ಜಲಾವೃತ ಭೀತಿಗೆ ಬದುಕು ಮೂರಾಬಟ್ಟೆ

7
ಮನೆಗೆ ನುಗ್ಗುವ ಮಳೆನೀರಿಗೆ ಸಿಗದ ಶಾಶ್ವತ ಪರಿಹಾರ, ಚನ್ನಕಿಹೊಂಡಕ್ಕೆ ನುಗ್ಗುವ ನೀರು–ನಿವಾಸಿಗಳಿಗೆ ಸಂಕಷ್ಟ

ಜಲಾವೃತ ಭೀತಿಗೆ ಬದುಕು ಮೂರಾಬಟ್ಟೆ

Published:
Updated:
ಜಲಾವೃತ ಭೀತಿಗೆ ಬದುಕು ಮೂರಾಬಟ್ಟೆ

ಚಿತ್ರದುರ್ಗ: ಆಗಸದಲ್ಲಿ ಮೋಡ ಕಪ್ಪಾದಂತೆ ಗುಮಾಸ್ತರ ಕಾಲೊನಿಯ ನಿವಾಸಿಗಳ ಮೊಗದಲ್ಲಿ ಮಂದಹಾಸ ಮಾಯವಾಗುತ್ತದೆ. ಮಳೆ ಆರಂಭವಾದರೆ ಚನ್ನಕಿ ಹೊಂಡ ಗೃಹಿಣಿಯರ ಆತಂಕ ಇಮ್ಮಡಿಗೊಳ್ಳುತ್ತದೆ. ವರುಣ ಅರ್ಧಗಂಟೆ ಧರೆಗೆ ಇಳಿದರೆ ತಗ್ಗು ಪ್ರದೇಶದ ಜನರ ಬದುಕು ಮೂರಾಬಟ್ಟೆಯಾಗುತ್ತದೆ.

ಮಲೆನಾಡು, ಕರಾವಳಿಯಷ್ಟು ಮಳೆ ಚಿತ್ರದುರ್ಗದಲ್ಲಿ ಆಗದಿದ್ದರೂ, ಮುಂಗಾರು ಹಾಗೂ ಹಿಂಗಾರಿನಲ್ಲಿ ವರುಣನ ಮುನಿಸು ಎದುರಿಸುವ ಶಕ್ತಿ ಇಲ್ಲ. ಬರದ ನಾಡು ಎಂದೇ ಹೆಸರಾಗಿರುವ ಜಿಲ್ಲೆ, ಮಳೆಗಾಲವನ್ನೂ ಭೀತಿಯಿಂದ ಎದುರು ನೋಡುತ್ತಿದೆ.

ಪ್ರತಿ ಮಳೆಗಾಲದಲ್ಲಿ ಜಲಾವೃತ ಆದೀತಿಂಬ ಭೀತಿ ಎದುರಾಗುತ್ತ.ಅದನ್ನು ಹೋಗಲಾಡಿಸಲು ಸ್ಥಳೀಯ ಆಡಳಿತ ನಡೆಸಿದ ಪ್ರಯತ್ನಗಳು ಫಲನೀಡಿದಂತೆ ಕಾಣುತ್ತಿಲ್ಲ. ಪ್ರಸಕ್ತ ವರ್ಷದ ಪೂರ್ವ ಮುಂಗಾರಿನಲ್ಲಿ ಗುಮಾಸ್ತರ ಕಾಲೊನಿಗೆ ಎರಡು ಬಾರಿ ನೀರು ನುಗ್ಗಿದೆ. ನೆಹರೂ ನಗರ, ಪಿಎನ್‌ಟಿ ಕ್ವಾರ್ಟರ್ಸ್, ಐಯುಡಿಪಿ ಬಡಾವಣೆ, ಬುದ್ಧನಗರ, ಕೆಳಗೋಟೆ ಸೇರಿ ತಗ್ಗುಪ್ರದೇಶದ ಜನತೆ ಜಲಾವೃತ ಭೀತಿಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ.

ಜಲಮೂಲವಾಗಿದ್ದ ಚನ್ನಕಿಹೊಂಡ ಬಡಾವಣೆಯಾಗಿ ಪರಿವರ್ತನೆಯಾಗಿದೆ. 50 ವರ್ಷಗಳಿಂದ ನೆಲೆಸಿದವರೂ ಇಲ್ಲಿದ್ದಾರೆ. ತಗ್ಗುಪ್ರದೇಶದಲ್ಲಿರುವ ಬಡಾವಣೆಗೆ ಮಳೆನೀರು ಸಹಜವಾಗಿ ನುಗ್ಗುತ್ತದೆ. ಸಮಸ್ಯೆ ಎದುರಾದಾಗ ಸಮರೋಪಾದಿಯಲ್ಲಿ ಕೆಲಸ ಮಾಡುವ ನಗರಸಭೆ, ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

‘ಭೋವಿ ಕಾಲೊನಿ ಸೇರಿ ಮೇಲ್ಭಾಗದ ಬಡಾವಣೆಯ ಮಳೆನೀರು ಚನ್ನಕಿಹೊಂಡಕ್ಕೆ ಬರುತ್ತದೆ. ನೀರು ಹೊಂಡಕ್ಕೆ ಹರಿದುಬರದಂತೆ ತಡೆಯಲು ಹಲವು ಬಾರಿ ನಗರಸಭೆಗೆ ಮನವಿ ಮಾಡಿಕೊಂಡಿದ್ದೇವೆ. ಚರಂಡಿಗಳನ್ನು ಸುಸ್ಥಿತಿಯಲ್ಲಿಟ್ಟರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಬಡಾವಣೆಯ ಜನರ ಬದುಕು ಕಿತ್ತುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ರತ್ನಮ್ಮ.

ಸಣ್ಣ ಮಳೆ ಸುರಿದರೂ ಇಲ್ಲಿನ ಹತ್ತಾರು ಮನೆಗಳಿಗೆ ನೀರು ನುಗ್ಗುತ್ತದೆ. ಈ ನೀರು ಹರಿದು ಹೋಗುವವರೆಗೂ ಕಾಯುವುದು ಅನಿವಾರ್ಯವಾಗಿದೆ. ಕೊಳಕು ತುಂಬಿದ ಮನೆಯನ್ನು ಶುಚಿ ಗೊಳಿಸುವುದೇ ಗೃಹಿಣಿಯರ ಕೆಲಸವಾಗಿದೆ. ಕಾಯಿಲೆ ಹರಡದಂತೆ ಎಚ್ಚರ ವಹಿಸುವುದು ಮಹಿಳೆಯರ ಮುಂದಿರುವ ಸವಾಲು.

ಗುಮಾಸ್ತರ ಕಾಲೊನಿಯಲ್ಲಿ 20 ವರ್ಷಗಳಿಂದ ನೆಲೆಸಿರುವ ಅಶೋಕ ಕುಮಾರಿ ಅವರಿಗೆ ಐದು ವರ್ಷಗಳಿಂದ ಜಲಾವೃತ ಸಮಸ್ಯೆ ಕಾಡುತ್ತಿದೆ. ದಾವಣಗೆರೆ ರಸ್ತೆಯ ಮೇಲ್ಭಾಗದ ಬಡಾವಣೆಯ ನೀರು ರಭಸವಾಗಿ ಹರಿದು ಕಾಲೊನಿಯ 1 ಮತ್ತು 2 ನೇ ಕ್ರಾಸಿನ ಮನೆಗಳಿಗೆ ನುಗ್ಗುತ್ತಿದೆ. ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ನಗರಸಭೆಗೆ ಅಲೆದು ಸಾಕಾಗಿದ್ದಾರೆ.

‘ಒಮ್ಮೆ ನೀರು ನುಗ್ಗಿದರೆ ಮನೆಯಲ್ಲಿ ಮೊಣಕಾಲಿ ನವರೆಗೆ ನೀರು ನಿಲ್ಲುತ್ತದೆ. ಕಾರು ನಿಲುಗಡೆಗೆ ನಿರ್ಮಿಸಿದ ಶೆಡ್‌ ಪೂರ್ಣ ಮುಳುಗಡೆ ಯಾಗುತ್ತದೆ. ಮೇ ತಿಂಗಳಲ್ಲಿ ಎರಡು ಬಾರಿ ನೀರು ನುಗ್ಗಿದೆ. ರಾತ್ರಿ ಮಳೆ ಸುರಿಯಲಾರಂಭಿಸಿದರೆ ನಿದ್ದೆ ಬರುವುದಿಲ್ಲ’ ಎನ್ನುತ್ತಾರೆ ಕಾಲೊನಿಯ 1 ನೇ ಕ್ರಾಸ್‌ ನಿವಾಸಿ ಅಶೋಕಕುಮಾರಿ.

ನಗರದ ಹೊರಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ನಿರ್ಮಿ ಸಿದ ಬಹುತೇಕ ಸೇತುವೆಗಳ ಸಮೀಪವೂ ಇದೇ ಸಮಸ್ಯೆ ಎದುರಾಗುತ್ತಿದೆ. ತುರುವನೂರು ಗೇಟ್‌, ಮೆದೆಹಳ್ಳಿ ಸಮೀಪದ ರಸ್ತೆಗಳಲ್ಲಿ ವಾಹನ ಸಂಚಾರ ದುಸ್ತರವಾಗುತ್ತದೆ.

ಮಳೆಗೆ ಸಜ್ಜಾಗದ ನಗರ– ಸರಣಿ ಭಾಗ–2

ಪೂರ್ವ ಮುಂಗಾರು ವಾಡಿಕೆಗಿಂತ ಹೆಚ್ಚು ಸುರಿದಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಚುರುಕುಪಡೆದಿದ್ದು, ರೈತರು ಹರ್ಷಗೊಂಡಿದ್ದಾರೆ. ಆದರೆ, ಋತು ಬದಲಾವಣೆಗೆ ಹೊಂದಿಕೊಳ್ಳಲು ನಗರದ ಬಡಾವಣೆಗಳು ಸಜ್ಜಾದಂತೆ ಕಾಣುತ್ತಿಲ್ಲ. ಮಳೆ ಸುರಿದಾಗ ಸ್ಥಳೀಯರನ್ನು ಕಾಡುವ ಮತ್ತದೇ ಸಮಸ್ಯೆಗಳ ಮೇಲೆ ‘ಪ್ರಜಾವಾಣಿ’ ಬೆಳಕು ಚಲ್ಲುವ ವರದಿಗಳ ಸರಣಿ ಆರಂಭಿಸಿದೆ.

ದುರಸ್ತಿಯಾಗದ ಪಂಪ್‌ಸೆಟ್‌

ಚನ್ನಕಿಹೊಂಡಕ್ಕೆ ನುಗ್ಗುವ ಮಳೆನೀರನ್ನು ಹೊರಹಾಕಲು ಅಳವಡಿಸಿದ್ದ ಪಂಪ್‌ಸೆಟ್‌ಗಳು ಒಂದೂವರೆ ವರ್ಷದಿಂದ ದುರಸ್ತಿ ಕಾಣದೆ ಹಾಳಾಗಿವೆ.

ಮಳೆನೀರನ್ನು ಪಂಪ್ ಮಾಡಿ ಮೇಲ್ಭಾಗದ ಭೋವಿ ಕಾಲೊನಿಯ ಚರಂಡಿಗೆ ಬಿಡುವ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಆರಂಭದ ಕೆಲ ವರ್ಷ ಇದು ಸರಿಯಾಗಿ ಕಾರ್ಯನಿರ್ವಹಿಸಿತ್ತು. ಮಳೆನಿಂತ ಕೆಲವೇ ಗಂಟೆಗಳಲ್ಲಿ ನೀರನ್ನು ಹೊರಹಾಕಿ ಸ್ಥಳೀಯರು ನಿರಾಳರಾಗುತ್ತಿದ್ದರು. ಸ್ಥಳೀಯ ಆಡಳಿತದ ನಿರ್ವಹಣೆಯ ಕೊರತೆಯಿಂದ ಇದು ಹಾಳಾಗಿದೆ.

‘ಮೋಟರ್‌ ದುರಸ್ತಿ ಮಾಡುವಂತೆ ಹತ್ತಾರು ಬಾರಿ ನಗರಸಭೆಗೆ ಅಲೆದಿದ್ದೇವೆ. ಯಾರೊಬ್ಬರೂ ಸರಿಯಾಗಿ ಸ್ಪಂದಿಸಿಲ್ಲ. ಪ್ರತಿ ಮನೆಯಿಂದ ₹ 20 ಸಂಗ್ರಹಿಸಿ ದುರಸ್ತಿ ಮಾಡಿಕೊಳ್ಳುತ್ತಿದ್ದೇವೆ. ಇತ್ತೀಚಿಗೆ ಇದು ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಚನ್ನಕಿಹೊಂಡದ ನಿವಾಸಿ ದೇವರಾಜ್‌.

ಮೇಲ್ಭಾಗದಲ್ಲಿರುವ ಭೋವಿ ಕಾಲೊನಿಯ ಚರಂಡಿಗಳು ಸುಸ್ಥಿತಿಯಲ್ಲಿದ್ದರೆ ಮಳೆನೀರು ನುಗ್ಗುವುದಿಲ್ಲ. ಮಳೆನೀರು ತಡೆಯುವಂತೆ ಮಾಡಿಕೊಂಡ ಮನವಿಗೆ ನಗರಸಭೆ ಸ್ಪಂದಿಸುತ್ತಿಲ್ಲ

ರತ್ನಮ್ಮ, ಗೃಹಿಣಿ, ಚನ್ನಕಿಹೊಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry