ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರಲ್ಲಿ ಸಮಸ್ಯೆಗಳ ಬಿಚ್ಚಿಟ್ಟ ಸದಸ್ಯರು

ಗುಬ್ಬಿ: ಪಟ್ಟಣ ಪಂಚಾಯಿತಿ ಸಭೆ; ಅಧಿಕಾರಿಗಳಿಗೆ ತಾಕೀತು ಮಾಡಿದ ಎಸ್.ಆರ್.ಶ್ರೀನಿವಾಸ್
Last Updated 9 ಜೂನ್ 2018, 7:18 IST
ಅಕ್ಷರ ಗಾತ್ರ

ಗುಬ್ಬಿ: ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಚಿವ ಎಸ್.ಆರ್.ಶ್ರೀನಿವಾಸ್ ಅಭಿನಂದನೆ ಸ್ವೀಕರಿಸಿದ ನಂತರ ಎರಡು ಗಂಟೆ ಪಟ್ಟಣದ ಅಭಿವೃದ್ಧಿ ಬಗ್ಗೆ ಸಭೆ ನಡೆಸಿದರು.

‘ಇಲ್ಲಿನ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಾಗಾರಿಯು ಗುಣಮಟ್ಟದಿಂದ ಕೂಡಿಲ್ಲ. ಬಾಕ್ಸ್ ಚರಂಡಿ ಮೇಲೆ ಕಾಂಕ್ರಿಟ್ ಮಿಶ್ರಿತ ನೆಲಹಾಸು ಹಾಕಿದ್ದಾರೆ. ಕಬ್ಬಿಣದ ಸರಳುಗಳು ಕಾಣುತ್ತಿದ್ದು, ಇದು ಗುಣಮಟ್ಟದಿಂದ ಕೂಡಿಲ್ಲ. ಈ ಬಗ್ಗೆ ವಾರ್ಡ್‌ನ ನಿವಾಸಿಗಳು ಪ್ರಶ್ನಿಸಿದರೆ ಅಧಿಕಾರಿಗಳು ‘ನಮಗೆ ಗೊತ್ತಿಲ್ಲ’ ಎಂದು ಕೈಚೆಲ್ಲುತ್ತಿದ್ದಾರೆ. ಇದರಿಂದ ಸ್ಥಳೀಯರು ನಮ್ಮ ಮೇಲೆ ಮುಗಿಬೀಳುತ್ತಿದ್ದಾರೆ’ ನಾವು ಮತ್ತೊಮ್ಮೆ ಚುನಾವಣೆ ಮಾಡೋದು ಹೇಗೆ?’ ಎಂದು ಸದಸ್ಯರಾದ ಬಿಲ್ಲೇಪಾಳ್ಯ ನರಸಿಂಹಮೂರ್ತಿ ಹಾಗೂ ಜಿ.ಸಿ.ನರಸಿಂಹಮೂರ್ತಿ ಅಲವತ್ತುಕೊಂಡರು.

‘ಪಟ್ಟಣದ 17 ವಾರ್ಡ್‌ಗಳಲ್ಲಿ ಅಳವಡಿಸಿರುವ ಎಲ್ಇಡಿ ಬಲ್ಬ್‌ಗಳು ಎರಡು ವರ್ಷಕ್ಕೂ ಮೊದಲೇ ಕೆಟ್ಟುಹೋಗುತ್ತಿವೆ. ಇವುಗಳನ್ನು ಗುತ್ತಿಗೆದಾರರು ಬದಲಾಯಿಸುವ ಹೊಣೆಗಾರಿಕೆ ಮೆರೆಯುತ್ತಿಲ್ಲ. ಹೊಸಕಂಬಗಳಲ್ಲಿ ಬಲ್ಬ್‌ಗಳು ಕೆಟ್ಟುಹೋಗಿರುವುದನ್ನು ಗಮನಕ್ಕೆ ತಂದರೆ ನಮ್ಮ ಕೆಲಸವಲ್ಲ ಎಂದು ಕೈಚೆಲ್ಲುತ್ತಿದ್ದಾರೆ. ಜೂನಿಯರ್ ಕಾಲೇಜು ಸನಿಹದ ನೀರಿನ ಓವರ್ ಹೆಡ್ ಟ್ಯಾಂಕ್ ಹಳತಾಗಿದೆ. ಕಸ ವಿಲೇವಾರಿ ಆಗುತ್ತಿಲ್ಲ. ಕಸ ಎತ್ತಲು ಎರಡು ಆಟೊಗಳಿವೆ. ಇದು ಸಾಕಾಗುತ್ತಿಲ್ಲ’ ಎಂದು ಸದಸ್ಯ ಸಿ.ಮೋಹನ್ ಸಭೆಯ ಗಮನಕ್ಕೆ ತಂದರು.

ತಕ್ಷಣ ಪ್ರತಿಕ್ರಿಯಿಸಿದ ಸಚಿವ ಎಸ್.ಆರ್.ಶ್ರೀನಿವಾಸ್, ‘ಬಲ್ಬ್‌ಗಳನ್ನು ಬದಲಾಯಿಸಿದ ನಂತರ ಅವರಿಗೆ ಬಿಲ್ ನೀಡಿ. ಓವರ್ ಹೆಡ್ ಟ್ಯಾಂಕ್ ಕೆಡವಲು ಕಾನೂನು ರೀತಿಯ ಕ್ರಮ ಕೈಗೊಳ್ಳಿ’ ಎಂದು ಮುಖ್ಯಾಧಿಕಾರಿ ನಾಗೇಂದ್ರಪ್ಪಗೆ ತಾಕೀತು ಮಾಡಿದರು.

‘ಪಟ್ಟಣಕ್ಕೆ ನೀರು ಒದಗಿಸುವ ಹೇರೂರು ಕೆರೆಯ ನೀರು ಒಂದು ತಿಂಗಳು ಮಾತ್ರ ಸಿಗಲಿದೆ. ಪಟ್ಟಣದ ಸರ್ವಿಸ್ ಸ್ಟೇಷನ್‌ಗಳಲ್ಲಿ ಅನುಮತಿ ಇಲ್ಲದ ನೀರಿನ ಸಂಪರ್ಕಗಳು ಇವೆ. ಕೆಲವರು ಗೃಹಬಳಕೆಗೆಂದು ಅನುಮತಿ ಪಡೆದು ವಾಣಿಜ್ಯ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ ನೀರಿನ ಸಂಪರ್ಕದ ಮುಖ್ಯ ಪೈಪ್‌ನಲ್ಲಿ ನಲ್ಲಿಗಳ ಸಂಪರ್ಕವನ್ನು ಪಡೆದಿದ್ದು, ನೀರು ಹೆಚ್ಚು ಪೋಲಾಗುತ್ತಿರುವ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸುಭಾಷ್ ನಗರದಲ್ಲಿ ರಾತ್ರಿ 1 ಗಂಟೆಗೆ ನೀರು ಬಿಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ’ ಎಂದು ಸದಸ್ಯ ಕುಮಾರ್ ತಿಳಿಸಿದರು.

‘ಒಳಚರಂಡಿಯಿಂದ ಹರಿದು ಬರುವ ತ್ಯಾಜ್ಯವನ್ನು ಸಂಗ್ರಹಿಸಲು ಹೇರೂರು ಪಂಚಾಯಿತಿ ಸಮೀಪ 7 ಎಕರೆ ಭೂಮಿಯನ್ನು ಸ್ವಾದೀನ ಮಾಡಿಕೊಳ್ಳಲಾಗಿದೆ. ಮುಂಗಡವಾಗಿ ₹ 15 ಲಕ್ಷ ಕಟ್ಟಿದ್ದು, ಬಾಕಿ ಇರುವ ₹ 75 ಲಕ್ಷವನ್ನು ಶೀಘ್ರ ಭರಿಸಬೇಕಿದೆ. ಈ ಭೂಮಿಯಲ್ಲಿ ಮಣ್ಣು
ದೋಚಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಈ ಜಾಗ ಪಟ್ಟಣ ಪಂಚಾಯಿತಿಗೆ ಸೇರಿದ್ದು ಎಂದು ನಾಮಫಲಕ ಹಾಕಿ ಮಣ್ಣು ಹೊಡೆಯುವುದನ್ನು ತಪ್ಪಿಸಿ’ ಎಂದು ಸಭೆಯ ಗಮನಕ್ಕೆ ಸದಸ್ಯ ಜಿ.ಡಿ.ಸುರೇಶ್ ಗೌಡ ತಂದರು.

ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಮೊಬೈಲ್ ಟವರ್‌ಗಳನ್ನು ಹಾಕಲು ಅನುಮತಿ ಕೊಡಬೇಡಿ. ರಸ್ತೆಗೆ ಹೊಂದಿಕೊಂಡಂತೆ ಜಾಹಿರಾತು ಫಲಕ ಹಾಕಿ ಜೀವ ಹಾನಿ ಮಾಡಬೇಡಿ. ಜ್ಯೋತಿ ನಗರದಲ್ಲಿನ ರಸ್ತೆಯೊಂದಕ್ಕೆ ಒಂದೆಡೆ ಚರಂಡಿ ಇದ್ದು, ರಸ್ತೆ ಮೇಲೆ ಗಲೀಜು ಹರಿಯುತ್ತಿದೆ ಎನ್ನುವ ವಿಚಾರಗಳು ಚರ್ಚೆಯಾದವು.

ತಾಕೀತು: ಪಟ್ಟಣದಲ್ಲಿ ಸ್ವಚ್ಛತೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎನ್ನುವ ದೂರುಗಳನ್ನು ಸಾರ್ವಜನಿಕರಿಂದ ಕೇಳಿಬಂದ ಹಿನ್ನೆಲೆ ಸಚಿವ ಎಸ್.ಆರ್.ಶ್ರೀನಿವಾಸ್ ಪಟ್ಟಣ ಪಂಚಾಯಿತಿಯ ಆರೋಗ್ಯಾಧಿಕಾರಿ ಆಂಜಿನಪ್ಪ ಅವರಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೇಮ, ಮುಖ್ಯಾಧಿಕಾರಿ ಎನ್.ನಾಗೇಂದ್ರಪ್ಪ, ಸದಸ್ಯರಾದ ರೂಪ, ಸಾಧಿಕ್ ಅಹಮದ್, ಕೃಷ್ಣಮೂರ್ತಿ, ಜಿ.ಸಿ.ನರಸಿಂಹಮೂರ್ತಿ ಇದ್ದರು.

ಕುಡಿಯುವ ನೀರಿನ ಯೋಜನೆಗಳಿಗೆ ಮೊದಲ ಆದ್ಯತೆ

ಗುಬ್ಬಿ: ಸಚಿವ ಎಸ್.ಆರ್.ಶ್ರೀನಿವಾಸ್ ಶುಕ್ರವಾರ ಮನೆ ದೇವತೆ ಮಾದಾಪುರದ ಮಣ್ಣಮ್ಮ ದೇವರು ಹಾಗೂ ಪಟ್ಟಣದ ಶ್ರೀಚನ್ನಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.

ಸ್ವಗ್ರಾಮ ಸೇರ್ವೇಗಾರನ ಪಾಳ್ಯದ ಮನೆಗೆ ತೆರಳಿ ತಂದೆ ರಾಮೇಗೌಡರ ಆಶೀರ್ವಾದ ಹಾಗೂ ಬಾಲ್ಯದಲ್ಲಿ ಓದಿದ ರಾಯವಾರದ ಚಿದಂಬರಾಶ್ರಮಕ್ಕೆ ತೆರಳಿ ಚಿದಂಬರ ಸ್ವಾಮೀಜಿಯಿಂದ ಆಶೀರ್ವಾದ ಪಡೆದರು. ಕಳ್ಳಿಪಾಳ್ಯ, ಎಂ.ಎಚ್.ಪಟ್ಟಣ, ಸಿಂಗೋನಹಳ್ಳಿ, ಗುಬ್ಬಿ ನಾಗರಿಕರಿಂದ ಅಭಿನಂದನೆ ಸ್ವೀಕರಿಸಿದರು.

ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವರಿಗೆ ಪೂಜೆ ಸಲ್ಲಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗುಬ್ಬಿ ಅಮಾನಿಕರೆ, ಕಡಬ ಕೆರೆಗೆ ನೀರು ಹರಿಸುವ ವಿಚಾರದ ಬಗ್ಗೆ ಈಗಾಗಲೇ ಅಧಿಕಾರಿಗಳೊಟ್ಟಿಗೆ ಚರ್ಚಿಸಿದ್ದು, ರೂಪುರೇಷೇ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಮೊದಲ ರಾಜ್ಯ ಬಜೆಟ್‌ನಲ್ಲೇ ಕಡಬ ಕೆರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮಂಜೂರು ನೀಡುವಂತೆ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಲಾಗಿದೆ’ ಎಂದು ತಿಳಿಸಿದರು.

ನಿಟ್ಟೂರು- ಮೈಸೂರು ರಸ್ತೆಗೆ ₹ 5 ಕೋಟಿ ಮಂಜೂರಾಗಿದ್ದು, ಇದರಿಂದ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಅನುದಾನ ಪಡೆದು ಶಾಶ್ವತ ರಸ್ತೆ ಮಾಡಲು ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಲಾಗುವುದು. ಬಗರ್ ಹುಕುಂ ಸಾಗುವಳಿದಾರರು ಹೊಸದಾಗಿ ಅರ್ಜಿ ಹಾಕಲು ಅವಕಾಶ ನೀಡುವಂತೆ ಖಾತೆಗಳು ಹಂಚಿಕೆ ಆದ ತಕ್ಷಣ ಕಂದಾಯ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದು ಹೇಳಿದರು.

‘ಗುಬ್ಬಿಯಲ್ಲಿ ಸರ್ಕಾರಿ ಬಸ್ ಡಿಪೊ ಹಾಗೂ ಡಿಪ್ಲೊಮಾ ಕಾಲೇಜು ಸ್ಥಾಪನೆಗೆ ಭೂಮಿ ಅವಶ್ಯಕತೆ ಇದ್ದು, ಸರ್ಕಾರಿ ಭೂಮಿ ಇಲ್ಲದ್ದರಿಂದ ಖಾಸಗಿಯವರಿಂದ ಪಡೆಯಲಾಗುವುದು. ಹಾಗಲವಾಡಿ- ಬಿಕ್ಕೆಗುಡ್ಡ ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಶೀಘ್ರವೇ ಅಧಿಕಾರಿಗಳ ಸಭೆ ನಡೆಸಲಾಗುವುದು’ ಎಂದರು.

ಪಟ್ಟಣದ ವಾಸಿಗಳಲ್ಲಿ ಯಾರಾದರೂ ಮನೆಕಳೆದು ಕೊಂಡರೆ ಪ.ಪಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅನುಕಂಪವಾಗಿ ₹ 4,900 ನೀಡುವುದನ್ನು ರೂಢಿಸಿಕೊಳ್ಳಿ
ಬಿಲ್ಲೇ ಪಾಳ್ಯ ನರಸಿಂಹಮೂರ್ತಿ, 17ನೇ ವಾರ್ಡ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT