4

ಜೇಡ: ಏಕೆ ಅಗತ್ಯ? ಏನು ಮಹತ್ವ?

Published:
Updated:
ಜೇಡ: ಏಕೆ ಅಗತ್ಯ? ಏನು ಮಹತ್ವ?

ಒಂದಂಶವಂತೂ ಸ್ಪಷ್ಟ: ಜನ ಸಾಮಾನ್ಯವಾಗಿ ಭಾವಿಸಿರುವಂತೆ ಜೇಡ ಕೀಟಗಳ ಗುಂಪಿಗೆ ಸೇರಿಲ್ಲ. ಜೈವಿಕವಾಗಿ ‘ಸಂಧಿ ಪದಿ’ (ಅರಾಕ್ನಿಡ್ಸ್) ವರ್ಗಕ್ಕೆ ಸೇರಿರುವ ಜೇಡ ವಾಸ್ತವವಾಗಿ ಚೇಳುಗಳ ಅತ್ಯಂತ ನಿಕಟ ಸಂಬಂಧಿ. ‘ಎಂಟು ಕಾಲುಗಳು, ಕುಡಿಮೀಸೆಗಳ ನಾಸ್ತಿತ್ವ’ - ಈ ಎರಡು ಲಕ್ಷಣಗಳು ಜೇಡ ಕೀಟಗಳಿಂದ ಭಿನ್ನ ಎಂಬುದನ್ನು ಮೇಲ್ನೋಟಕ್ಕೇ ನಿಚ್ಚಳಗೊಳಿಸುತ್ತವೆ.

ಜೇಡಗಳು ಸಸ್ಯಗಳಿಗೂ, ನಮಗೂ, ಇತರ ಪ್ರಾಣಿಗಳಿಗೂ ಪಿಡುಗುಕಾರಕಗಳೂ ಅಲ್ಲ. ಜೇಡಗಳು ನಮ್ಮ ರಕ್ತ ಹೀರುವುದಿಲ್ಲ; ಕಾಯಿಲೆ ಹರಡುವುದಿಲ್ಲ. ಸಸ್ಯಗಳನ್ನು, ಕೃಷಿ ಬೆಳೆಗಳನ್ನು, ಸಂಗ್ರಹಿಸಿಟ್ಟ ಧಾನ್ಯಗಳನ್ನು ಹಾಳುಗೆಡಹುವುದಿಲ್ಲ.

ಜೇಡಗಳು ಪಿಡುಗುಕಾರಕ ಕೀಟಗಳ ಪರಮ ಶತ್ರುಗಳಾಗಿವೆ. ಮನೆಗಳಲ್ಲಿ ಸೊಳ್ಳೆ, ನೊಣ, ಜಿರಳೆ ಇತ್ಯಾದಿ ರೋಗಕಾರಕಗಳನ್ನು, ಹೊಲ, ತೋಟ, ಗದ್ದೆ, ಅಡವಿಗಳಲ್ಲಿ ಸಸ್ಯಗಳ ಎಲೆಗಳನ್ನು ಭಕ್ಷಿಸುವ, ಕಾಂಡ ಕೊರೆವ, ರಸ ಹೀರುವ ಹಾನಿಕಾರಕ ಕೀಟಗಳನ್ನು ಮತ್ತು ಅವುಗಳ ಮರಿಹುಳುಗಳನ್ನು ಜೇಡಗಳು ತಿಂದುಹಾಕುತ್ತವೆ.

ಜೇಡಗಳಲ್ಲಿ ಹಲವು ವಿಧಗಳಿವೆ: ತೋಟ ಜೇಡ, ತೋಳ ಜೇಡ, ಬಾಳೆ ಜೇಡ, ನವಿಲು ಜೇಡ, ಮನೆ ಜೇಡ, ನೆಗೆವ ಜೇಡ, ಕೀಲು ಕವಾಟ ಜೇಡ, ಆಲಿಕೆ ಬಲೆ ಜೇಡ, ಒಂಟೆ ಜೇಡ, ಬೋಲಾಸ್ ಜೇಡ, ವಿಧವೆ ಜೇಡ (ಚಿತ್ರ-9), ಟರಾಂಟ್ಯೂಲಾ (ಚಿತ್ರ-8)... ಇತ್ಯಾದಿ. ಈವರೆಗೆ ಜೇಡಗಳ ಸುಮಾರು ನಲವತ್ತೈದು ಸಾವಿರ ಪ್ರಭೇದಗಳನ್ನು ಗುರುತಿಸಲಾಗಿದೆ.

ಕೆಲವು ತಜ್ಞರ ಅಂದಾಜಿನ ಅನ್ವಯ ಧರೆಯಲ್ಲಿ ಜೇಡಗಳ ಪ್ರಭೇದಗಳ ಒಟ್ಟು ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ ಇರಬಹುದು! ಹಾಗಾಗಿಯೇ ಕೃಷಿ ಭೂಮಿ ಮತ್ತು ಅಡವಿಗಳಲ್ಲಿ ಜೇಡಗಳ ದಟ್ಟಣೆ ವಿಪರೀತ. ಒಂದು ಲೆಕ್ಕಾಚಾರದ ಪ್ರಕಾರ ಸಮೃದ್ಧ ಬೆಳೆ ಬೆಳೆದು ನಿಂತ ಪ್ರತಿ ಎಕರೆ ತೋಟದಲ್ಲಿ ಇರಬಹುದಾದ ಜೇಡಗಳ ಸಂಖ್ಯೆ ಸುಮಾರು ಇಪ್ಪತ್ತು ಲಕ್ಷ!

ಅಂಟಾರ್ಕ್ಟಿಕಾವನ್ನು ಬಿಟ್ಟು ಉಳಿದೆಲ್ಲ ಭೂಖಂಡಗಳಲ್ಲೂ ನೆಲೆಸಿರುವ ಜೇಡ ಪ್ರಭೇದಗಳ ಗಾತ್ರಾಂತರವೂ ಕಲ್ಪನಾತೀತ: ಸೂಜಿ ತಲೆಯಷ್ಟೇ ಗಾತ್ರದಿಂದ ಅಂಗೈ ಅಗಲದವರೆಗೆ!

ವಿಶೇಷ ಏನೆಂದರೆ, ಎಲ್ಲ ಜೇಡ ಪ್ರಭೇದಗಳೂ ‘ರೇಷ್ಮೆ’ಯನ್ನು ತಯಾರಿಸಿ ದಾರ ನೂಲುತ್ತವೆ. ಅದಕ್ಕೆಂದೇ ಅವುಗಳ ಶರೀರದೊಳಗೆ ಹಿಂಬದಿಯಲ್ಲಿ ರೇಷ್ಮೆ ಉತ್ಪಾದಿಸುವ, ಅದನ್ನು ದಾರವನ್ನಾಗಿ ನೂಲುವ ವಿಶಿಷ್ಟ ಅಂಗಗಳಿವೆ (ಚಿತ್ರ-4ರಲ್ಲಿ ಗಮನಿಸಿ).

ಆದರೆ ಎಲ್ಲ ಜೇಡ ಪ್ರಭೇದಗಳೂ ತೋಟದ ಜೇಡಗಳಂತೆ ‘ವಲಯ ಬಲೆ’ಯನ್ನು ನಿರ್ಮಿಸುವುದಿಲ್ಲ (ಅಂಥದೊಂದು ಅದ್ಭುತ ಬಲೆಯನ್ನು ಚಿತ್ರ-1 ರಲ್ಲೂ, ಚಳಿಗಾಲದಲ್ಲಿ ಅಂಥದ್ದೇ ಬಲೆಯ ದಾರಗಳ ಮೇಲೆ ಇಬ್ಬನಿ ಸಂಗ್ರಹಗೊಂಡು ಮುತ್ತಿನ ಹಾರದಂತೆ ಕಂಗೊಳಿಸುತ್ತಿರುವುದನ್ನು ಚಿತ್ರ -2ರಲ್ಲೂ ಗಮನಿಸಿ).

ಆದರೆ ಹುಳು, ಕೀಟ, ಕಪ್ಪೆ, ಹಲ್ಲಿಗಳನ್ನು ಸೆರೆಹಿಡಿಯಲು ಇತರ ನಾನಾ ವಿಧ ಮೃತ್ಯು ಪಾಶಗಳನ್ನು ನೇಯುತ್ತವೆ (ಚಿತ್ರ - 3, 5, 6, 10, 12, 13 ನೋಡಿ). ಬಲೆಯನ್ನೇ ನಿರ್ಮಿಸದೆ ಕಾದು ಕುಳಿತು ಸನಿಹ ಬಂದ ಕೀಟದ ಮೇಲೆ ಅಂಟನ್ನು ಉಗಿದು ಬಂಧಿಸುವ, ಆಹಾರ ಕೀಟದ ಬೆನ್ನು ಹತ್ತಿ ಹಿಡಿದು ವಿಷ ಚುಚ್ಚುವ ಜೇಡ ವಿಧಗಳೂ ಇವೆ.

ಬೇಟೆಗಷ್ಟೇ ಅಲ್ಲದೆ ತಾವೇ ಸುರಕ್ಷಿತವಾಗಿ ಅಡಗಲು (ಚಿತ್ರ-11), ಮೊಟ್ಟೆಗಳನ್ನು ಕಾಪಾಡಲು, ಒಂದೆಡೆಯಿಂದ ಮತ್ತೊಂದೆಡೆಗೆ ತೇಲಿ ಸಾಗಲೂ (ಚಿತ್ರ-14) ಜೇಡಗಳು ರೇಷ್ಮೆಯನ್ನು ಬಳಸುತ್ತವೆ. ಕೆಲವು ಜೇಡಗಳಂತೂ ‘ಕಪಟ ಕಣ್ಣು’ಗಳನ್ನು ಪ್ರದರ್ಶಿಸಿ (ಚಿತ್ರ-7), ಭಯಂಕರ ಇರುವೆಗಳ ರೂಪವನ್ನು ಅನುಕರಿಸಿ ಸ್ವರಕ್ಷಣೆ ಮಾಡಿಕೊಳ್ಳುತ್ತವೆ.

ಪ್ರಕೃತಿಯಲ್ಲಿ ಜೇಡಗಳ ಅಸ್ತಿತ್ವ ಅತ್ಯವಶ್ಯ, ಏಕೆ? ಪ್ರಕೃತಿಯಲ್ಲಿ ಜೇಡಗಳ ಅತ್ಯಂತ ಪ್ರಧಾನ ಪಾತ್ರ ಕೀಟಗಳ ನಿಯಂತ್ರಣ. ಜಗದಾದ್ಯಂತ ಪ್ರತಿ ದಿನ ಜೇಡಗಳು ಬೇಟೆಯಾಡುವ ಕೀಟಗಳ ಪ್ರಮಾಣ ಕಲ್ಪನಾತೀತ. ಅದು ಸ್ಪಷ್ಟವಾಗಲು ಆ ಕುರಿತ ತುಂಬ ಕುತೂಹಲದ, ಪರಮ ವಿಸ್ಮಯದ್ದೂ ಆದ ಈ ವೈಜ್ಞಾನಿಕ ಲೆಕ್ಕಾಚಾರ ಗಮನಿಸಿ:

ಧರೆಯಲ್ಲಿ ಯಾವುದೇ ಸಮಯದಲ್ಲಿ ಒಟ್ಟು 30 ದಶಲಕ್ಷ ಟನ್ ತೂಗುವಷ್ಟು ಜೀವಂತ ಜೇಡಗಳಿರುತ್ತವೆ. ಪ್ರತಿ ಜೇಡವೂ ಪ್ರತಿ ದಿನ ತನ್ನ ದೇಹ ತೂಕದ ಕನಿಷ್ಠ ಶೇಕಡ 10ರಷ್ಟು ಆಹಾರವನ್ನು ಬೇಟೆಯಾಡಿ ಸೇವಿಸುತ್ತವೆ. ಜೇಡಗಳಿಗೆ ಕೀಟಗಳೇ ಪ್ರಮುಖ ಆಹಾರವಾದ್ದರಿಂದ ಪ್ರತಿ ದಿನ ಜಗತ್ತಿನಲ್ಲಿ ಜೇಡಗಳು ಕೊಲ್ಲುವ ಕೀಟಗಳ ತೂಕ ಮೂರು ದಶ ಲಕ್ಷ ಟನ್ ಎಂದಾಯಿತು!

ಇದನ್ನು ಕೀಟಗಳ ಸಂಖ್ಯೆಗೆ ಪರಿವರ್ತಿಸಿದರೆ, ಪ್ರತಿ ದಿನ ಜೇಡಗಳಿಗೆ ಬಲಿಯಾಗುವ ಕೀಟಗಳ ಸಂಖ್ಯೆ ಒಂಬತ್ತು ದಶಲಕ್ಷ ಕೋಟಿ, ಎಂದರೆ 90 ಟ್ರಿಲಿಯನ್ (90,000,000,000,000 - ತೊಂಬತ್ತು ಲಕ್ಷ ಕೋಟಿ) ಆಗುತ್ತದೆ! ಹಾಗಾಗಿ ಜೇಡಗಳು ಇಲ್ಲವಾದರೆ ಅಡವಿ, ಹುಲ್ಲು ಬಯಲು ಇತ್ಯಾದಿ ಸಕಲ ವಿಧ ಸಸ್ಯ ಪ್ರಧಾನ ಜೀವಾವಾರಗಳು ಪಿಡುಗಿನ ಕೀಟಗಳ ಅನಿಯಂತ್ರಿತ ಹಾವಳಿಯಿಂದ ರೋಗಗ್ರಸ್ತವಾಗುತ್ತವೆ; ವಿನಾಶದ ಹಾದಿ ಹಿಡಿಯುತ್ತವೆ.

ಜೇಡಗಳು ನೂರಾರು ಪಕ್ಷಿ ಪ್ರಭೇದಗಳಿಗೆ ಆಹಾರ ಮೂಲ ಕೂಡ ಆಗಿವೆ. ಕೆಲವಾರು ಹಕ್ಕಿ ಪ್ರಭೇದಗಳು ತಮ್ಮ ಪುಟ್ಟ, ಸುಂದರ, ದೃಢ ಗೂಡುಗಳನ್ನು ನಿರ್ಮಿಸಿಕೊಳ್ಳಲು ಜೇಡದ ಬಲೆಯ ರೇಷ್ಮೆ ದಾರಗಳೇ ಪ್ರಧಾನ ಸಾಮಗ್ರಿ ಕೂಡ ಆಗಿವೆ. ಇನ್ನೂ ಒಂದು ವಿಶೇಷ ಏನೆಂದರೆ ಕಾಂಬೋಡಿಯಾ, ಕೊಲಂಬಿಯಾ ಮತ್ತು ವೆನೆಜುವೆಲಾ ರಾಷ್ಟ್ರಗಳಲ್ಲಿ ಜೇಡಗಳು ಮನುಷ್ಯರಿಗೆ ಆಹಾರವಾಗಿವೆ.

ದೊಡ್ಡ ಗಾತ್ರದ ಜೇಡಗಳನ್ನು ಹಿಡಿದು, ಬಿದಿರಿನ ಕೊಳವೆಗಳಲ್ಲಿ ತುಂಬಿ, ಕೆಂಡಗಳ ಮೇಲಿಟ್ಟು ಹುರಿದು ತಿನ್ನುವ ಕ್ರಮ ಅಲ್ಲೆಲ್ಲ ವ್ಯಾಪಕವಾಗಿದೆ. ಪರಿಸರ ಮಿತ್ರ ಜೀವಿಗೆ ಮನುಷ್ಯರು ಸಲ್ಲಿಸುವ ಕೃತಜ್ಞತೆ ಇದು! ಎಂಥ ವಿಪರ್ಯಾಸ! ಮನುಷ್ಯರಿಗೆ ಜೇಡಗಳಿಂದ ಲಭಿಸಬಹುದಾದ ಅತ್ಯಂತ ಮಹತ್ವದ ಪ್ರಯೋಜನಗಳ ನಿದರ್ಶನಗಳು:

* ಜೇಡ ರೇಷ್ಮೆ ಅತ್ಯಂತ ದೃಢ. ಜೇಡದ ರೇಷ್ಮೆ ದಾರ ಅಷ್ಟೇ ದಪ್ಪದ ಉಕ್ಕಿನ ತಂತಿಗಿಂತ ಹೆಚ್ಚು ಬಲಿಷ್ಠ; ಅದರ ಸ್ಥಿತಿಸ್ಥಾಪಕ ಬಲ ನೈಲಾನ್‌ಗಿಂತ ಅಧಿಕ! ಜೊತೆಗೆ ಅದರ ಅತ್ಯಂತ ಹಗುರ ಗುಣವೂ ಸೇರಿ ಜೇಡ ರೇಷ್ಮೆ ಹಲವಾರು ಅದ್ಭುತ ತಾಂತ್ರಿಕ ಆವಿಷ್ಕಾರಗಳಿಗೆ ಅತ್ಯುಪಯುಕ್ತವೆನಿಸಿದೆ.

ಜೇಡ ರೇಷ್ಮೆ ಬಳಸಿ ತುಂಬ ಹಗುರವಾದ, ಸುಲಭವಾಗಿ ಬಳುಕುವ, ಸದೃಢವಾದ ಗುಂಡು ನಿರೋಧಕ ಕವಚ ನಿರ್ಮಿಸುವ, ಅತ್ಯಂತ ಸಮರ್ಥ ಹೃದಯ ಕವಾಟಗಳನ್ನು, ರಕ್ತ ನಾಳಗಳನ್ನು ತಯಾರಿಸುವುದು ಸಾಧ್ಯ ಎಂಬಂತಾಗಿದೆ; ಆ ಕುರಿತು ಶೋಧಗಳು ನಡೆದಿವೆ.

* ಎಲ್ಲ ಜೇಡಗಳೂ ಕೀಟಗಳನ್ನು ಕೊಲ್ಲಲು ಸಾಕಾಗುವಂಥ ಮೃದು ಸಾಮರ್ಥ್ಯದ ವಿಷವನ್ನು ಹೊಂದಿವೆ. ಜೇಡಗಳ ವಿಶಿಷ್ಟ ವಿಷವನ್ನು ಬಳಸಿ ಸಂಧಿವಾತ, ಅಪಸ್ಮಾರ, ಆಲ್ಜೈಮರ್ಸ್ ಸಿಂಡ್ರೋಮ್, ಪಾರ್ಶ್ವವಾಯು, ಅನಿಯತ ಹೃದಯ ಬಡಿತ... ಇತ್ಯಾದಿ ಗಂಭೀರ ಅನಾರೋಗ್ಯಗಳಿಗೆ ಪ್ರಭಾವಶಾಲೀ ಔಷಧಗಳನ್ನು ಸಿದ್ಧಪಡಿಸಬಹುದೆಂಬುದು ಕೂಡ ಸಂಶೋಧನೆಗಳಿಂದ ಸ್ಪಷ್ಟವಾಗಿದೆ! ಜೇಡದ ಅಗತ್ಯ-ಮಹತ್ವಗಳು ಎಷ್ಟೆಲ್ಲ! ಅಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry