ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಕೊಡಗು, ದ.ಕ, ಉಡುಪಿ ಜಿಲ್ಲೆ ಶಾಲೆಗೆ ರಜೆ

Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದೆ. ನದಿ, ಹಳ್ಳ–ಕೊಳ್ಳಗಳು, ಕೆರೆ–ಕಟ್ಟೆಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ.

ಕರಾವಳಿಯಲ್ಲಿ ಮಳೆ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗುಜಿಲ್ಲೆಗಳಲ್ಲಿ  ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.

ನೇತ್ರಾವತಿ, ಗುರುಪುರ, ಕುಮಾರಧಾರ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಉಪ್ಪಿನಂಗಡಿ ಬಳಿ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ವಿಪತ್ತು ನಿರ್ವಹಣಾ ತಂಡ ಬೋಟ್‌ಗಳೊಂದಿಗೆ ರಕ್ಷಣಾಕಾರ್ಯದ ಸಿದ್ಧತೆಯಲ್ಲಿದೆ. ಹೇಮಾವತಿ, ಭದ್ರಾನದಿ, ಊರುಬಗೆನದಿ, ಜಪಾವತಿ, ಚಿಕ್ಕಳ್ಳ ಸೇರಿದಂತೆ ಬಹುತೇಕ ನದಿಗಳಲ್ಲಿ ನೀರಿನಮಟ್ಟ ಏರಿಕೆಯಾಗಿದೆ.

ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬ್ರಹ್ಮಗಿರಿ, ತಲಕಾವೇರಿ ವ್ಯಾಪ್ತಿಯಲ್ಲಿ ಬೀಳುತ್ತಿರುವ ಸತತ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮದ ಸ್ನಾನಘಟ್ಟವು ಭರ್ತಿಯಾಗಿದೆ. ಹಾರಂಗಿ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ಸಿದ್ದಾಪುರ, ನೆಲ್ಯಹುದಿಕೇರಿ, ದುಬಾರೆ, ಕುಶಾಲನಗರ ಭಾಗದಲ್ಲಿ ಕಾವೇರಿ ನದಿಯು ನಿಧಾನವಾಗಿ ಮೈದುಂಬಿಕೊಳ್ಳುತ್ತಿದೆ.

ಧಾರವಾಡ, ಗದಗ, ಉತ್ತರ ಕನ್ನಡ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಭಟ್ಕಳ ತಾಲ್ಲೂಕಿನ ತಟ್ಟಿಹಕ್ಕಲ್‌ ಸಮೀಪ ಪಳ್ಳಿಹೊಳೆಗೆ ನಿರ್ಮಿಸಿದ್ದ ತಾತ್ಕಾಲಿಕ ಸಂಪರ್ಕ ರಸ್ತೆ ಕೊಚ್ಚಿಕೊಂಡು ಹೋಗಿದೆ.

ಉತ್ತಮ ಮಳೆ: ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯ ಹಲವೆಡೆ ಗುರುವಾರ ರಾತ್ರಿ, ಶುಕ್ರವಾರ ಉತ್ತಮ ಮಳೆಯಾಗಿದೆ. ಅಮರ್ಜಾ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದ ನೀರು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT