ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ: ಶೇ 83.92 ಮತದಾನ

ಜಿಲ್ಲೆಯ 9 ಮತಗಟ್ಟೆಯಲ್ಲಿ ಶಾಂತಿಯುತ ಚುನಾವಣೆ, ಬೆಳಿಗ್ಗೆ ನಿಧಾನ, ಮಧ್ಯಾಹ್ನ ಚುರುಕು
Last Updated 9 ಜೂನ್ 2018, 9:09 IST
ಅಕ್ಷರ ಗಾತ್ರ

ಮಂಡ್ಯ: ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾನ ಜಿಲ್ಲೆಯ 9 ಮತಗಟ್ಟೆಗಳಲ್ಲಿ ಶುಕ್ರವಾರ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯ ಒಟ್ಟು 4,857 ಮತದಾರರಲ್ಲಿ 4,076 ಮಂದಿ (ಶೇ 83.92) ತಮ್ಮ ಹಕ್ಕು ಚಲಾಯಿಸಿದರು.

ನಗರದಲ್ಲಿ ಮಿನಿ ವಿಧಾನಸೌಧ ಕೊಠಡಿ ಸಂಖ್ಯೆ 4, ಕೊಠಡಿ ಸಂಖ್ಯೆ 14 ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಸೇರಿ ಒಟ್ಟು ಮೂರು ಮತಗಟ್ಟೆಗಳನ್ನು ತೆರೆಯಲಾಗಿತ್ತು. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ನಿಧಾನಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ವೇಳೆಗೆ ಬಿರುಸು ಪಡೆದುಕೊಂಡಿತು. ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ಕೇವಲ ಶೇ 5.54ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆ ಜಿಟಿಜಿಟಿ ಮಳೆ ಸುರಿಯುತ್ತಿದ್ದ ಕಾರಣ ಕಡಿಮೆ ಸಂಖ್ಯೆಯ ಶಿಕ್ಷಕರು ಮತಗಟ್ಟೆಗೆ ಬಂದರು. ಈ ಅವಧಿಯಲ್ಲಿ ಒಟ್ಟು 213 ಪುರಷರು, 56 ಮಂದಿ ಮಹಿಳೆಯರು ಸೇರಿ ಒಟ್ಟು 269 ಜನರು ಮತ ಚಲಾಯಿಸಿದರು.

ಬೆಳಿಗ್ಗೆ 10ರ ನಂತರ ಹೆಚ್ಚಿನ ಜನರು ಮತಗಟ್ಟೆಗಳತ್ತ ಬಂದರು. 11 ಗಂಟೆಯ ವೇಳೆಗೆ ಶೇ 22.28ರಷ್ಟು ಜನರು ಮತದಾನ ಮಾಡಿದರು. 1,082 ಪುರುಷರು, 820 ಮಹಿಳೆಯರು ಹಕ್ಕು ಚಲಾಯಿಸಿದರು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇ 49.70ರಷ್ಟು ಮತದಾರರು ಹಕ್ಕು ಚಲಾಯಿಸಿದರು. 1,716 ಪುರುಷರು, 698 ಮಹಿಳೆಯರು ಮತದಾನ ಮಾಡಿದರು. ನಂತರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಮತದಾನದ ಪ್ರಮಾಣ ಶೇ 71.65ಕ್ಕೆ ತಲುಪಿತು. ನಂತರ ಅಂತಿಮವಾಗಿ ಸಂಜೆ 5 ಗಂಟೆಗೆ ಮತದಾನದ ಪ್ರಮಾಣ ಶೇ 83.92ರಷ್ಟಾಯಿತು. ಒಟ್ಟು ಮತದಾರರಲ್ಲಿ 4,076 ಮಂದಿ ಹಕ್ಕು ಚಲಾಯಿಸಿದರು. 2,768 ಪುರುಷರು, 1,307 ಮಹಿಳೆಯರು ಹಾಗೂ ಒಬ್ಬ ಇತರ ಮತದಾರ ಹಕ್ಕು ಚಲಾಯಿಸಿದರು. ಪಾಂಡವಪುರ ಮತಗಟ್ಟೆಯಲ್ಲಿ ಅತಿ ಹೆಚ್ಚು ಶೇ 92.19ರಷ್ಟು ಮತದಾನವಾದರೆ ಶ್ರೀರಂಗಪಟ್ಟಣದಲ್ಲಿ ಅತಿ ಕಡಿಮೆ ಶೇ 71.60ರಷ್ಟು ಮತದಾನವಾಗಿದೆ.

ಮತಗಟ್ಟೆ ಸುತ್ತ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಪ್ರತಿ ಮತಗಟ್ಟೆಯಲ್ಲಿ ಒಬ್ಬರು ಅಧ್ಯಕ್ಷಾಧಿಕಾರಿ ಹಾಗೂ ಮೂವರು ಮತದಾನಾಧಿಕಾರಿಗಳು ಸೇರಿ ಒಟ್ಟು 4 ಜನ ಮತಗಟ್ಟೆ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಶ್ರೀರಂಗಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಡಿ-ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿತ್ತು. ಅಲ್ಲಿಂದ ಗುರುವಾರ ಸಂಜೆಯೇ ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ಬಂದು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಮತದಾನದ ನಂತರ ಮತಪೆಟ್ಟಿಗೆಗಳನ್ನು ಮೈಸೂರು ನಗರದ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್‍ಮೆಂಟ್ ಕಾಲೇಜಿನ ಭದ್ರತಾ ಕೊಠಡಿಗೆ ಬಿಗಿ ಭದ್ರತೆಯ ನಡುವೆ ಸಾಗಿಸಲಾಯಿತು.

ಮತದಾರರನ್ನು ಸೆಳೆಯಲು ಕಸರತ್ತು: ಜಿಲ್ಲೆಯ ಎಲ್ಲ ಮತಕೇಂದ್ರಗಳಲ್ಲಿ ಶಿಕ್ಷಕ ಮತದಾರರನ್ನು ಸೆಳೆಯಲು ವಿವಿಧ ಪಕ್ಷಗಳ ಮುಖಂಡರು ಯತ್ನಿಸಿದರು. ಮತಗಟ್ಟೆಯ 200 ಮೀ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಮತಗಟ್ಟೆಯ ಸಮೀಪದಲ್ಲೇ ಶಿಕ್ಷಕರನ್ನು ಸೆಳೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ನಗರದ ಮಿನಿವಿಧಾನಸೌಧದ ಬಳಿ ವಿಧಾನ ಪರಿಷತ್‌ ಸದಸ್ಯ, ಜೆಡಿಎಸ್‌ ಮುಖಂಡ ಕೆ.ಟಿ.ಶ್ರೀಕಂಠೇಗೌಡ ಅವರು ಜೆಡಿಎಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ಅವರ ಪರ ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದರು. ಬಿಜೆಪಿ ಮುಖಂಡ ಎನ್‌.ಶಿವಣ್ಣ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದರು. ಕಾಂಗ್ರೆಸ್ ಪರವಾಗಿ ಸಿ.ಎಂ.ದ್ಯಾವಪ್ಪ ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT