4
ಜಾರ್ಜಿಯಾ ರಾಜ್ಯ ಸರ್ಕಾರದಿಂದ ತುಳು ಸಂಸ್ಕೃತಿ ಸಪ್ತಾಹ ಆಚರಣೆ

ವಿದೇಶದಲ್ಲಿ ತುಳು ಕಂಪು ಪಸರಿಸಿದ ಪ್ರಶಾಂತರಾಮ್‌

Published:
Updated:

ಮಂಗಳೂರು: ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಅಲ್ಲಿನ ಸರ್ಕಾರದ ವತಿಯಿಂದ ಅಧಿಕೃತವಾಗಿ ತುಳು ಭಾಷೆ ಮತ್ತು ಸಂಸ್ಕೃತಿ ಸಪ್ತಾಹ ಆಚರಣೆಗೆ ಕಾರಣರಾದ ತುಳು ಸಂಶೋಧಕ ಪ್ರಶಾಂತರಾಮ್ ಕೊಟ್ಟಾರಿ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಅಕಾಡೆಮಿಯ ಸಿರಿ ಚಾವಡಿಯಲ್ಲಿ ಸನ್ಮಾನಿಸಲಾಯಿತು.

ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಶಾಂತರಾಮ್ ಕೊಟ್ಟಾರಿ ಅವರನ್ನು ಅಕಾಡೆಮಿಯ ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು. ಜಾರ್ಜಿಯಾ ರಾಜ್ಯ ಸರ್ಕಾರವು ಪ್ರತಿ ವರ್ಷ ಮಾರ್ಚ್ 25 ರಿಂದ 31 ರ ತನಕ ತುಳು ಭಾಷೆ ಮತ್ತು ಸಂಸ್ಕೃತಿ ಸಪ್ತಾಹವನ್ನು ಆಚರಿಸಲು ನಿರ್ಧರಿಸಿದೆ.

ಅಲ್ಲಿನ ಸರ್ಕಾರವು ಈ ನಿರ್ಧಾರ ಕೈಗೊಳ್ಳುವ ಮೊದಲು, ತುಳು ಭಾಷೆಯ ಬಗ್ಗೆ ಜಾರ್ಜಿಯಾ ಸರ್ಕಾರಕ್ಕೆ ಪ್ರಶಾಂತರಾಮ್ ಕೊಟ್ಟಾರಿ ಅವರು ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಈ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಜಾರ್ಜಿಯಾ ಸರ್ಕಾರವು ತುಳು ಭಾಷಾ ಸಪ್ತಾಹದ ಬಗ್ಗೆ ಅಧಿಕೃತ ಆದೇಶ ಹೊರಡಿಸಿತ್ತು.

ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಪ್ರಶಾಂತರಾಮ್ ಕೊಟ್ಟಾರಿ ಅವರು, ಐದು ವರ್ಷಗಳಿಂದ ವೃತ್ತಿ ನಿಮಿತ್ತ ಜಾರ್ಜಿಯಾದಲ್ಲಿ ನೆಲೆಸಿದ್ದಾರೆ. ಅಮೆರಿಕನ್ ಫೋಕ್‍ಲೋರ್ ಸೊಸೈಟಿಯ ಗೌರವ ಸದಸ್ಯ ಕೊಟ್ಟಾರಿ ಅವರು, ತುಳು ಭಾಷೆಯ ಬಗ್ಗೆ ಅಮೆರಿಕದ ವಿವಿಧ ಪ್ರಾಂತ್ಯಗಳಲ್ಲಿ 30ಕ್ಕೂ ಹೆಚ್ಚು ತುಳು ಭಾಷಾ ಪರಿಚಯ - ಕಲಿಕೆ ಶಿಬಿರಗಳನ್ನು ನಡೆಸಿದ್ದಾರೆ.

ಪ್ರಶಾಂತರಾಮ್ ಅವರು ತುಳುನಾಡಿನ ಅಣ್ಣ-ತಮ್ಮ ಅರಸು ದೈವಗಳ ಬಗ್ಗೆ ನಾಡಿನ ಹಿರಿಯ ಜಾನಪದ ವಿದ್ವಾಂಸರ ಮಾರ್ಗದರ್ಶನದಲ್ಲಿ ‘ಅತ್ತಾವರ ದೆಯ್ಯೊಂಗುಳು’ ಕೃತಿ ರಚಿಸಿದ್ದಾರೆ. ಈ ಕೃತಿಯು 2015 ನೇ ಸಾಲಿನ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿತ್ತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಾಂತರಾಮ್ ಕೊಟ್ಟಾರಿ, ‘ನಾನು ತುಳು ಭಾಷೆಯ ಮೇಲಿನ ಪ್ರೀತಿಯಿಂದ ತನ್ನಿಂದ ಸಾಧ್ಯವಾಗುವಷ್ಟು ಕೆಲಸವನ್ನು ಮಾಡಿದ್ದೇನೆ. ವಿದೇಶದಲ್ಲಿ ತುಳು ಭಾಷೆಗೂ ಮಾನ್ಯತೆ ಲಭಿಸಿರುವುದು ಇನ್ನೂ ಹೆಚ್ಚು ಕೆಲಸ ಮಾಡಲು ಪ್ರೋತ್ಸಾಹ ಸಿಕ್ಕಿದಂತಾಗಿದೆ’ ಎಂದು ಹೇಳಿದರು.

ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ರಾಜೇಶ್ ಜಿ., ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ತಾರಾನಾಥ್ ಗಟ್ಟಿ ಕಾಪಿಕಾಡ್ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry