ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಟೀಲ, ಶಾಮನೂರುಗೆ ಸಚಿವ ಸ್ಥಾನ ನೀಡಲು ವೀರಶೈವ ಮಹಾಸಭಾ ಲಾಬಿ

Last Updated 8 ಜೂನ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ಎಂ.ಬಿ.ಪಾಟೀಲ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮಹಾಸಭಾ ಲಾಬಿ ಆರಂಭಿಸಿದೆ.

ಇಬ್ಬರಿಗೆ ಪ್ರಭಾವಿ ಖಾತೆಗಳನ್ನು ನೀಡದೇ ಇದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಭಾ ಎಚ್ಚರಿಸಿದೆ.

ಪ್ರತ್ಯೇಕ ಧರ್ಮ ಹೋರಾಟದ ಬಳಿಕ ‍ಪಾಟೀಲರ ವಿರುದ್ಧ ಮಹಾಸಭಾ ಹರಿಹಾಯ್ದಿತ್ತು. ಈಗ ಅವರಿಗೇ ಸಚಿವ ಸ್ಥಾನ ನೀಡುವಂತೆ ಪಟ್ಟು ಹಿಡಿದಿದೆ. ಈ ಸಂಬಂಧ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ತಿಪ್ಪಣ್ಣ ಅವರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ‘ಸಚಿವ ಸಂಪುಟದಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಭಾವನೆ ಬಲವಾಗಿದೆ. ಜತೆಗೆ, ಶಾಮನೂರು ಹಾಗೂ ಪಾಟೀಲರಿಗೆ ಸಚಿವ ಸ್ಥಾನ ನೀಡದಿರುವುದು ತಪ್ಪು ಸಂದೇಶ ನೀಡಿದಂತಾಗಿದೆ’ ಎಂದು ಅವರು ಮುಖ್ಯಮಂತ್ರಿ ಗಮನಕ್ಕೆ ತಂದರು.

‘ಲಿಂಗಾಯತ ಹಾಗೂ ಒಕ್ಕಲಿಗ ರಾಜ್ಯದಲ್ಲಿ ಪ್ರಭಾವಿ ಸಮುದಾಯಗಳು. ಸಂಪುಟದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ ಇದೆ. ನಮ್ಮ ಸಮುದಾಯಕ್ಕೆ ಕನಿಷ್ಠ ಪ್ರಾತಿನಿಧ್ಯ ನೀಡಲಾಗಿದೆ. ಇದು ಯಾವ ನ್ಯಾಯ’ ಎಂದು ಅವರು ಪ್ರಶ್ನಿಸಿದರು.

‘ಜೆಡಿಎಸ್‌ನಿಂದ ಸಮುದಾಯದ ನಾಲ್ವರು ಆಯ್ಕೆಯಾಗಿದ್ದಾರೆ. ನಾವು ಇಬ್ಬರಿಗೆ ಸಚಿವ ಸ್ಥಾನ ನೀಡಿದ್ದೇವೆ’ ಎಂದು ಕುಮಾರಸ್ವಾಮಿ ಸಮರ್ಥನೆ ಮಾಡಿಕೊಂಡರು.

ಬಳಿಕ ಅವರು, ಸಿದ್ದರಾಮಯ್ಯ ಅವರ ಜತೆಗೆ ದೂರವಾಣಿಯಲ್ಲಿ ಸುಮಾರು 10 ನಿಮಿಷ ಚರ್ಚಿಸಿದರು. ‘ನೀವು ಏನೇನು ಮಾಡಿದ್ದೀರಿ ಎಂಬುದು ಸಮುದಾಯಕ್ಕೆ ಗೊತ್ತಿದೆ. ಕಾಂಗ್ರೆಸ್‌ನ ಅನೇಕ ನಾಯಕರನ್ನು ಸಮುದಾಯ ಗೆಲ್ಲಿಸಿದೆ. ಹಾಗಿದ್ದರೂ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡುವ ಮೂಲಕ ಬೆಂಕಿಗೆ ತುಪ್ಪ ಸುರಿಯಲಾಗಿದೆ. ಈಗಲಾದರೂ ಎಚ್ಚೆತ್ತು ಅನ್ಯಾಯ ಸರಿಪಡಿಸಿ. ಇಲ್ಲದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

‘ಮಹಾಸಭಾದ ಬೇಡಿಕೆಯನ್ನು ಹೈಕಮಾಂಡ್‌ ಗಮನಕ್ಕೆ ತರುತ್ತೇನೆ’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT