ಹೆದ್ದಾರಿ ಕಾಮಗಾರಿ: ಮನೆಯಂಗಳ ಜಲಮಯ

7
ಚಿಂತೆಯಲ್ಲಿ ಮುಳುಗಿದ ನಾವುಂದದ ಸರ್ವೀಸ್ ರಸ್ತೆ ಬದಿಯ ನಿವಾಸಿಗಳು

ಹೆದ್ದಾರಿ ಕಾಮಗಾರಿ: ಮನೆಯಂಗಳ ಜಲಮಯ

Published:
Updated:
ಹೆದ್ದಾರಿ ಕಾಮಗಾರಿ: ಮನೆಯಂಗಳ ಜಲಮಯ

ಬೈಂದೂರು: ನಾವುಂದದಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಯಲ್ಲಿ ಗುತ್ತಿಗೆದಾರ ಕಂಪನಿಯ ಮುಂದಾಲೋಚನೆಯ ಕೊರತೆ ಮತ್ತು ನಿರ್ಲಕ್ಷ್ಯದ ಕಾರಣ ಜನರು ತೊಂದರೆಗೆ ಸಿಲುಕಿದ್ದಾರೆ. ಒಂದೆಡೆ ರಸ್ತೆಯಲ್ಲಿ ಮಳೆನೀರು ಸಂಗ್ರಹವಾಗಿ ವಾಹನ, ಜನ ಸಂಚಾರಕ್ಕೆ ತೊಡಕಾಗುತ್ತಿದ್ದರೆ, ಇನ್ನೊಂದೆಡೆ ಆ ನೀರು ಹೆದ್ದಾರಿ ಬದಿಯ ಆವರಣಗಳಿಗೆ ನುಗ್ಗಿ ಮನೆಗಳ ಮುಂದೆ ನೆರೆ ಸೃಷ್ಟಿಯಾಗುತ್ತಿದೆ.

ಮಳೆಗಾಲದ ಕಲ್ಪನೆ ಇಲ್ಲದೆ ನಿರ್ಮಿಸಿರುವ ಅಂಡರ್‌ಪಾಸ್‌ನ ಸರ್ವಿಸ್ ರಸ್ತೆ ಈ ಅವಾಂತರಕ್ಕೆ ಕಾರಣ. ಪಶ್ಚಿಮದ ಸರ್ವಿಸ್ ರಸ್ತೆಗೆ ನಿರ್ಮಿಸುತ್ತಿರುವ ಚರಂಡಿ ಇನ್ನೂ ಪೂರ್ಣಗೊಂಡಿಲ್ಲ. ಪೂರ್ವದಲ್ಲಿ ಚರಂಡಿಯೇ ಇಲ್ಲ. ಇದು ರಸ್ತೆಯಲ್ಲಿ ನೀರು ಸಂಗ್ರಹವಾಗಲು ಕಾರಣ. ಹೆಚ್ಚು ಸಮಸ್ಯೆ ಉಂಟಾಗಿರುವುದು ಪೂರ್ವದ ಸರ್ವಿಸ್ ರಸ್ತೆಯಲ್ಲಿ. ಇಲ್ಲಿಯ ರಸ್ತೆ ಮಳೆ ಬಂದರೆ ಎರಡು ಅಡಿ ನೀರಿನಲ್ಲಿ ಮುಳುಗುತ್ತದೆ. ಇದರಿಂದಾಗಿ ಇಷ್ಟರಲ್ಲೇ ರಸ್ತೆಯಲ್ಲಿ ಗುಂಡಿಗಳು ಉಂಟಾಗಿವೆ. ವಾಹನ ಚಾಲಕರಿಗೆ ರಸ್ತೆಯ ಅಂಚು ಎಲ್ಲಿದೆ, ಗುಂಡಿಗಳು ಎಲ್ಲಿವೆ ಎನ್ನುವುದು ತಿಳಿಯುತ್ತಿಲ್ಲ. ನೀರು ತುಂಬಿದಾಗ ಎಚ್ಚರದಿಂದ ಚಲಿಸಬೇಕಾದ ಕಾರಣ ವಾಹನ ದಟ್ಟಣೆ ಉಂಟಾಗುತ್ತಿದೆ.

ಇಲ್ಲಿರುವ ಮನೆಗಳ ನಿವಾಸಿಗಳ ಸ್ಥಿತಿ ಶೋಚನೀಯ. ರಸ್ತೆಯಲ್ಲಿ ತುಂಬಿದ ಕೆಸರು ನೀರು ಗೇಟ್‌ಗಳ ಮೂಲಕ ಆವರಣಗಳಿಗೆ ನುಗ್ಗುತ್ತಿದೆ. ಮನೆಯವರು ಹೊರ ಬರಲು ಪರದಾಡಬೇಕಾಗುತ್ತದೆ. ಗುರುವಾರ ರಾತ್ರಿ ಮತ್ತು ಶುಕ್ರವಾರ ಹಗಲು ಸುರಿದ ಭಾರಿ ಮಳೆ ಇಲ್ಲಿ ಪ್ರವಾಹ ತಂದಿದೆ. ಮಸ್ಕಿ ಅಬ್ಬಾಸ್ ಸಾಹೇಬ್ ಅವರ ಮನೆಸೇರಿದಂತೆ ಹತ್ತಕ್ಕೂ ಅಧಿಕ ಮನೆಗಳ ಮಂದಿ ತೊಂದರೆ ಅನುಭವಿಸಬೇಕಾಗಿ ಬಂದಿದೆ.

‘ನೀರಿನ ಮಟ್ಟ ಹೆಚ್ಚಾದರೆ ಅವರ ಮನೆಗಳೊಳಗೂ ನೀರು ನುಗ್ಗುವ ಭೀತಿ ಇದೆ. ಗುತ್ತಿಗೆದಾರರು ಪರಿಹಾರ ಕ್ರಮವಾಗಿ ಗೇಟ್‌ಗಳ ಮುಂದೆ ಜಲ್ಲಿ ಮತ್ತು ಜಲ್ಲಿಪುಡಿ ಬೆರೆಸಿ ಮಾಡುವ ವೆಟ್‌ಮಿಕ್ಸ್ ತಂದು ರಾಶಿ ಹಾಕಿದ್ದಾರೆ. ಇದರಿಂದ ನಿಂತ ನೀರು ಹೊರಹೋಗುತ್ತಿಲ್ಲ. ಮಳೆನೀರು ಅದರೊಂದಿಗೆ ಸೇರಿ ನೀರಿನ ಮಟ್ಟ ಏರುತ್ತಿದೆ. ‘ವಾಹನ ಬಳಸುವುದು ಒತ್ತಟ್ಟಿಗಿರಲಿ, ಜನ ಓಡಾಡುವುದೂ ಸಮಸ್ಯೆಯಾಗಿದೆ. ರಸ್ತೆ

ಯಲ್ಲಿ ನಿಲ್ಲುವ ನೀರಿನಿಂದ ಆವರಣ ಗೋಡೆಗಳ ಬುಡ ಶಿಥಿಲವಾಗಿ ಉರುಳುವ ಸಾಧ್ಯತೆಯೂ ಇದೆ’ ಎನ್ನುತ್ತಾರೆ ಅಬ್ಬಾಸ್.

ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಸಿಬ್ಬಂದಿ ಅಂಡರ್‌ಪಾಸ್ ಮೇಲಿನ ರಸ್ತೆ ಸಂಚಾರಕ್ಕೆ ತೆರವಾದಾಗ ಸಮಸ್ಯೆ ಇರುವುದಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಅದಕ್ಕೆ ಸಮಯ ತಗಲುತ್ತದೆ. ಈಗಾಗಲೇ ಮಳೆಯ ಅಬ್ಬರ ಜೋರಾಗಿದೆ. ಮುಂದಿನ ದಿನಗಳು ಹೇಗೋ ಎಂದು ಚಿಂತಿತರಾಗಿದ್ದಾರೆ ಸರ್ವಿಸ್ ರಸ್ತೆ ಬದಿಯ ನಿವಾಸಿಗಳು.

ಎಸ್‌ ಜನಾರ್ದನ ಮರವಂತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry