ಮೊದಲ ದಿನವೇ ‘ಮಿರಗಾ’ ಅಬ್ಬರ

7
ಮುಂಜಾನೆಯ ವರ್ಷಧಾರೆಗೆ ರೈತ ಸಮೂಹದಲ್ಲಿ ಇಮ್ಮಡಿಸಿದ ಸಂತಸ; ವಿಜಯಪುರಿಗರಲ್ಲೂ ಹರ್ಷದ ಹೊನಲು

ಮೊದಲ ದಿನವೇ ‘ಮಿರಗಾ’ ಅಬ್ಬರ

Published:
Updated:

ವಿಜಯಪುರ: ಮಿರಗಾ (ಮೃಗಶಿರಾ) ಮೊದಲ ದಿನವೇ ಅಬ್ಬರಿಸಿದೆ. ಇದು ಜಿಲ್ಲೆಯ ರೈತರ ಸಂತಸವನ್ನು ನೂರ್ಮಡಿಗೊಳಿಸಿದೆ. ಮೊದಲ ದಿನದ ಮುಂಜಾನೆಯೇ ಜಿಲ್ಲೆಯ ವಿವಿಧೆಡೆ ಒಂದು ತಾಸಿಗೂ ಹೆಚ್ಚಿನ ಅವಧಿ ಧಾರಾಕಾರ ವರ್ಷಧಾರೆಯಾಗಿದೆ. ಮಧ್ಯಾಹ್ನದವರೆಗೂ ಎಲ್ಲೆಡೆ ಜಿಟಿ ಜಿಟಿ ಮಳೆ ಸುರಿದಿದೆ.

ಶುಕ್ರವಾರದ ಬೆಳಿಗ್ಗೆಯ ಹದ ಮಳೆಗೆ ಭೂಮಿಯ ಹಸಿ ಹೆಚ್ಚಿದೆ. ನಾಲ್ಕು ಬೆಟ್ಟಿಗೂ ಆಳ ಭೂಮಿ ನೆನೆದು ತಂಪಾಗಿದೆ. ತೇವಾಂಶ ಕಡಿಮೆಯಾಗುತ್ತಿದ್ದಂತೆ ಮುಂಗಾರು ಬಿತ್ತನೆ ಎಲ್ಲೆಡೆ ಚುರುಕುಗೊಳ್ಳಲಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ಮುಂಗಾರು ಪ್ರವೇಶ...

ಮುಂಗಾರು ಉತ್ತರ ಕರ್ನಾಟಕ ಪ್ರವೇಶಿಸುವುದು ಜೂನ್‌ ಸಾತ್‌ (7) ಎಂಬ ನಂಬಿಕೆ ತಲೆತಲಾಂತರದಿಂದಲೂ ಈ ಭಾಗದ ಜನರಲ್ಲಿ ನೆಲೆಯೂರಿದೆ. ಮೃಗಶಿರಾ (ಮಿರಗಾ) ಮಳೆ ಆರಂಭದಿಂದ ಈ ಭಾಗದ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿವೆ.

ಜನರ ನಂಬಿಕೆಗೆ ಅನುಗುಣವಾಗಿ ಮಿರಗಾ ಆರಂಭದ ದಿನವೇ ಅಬ್ಬರಿಸಿದ್ದು, ರೈತಾಪಿ ಸಮುದಾಯ ಸಂಭ್ರಮದ ಹೊನಲಲ್ಲಿ ತೇಲಿದೆ. ಪ್ರಸ್ತುತ ವರ್ಷ ಜೂನ್‌ ಆರಂಭಕ್ಕೂ ಮುನ್ನವೇ ಮಳೆ ಸುರಿದಿದ್ದು, ರೈತರು ಮುಂಗಾರು ಬಿತ್ತನೆಗೆ ಭೂಮಿ ಅಣಿಗೊಳಿಸಿದ್ದರು.

ಇದೀಗ ಹದ ಮಳೆ ಸುರಿದಿದ್ದು, ಈ ಹಸಿಗೆ ಎಲ್ಲೆಡೆ ಮುಂಗಾರು ಬಿತ್ತನೆ ನಡೆಸಲಿದ್ದಾರೆ. ತೊಗರಿ, ಸಜ್ಜೆ, ಮುಸುಕಿನ ಜೋಳ ವ್ಯಾಪಕ ಪ್ರಮಾಣದಲ್ಲಿ ಬಿತ್ತನೆಯಾಗಲಿವೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್ ತಿಳಿಸಿದರು.

‘ಸರಿಯಾದ ಸಮಯಕ್ಕೆ ಮುಂಗಾರು ಈ ಬಾರಿ ಚಾಲೂ ಆಯ್ತ್ರೀ. ವಿಜಯಪುರವೂ ಸೇರಿದಂತೆ ಎಲ್ಲೆಡೆ ಹದ ಮಳೆ ಸುರಿದಿದೆ. ಒಳ್ಳೆಯ ವಾತಾವರಣವಿದೆ. ಬಿತ್ತನೆಗೆ ಮೂರ್ನಾಲ್ಕು ದಿನದಲ್ಲಿ ಪೂರಕ ಸನ್ನಿವೇಶ ಸೃಷ್ಟಿಯಾಗಲಿದೆ. ಇದೇ ರೀತಿ ಮಳೆಯಾದರೆ ಈ ವರ್ಷ ಬಂಪರ್‌ ಬೆಳೆ ಕೈಗೆ ಸಿಗುವುದರಲ್ಲಿ ಅನುಮಾನವಿಲ್ಲ’ ಎನ್ನುತ್ತಾರೆ ಭೂತನಾಳ ತಾಂಡಾದ ರೈತ ವಿನೋದ ದಳವಾಯಿ.

ತಂಪು ತಂಪು...

‘ಕಡು ಬೇಸಿಗೆಯ ಬಿಸಿಲ ಝಳದಿಂದ ಬಸವಳಿದಿದ್ದ ವಿಜಯಪುರಿಗರು ಒಮ್ಮಿಂದೊಮ್ಮೆಗೆ ತಂಪಿನ ವಾತಾವರಣ ಅನುಭವಿಸಲಾರಂಭಿಸಿದ್ದಾರೆ. ಶುಕ್ರವಾರ ಮುಂಜಾನೆ ಒಂದು ತಾಸು ಭರ್ಜರಿ ವರ್ಷಧಾರೆಯಾಯ್ತು. ಎಲ್ಲರ ಮೊಗದಲ್ಲೂ ಸಂತಸದ ಹೊನಲು ಗೋಚರಿಸಿತು’ ಎಂದು ಪ್ರಕಾಶ ನ್ಯಾಮಗೊಂಡ ಪ್ರತಿಕ್ರಿಯಿಸಿದರು.

‘ಮುಂಜಾನೆ ಏಳು ಗಂಟೆ ಆಸುಪಾಸಿಗೆ ಮಿರಗಾ ವರ್ಷಧಾರೆಯ ಅಬ್ಬರ ಆರಂಭವಾಯ್ತು. ಒಂದು ತಾಸು ಬಿರುಸಿನಿಂದ ಬರೋಬ್ಬರಿ ಸುರಿಯಿತು. ನಂತರ ಜಿಟಿ ಜಿಟಿ ಮಳೆ ಮಧ್ಯಾಹ್ನದವರೆಗೂ ಹನಿಯಿತು. ಮಲೆನಾಡಿನ ವಾತಾವರಣ ಸೃಷ್ಟಿಯಾಯ್ತು’ ಎಂದು ವಿಜಯಪುರದ ಆನಂದ ಕಟವಾಣಿ ತಿಳಿಸಿದರು.

ಹಲವು ಪ್ರದೇಶ ಜಲಾವೃತ

ವಿಜಯಪುರದಲ್ಲಿ ಸುರಿದ ಬರೋಬ್ಬರಿ ಒಂದು ತಾಸಿನ ಧಾರಾಕಾರ ಮಳೆಗೆ ಕೆ.ಸಿ.ನಗರ, ಬಂಜಾರಾ ನಗರ, ಆಲಕುಂಟೆ ನಗರ, ಶಹಾಪೇಟೆ ಓಣಿ, ಶಿಕಾರಖಾನೆ ಬಡಾವಣೆ, ನವಬಾಗ್‌ನ ಕೆಲ ಪ್ರದೇಶ, ಕೆ.ಸಿ.ಮಾರ್ಕೆಟ್‌ ಸೇರಿದಂತೆ ಇನ್ನಿತರೆ ಪ್ರದೇಶಗಳು ಜಲಾವೃತಗೊಂಡಿದ್ದವು.

ಮುಂಜಾನೆಯೇ ಅಬ್ಬರಿಸಿದ ಮಿರಗಾಕ್ಕೆ ಜನ ತತ್ತರಿಸಿದರು. ಶಾಲಾ ವಿದ್ಯಾರ್ಥಿಗಳು ಸುರಿಯುವ ಮಳೆಯನ್ನು ಲೆಕ್ಕಿಸದೆ ಪೋಷಕರ ಸಹಕಾರದಿಂದ ಶಾಲಾ–ಕಾಲೇಜುಗಳಿಗೆ ತೆರಳಿದರು. ಬೀದಿ ಬದಿ ವ್ಯಾಪಾರಿಗಳು ತಮ್ಮ ವಹಿವಾಟು ಸ್ಥಗಿತಗೊಳಿಸಿ ಮನೆಗೆ ಮರಳಿದರು.

ವಿಜಯಪುರ ಮಹಾನಗರ ಪಾಲಿಕೆ ಈಗಲಾದರೂ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಿ. ನೀರು ರಸ್ತೆ ಮೇಲೆ ಹರಿಯುವುದು ತಪ್ಪಿಸಲಿ

ರೇವಣಸಿದ್ದ ನಂದಿ, ವಿಜಯಪುರ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry