7
ಉಪಮುಖ್ಯಮಂತ್ರಿ ಸ್ಥಾನಕ್ಕೆ ಎಂ.ಬಿ. ಪಾಟೀಲ ಹಟ

ಬಂಡಾಯಕ್ಕೆ ‘ಕೈ’ ನಡುಕ

Published:
Updated:
ಬಂಡಾಯಕ್ಕೆ ‘ಕೈ’ ನಡುಕ

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸಚಿವರು ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದಲೇ ‘ಕೈ’ ಪಾಳಯದಲ್ಲಿ ಶುರುವಾದ ಭಿನ್ನಮತ ಶುಕ್ರವಾರ ತಾರಕಕ್ಕೆ ಏರಿದೆ. ಅತೃಪ್ತ ಶಾಸಕರ ಗುಂಪಿಗೆ ಮತ್ತಷ್ಟು ಮಂದಿ ಸೇರ್ಪಡೆಯಾಗುತ್ತಲೇ ಇದ್ದು, ಇವರೆಲ್ಲರ ಒಗ್ಗಟ್ಟಿನ ಪಟ್ಟಿನಿಂದ ಹೈಕಮಾಂಡ್‌ಗೆ ದಿಗಿಲಾಗಿದೆ.

ಎಂ.ಬಿ.ಪಾಟೀಲ ಹಾಗೂ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ 17ಕ್ಕೂ ಹೆಚ್ಚು ಭಿನ್ನಮತೀಯ ಶಾಸಕರು ಒಗ್ಗಟ್ಟಾಗಿದ್ದು, ಕಾಂಗ್ರೆಸ್‌ ಪಾಲಿನ 6 ಸಚಿವ ಸ್ಥಾನಗಳನ್ನು ಕೂಡಲೇ ಭರ್ತಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಸೋಮವಾರದೊಳಗೆ ತಮ್ಮ ಬೇಡಿಕೆ ಈಡೇರಿಸುವಂತೆಯೂ ಗಡುವು ವಿಧಿಸಿದ್ದಾರೆ.

 

ಈ ಮಧ್ಯೆ, ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಕಂದಾಯ, ನಗರಾಭಿವೃದ್ಧಿಯಂತಹ ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಅತೃಪ್ತರ ಆಕ್ರೋಶ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಇನ್ನೊಂದೆಡೆ, ಬಂಡಾಯಗಾರರ ಬೆಂಬಲಿಗರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಎಂ.ಬಿ.ಪಾಟೀಲ ಹಾಗೂ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಗುಡುಗಿದೆ. ‘ಸಂಪುಟದಲ್ಲಿ ಮಾದಿಗರಿಗೆ ಪ್ರಾತಿ

ನಿಧ್ಯವನ್ನೇ ನೀಡಿಲ್ಲ. ಲೋಪ ಸರಿಪಡಿಸದಿದ್ದರೆತಕ್ಕ ಪಾಠ ಕಲಿಸುತ್ತೇವೆ’ ಎಂದು ಮಾದಿಗ ಸಂಘಟನೆಯ ಪ್ರತಿನಿಧಿಗಳು ಬೆದರಿಕೆ ಒಡ್ಡಿದ್ದಾರೆ.

‘ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಗೆಲುವಿಗೆ ತನು ಮನ ಧನದ ಸಹಾಯ ನೀಡಿದ್ದೇನೆ. ನನಗೆ ಉಪಮುಖ್ಯಮಂತ್ರಿ ಸ್ಥಾನವನ್ನೇ ನೀಡಬೇಕು’ ಎಂದು ಪಾಟೀಲರು ಹಟ ಹಿಡಿದಿದ್ದಾರೆ. ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಅತೃಪ್ತರ ಗುಂಪು ಶುಕ್ರವಾರ ಸರಣಿ ಸಭೆಗಳನ್ನು ನಡೆಸಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿತು.

ಪಾಟೀಲರ ಮನೆಗೆ ತೆರಳಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಅವರ ಮನವೊಲಿಸಲು ಪ್ರಯತ್ನಿಸಿದರು. ‘ನಾನೇನು ತಪ್ಪು ಮಾಡಿದ್ದೇನೆ. ಬಳಸಿಕೊಂಡು ಬಿಸಾಡಲು ನಾನೇನು ಕಸವೇ’ ಎಂದು ಪಾಟೀಲರು ಕಟುವಾಗಿ ಪ್ರಶ್ನಿಸಿದರು.

ಬೆಳಗಾವಿಯಲ್ಲಿ ಮಾತನಾಡಿದ ಸತೀಶ ಜಾರಕಿಹೊಳಿ, ‘ನಾನು ಮುಖ್ಯಮಂತ್ರಿ ಆಗುವ ರೇಸ್‌ನಲ್ಲಿದ್ದೇನೆ. ಇದನ್ನು ಸಹಿಸಿಕೊಳ್ಳದವರು ಹಾಗೂ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟವರು ನನ್ನ ವಿರುದ್ಧ ಕುತಂತ್ರ ನಡೆಸಿದ್ದಾರೆ. ಇದರಲ್ಲಿ ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ನಾಯಕರೂ ಇದ್ದಾರೆ’ ಎಂದು ಕಿಡಿಕಾರಿದರು. ಎರಡು ದಿನಗಳಲ್ಲಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಅವರು ಪ್ರಕಟಿಸಿದರು.

‘ಬೆಂಗಳೂರಿನಲ್ಲಿ ಇದೇ ತಿಂಗಳ 11ರಂದು ಅತೃಪ್ತ ಶಾಸಕರ ಸಭೆ ನಡೆಸುತ್ತೇವೆ. ನಮ್ಮ ಅಸಮಾಧಾನವನ್ನು ಹೈಕಮಾಂಡ್‌ ಗಮನಕ್ಕೆ ತರುತ್ತೇವೆ. ಅವರು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದನ್ನು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಬಾದಾಮಿಯಲ್ಲಿ ಸಿದ್ದರಾಮಯ್ಯ: ಭಿನ್ನಮತದ ಬೇಗುದಿಯಿಂದ ಕೈ ಪಾಳಯ ಹೊತ್ತಿ ಉರಿಯುತ್ತಿದ್ದರೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎರಡು ದಿನಗಳಿಂದ ಬಾದಾಮಿಯಲ್ಲಿ ಬೀಡು ಬಿಟ್ಟಿದ್ದಾರೆ. ಎಲ್ಲರನ್ನೂ ಸಮಾಧಾನ ಪಡಿಸುತ್ತೇವೆ ಎಂದು ಅವರು ಹೇಳಿಕೆ ನೀಡಿದ್ದರೂ ಅತೃಪ್ತರ ಕೋಪವನ್ನು ತಣ್ಣಗಾಗಿಸುವ ಯತ್ನಕ್ಕೆ ಅವರು ಕೈಹಾಕಿಲ್ಲ ಎಂದು ಕಾಂಗ್ರೆಸ್‌ ಮುಖಂಡರೇ ಆಕ್ಷೇಪಿಸಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಬಹುತೇಕರು ಬಂಡಾಯದ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ.

ಭಿನ್ನಮತೀಯ ಶಾಸಕರು

ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಎಂಟಿಬಿ ನಾಗರಾಜ್‌, ಎನ್.ಎ.ಹ್ಯಾರಿಸ್, ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ, ಎಚ್‌.ಕೆ.ಪಾಟೀಲ, ಈಶ್ವರ್ ಖಂಡ್ರೆ, ಸಿ.ಎಸ್.ಶಿವಳ್ಳಿ, ರಘುಮೂರ್ತಿ, ಆರ್‌.ರೋಷನ್ ಬೇಗ್, ಬಿ.ಕೆ.ಸಂಗಮೇಶ್ವರ, ಇ.ತುಕಾರಾಂ, ಪಿ.ಟಿ‌.ಪರಮೇಶ್ವರ ನಾಯ್ಕ್, ಬಿ.ನಾಗೇಂದ್ರ, ಶಿವರಾಂ ಹೆಬ್ಬಾರ್, ಭೀಮಾ ನಾಯ್ಕ್, ಬಿ.ನಾರಾಯಣ, ವಿ.ಮುನಿಯಪ್ಪ, ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ.

ಕಾಂಗ್ರೆಸ್‌ ಕೈಬಿಟ್ಟಿದೆ: ಪಾಟೀಲ

‘ಕಾಂಗ್ರೆಸ್ ಪಕ್ಷ ನನ್ನನ್ನು ಕೈಬಿಟ್ಟಿದೆ. ಆದರೆ, ನಾನು ಪಕ್ಷಕ್ಕೆ ವಿಶ್ವಾಸದ್ರೋಹ ಬಗೆಯುವುದಿಲ್ಲ. ಎಲ್ಲರೂ ಕೂಡಿ ಚರ್ಚಿಸುತ್ತೇವೆ. ನಮ್ಮ ಪಕ್ಷದಲ್ಲಾದ ನೋವನ್ನು, ಆಗಿರುವ ಅನ್ಯಾಯವನ್ನು ಹಂಚಿಕೊಂಡು ಮುಂದಿನ ಹೋರಾಟ ರೂಪಿಸುತ್ತೇವೆ’ ಎಂದು ಎಂ.ಬಿ.‍ಪಾಟೀಲ ತಿಳಿಸಿದರು.

 

‘ನಾನಾಗಿ ಏನೂ ನಿರ್ಧಾರ ಮಾಡುವುದಿಲ್ಲ.‌ ಕಾಂಗ್ರೆಸ್ ನನ್ನನ್ನು ಕೈಬಿಟ್ಟಂತೆ ನಾನು ಜತೆಗಿರುವವನ್ನು ಕೈಬಿಡುವುದಿಲ್ಲ. ಪಕ್ಷವನ್ನು ಬಿಡುವ ಪ್ರಶ್ನೆಯಿಲ್ಲ. ಒಳಗಡೆಯಿದ್ದು ಪಕ್ಷವನ್ನು ಕಟ್ಟುವ ಬಗ್ಗೆ ಚರ್ಚೆ ಮಾಡುತ್ತೇವೆ’ ಎಂದರು.

ಅತೃಪ್ತಿ ಶಮನಕ್ಕೆ ಹೈಕಮಾಂಡ್‌ ತಂಡ

ಭಿನ್ನಮತೀಯರ ಮನವೊಲಿಸಲು ಕಾಂಗ್ರೆಸ್‌ ಹೈಕಮಾಂಡ್‌ ಆರು ನಾಯಕರ ತಂಡ ರಚಿಸಿದೆ. ಈ ತಂಡ ಶುಕ್ರವಾರವೇ ಅಖಾಡಕ್ಕೆ ಇಳಿದಿದೆ. ಈ ತಂಡದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.‍ಪರಮೇಶ್ವರ, ಸಚಿವರಾದ ಆರ್‌.ವಿ.ದೇಶ‍ಪಾಂಡೆ, ಕೆ.ಜೆ.ಜಾರ್ಜ್‌, ಡಿ.ಕೆ. ಶಿವಕುಮಾರ್‌, ಕೃಷ್ಣ ಬೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ ಭಿನ್ನಮತ ಶಮನಗೊಳಿಸಲು ಕಸರತ್ತು ನಡೆಸಿದರು.

‘ಆರು ಸಚಿವ ಸ್ಥಾನಗಳು ಖಾಲಿ ಇವೆ. ಶೀಘ್ರದಲ್ಲಿ ಇವುಗಳನ್ನು ಭರ್ತಿ ಮಾಡಲಾಗುತ್ತದೆ. ಆ ವೇಳೆಗೆ ಹಿರಿಯ ನಾಯಕರಿಗೆ ಜಾತಿವಾರು ಪ್ರಾತಿನಿಧ್ಯ ನೀಡಲಾಗುತ್ತದೆ. ಸ್ವಲ್ಪ ತಾಳ್ಮೆಯಿಂದ ಇರಿ. ಪಕ್ಷದ ಮಾನ ಹರಾಜು ಹಾಕಬೇಡಿ’ ಎಂದು ವರಿಷ್ಠರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಈಗ ಪ್ರಮಾಣವಚನ ಸ್ವೀಕರಿಸಿದವರು ಎರಡು ವರ್ಷ ಸಚಿವರಾಗಿರುತ್ತಾರೆ. ಬಳಿಕ ಸಂಪುಟದ ಪುನಾರಚನೆ ನಡೆಯಲಿದೆ. ಆರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ ನಡೆಯಲಿದೆ. ಉತ್ತಮ ಸಾಧನೆ ಮಾಡದ ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ. ಈ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಂಡಿದೆ’ ಎಂದು ದಿನೇಶ್ ಗುಂಡೂರಾವ್‌ ತಿಳಿಸಿದರು.

ಎಂಬಿಪಿ, ಪರಮೇಶ್ವರ, ದಿನೇಶ್‌ ದೆಹಲಿಗೆ?

ಭುಗಿಲೆದ್ದ ಭಿನ್ನಮತ ತಣಿಸಲು ಮುಂದಾಗಿರುವ ಕಾಂಗ್ರೆಸ್‌ ಹೈಕಮಾಂಡ್‌ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಭಿನ್ನಮತೀಯರ ನೇತೃತ್ವ ವಹಿಸಿರುವ ಎಂ.ಬಿ.ಪಾಟೀಲ ಅವರಿಗೆ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ

ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರೊಂದಿಗೆ ಚರ್ಚಿಸಿದ ಬಳಿಕ ಈ ಮೂವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

‘ಖಾಲಿ ಇರುವ ಆರು ಸ್ಥಾನಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುತ್ತದೆ. ಆ ವೇಳೆಗೆ ಹಿರಿಯ ನಾಯಕರಿಗೆ ಜಾತಿವಾರು ಪ್ರಾತಿನಿಧ್ಯ ನೀಡಲಾಗುತ್ತದೆ. ತಾಳ್ಮೆಯಿಂದ ಇರಿ’ ಎಂದು ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ.

‘ಯಾರದ್ದೋ ಕುತಂತ್ರಕ್ಕೆ ಒಳಗಾಗಿ ಸಚಿವ ಸ್ಥಾನ ತಪ್ಪಿಸಲಾಗಿದೆ. ಸಚಿವ ಸ್ಥಾನ ತಪ್ಪಿಸಿದವರ ಹೆಸರನ್ನು ಸದ್ಯದಲ್ಲಿಯೇ ಬಹಿರಂಗಪಡಿಸುವೆ.’

– ಸತೀಶ ಜಾರಕಿಹೊಳಿ, ಶಾಸಕ

ನನಗೆ ರಾಜಕೀಯ ಹವ್ಯಾಸವಷ್ಟೇ! ಇದನ್ನು ಬಿಟ್ಟು ಮಾಡಲು ಬೇಕಾದಷ್ಟು ಕೆಲಸಗಳಿವೆ. ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ. ಸಚಿವ ಸ್ಥಾನ ನೀಡದಿದ್ದರೆ, ಶಾಸಕನಾಗಿಯೇ ಕೆಲಸ ಮಾಡುತ್ತೇನೆ.

– ಶಾಮನೂರು ಶಿವಶಂಕರಪ್ಪ, ಶಾಸಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry