ಬೆಳಿಗ್ಗೆ ನೀರಸ, ಮಧ್ಯಾಹ್ನ ಬಿರುಸಿನ ಮತದಾನ

7
ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆ, ಮತದಾನದಲ್ಲಿ ಕಂಡು ಬರದ ಮಹಿಳೆಯರ ಉತ್ಸಾಹ

ಬೆಳಿಗ್ಗೆ ನೀರಸ, ಮಧ್ಯಾಹ್ನ ಬಿರುಸಿನ ಮತದಾನ

Published:
Updated:
ಬೆಳಿಗ್ಗೆ ನೀರಸ, ಮಧ್ಯಾಹ್ನ ಬಿರುಸಿನ ಮತದಾನ

ಬೀದರ್‌: ಈಶಾನ್ಯ ಪದವೀಧರರ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ಮತದಾನ ಬೆಳಿಗ್ಗೆ ಮಂದಗತಿಯಲ್ಲಿ ಆರಂಭವಾದರೂ ಮಧ್ಯಾಹ್ನ ಬಿರುಸಿನಿಂದ ನಡೆಯಿತು.

ಬೆಳಿಗ್ಗೆ 9 ಗಂಟೆಯ ವೇಳೆಗೆ ಸರಾಸರಿ ಶೇ 2.69 ರಷ್ಟು ಮಾತ್ರ ಮತದಾನವಾಗಿತ್ತು. 11 ಗಂಟೆಯ ವೇಳೆಗೆ ಶೇ 12.92ರಷ್ಟು ಜನ ಮತ ಚಲಾಯಿಸಿದರು. ಮಧ್ಯಾಹ್ನದ ವೇಳೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಓಲ್ಡ್‌ಸಿಟಿಯ ಉರ್ದು ಮಾಧ್ಯಮ ಪ್ರಾಥಮಿಕ ಶಾಲೆ, ತಾಲ್ಲೂಕು ಪಂಚಾಯಿತಿ ಕಚೇರಿ, ತಹಶೀಲ್ದಾರ್‌ ಕಚೇರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಮತಗಟ್ಟೆ ಸಂಖ್ಯೆ 12ರಲ್ಲಿ ಬೆಳಿಗ್ಗೆ 9 ಗಂಟೆಗೆ ಮೂವರು ಮಹಿಳೆಯರು ಸೇರಿ 38 ಜನ ಹಾಗೂ 11 ಗಂಟೆಗೆ 17 ಮಹಿಳೆಯರು ಸೇರಿ 88

ಮಾತ್ರ ಮತದಾನ ಮಾಡಿದ್ದರು. ಮತಗಟ್ಟೆ ಸಂಖ್ಯೆ 40ರಲ್ಲಿ 1,001 ಮತದಾರರ ಪೈಕಿ ಬೆಳಿಗ್ಗೆ 9 ಗಂಟೆಗೆ ನಾಲ್ಕು ಮಹಿಳೆಯರು ಸೇರಿ 21 ಜನ ಹಾಗೂ 11 ಗಂಟೆ ವೇಳೆಗೆ 29 ಮಹಿಳೆಯರು ಸೇರಿ 141 ಜನ ಮತಹಕ್ಕು ಚಲಾಯಿಸಿದ್ದರು. ತಹಶೀಲ್ದಾರ್‌ ಕಚೇರಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ 11 ಗಂಟೆಗೆ 100 ಹಾಗೂ ಮಧ್ಯಾಹ್ನ 1 ಗಂಟೆಗೆ ಒಟ್ಟು 187 ಮತದಾರರು ಮತ ಹಾಕಿದ್ದರು. ಡಿಡಿಪಿಐ ಕಚೇರಿಯ ಮತಗಟ್ಟೆ ಸಂಖ್ಯೆ 13ರಲ್ಲಿ 833 ಮತದಾರರ ಪೈಕಿ ಬೆಳಿಗ್ಗೆ 9 ಗಂಟೆಗೆ ನಾಲ್ಕು ಮಹಿಳೆಯರು ಸೇರಿ ಕೇವಲ 20 ಜನ, 11 ಗಂಟೆ ವೇಳೆಗೆ 32 ಮಹಿಳೆಯರು ಸೇರಿ 106 ಹಾಗೂ ಮಧ್ಯಾಹ್ನ 12 ಗಂಟೆಗೆ 72 ಮಹಿಳೆಯರು ಸೇರಿ ಒಟ್ಟು 221 ಮತದಾರರು ತಮ್ಮ ಮತಹಕ್ಕು ಚಲಾಯಿಸಿದ್ದರು.

ಮಧ್ಯಾಹ್ನ 3 ಗಂಟೆಗೆ ಔರಾದ್‌ನಲ್ಲಿ ಶೇ 60ರಷ್ಟು ಹಾಗೂ ಜಿಲ್ಲೆಯಲ್ಲಿ ಸರಾಸರಿ ಶೇ 51.80ರಷ್ಟು ಮತದಾನವಾಗಿತ್ತು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಹಿರಿಯ ಸಾಹಿತಿ ಮರಿಯಪ್ಪ ಹೊಸಮನಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ.ಬಸವರಾಜ ಬಲ್ಲೂರು, ವೈದ್ಯಕೀಯ ಸಂಘದ ಪದಾಧಿಕಾರಿಗಳು ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು.

ಶಾಸಕ ರಹೀಂ ಖಾನ್‌ ಅವರು ಮತಗಟ್ಟೆಗಳ ಬಳಿ ಬಂದು ಮತದಾರರ ಮನವೊಲಿಸಲು ಪ್ರಯತ್ನಿಸಿದರು. ಮತಗಟ್ಟೆ ಕೇಂದ್ರಗಳ ಸಮೀಪ ಅಣತಿ ದೂರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳ ಬೆಂಬಲಿಗರು ಟೆಂಟ್‌ ಹಾಕಿಕೊಂಡು ಮತದಾರರಿಗೆ ಮಾಹಿತಿ ಕೊಟ್ಟರು. ಮತಗಟ್ಟೆಗಳ ಸುತ್ತ ಬಂದೋಬಸ್ತ್‌ ಮಾಡಲಾಗಿತ್ತು.

ಜಿಲ್ಲೆಯಲ್ಲಿ ಶೇ 67.50 ರಷ್ಟು ಮತದಾನ

ಬೀದರ್‌: ಈಶಾನ್ಯ ಪದವೀಧರರ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಶೇ 67.50ರಷ್ಟು ಮತದಾನವಾಗಿದೆ. ಔರಾದ್‌ ತಾಲ್ಲೂಕಿನ ದಾಬಕಾದ ಮತಗಟ್ಟೆಯಲ್ಲಿ ಅತಿ ಹೆಚ್ಚು ಶೇ 91.67 ರಷ್ಟು ಮತದಾನವಾದರೆ, ಹೊಸ ತಾಲ್ಲೂಕು ಚಿಟಗುಪ್ಪದಲ್ಲಿ ಅತಿ ಕಡಿಮೆ ಶೇ 58.02ರಷ್ಟು ಮತದಾನವಾಗಿದೆ. ಚಿಟಗುಪ್ಪ ಪಟ್ಟಣದಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ಒಬ್ಬರೂ ಮತಗಟ್ಟೆಗೆ ಬಂದಿಲ್ಲ.

ಭಾಲ್ಕಿ ತಾಲ್ಲೂಕಿನಲ್ಲಿ ಶೇ 72, ಬಸವಕಲ್ಯಾಣ ತಾಲ್ಲೂಕಿನಲ್ಲಿ ಶೇ 70.89, ಹುಮನಾಬಾದ್‌ ತಾಲ್ಲೂಕಿನಲ್ಲಿ ಶೇ 67.62 ಹಾಗೂ ಔರಾದ್‌ನಲ್ಲಿ ಶೇ 80ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದ ತಹಶೀಲ್ದಾರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪದವೀಧರ ಮತದಾರರ ಸಂಖ್ಯೆ 11,416. ಇವರಲ್ಲಿ 1,935 ಮಹಿಳೆಯರು ಹಾಗೂ 5,771 ಪುರುಷರು ಸೇರಿ 7,706 ಮತದಾರರು ಮತದಾನದಲ್ಲಿ ಭಾಗವಹಿಸಿದ್ದರು. ಬೀದರ್‌ ನಗರದಲ್ಲಿ 1,047 ಮಹಿಳೆಯರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.

1979ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಶಿಕ್ಷಕನಾಗಿ ನಿವೃತ್ತ ಹೊಂದಿದರೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಿದ್ದೇನೆ

- ಮರಿಯಪ್ಪ ಹೊಸಮನಿ, ಸಾಹಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry