ಸಾಫ್ಟ್‌ವೇರ್‌ ಕಂಪನಿಯಲ್ಲಿ ಬಾಂಬ್‌: ಹುಸಿ ಕರೆ

7

ಸಾಫ್ಟ್‌ವೇರ್‌ ಕಂಪನಿಯಲ್ಲಿ ಬಾಂಬ್‌: ಹುಸಿ ಕರೆ

Published:
Updated:
ಸಾಫ್ಟ್‌ವೇರ್‌ ಕಂಪನಿಯಲ್ಲಿ ಬಾಂಬ್‌: ಹುಸಿ ಕರೆ

ಬೆಂಗಳೂರು: ಮಾರತ್ತಹಳ್ಳಿಯ ಸೆಸ್ನಾ ಬ್ಯುಸಿನೆಸ್ ಪಾರ್ಕ್‌ನಲ್ಲಿರುವ ‘ಸಿಸ್ಕೊ ಸಿಸ್ಟಂ ಇಂಡಿಯಾ’ ಸಾಫ್ಟ್‌ವೇರ್‌ ಕಂಪನಿಗೆ ಕರೆ ಮಾಡಿದ್ದ ಅಪರಿಚಿತನೊಬ್ಬ, ‘ಕಂಪನಿ ಕಟ್ಟಡದಲ್ಲಿ ಬಾಂಬ್‌ ಇಟ್ಟಿದ್ದೇನೆ’ ಎಂದು ಬೆದರಿಕೆ ಹಾಕಿದ್ದ ಘಟನೆ ಶುಕ್ರವಾರ ನಡೆದಿದೆ.

ಕರೆ ಬಗ್ಗೆ ಮಾಹಿತಿ ತಿಳಿದು ಶ್ವಾನ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಮೇತ ಸ್ಥಳಕ್ಕೆ ಹೋಗಿದ್ದ ವೈಟ್‌ಫೀಲ್ಡ್‌ ಉಪವಿಭಾಗದ ಪೊಲೀಸರು, ಎರಡು ಗಂಟೆವರೆಗೆ ಬಾಂಬ್‌ಗಾಗಿ ಕಟ್ಟಡದಲ್ಲಿ ಶೋಧ ನಡೆಸಿದರು. ಈ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ದೊರೆಯಲಿಲ್ಲ. ಇದೊಂದು ಹುಸಿ ಕರೆ ಎಂದು ಪೊಲೀಸರು ಘೋಷಿಸಿದರು.

‘ಮಧ್ಯಾಹ್ನ 12.07 ಗಂಟೆಗೆ ಬಂದಿದ್ದ ಕರೆಯನ್ನು ಸಿಸ್ಕೊ ಕಂಪನಿ ಎಂಜಿನಿಯರ್ ಶಶಿಧರ್ ಎಂಬುವರು ಸ್ವೀಕರಿಸಿದ್ದರು. ಆತನೊಂದಿಗೆ ಹಿಂದಿಯಲ್ಲಿ ಎರಡು ನಿಮಿಷ ಮಾತನಾಡಿದ್ದ ಆರೋಪಿ, ‘ವಿಷಕಾರಿ ಪೌಡರ್‌ ಒಳಗೊಂಡಿರುವ ಬಾಂಬ್‌ನ್ನು ನಿಮ್ಮ ಕಚೇರಿಯಲ್ಲಿ ಇಟ್ಟಿದ್ದೇವೆ. 10 ನಿಮಿಷದಲ್ಲೇ ಅದು ಸ್ಫೋಟ
ವಾಗಲಿದೆ. ನೀವೆಲ್ಲರೂ ಉಸಿರುಗಟ್ಟಿ ಸಾಯುವಿರಿ’ ಎಂದು ಬೆದರಿಸಿದ್ದಾಗಿ ಪೊಲೀಸರು ಹೇಳಿದರು.

’ಕರೆಯಿಂದ ಗಾಬರಿಗೊಂಡ ಶಶಿಧರ್, ತಮ್ಮ ಸಹೋದ್ಯೋಗಿಗಳಿಗೆ ವಿಷಯ ತಿಳಿಸಿದ್ದರು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 7,000 ಉದ್ಯೋಗಿಗಳು ಕಟ್ಟಡದಿಂದ ಹೊರಗೆ ಓಡಿಹೋದರು.

‘ಬಾಂಬ್‌ ಇಲ್ಲ ಎಂಬುದನ್ನು ಖಾತ್ರಿ ಮಾಡಿದ ಬಳಿಕವೇ, ಉದ್ಯೋಗಿಗಳೆಲ್ಲರೂ ಕಟ್ಟಡದೊಳಗೆ ಹೋದರು’ ಎಂದರು.

ಅಮೆರಿಕದಿಂದ ಬಂದ ಕರೆ: ‘ಅಮೆರಿಕದ ಕಸ್ಟಮರ್ ಕೇರ್‌ ಸಂಖ್ಯೆಗೆ ಆನ್‌ಲೈನ್‌ ಮೂಲಕ ಕರೆ ಮಾಡಿದ್ದ ಅಪರಿಚಿತ, ಅಲ್ಲಿಯ ಪ್ರತಿನಿಧಿಗಳ ಸಹಾಯದಿಂದ ಸಿಸ್ಕೊ ಕಂಪನಿ ಕಚೇರಿಗೆ ಕರೆ ವರ್ಗಾಯಿಸಿಕೊಂಡಿದ್ದ. ಹೀಗಾಗಿ, ಕರೆ ಮಾಡಿದ್ದ ಸಂಖ್ಯೆ ಬಗ್ಗೆ ಸದ್ಯಕ್ಕೆ ಗೊತ್ತಾಗಿಲ್ಲ. ಸೈಬರ್ ಕ್ರೈಂ ಪೊಲೀಸರು ಸಹಾಯ ಕೋರಿದ್ದೇವೆ’ ಎಂದು ಪೊಲೀಸರು ಹೇಳಿದರು.

ಘಟನೆ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕಂಪನಿ ಸಹಾಯಕ ವ್ಯವಸ್ಥಾಪಕ ಇ.ಭರತ್, ‘ಉದ್ಯೋಗಿಗಳಲ್ಲಿ ಭಯ ಹುಟ್ಟಿಸಿ, ಕೆಲಸಕ್ಕೆ ತೊಂದರೆ ಉಂಟು ಮಾಡಲು ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ನಾವು ಎಲ್ಲ ಬಗೆಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ಹೇಳಿದರು.

ಸೇಡಿಗಾಗಿ ಕೃತ್ಯ ಎಸಗಿದರಾ ಆರೋಪಿಗಳು?

‘ಸಿಸ್ಕೊ ಸಿಸ್ಟಂ ಇಂಡಿಯಾ’ ಸಾಫ್ಟ್‌ವೇರ್‌ ಕಂಪನಿಯ ₹ 85 ಲಕ್ಷ ಮೌಲ್ಯದ 195 ಉಪಕರಣಗಳನ್ನು ಕದ್ದಿದ್ದ ಅದೇ ಕಂಪನಿ ನಾಲ್ವರು ಉದ್ಯೋಗಿಗಳನ್ನು ಮಾರತ್ತಹಳ್ಳಿ ಪೊಲೀಸರು ಇತ್ತೀಚೆಗಷ್ಟೇ ಬಂಧಿಸಿದ್ದಾರೆ.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು, ಕಂಪನಿ ವಿರುದ್ಧ ಸೇಡು ತೀರಿಸಿಕೊಳ್ಳಲು ತಮ್ಮ ಸಹಚರರ ಮೂಲಕ ಬೆದರಿಕೆ ಕರೆ ಮಾಡಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಉಪಕರಣ ಕಳ್ಳತನ ಸಂಬಂಧ ಕಂಪನಿಯ ಭದ್ರತಾ ವಿಭಾಗದ ವ್ಯವಸ್ಥಾಪಕ ಅವತಾರ್ ಸಿಂಗ್‌ ದೂರು ನೀಡಿದ್ದರು. ಐವರು ಆರೋಪಿಗಳ ಪೈಕಿ, ಪಣತ್ತೂರಿನ ಮಾನಸ ರಂಜನ್ ದಾಸ್ (24), ಜನಮೇಜಯ ಸುತಾರ್ (26), ಕೊಡಿಗೇಹಳ್ಳಿಯ ನಿರಂಕರಿ ಬಾಯಿ (23) ಹಾಗೂ ಚಂದ್ರಕಾಂತ್‌ ಎಂಬುವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನೇ ಕರೆ ಮಾಡಿರುವ ಶಂಕೆ ಇದೆ’ ಎಂದು ಪೊಲೀಸರು ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry