ಶುಕ್ರವಾರ, ಜುಲೈ 1, 2022
25 °C
ಕೆಪಿಸಿಸಿ ಕಚೇರಿ ಎದುರು ಆಕ್ರೋಶ: ಕಾರ್ಯಕರ್ತನಿಂದ ಆತ್ಮಹತ್ಯೆ ಯತ್ನ

ಶಾಸಕ ಹ್ಯಾರಿಸ್‌ ಬೆಂಬಲಿಗರ ರಂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಸಕ ಹ್ಯಾರಿಸ್‌ ಬೆಂಬಲಿಗರ ರಂಪ

ಬೆಂಗಳೂರು: ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಹಲವು ನಾಟಕೀಯ ವಿದ್ಯಮಾನಗಳು ನಡೆದವು.

ಶಾಂತಿನಗರ ಕ್ಷೇತ್ರದ ಶಾಸಕ ಎನ್‌.ಎ. ಹ್ಯಾರಿಸ್‌ಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹ್ಯಾರಿಸ್ ಬೆಂಬಲಿಗರು ಹಾಗೂ ಕಾರ್ಯಕರ್ತರು ಬೆಳಿಗ್ಗೆಯಿಂದ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹ್ಯಾರಿಸ್ ಬೆಂಬಲಿಗ ಸಲೀಂ ಎಂಬಾತ ಕಟೌಟ್ ಕಟ್ಟಲು ನಿಲ್ಲಿಸಿದ್ದ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಪೊಲೀಸರು ಸಲೀಂನನ್ನು ರಕ್ಷಿಸಿ, ವಶಕ್ಕೆ ಪಡೆದಿದ್ದಾರೆ. ಬಳಿಕ ಮತ್ತೊಬ್ಬ ಯತ್ನ ನಡೆಸಿದ್ದಾನೆ.

ಇದೇ ಸಂದರ್ಭದಲ್ಲಿ ಮತ್ತೊಬ್ಬ ಬೆಂಬಲಿಗ ಕೆಪಿಸಿಸಿ ಕಚೇರಿ ಬಳಿ ಇರುವ ಹೋರ್ಡಿಂಗ್ಸ್ ಮೇಲೆ ಏರಿ ಪ್ರತಿಭಟನೆ ನಡೆಸಿದ್ದಾನೆ. ಇನ್ನೊಬ್ಬ ಬೆಂಬಲಿಗ ತಲೆ ಬೋಳಿಸಿಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಕಾಂಗ್ರೆಸ್ ನಾಯಕರು ಕಚೇರಿ ಒಳಗೆ ತೆರಳದಂತೆ ಅಡ್ಡಲಾಗಿ ಕುಳಿತು ಪ್ರತಿಭಟನಾಕಾರರು ಧರಣಿ ನಡೆಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ಮುಂಜಾಗ್ರತಾ ಕ್ರಮವಾಗಿ ಕೆಪಿಸಿಸಿ ಸಿಬ್ಬಂದಿಯು ಕಚೇರಿಯ ಬಾಗಿಲು ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಚೇರಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಕುರುಬ ಸಮುದಾಯದ ಬೈರತಿ ಬಸವರಾಜ್‌ ಹಾಗೂ ಸಿ.ಎಸ್‌.ಶಿವಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು