ಪೈಪ್‌ಲೈನ್‌ ಒಡೆದು ಚರಂಡಿ ಪಾಲಾದ ನೀರು

7
ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ಸರಬರಾಜು ಆಗುವ ನೀರು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

ಪೈಪ್‌ಲೈನ್‌ ಒಡೆದು ಚರಂಡಿ ಪಾಲಾದ ನೀರು

Published:
Updated:
ಪೈಪ್‌ಲೈನ್‌ ಒಡೆದು ಚರಂಡಿ ಪಾಲಾದ ನೀರು

ರೋಣ: ಪಟ್ಟಣದ ಮಲ್ಲಿಕಾರ್ಜುನ ಚಿತ್ರಮಂದಿರದ ಎದುರು ಹಾದು ಹೋಗಿರುವ ರಾಜಕಾಲುವೆಯಲ್ಲಿ ಅಳವಡಿಸಿರುವ ಬಹು ಗ್ರಾಮ ಕುಡಿಯುವ ನೀರಿನ ಪೈಪ್ ಒಡೆದಿದ್ದರಿಂದ ಶುಕ್ರವಾರ ಸಾಕಷ್ಟು ನೀರು ರಾಜಕಾಲುವೆಯ ಪಾಲಾಯಿತು.

ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ಮಲಪ್ರಭಾ ಬಲದಂಡೆ ಕಾಲುವೆ ಮುಖಾಂತರವಾಗಿ ಈ ಪೈಪ್ ಲೈನ್ ಮೂಲಕ ನೀರು ಸರಬರಾಜು ಆಗುತ್ತಿದ್ದು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಪೈಪ್ ಲೈನ್ ಒಡೆದು ನೀರು ಚರಂಡಿ ಪಾಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಸಾರ್ವಜನಿಕರ ಆಕ್ರೋಶ:  ಕಳೆದ ಎರಡು ತಿಂಗಳಿಂದ ಸಮರ್ಪಕವಾಗಿ ನೀರು ಸಿಗದೆ ಜನರು ಪರದಾಡುತ್ತಿದ್ದು ವಿವಿಧ ವಾರ್ಡ್‌ಗಳಿಗೆ ಹದಿನೈದು ಇಪ್ಪತ್ತು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಸಮರ್ಪಕ ನೀರು ಪೂರೈಸುವಂತೆ ಪುರಸಭೆಯ ವಿರುದ್ಧ ಜನರು ಆಕ್ರೋಶಗೊಂಡು ಬೀದಿಗಿಳಿದು ಪ್ರತಿಭಟನೆಯನ್ನು ಸಹ ನಡೆಸಿದ್ದಾರೆ. ಮೋಟಾರ್ ಕೆಟ್ಟಿದೆ. ನೀರು ಶುದ್ಧೀಕರಣವಾಗಿಲ್ಲ ಎಂಬಿತ್ಯಾದಿ ಉತ್ತರಗಳನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ ಈಗ ಸಾಕಷ್ಟು ನೀರು ಚರಂಡಿ ಪಾಲಾಗಿದ್ದು ಇದಕ್ಕೆ ಯಾರು ಹೊಣೆಗಾರರು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದ್ದು ಹದಿನೈದು ದಿನಗಳಿಗೊಮ್ಮೆ ನೀರು ಬರುತ್ತಿವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರುವುದು ಸರಿಯಲ್ಲ. ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಸಬೇಕು ಹಾಗೂ ಮುಂದೆ ಈ ರೀತಿಯಾದ ಘಟನೆಯಾಗದಂತೆ ಜಾಗೃತಿ ವಹಿಸಬೇಕು ಎಂದು ಪಟ್ಟಣದ ನಿವಾಸಿ ಶಿವಣ್ಣ ನವಲಗುಂದ ಆಗ್ರಹಿಸಿದರು.

ಅಧಿಕಾರಿಗಳಿಂದ ಪರಿಶೀಲನೆ: ಪೈಪ್ ಒಡೆದು ನೀರು ಪೋಲಾಗುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಗುತ್ತಿಗೆ ಪಡೆದ ತಹಲ್ ಕಂಪನಿಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಪರಿಶೀಲಿಸಿದರು.

‘ರಾಜಕಾಲುವೆಯಲ್ಲಿ ಹಾಕಿರುವ ಪೈಪ್ ಲೈನ್‌ಗೆ ಕಾಂಕ್ರೀಟ್ ಹಾಗೂ ಪೈಪ್ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಆಧಾರ ಇಲ್ಲದಿರುವುದರಿಂದ ನೀರಿನ ರಭಸಕ್ಕೆ ಪೈಪ್ ಒಡೆದಿದೆ. ಕೂಡಲೇ ಯಂತ್ರಗಳನ್ನು ತಂದು ಇದನ್ನು ಸರಿಪಡಿಸುತ್ತೇವೆ’ ಎಂದು ಭರವಸೆ ನೀಡಿದರು.

ಪ್ರಾಯೋಗಿಕ ಪರೀಕ್ಷೆ ವೇಳೆ ನೀರಿನ ರಭಸಕ್ಕೆ ಪೈಪ್ ಒಡೆದಿದೆ. ಒಡೆದ ಪೈಪ್ಅನ್ನು ನಮ್ಮ ಕಂಪನಿಯ ಸಿಬ್ಬಂದಿ ಆದಷ್ಟು ಬೇಗ ಸರಿಪಡಿಸಲಿದ್ದಾರೆ

ದೇವರಾಜ ದೇಸಾಯಿ, ಯೋಜನಾ ಎಂಜಿನಿಯರ್‌ ತಹಲ್ ಗ್ರೂಪ್ ಕಂಪನಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry