ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 94.55ರಷ್ಟು ಮತದಾನ

ಶಾಂತಿಯುತವಾಗಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ
Last Updated 9 ಜೂನ್ 2018, 10:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶುಕ್ರವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಎಲ್ಲೆಡೆ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯಲ್ಲಿ ಶೇ 94.55 ರಷ್ಟು ಮತದಾನವಾಗಿದೆ.

ಮತದಾನಕ್ಕಾಗಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ತಾಲ್ಲೂಕು ಕಚೇರಿಯಲ್ಲಿ ಮತಗಟ್ಟೆ ತೆರೆಯಲಾಗಿತ್ತು. ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಎಲ್ಲಿ ಸಹ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ.

ಜಿಲ್ಲೆಯಲ್ಲಿ 863 ಮಹಿಳೆಯರು ಮತ್ತು 1,594 ಪುರುಷರು ಸೇರಿ ಒಟ್ಟು 2,457 ಮತದಾರರಿದ್ದಾರೆ. ಈ ಪೈಕಿ 2,323 ಮತದಾರರು ಮತ ಚಲಾಯಿಸಿದರು. 1,522 ಪುರುಷರು ಮತ್ತು 801 ಮಹಿಳೆಯರು ಈ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನದ ಪ್ರಯುಕ್ತ ಜೂನ್ 6 ರಿಂದ 8ರ ಸಂಜೆ 6ರ ವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದರು. ಮತದಾನದ ನಂತರ ಮತಯಂತ್ರಗಳನ್ನು ಬಿಗಿ ಬಂದೋಬಸ್ತ್ ನಡುವೆ ಮತ ಎಣಿಕೆ ಕೇಂದ್ರವಾದ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ರಾಮ್ ನಾರಾಯಣ್ ಚೆಲ್ಲಾರಾಮ್ ಕಾಲೇಜಿಗೆ ಸಾಗಿಸಲಾಯಿತು. ಜೂನ್ 12 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

504 ಮಂದಿ ಹಕ್ಕು ಚಲಾವಣೆ

ಗೌರಿಬಿದನೂರು: ತಾಲ್ಲೂಕು ಕಚೇರಿಯಲ್ಲಿ ನಡೆದ ಆಗ್ನೇಯ ಶಿಕ್ಷಕರ ಚುನಾವಣೆ ಶೇ.93.68 ರಷ್ಟು ಮತದಾನವಾಗಿದೆ. ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಸಂಜೆ 5 ಗಂಟೆಯವರೆಗೆ ನಡೆಯಿತು. ಒಟ್ಟು 538 ಶಿಕ್ಷಕ ಮತದಾರರಿದ್ದು, ಅದರಲ್ಲಿ 317 ಪುರುಷ ಹಾಗೂ 187 ಮಹಿಳಾ ಮತದಾರರು ಸೇರಿದಂತೆ 504 ಮತದಾರರು ಮತ ಚಲಾಯಿಸಿದ್ದಾರೆ.

ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಶಿಕ್ಷಕರು ಉತ್ಸಾಹದಿಂದ ಮತಯಾಚನೆ ಮಾಡುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯ ಪರ ಮತಯಾಚನೆ ಮಾಡುವ ಶಿಕ್ಷಕರೇ ಕಾಣಲಿಲ್ಲ.

ಬಿರುಸಿನ ಮತದಾನ

ಚಿಂತಾಮಣಿ: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶೇ 93.36 ರಷ್ಟು ಮತದಾನವಾಗಿದೆ.

ತಾಲ್ಲೂಕು ಕಚೇರಿಯಲ್ಲಿರುವ ಮತದಾನ ಕೇಂದ್ರಕ್ಕೆ ಬೆಳಿಗ್ಗೆಯಿಂದಲೇ ಶಿಕ್ಷಕರು ಮತ ಚಲಾಯಿಸಿದರು. ಬಿರುಸಿನಿಂದ ಮತದಾನ ನಡೆಯಿತು. ಕಾಂಗ್ರೆಸ್‌ನಿಂದ ಎಂ.ರಾಮಪ್ಪ, ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಜೆಡಿಎಸ್‌ನ ರಮೇಶಬಾಬು ಹಾಗೂ ಪಕ್ಷೇತರರಾಗಿ ನಗರದ ರಾಯಲ್‌ ವಿದ್ಯಾಸಂಸ್ಥೆಯ ರಾಯಲ್‌ ರಾಮಕೃಷ್ಣಾರೆಡ್ಡಿ ಸೇರಿದಂತೆ 14 ಮಂದಿ ಕಣದಲ್ಲಿದ್ದಾರೆ.

ನಗರದ ಮತದಾನ ಕೇಂದ್ರದಲ್ಲಿ ಒಟ್ಟು 754 ಮತದಾರರು ನೊಂದಣಿಯಾಗಿದ್ದರು. 704 ಮಂದಿ ಮತದಾನ ಮಾಡಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಬೆಂಬಲಿಗರು ಮತದಾನ ಕೇಂದ್ರದ ಮುಂದೆ ಶಾಮಿಯಾನ ಹಾಕಿ ಮತಯಾಚನೆ ಮಾಡುತ್ತಿದ್ದರು. ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಟಿ.ಎನ್‌.ರಾಜಗೋಪಾಲ್‌ ಸಹ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT