ಮತ್ಸ್ಯಪ್ರಿಯರಿಗೆ ಕಹಿಯೆನಿಸಿತು ಮೀನು

7

ಮತ್ಸ್ಯಪ್ರಿಯರಿಗೆ ಕಹಿಯೆನಿಸಿತು ಮೀನು

Published:
Updated:
ಮತ್ಸ್ಯಪ್ರಿಯರಿಗೆ ಕಹಿಯೆನಿಸಿತು ಮೀನು

ದೂರದ ಕರಾವಳಿಯಲ್ಲಿ ಚಂಡಮಾರುತವೆದ್ದರೆ ಇಲ್ಲಿ ವಾಣಿಜ್ಯನಗರಿಯ ಮೀನುಪ್ರಿಯರ ಬಟ್ಟಲಿನಲ್ಲಿ ಮೀನಿನ ಸಾರಿನ ಘಮಲಿಗೆ ಹೊಡೆತ ಬಿದ್ದಿದೆ. ಕಡಲ ಆಹಾರಗಳ ದರ ದುಪ್ಪಟ್ಟಾಗಿರುವುದರಿಂದ ಮತ್ಸ್ಯಪ್ರಿಯರಿಗೆ ಮೀನು ಕಹಿಯಾಗಿ ಪರಿಣಮಿಸಿದೆ.

ಮುಂಗಾರು ಪೂರ್ವ ಮಳೆಯ ಕಾರಣ ಆಗಾಗ ಏಳುತ್ತಿದ್ದ ಚಂಡಮಾರುತಗಳ ಪರಿಣಾಮ ಕಳೆದೊಂದು ತಿಂಗಳಿಂದ ಕರಾವಳಿಯ ಮೀನುಗಾರರು ಸರಿಯಾಗಿ ಬಲೆಗಳನ್ನು ಬೀಸಿಲ್ಲ. ಆದರೆ ಅದಕ್ಕೂ ಮೊದಲೇ ಮತ್ಸ್ಯಕ್ಷಾಮ ಕಾಡಿದ್ದರಿಂದ ಕಾರವಾರದ ಹೆಚ್ಚಿನ ಯಾಂತ್ರಿಕೃತ ದೋಣಿಗಳು ಕಡಲಂಚಿನಲ್ಲಿ ಠಿಕಾಣಿ ಹೂಡಿದ್ದವು. ಜೊತೆಗೆ ಜೂನ್‌ 1ರಿಂದ ಆಳ ಸಮುದ್ರ ಮೀನುಗಾರಿಕೆ ಮೇಲೆ ನಿಷೇಧದ ದಿನಗಳು ಆರಂಭವಾಗಿದೆ. ಇವೆಲ್ಲವುಗಳ ಕಾರಣಗಳ ಪರಿಣಾಮ ಹುಬ್ಬಳ್ಳಿಯಲ್ಲಿ ಮೀನುಗಳ ದರ ದುಪ್ಪಟ್ಟಾಗಿದೆ.

ಹುಬ್ಬಳ್ಳಿ ಮಾರುಕಟ್ಟೆಗೆ ಕಾರವಾರ, ಅಂಕೋಲಾ, ಹೊನ್ನಾವರ ಹಾಗೂ ಮಂಗಳೂರಿನಿಂದ ಮೀನುಗಳ ಪೂರೈಕೆಯಾಗಲಿದೆ. ಆದರೆ ಹುಬ್ಬಳ್ಳಿಗೆ ಹತ್ತಿರವಿರುವ ಕಾರವಾರ, ಅಂಕೋಲಾ, ಹೊನ್ನಾವರದಿಂದ ಮೀನುಗಳ ಪೂರೈಕೆ ನಿಂತಿದ್ದು ಸದ್ಯ ಮಂಗಳೂರಿನಿಂದ ಮಾತ್ರ ಪೂರೈಕೆಯಾಗುತ್ತಿದೆ. ಆದರೆ ಬೇಡಿಕೆಗೆ ಅಗತ್ಯದಷ್ಟು ಮೀನು ಬರುತ್ತಿಲ್ಲ. ಮಂಗಳೂರಿನಿಂದ ಬರಬೇಕಿವುದರಿಂದ ಮಾರುಕಟ್ಟೆಗೆ ತಡವಾಗಿ ಮೀನುಗಳು ಬರುತ್ತಿವೆ ಎನ್ನುತ್ತಾರೆ ಶಿರೂರ ಪಾರ್ಕ್‌ನಲ್ಲಿರುವ ಮೀನು ವ್ಯಾಪಾರಿ ಅಬ್ದುಲ್‌ ಹಮೀದ್‌.

ಮೀನುಗಳಲ್ಲೆ ಅತಿ ಹೆಚ್ಚು ಬೇಡಿಕೆಯುಳ್ಳ ಬಂಗುಡೆ ಮೀನು ಸಾಮಾನ್ಯವಾಗಿ ಕೆಜಿಯೊಂದಕ್ಕೆ 100, 120 ರೂಪಾಯಿಗೆಲ್ಲ ಸಿಗುತ್ತಿತ್ತು. ಆದರೀಗ ₹ 240ಕ್ಕೆ ತಲುಪಿದೆ. ಕೆಜಿಗೆ ₹500–600ಕ್ಕೆ ಸಿಗುತ್ತಿದ್ದ ಪಾಂಪ್ಲೆಟ್‌ ದರ ₹1,300 ದಾಟಿದೆ. 350–400ಕ್ಕೆ ಸಿಗುತ್ತಿದ್ದ ಇಷೋಣಾ (ಸುರಮೈ) ₹ 800 ದಾಟಿದೆ. 100ರವೊಳಗೆ ಕೈಗೆಟುಕುತ್ತಿದ್ದ ಭೂತಾಯಿ (ತಾರ್ಲೆ) ಮೀನು ಮಾರುಕಟ್ಟೆಯಲ್ಲಿ ಕಾಣದಾಗಿದೆ. ಹಾಲಿ ಬಂಗುಡೆ ಮೀನಿನ ದರವೇ ಕಡಿಮೆಯೆನಿಸಿದ್ದು ಕೆಜಿಗೆ ₹ 240ಕ್ಕಿಂತ ಕಮ್ಮಿಯಿಲ್ಲದಾಗಿದೆ. ಚಿಪ್ಪಿಕಲ್ಲು ಕೆಜಿಗೆ ₹100, ಸಿಗಡಿಗೆ ₹400, ಸಮದಾಳಿ ₹550, ಬೆಳ್ಳಂಜಿ ₹400, ಜಾಲಿ (ಏಡಿ) ಕೆಜಿಗೆ 380 ದರವಿದೆ.

ಹುಬ್ಬಳ್ಳಿ ಮಹಾ ನಗರದಲ್ಲಿ ಶ್ರಾವಣ ಮಾಸದಲ್ಲಿ ಮಾಂಸಾಹಾರ ತ್ಯಜಿಸುವವರ ಸಂಖ್ಯೆ ಶೇ 50ರಷ್ಟಿದೆ. ಆದರೆ ಈಗ ಮೀನುಗಳ ದರ ದುಪ್ಪಟ್ಟಾಗಿರುವುದರಿಂದ ಅಷ್ಟು ದುಬಾರಿ ಮೀನುಗಳ ಖರೀದಿಗೆ ಜನರು ಹಿಂದೇಟು ಹಾಕುವಂತಾಗಿದೆ. ಒಂದು ತರಹದಲ್ಲಿ ಅಕಾಲಿಕ ಶ್ರಾವಣ ಮಾಸ ಬಂದಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry