ವಿಧಾನ ಪರಿಷತ್‌ ಚುನಾವಣೆ: ಶಾಂತಿಯುತ ಮತದಾನ

7

ವಿಧಾನ ಪರಿಷತ್‌ ಚುನಾವಣೆ: ಶಾಂತಿಯುತ ಮತದಾನ

Published:
Updated:

ತೀರ್ಥಹಳ್ಳಿ: ಪದವೀಧರ, ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ತೀರ್ಥಹಳ್ಳಿ ಮತಗಟ್ಟೆಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಶೇ 79.62 ಮತದಾನವಾಗಿದೆ. ಪದವೀಧರರ ಕ್ಷೇತ್ರದಲ್ಲಿ ಶೇ 79.62 ಮತ ಚಲಾವಣೆಯಾಗಿವೆ.

ತಾಲ್ಲೂಕಿನಲ್ಲಿ ಶಿಕ್ಷಕರ ಕ್ಷೇತ್ರದ 509 ಮತದಾರರಲ್ಲಿ 430 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪದವೀಧರ ಕ್ಷೇತ್ರದ 1374 ಮತದಾರರಲ್ಲಿ 1094 ಮತದಾರರು ಮತಚಲಾಯಿಸಿದ್ದಾರೆ.

ಮಳೆ ನಡುವೆಯೇ ತಾಲ್ಲೂಕು ಕಚೇರಿಯ ಮತಗಟ್ಟೆ ಬಳಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ತಮ್ಮ ಬೆಂಬಲಿಗರೊಂದಿಗೆ ಮತದಾರರನ್ನು ಬರಮಾಡಿಕೊಂಡರು. ಮತದಾನ ಬಹುತೇಕ ಶಾಂತಿಯುತವಾಗಿ ನಡೆಯಿತು.

ಮತಗಟ್ಟೆ ಆವರಣದ ಬಳಿ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್, ಗಣೇಶ್ ಕಾರ್ಣಿಕ್ ಪರವಾಗಿ ಶಾಸಕ ಆರಗ ಜ್ಞಾನೇಂದ್ರ, ಕಾಂಗ್ರೆಸ್ ಅಭ್ಯರ್ಥಿಗಳಾದ ಎಸ್.ಪಿ. ದಿನೇಶ್, ಮಂಜುನಾಥ ಕುಮಾರ್ ಪರವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಜೆಡಿಎಸ್ ಅಭ್ಯರ್ಥಿಗಳಾದ ಅರುಣಕುಮಾರ್ ಹಾಗೂ ಎಸ್. ಎಲ್. ಭೋಜೇಗೌಡ ಪರವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮತಯಾಚಿಸಿದರು.

ಹೊಳೆಹೊನ್ನೂರು ವರದಿ

ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಅಂಗವಾಗಿ ಪಟ್ಟಣದಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಬೆಳಿಗ್ಗೆ ಏಳು ಗಂಟೆಯಿಂದ ಆರಂಭವಾದ ಮತದಾನ ಆರಂಭದಲ್ಲಿ ನೀರಸವಾಗಿದ್ದರೂ ಒಂಬತ್ತು ಗಂಟೆ ಸುಮಾರಿಗೆ ಚುರುಕುಗೊಂಡಿತು. ಮಳೆ ಎಡಬಿಡದೆ ಸುರಿಯುತ್ತಿದ್ದರು ಲೆಕ್ಕಿಸದೆ ಮತದಾರರು ಮತಗಟ್ಟೆಗೆ ಬಂದರು. ಪದವೀಧರ  ಕ್ಷೇತ್ರಕ್ಕೆ ಶೇ 79 ರಷ್ಟು ಮತದಾನ ನಡೆದಿದೆ.

ಬಿಜೆಪಿ ಅಭ್ಯರ್ಥಿ ಆಯುನೂರು ಮಂಜುನಾಥ್, ಶಾಸಕ ಅಶೋಕ್ ನಾಯ್ಕ್ ಮತ್ತು ಮಾಜಿ ಶಾಸಕ ಕೆ.ಜಿ. ಕುಮಾರ ಸ್ವಾಮಿ ಹಾಗೂ ಕಾಂಗ್ರೆಸ್‌ನ ಎಸ್.ಪಿ. ದಿನೇಶ್ ಮತ್ತು ಎಐಸಿಸಿ ಸಧಸ್ಯ ಮಂಜುನಾಥ್ ಭಂಡಾರಿ ಭೇಟಿ ನೀಡಿದರು. ಎರಡೂ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಯ ಬಳಿ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.

ಭದ್ರಾವತಿ ವರದಿ

ಕ್ಷೇತ್ರದ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಶೇ  73ರಷ್ಟು ಮತದಾನ ನಡೆದಿದೆ. ಒಟ್ಟು 2746 ಪದವಿ ಮತದಾರರಲ್ಲಿ 1993 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು ಒಟ್ಟು ಶೇ 73 ರಷ್ಟು ಮತದಾನ ನಡೆದಿದ್ದು, ಶಿಕ್ಷಕರ ಒಟ್ಟು 643 ಮತದಾರರಲ್ಲಿ 555 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು ಶೇ  86 ಮತದಾನ ನಡೆದಿದೆ.

ನಗರದ ತಾಲ್ಲೂಕು ಕಚೇರಿಯ ಎರಡು ಮತಗಟ್ಟೆಯಲ್ಲಿ ನಡೆದ  ಪದವೀಧರ ಕ್ಷೇತ್ರದ ಮತದಾನದಲ್ಲಿ ಶೇ  70 ಮತದಾನವಾಗಿದ್ದರೆ, ನ್ಯೂಟೌನ್ ವಿದ್ಯಾರ್ಥಿನಿಯ ಪದವಿ ಪೂರ್ವ ಕಾಲೇಜಿನ 2 ಮತಗಟ್ಟೆಯಲ್ಲಿ ಶೇ  75ರಷ್ಟು ಮತದಾನ ನಡೆದಿದೆ.

ಶಂಕರಘಟ್ಟದ ಒಂದು ಮತಗಟ್ಟೆಯಲ್ಲಿ ನಡೆದ ಮತದಾನದಲ್ಲಿ ಶೇ 80ರಷ್ಟು ಮತದಾನ ನಡೆದಿದ್ದು, ಇದೇ ಮತಗಟ್ಟೆಯ ಶಿಕ್ಷಕರ ಒಟ್ಟು ಮತದಾನದಲ್ಲಿ ಶೇ 85ರಷ್ಟು ಮತ ಚಲಾವಣೆಯಾಗಿದೆ. ಬೆಳಿಗ್ಗೆ ಮಳೆ ಇದ್ದ ಕಾರಣದಿಂದ ಮತದಾನ ಮಂದಗತಿಯಲ್ಲಿ ಸಾಗಿದರೆ 11ಗಂಟೆ ನಂತರ ಅದು ಬಿರುಸು ಪಡೆದುಕೊಂಡಿತು.

ಪ್ರತಿ ಮತಗಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಬಿ.ಕೆ. ಸಂಗಮೇಶ್ವರ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ನಡೆಸಿದರೆ, ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಚನ್ನಬಸಪ್ಪ ಪಕ್ಷದ ಕಾರ್ಯಕತರು ಮುಖಂಡರ ಜತೆ ಮತಯಾಚಿಸಿದ್ದು ಪ್ರಚಾರದ ಕಾವು ಹೆಚ್ಚು ಮಾಡಿತ್ತು.

ಇದರ ಹೊರತಾಗಿ ಎಲ್ಲಾ ಮತಗಟ್ಟೆಯಲ್ಲಿ ಶಾಂತಿಯುತ ಮತದಾನವಾಗಿದ್ದು ಯಾವುದೇ ರೀತಿಯ ಅಹಿತಕರ ಘಟನೆ ವರದಿಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry