ಜನರ ಸಮಸ್ಯೆಗೆ ಸ್ಪಂದಿಸಿ; ಮೊಹಸೀನ್‌

7
ಮಳೆ ಹಾನಿ: ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ

ಜನರ ಸಮಸ್ಯೆಗೆ ಸ್ಪಂದಿಸಿ; ಮೊಹಸೀನ್‌

Published:
Updated:

ವಿಜಯಪುರ: ‘ಎಲ್ಲ ಇಲಾಖೆಗಳ ಅಧಿಕಾರಿಗಳು ಅತಿವೃಷ್ಟಿಯ ಸಂದರ್ಭ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು’ ಎಂದು ಉಸ್ತುವಾರಿ ಕಾರ್ಯದರ್ಶಿ ಮೊಹಮದ್‌ ಮೊಹಸೀನ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅತಿವೃಷ್ಟಿ ಹಾನಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಈಚೆಗೆ ಕೆಲವೆಡೆ ಬಿರುಗಾಳಿ–ಮಳೆಗೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಮೀಕ್ಷಾ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು. ವಿಶೇಷವಾಗಿ ತೋಟಗಾರಿಕಾ ಬೆಳೆಗಳಿಗೆ ಸಂಬಂಧ ಪಟ್ಟಂತೆ ಮೂರು ದಿನಗಳಲ್ಲಿ ಪೂರ್ಣ ಗೊಳಿಸಿ ವರದಿ ರೂಪಿಸಿ’ ಎಂದರು.

‘ಮುಂಗಾರು ಹಂಗಾಮಿನಲ್ಲಿ ರೈತರಿಗೆ ಸಕಾಲಕ್ಕೆ ಗುಣಮಟ್ಟದ ಬೀಜ, ರಸಗೊಬ್ಬರ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಕಳಪೆ ಗುಣಮಟ್ಟದ ಬೀಜ-–ರಸಗೊಬ್ಬರ ಮಾರಾಟದ ಬಗ್ಗೆ ತೀವ್ರ ನಿಗಾ ಇಡಬೇಕು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಸಂಬಂಧಪಟ್ಟ ಇಲಾಖೆಗಳು ಸಮನ್ವಯತೆ ಸಾಧಿಸಿ ಅವಶ್ಯಕ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಸೂಕ್ತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ವಿಶೇಷವಾಗಿ ಬೆಳೆ ವಿಮೆ ಸೌಲಭ್ಯದ ಲಾಭವನ್ನು ತಲುಪಿಸಲು ಪ್ರಯತ್ನಿಸಬೇಕು. ಪ್ರತಿ ವಾರ ಈ ಕುರಿತು ಪ್ರಗತಿ ಪರಿಶೀಲನೆ ನಡೆಸುವ ಜತೆಗೆ ಬೆಳೆ ವಿಮೆ ಕುರಿತು ಸೂಕ್ತ ಅರಿವು ಮೂಡಿಸಬೇಕು. ಕೃಷಿ ಇಲಾಖೆ ವ್ಯಾಪ್ತಿಯ ಕೃಷಿ ಯಂತ್ರಧಾರೆ ಸೇರಿದಂತೆ ವಿವಿಧ ಯೋಜನೆಗಳಡಿಯ ಲಾಭ ದೊರಕಿಸುವಂತೆ’ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ಮೊಹಸೀನ್‌, ಜನರಿಗೆ ಕುಡಿುವ ನೀರು, ವಸತಿ ಸೌಲಭ್ಯ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಆದ್ಯತೆ ಮೇಲೆ ಕಲ್ಪಿಸಬೇಕು. ಕ್ರಿಯಾ ಯೋಜನೆಗಳಿಗೆ ಶೀಘ್ರ ಅನುಮೋದನೆ ಪಡೆಯುವ ಜತೆಗೆ ಯಾವುದೇ ಲೋಪಕ್ಕೆ ಅವಕಾಶ ನೀಡದೆ, ಅಭಿವೃದ್ಧಿ ಕಾರ್ಯವನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು.

ಲೋಕೋಪಯೋಗಿ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ನಿರ್ಮಿತಿ ಕೇಂದ್ರ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲು ತಿಳಿಸಿದರು.

ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಭೂ ದಾಖಲೆಗಳ ಇಲಾಖೆ ವ್ಯಾಪ್ತಿಯ ಮೋಜಣಿ ಪ್ರಕರಣಗಳನ್ನು ತೀವ್ರವಾಗಿ ವಿಲೇವಾರಿಗೊಳಿಸಬೇಕು. ಆನ್‌ಲೈನ್‌ ಮೂಲಕ ಸರ್ವೇ ಕಾರ್ಯ ಚುರುಕುಗೊಳಿಸಬೇಕು. ಉಪವಿಭಾಗಾಧಿಕಾರಿಗಳು, ತಹಶೀಲ್ದಾ ರರು ಆದ್ಯತೆ ಮೇಲೆ ಮೋಜಣಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಸುಂದರೇಶ ಬಾಬು, ಕೃಷಿ ಆಯುಕ್ತ ಸತೀಶ ಇದ್ದರು.

ಮುಂದಿನ ದಿನಗಳಲ್ಲಿ ಅತಿವೃಷ್ಟಿಯಂತಹ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಸನ್ನದ್ಧಗೊಳ್ಳಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು

ಮೊಹಮದ್‌ ಮೊಹಸೀನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry