ನೆತ್ತರ ಕೆಂಪು, ಕರಗಿದ ಕ್ಯಾಂಡಿ ಮತ್ತು ಕಡ್ಡಿ...

7

ನೆತ್ತರ ಕೆಂಪು, ಕರಗಿದ ಕ್ಯಾಂಡಿ ಮತ್ತು ಕಡ್ಡಿ...

Published:
Updated:
ನೆತ್ತರ ಕೆಂಪು, ಕರಗಿದ ಕ್ಯಾಂಡಿ ಮತ್ತು ಕಡ್ಡಿ...

ಕವಿ, ಕಥೆಗಾರರಾಗಿ ಓದುಗರಿಗೆ ಪರಿಚಿತರಾದ ವಿ.ಎಂ. ಮಂಜುನಾಥರ ಬರಹಗಳು ಮೊದಲ ನೋಟಕ್ಕೆ ಗಮನಸೆಳೆಯವುದು ಭಿನ್ನ ವಸ್ತುವಿನಿಂದಾಗಿ. ನಗರದ ಅಂಚುಗಳಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗುವ ದಲಿತರ ಬದುಕಿನ ಯಾತನೆಗಳನ್ನು ನಿಜ ಜೀವನದಿಂದ ಅನಾಮತ್ತಾಗಿ ಎತ್ತಿಕೊಂಡು ಕೃತಿಗಳಲ್ಲಿಟ್ಟಂತೆ ಚಿತ್ರಿಸುವುದು ಅವರ ಬರಹಗಳ ವಿಶೇಷ. ಕೆಲವೊಮ್ಮೆ ಈ ಪಾತ್ರಗಳು, ವಾಸ್ತವ ಕೂಡ ಕಲ್ಪನೆಯೆಂದು ಓದುಗರಿಗೆ ಭಾಸವಾಗುವ  ಮಟ್ಟಿಗೆ ವಿಚಿತ್ರವಾಗಿ ವಿಕ್ಷಿಪ್ತವಾಗಿ ಕಾಣಿಸುತ್ತವೆ.

ಕನ್ನಡದ ದಲಿತ ಸಾಹಿತ್ಯದಲ್ಲಿ ಊರುಕೇರಿಗಳಲ್ಲಿನ ದಲಿತರ ಬದುಕು ಚಿತ್ರಣಗೊಂಡಿರುವುದು ಹೆಚ್ಚು. ಆದರೆ, ಮಂಜುನಾಥ್‌ರ ಕೃತಿಗಳಲ್ಲಿ ಕಾಣಿಸುವುದು ನಗರದೊಳಗಿನ ಹಾಗೂ ನಗರದ ಅಂಚುಗಳಲ್ಲಿ ಬಾಳುತ್ತಿರುವ ದೀನದಲಿತರು.

ತಮ್ಮನ್ನು ಕಾಡುವ ಚಿತ್ತಗಳ ಚಿತ್ರಣಕ್ಕೆ ಕಥೆ–ಕವಿತೆಗಳ ಕಿರಿದಾದ ಬೀಸು ಸಾಲದ್ದೆನ್ನಿಸಿದ್ದರಿಂದಲೋ ಏನೋ ಮಂಜುನಾಥ್‌ ಕಾದಂಬರಿ ಪ್ರಕಾರಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ‘ಅಸ್ಪೃಶ್ಯ ಗುಲಾಬಿ’ ಅವರ ಎರಡನೇ ಕಾದಂಬರಿ (ಐದು ವರ್ಷಗಳ ಹಿಂದೆ ಪ್ರಕಟವಾದ ‘ರಾಯಲ್‌ ಎನ್‌ಫೀಲ್ಡ್‌’ ಚೊಚ್ಚಿಲ ಕಾದಂಬರಿ.) ಕಥೆ–ಕವಿತೆಗಳ ಹೀರೊ ಹೀರೊಯಿನ್‌ಗಳೇ ಇಲ್ಲೂ ಕಿಕ್ಕಿರಿದಿದ್ದಾರೆ.

ಅಪರಿಮಿತ ಜೀವನೋತ್ಸಾಹವನ್ನು ಒಳಗೊಂಡ ದಲಿತ ತರುಣಿಯೊಳೊಬ್ಬಳ ಬದುಕಿನ ದುರಂತ ಕಥೆ ‘ಅಸ್ಪೃಶ್ಯ ಗುಲಾಬಿ’ ಕಾದಂಬರಿಯದು. ಕಥಾನಾಯಕಿ ದೀಪಾಳನ್ನು ಅಸ್ಪೃಶ್ಯ ಗುಲಾಬಿ ಎಂದು ಕಾದಂಬರಿಕಾರರು ಕರೆದರೂ, ಆಕೆಯ ಸ್ಪರ್ಶಕ್ಕೆ ಹಾತೊರೆಯುವ ಗಂಡಸರು ಕೃತಿಯುದ್ದಕ್ಕೂ ತುಂಬಿಕೊಂಡಿದ್ದಾರೆ. ಕ್ಯಾಂಡಿ ಮಾರುವ ಈ ಹುಡುಗಿಯ ಬದುಕನ್ನು ಅವಳ ಸಹವಾಸಕ್ಕೆ ಬಂದ ಗಂಡಸರೆಲ್ಲ ಸೀಪಿ ಎಸೆಯುತ್ತಾರೆ. ಅಂತಿಮವಾಗಿ ಅವಳ ಬದುಕು ಕ್ಯಾಂಡಿಯ ಕೊನೆಗೆ ಉಳಿಯುವ ಕಡ್ಡಿಯಂತಿದೆ.

ಇಲ್ಲಿ ಕಾಣಿಸುವುದು ಎರಡು ಬಗೆಯ ಶೋಷಣೆ. ಅಧಿಕಾರಬಲದಿಂದ ಹಾಗೂ ಜಾತಿಬಲದಿಂದ ನಡೆಯುವ ದಲಿತರ ಶೋಷಣೆ ಮೊದಲನೆಯದು. ದಲಿತ ಸಮೂಹದೊಳಗೇ ನಡೆಯುವ ಹೆಣ್ಣಿನ ಶೋಷಣೆ ಇನ್ನೊಂದು ಬಗೆಯದು. ಇಲ್ಲಿನ ಹೆಣ್ಣುಮಕ್ಕಳು ದಲಿತರಲ್ಲಿ ದಲಿತರು. ಕಥಾನಾಯಕಿ ದೀಪಾ ಹಾಗೂ ಅವಳ ತಂಗಿ ವಸಂತ, ತಾಯಿ ಸುಗುಣ, ಕ್ಯಾಂಡಿ ಮಾರುವ ಹುಡುಗಿಯರು – ಎಲ್ಲರ ಬದುಕಿನದೂ ಒಂದೇ ಕಥೆ. ಬಯಕೆಗಳ ಜೊತೆಗೆ ಬದುಕಿನ ಅನಿವಾರ್ಯತೆಗೂ ಅವರಿಗೆ ದೇಹ ಒದಗಿಬರುತ್ತದೆ.

ಇಲ್ಲಿನ ಹೆಣ್ಣುಗಳಿಗೆ ತಮ್ಮ ಬದುಕಿನ ಬಗ್ಗೆ ವಿಷಾದವಿಲ್ಲ, ಪಾಪಪ್ರಜ್ಞೆಯಿಲ್ಲ. ಸುಗುಣ ಗಿರಾಕಿಯ ತೆಕ್ಕೆಗೆ ಹೋಗುವುದು ಅವಳ ಗಂಡ ಹಾಗೂ ಮಕ್ಕಳಿಗೆ ತಿಳಿಯದ್ದೇನಲ್ಲ. ದೀಪಾಳನ್ನು ಪ್ರಿಯಕರನ‌ ಜೊತೆಗೆ ಅನೇಕ‌ ಪುರುಷರು ಬಳಸಿಕೊಳ್ಳುತ್ತಾರೆ. ಆದರೆ, ಎಲ್ಲವನ್ನೂ ಎಲ್ಲರನ್ನೂ ಸಲೀಸಾಗಿ‌ ಕೊಡವಿಕೊಂಡು ಹೊಸ ದಿನಕ್ಕೆ ಸಜ್ಜಾಗುವ ತಾಯಿ–ಮಗಳ ಜೀವನಪ್ರೀತಿ ಅಚ್ಚರಿಹುಟ್ಟಿಸುವಂತಿದೆ.

ಕ್ಯಾಂಡಿ ಮಾರುವ, ಪೋಲಿ ಪುಸ್ತಕಗಳನ್ನು ಮಾರುವ, ದಂಧೆ ಮಾಡುವ ಹೆಣ್ಣಾಗಿ ದೀಪಾ ಕಾದಂಬರಿಯುದ್ದಕ್ಕೂ ಆವರಿಸಿಕೊಳ್ಳುತ್ತಾಳೆ. ನಗರದ ಮುಸುಕುಹೊದ್ದ ಮೂಲೆಮುರುಕುಗಳು ಕಾದಂಬರಿಯಲ್ಲಿ ತೆರೆದುಕೊಳ್ಳುತ್ತವೆ. ಹಣ, ಅಧಿಕಾರ, ಹೆಂಡವನ್ನು ನೀಡಿ ಹೆಣ್ಣುಗಳನ್ನು ಆವರಿಸಿಕೊಳ್ಳುವ ಸೈನಿಕರು ಇಲ್ಲಿದ್ದಾರೆ. ವರ್ತಮಾನದ ದಲಿತ ನಾಯಕರು ಕಥೆಯಲ್ಲಿ ಬಂದುಹೋಗುತ್ತಾರೆ. ಮಾತುಗಳಲ್ಲಿ ಮರುಳು ಮಾಡುತ್ತ, ಮರೆಯಲ್ಲಿ ಕಚ್ಚೆ ಬಿಚ್ಚುವ ನಾಯಕರ ಚಿತ್ರಣ ಕಥೆಯಂತೆಯೂ ಕಥೆಯನ್ನು ಹೋಲುವಂತಹ ವಾಸ್ತವದಂತೆಯೂ ಓದುಗರಿಗೆ ಕಾಣಿಸುವುದು ಕಾದಂಬರಿಕಾರರ ಉದ್ದೇಶದಂತಿದೆ.

ಕಾದಂಬರಿಯಲ್ಲಿನ ಸ್ತ್ರೀಪಾತ್ರಗಳು ತಮ್ಮ ಮೇಲಿನ ದಾಳಿಗಳನ್ನು ಕೆಲವೊಮ್ಮೆ ಸಹಜವಾಗಿ ಒಪ್ಪಿಕೊಳ್ಳುತ್ತವೆ, ಮತ್ತೆ ಕೆಲವೊಮ್ಮೆ ದಿಟ್ಟತನದಿಂದ ಎದುರಿಸುತ್ತವೆ. ಆದರೆ, ಈ ದಾಳಿಗಳು ಓದುಗರನ್ನು ಬೆಚ್ಚಿಬೀಳಿಸುವಂತಿವೆ. ಇಲ್ಲಿನ ಎಲ್ಲ ಗುಲಾಬಿಗಳ ಬದುಕೂ ಯಾರದೋ ಕಾಲ ಕೆಳಗೆ ನವೆದು ಕೊನೆಗೊಳ್ಳುತ್ತದೆ. ದೀಪಾ ಹಾಗೂ ಅವಳ ತಾಯಿ ಸುಗುಣಳ ಬದುಕಂತೂ ಅತ್ಯಂತ ದಾರುಣವಾಗಿ ಕೊನೆಗೊಳ್ಳುತ್ತದೆ.

ಬೆಚ್ಚಿಬೀಳಿಸುವ ಸನ್ನಿವೇಶಗಳೇ ಹೆಚ್ಚಾಗಿರುವ ಕಥನದಲ್ಲಿ, ಕಾದಂಬರಿಯ ಆರಂಭದಲ್ಲಿನ ಮಳೆ ಹಾಗೂ ಮೀನು ಹಿಡಿಯುವ ಪ್ರಸಂಗ ಅತಿ ರಮಣೀಯವಾದುದು. ತರುಣಿಯರ ಯೌವನದ ಕಾವನ್ನೂ ಚೆಲುವನ್ನೂ ಮೈಗೂಡಿಸಿಕೊಂಡಂತೆ ಸುರಿದ ಮಳೆಯಲ್ಲಿ ಉಂಟಾಗುವ ಮೀನುಗಳ ಶಿಕಾರಿಯ ದೃಶ್ಯಗಳು ಸೊಗಸಾಗಿದೆ. ಮೀನುಗಳ ಜೊತೆಗೆ ಪ್ರಣಯದ ಶಿಕಾರಿಯೂ ಸೇರಿಕೊಂಡಿದೆ.

ಸತ್ತ ಎಮ್ಮೆಯ ಮಾಂಸವನ್ನು ಹಂಚಿಕೊಳ್ಳುವ ಪ್ರಸಂಗ ಕಾದಂಬರಿಯ ಮತ್ತೊಂದು ಕುತೂಹಲಕರ ಭಾಗ. ಮಾಂಸದ ಹಂಚಿಕೆಯಲ್ಲಿ ಮೋಸಕ್ಕೆ ಒಳಗಾಗುವ ಜಮಾಲ, ‘ನನ್ಗೆ ವೇಸ್ಟ್‌ ಮಾಂಸ ಮಡಗಿದ್ದೀರಲ್ರೋ’ ಎಂದು ಕೊರಗುತ್ತಾನೆ. ಕೊನೆಗೆ ಆ ಮಾಂಸವೂ ಕೈ ತಪ್ಪೀತೆಂದು ಅಳುಕಿ, ತಲೆಯ ಮೇಲಿನ ಬಟ್ಟೆಯಲ್ಲಿ ‘ವೇಸ್ಟ್‌ ಮಾಂಸ’ವನ್ನು ಸುತ್ತಿಕೊಳ್ಳುತ್ತಾನೆ. ಆ ಬಟ್ಟೆ ಪಕ್ಷವೊಂದರ ಧ್ವಜವಾಗಿರುವುದು ಜಮಾಲನ ಪಾಲಿಗೆ ಆಕಸ್ಮಿಕವಾದರೂ, ದಲಿತರ ಆಹಾರಕ್ಕೆ ಸಂಬಂಧಿಸಿದ ಚರ್ಚೆಯ ಹಿನ್ನೆಲೆಯಲ್ಲಿ ಈ ಸನ್ನಿವೇಶಕ್ಕೆ ಬೇರೆಯದೇ ಧ್ವನಿಯಿದೆ.

ಮಂಜುನಾಥರ ಗುಲಾಬಿ ಲಂಕೇಶರ‌ ‘ಅಕ್ಕ’ ಕಾದಂಬರಿಯನ್ನು, ದೇವೀರಿಯನ್ನು ನೆನಪಿಸುತ್ತಾಳೆ. ಅಲ್ಲಿನ ದೇವೀರಿಯಷ್ಟು ದೀಪಾ ಪ್ರಬುದ್ಧೆಯಲ್ಲವಾದರೂ, ಇಬ್ಬರ ಬದುಕಿನ‌ ಗತಿ ಒಂದೇ ಆಗಿದೆ. ‘ಅಕ್ಕ’ ಕೃತಿಯಲ್ಲಿ ದೇವೀರಿಯ ತಮ್ಮ ಕ್ಯಾತನಿದ್ದರೆ, ಇಲ್ಲಿ ದೀಪಾಳ ತಂಗಿ ವಸಂತ ಇದ್ದಾಳೆ. ಕ್ಯಾತ ಹಾಗೂ ವಸಂತ ಇಬ್ಬರ ಕಣ್ಣ ಬೆಳಕಿನಲ್ಲಿ ದೇವೀರಿ ಹಾಗೂ ದೀಪಾಳ ಬದುಕು ತೆರೆದುಕೊಳ್ಳುತ್ತದೆ.

ಆದರೆ, ಅಕ್ಕ ತೊರೆದು ಒಂಟಿಯಾದ ನಂತರವೂ ಕ್ಯಾತನ ಬದುಕಿನಲ್ಲಿ ಬೆಳ್ಳಿಯ ಗೆರೆಯೊಂದು ಉಳಿದರೆ, ವಸಂತ ತನ್ನ ಅಕ್ಕನ ದಾರಿಯನ್ನೇ ಹಿಡಿಯುತ್ತಾಳೆ. ಭರವಸೆಗಳೇ ಇಲ್ಲದ ಬದುಕುಗಳ ಕಥನ ‘ಅಸ್ಪೃಶ್ಯ ಗುಲಾಬಿ’ಯದು. ವಸಂತಳ ಮೂಲಕ ಅಂಥದೊಂದು ಬೆಳ್ಳಿಕಿರಣದ ಸಾಧ್ಯತೆಯನ್ನೂ ಕಾದಂಬರಿಕಾರರು ಬಳಸಿಕೊಂಡಿಲ್ಲ.

ಇಡೀ ಕೃತಿಯುದ್ದಕ್ಕೂ ಕಾಣಿಸದ ನೈತಿಕತೆಯ ಪ್ರಶ್ನೆ ಕೃತಿಯ ಕೊನೆಯಲ್ಲಿ ಕಾಣಿಸುವುದು ವಿಚಿತ್ರವಾಗಿದೆ. ಬೀದಿಯಲ್ಲಿ ಸಾಯುತ್ತಾ ಬಿದ್ದಿರುವ ದೀಪಾಳನ್ನು ಕಾಮುಕರ ಗುಂಪೊಂದು ಎದುರಾಗುತ್ತದೆ. ಅವಳನ್ನು ಬಳಸಿಕೊಳ್ಳಲು ಗುಂಪು ಮುಂದಾದಾಗ – ‘ಸತ್ತೋಗವ್ಳೆ. ಯಾವನೋ ಮಾಡಿರ ಪಾಪ ನಮ್ಮ ತಲೆಗೆ ಸುತ್ಕಂಬಿಡ್ತದೆ’ ಎಂದು ರೌಡಿಯೊಬ್ಬ ಹೇಳುತ್ತಾನೆ.

‘ನಳನಳಿಸುವ ಅಸ್ಪೃಶ್ಯ ಗುಲಾಬಿಯನ್ನು ಕೇಡಿಯೊಬ್ಬ ಮಾನಸಿಕವಾಗಿ ಸ್ಪರ್ಶಿಸಿ ಗೆದ್ದಿದ್ದ!’ ಎನ್ನುವುದು ಕಾದಂಬರಿಯ ಕೊನೆಯ ಸಾಲು. ಈ ಸಾಲಿನ ಮೂಲಕ ಆವರೆಗೆ, ಕೃತಿಯಿಂದ ದೂರವೇ ಉಳಿದಿದ್ದ ಕಾದಂಬರಿಕಾರರು ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿ ನೈತಿಕತೆಯ ನಿಲುವೊಂದನ್ನು ಸ್ಥಾಪಿಸುವಂತೆ ಕಾಣಿಸುತ್ತದೆ.

ಈ ಧೋರಣೆ ಕೃತಿಗೆ ಹೊರತಾಗಿ ಕಾಣಿಸುವುದು ಮಾತ್ರವಲ್ಲ; ದೀಪಾಳ ಬದುಕನ್ನು ನೋಡುವ ಸಹಜ ದೃಷ್ಟಿಗೆ ಕನ್ನಡಕವೊಂದನ್ನು ತೊಡಿಸಲು ಪ್ರಯತ್ನಿಸುವಂತಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry