ದೂರು ದಾಖಲಿಸಿಕೊಳ್ಳಲು ಆಗ್ರಹ

7
ವಾರ್ಡ್‌ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳದಂತೆ ಪಾಲಿಕೆ ಸದಸ್ಯ ಮುತ್ತಣ್ಣವರ ತಾಕೀತು

ದೂರು ದಾಖಲಿಸಿಕೊಳ್ಳಲು ಆಗ್ರಹ

Published:
Updated:

ಹುಬ್ಬಳ್ಳಿ: ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಪೌರಕಾರ್ಮಿಕ ಮಹಿಳೆ ನಳಿನಿ ಅರ್ಜುನಮ್‌ ಎಂಬುವವರ ಕೈ ಎಳೆದಿದ್ದಲ್ಲದೇ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಪೌರಕಾರ್ಮಿಕರು ನಗರದ ಬೆಂಡಿಗೇರಿ ಪೊಲೀಸ್‌ ಠಾಣೆಗೆ ಶುಕ್ರವಾರ ಬೆಳಿಗ್ಗೆ ದೂರು ಸಲ್ಲಿಸಲು ಮುಂದಾದರು. ದೂರು ದಾಖಲಿಸಿಕೊಳ್ಳದ್ದರಿಂದ ದುರ್ಗದಬೈಲ್‌ನಲ್ಲಿರುವ ಎಸಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇದಕ್ಕೂ ಮುನ್ನ ಪೌರಕಾರ್ಮಿಕರನ್ನು ಮನೆಗೆಲಸಕ್ಕೆ ಬಳಸಿಕೊಂಡಿದ್ದಾರೆ ಎಂದು ಜಿಲ್ಲಾ ಪೌರಕಾರ್ಮಿಕ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಮಾಡಿರುವ ಆರೋಪವನ್ನು ಸಾಬೀತುಪಡಿಸಬೇಕು ಎಂದು ಆಗ್ರಹಿಸಿ ಶಿವಾನಂದ ಮುತ್ತಣ್ಣವರ, ‘ವೀರಾಪುರ ಓಣಿಯಲ್ಲಿ ಪೌರ ಕಾರ್ಮಿಕರಿಗೆ ಸ್ವಚ್ಛತಾ ಕೆಲಸ ಮಾಡಲು ಅವಕಾಶ ನೀಡದೇ ಟೈರ್‌ಗೆ ಬೆಂಕಿ ಹಚ್ಚಿ, ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದರು.

ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಬಂದ ಪೌರಕಾರ್ಮಿಕರು ಮುತ್ತಣ್ಣವರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲಸ ಮಾಡಲಿಲ್ಲ. ಆದರೆ, ಕೆಲ ಹೊತ್ತಿನ ಬಳಿಕ ಆರೋಗ್ಯ ನಿರೀಕ್ಷಕಿ ದೀಪಿಕಾ ಹಾಗೂ ಮೇಲ್ವಿಚಾರಕ ಸುರೇಶ್‌ ಅವರು ಪೌರಕಾರ್ಮಿಕರಿಂದ ಬಯೊಮೆಟ್ರಿಕ್‌ ಪಡೆದುಕೊಂಡು ಕೆಲಸ ಮಾಡುವಂತೆ ಸೂಚಿಸಿದರು.

'ಆಯುಕ್ತರು ಲಿಖಿತ ಸೂಚನೆ ನೀಡಿದರೆ ಮಾತ್ರ ಕೆಲಸ ನಿಲ್ಲಿಸಬಹುದು. ಪಾಲಿಕೆ ಸದಸ್ಯರು ಹೇಳಿದರೆಂದು ನಿಲ್ಲಿಸಲಾಗುವುದಿಲ್ಲ' ಎಂದು ದೀಪಿಕಾ ತಿಳಿಸಿದರು. ಆದರೂ, ಪೌರ ಕಾರ್ಮಿಕರು ಕೆಲಸ ಮಾಡಲು ಸಾಧ್ಯವಾಗಲಿಲ್ಲ.

‘ಮನೆಗೆ ಯಾರಾದರೂ ಸಿನಿಮಾ ನಟರು ಬಂದಾಗ ನಮ್ಮ ಕೈಯಿಂದಲೇ ಊಟದ ತಟ್ಟೆಯನ್ನು ಮುತ್ತಣ್ಣವರ ಎತ್ತಿಸುತ್ತಾರೆ. ನೆಹರೂ ಮೈದಾನದಲ್ಲಿ ಕಾರ್ಯಕ್ರಮ ನಡೆದಾಗಲೂ ಹಾಕಿಕೊಂಡಾಗಲೂ ನಾವೇ ಅಲ್ಲಿ ಕೆಲಸ ಮಾಡಬೇಕು. ಮೂರು ತಿಂಗಳಿಂದ ಪಗಾರ ನೀಡಿಲ್ಲ. ಇದನ್ನು ಕೇಳಿದರೂ ಅವರು ಸ್ಪದಿಸಿಲ್ಲ’ ಎಂದು ಮಹಿಳಾ ಕಾರ್ಮಿಕರು ‘ಪ್ರಜಾವಾಣಿ’ ಎದುರು ತಮ್ಮ ಗೋಳು ತೋಡಿಕೊಂಡರು.

ಪ್ರತಿಕ್ರಿಯೆ ನೀಡಿದ ಶಿವಾನಂದ ಮುತ್ತಣ್ಣವರ, ‘ಪೌರಕಾರ್ಮಿಕರು ಕೆಲಸವನ್ನೇ ಮಾಡುವುದಿಲ್ಲ. ಹಾಗಾಗಿ, ಇವರನ್ನು ಬದಲಿಸಿ ಬೇರೆಯವರನ್ನು ತೆಗೆದುಕೊಳ್ಳುವಂತೆ ವಲಯಾಧಿಕಾರಿಗಳಿಗೆ ಹೇಳಿದ್ದೇನೆ. ಪೌರಕಾರ್ಮಿಕರ ಆರೋಪದಲ್ಲಿ ಹುರುಳಿಲ್ಲ. ಅವರೆಂದೂ ನಮ್ಮ ಮನೆ ಕೆಲಸ ಮಾಡಿಲ್ಲ’ ಎಂದರು.

ಶಹರ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಪೌರ ಕಾರ್ಮಿಕರಿಗೆ ಎಸಿಪಿ ನಿಂಗಪ್ಪ ಸಕ್ರಿ, ‘ನೀವು ಲಿಖಿತ ದೂರು ಕೊಡಿ. ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry