರ ನಿಗ್ರಹ ದಳ ರದ್ದು ಮಾಡುವುದು

* ಲೋಕಾಯುಕ್ತಕ್ಕೆ ಸ್ವತಂತ್ರ ಪೊಲೀಸ್ ವಿಭಾಗ

* ಪೂರ್ಣ ಪ್ರಮಾಣದಲ್ಲಿ ಲೋಕಾಯುಕ್ತ ಬಲವರ್ಧನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry