ಮುಖ್ಯಶಿಕ್ಷಕರಿಗೆ ಆಯುಕ್ತರಿಂದ ‘ಪಾಠ’

7
ಎಸ್‌ಎಸ್‌ಎಲ್‌ಸಿ ಕಳಪೆ ಸಾಧನೆ:ಶೈಕ್ಷಣಿಕ ವರ್ಷದ ಆರಂಭದಲ್ಲೇ ತಟ್ಟಿದ ಬಿಸಿ

ಮುಖ್ಯಶಿಕ್ಷಕರಿಗೆ ಆಯುಕ್ತರಿಂದ ‘ಪಾಠ’

Published:
Updated:

ಗದಗ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ಕಳಪೆ ಸಾಧನೆಗೆ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಹೆಚ್ಚುವರಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಅವರು ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡರು.

ನಗರದ ಲಯನ್ಸ್ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಫಲಿತಾಂಶ ವಿಶ್ಲೇಷಣೆ ಮಾಡಿದ ಅವರು, ಮುಖ್ಯ ಶಿಕ್ಷಕರಿಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಬಿಸಿ ಮುಟ್ಟಿಸಿದರು.

‘ಶಿಕ್ಷಕರ ಕೊರತೆ, ವಿದ್ಯಾರ್ಥಿಗಳ ಕಲಿಕಾ ಮಟ್ಟ ಕಡಿಮೆ ಇದೆ ಎಂಬಿತ್ಯಾದಿ ಸಬೂಬು ಹೇಳಬೇಡಿ. ಫಲಿತಾಂಶ ಕುಸಿಯಲು ಕಾರಣ ಏನು ಎನ್ನುವುದಕ್ಕೆ ಸಮಾಧಾನಕರ ಉತ್ತರಗಳನ್ನೂ ಹುಡುಕುತ್ತಾ ಕೂರಬೇಡಿ. ಶೈಕ್ಷಣಿಕ ಗುಣಮಟ್ಟ ಸುಧಾರಿಸಲೇಬೇಕು. ಈ ವಿಷಯದಲ್ಲಿ ರಾಜಿ ಇಲ್ಲ. ಈಗಿನಿಂದಲೇ ಸಿದ್ಧತೆ ಪ್ರಾರಂಭಿಸಿ’ ಎಂದು ಬಿಇಒಗಳಿಗೆ ತಾಕೀತು ಮಾಡಿದರು.

‘ರಾಜ್ಯ ಮಟ್ಟದ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯ ಮುಂಡರಗಿ, ರೋಣ, ಗದಗ ಗ್ರಾಮೀಣ, ಗದಗ ಶಹರ ಶಿರಹಟ್ಟಿ, ನರಗುಂದ ಶೈಕ್ಷಣಿಕ ವಲಯಗಳು ತೀರಾ ಕಳಪೆ ಸಾಧನೆ ಮಾಡಿವೆ. ನರಗುಂದ ವಲಯ ರ್‍ಯಾಂಕ್‌ ಪಟ್ಟಿಯಲ್ಲಿ 195ನೇ ಸ್ಥಾನದಲ್ಲಿದೆ ಎಂದರು.

‘ಒಟ್ಟಾರೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಶೇ 67.52 ಫಲಿತಾಂಶದೊಂದಿಗೆ 32ನೇ ಸ್ಥಾನಕ್ಕೆ ಇಳಿದಿದೆ’ ಎಂದರು.ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ಸಂಪೂರ್ಣ ಜವಾಬ್ದಾರಿ ಶಿಕ್ಷಕರದು’ ಎಂದರು.‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆ ಪಡೆದ ಸ್ಥಾನ ಇಂತಿದೆ:

2011-– ಶೇ 75.97 (27ನೇ ಸ್ಥಾನ)

2012– ಶೇ 79.49 (22ನೇ ಸ್ಥಾನ)

2013– ಶೇ 81.43 (18ನೇ ಸ್ಥಾನ)

2014– ಶೇ 85.56 (13ನೇ ಸ್ಥಾನ)

2015– ಶೇ 66.74 (ಕೊನೆಯ ಸ್ಥಾನ)

2016 ಶೇ 64.09 (33ನೇ ಸ್ಥಾನ)

2017 ಶೇ 75.62 (13ನೇ ಸ್ಥಾನ)

2018 ಶೇ 67.52 (32ನೇ ಸ್ಥಾನ)

ಶೇ 40ಕ್ಕಿಂತ ಕಡಿಮೆ ಫಲಿತಾಂಶ: ಶಿಕ್ಷಕರಿಗೆ ನೊಟೀಸ್‌

ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಶಾಲೆಗಳಲ್ಲಿ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಸಿದ್ದಲಿಂಗಯ್ಯ ಹಿರೇಮಠ ಖಡಕ್‌ ಎಚ್ಚರಿಕೆ ನೀಡಿದರು.

ದಿನಕ್ಕೊಂದು ಚಿತ್ರ, ನಕ್ಷಾ ಸಪ್ತಾಹ, ಕಂಠಪಾಠ ಮಾಸ, ಗುಂಪು ಅಧ್ಯಯನ, ತಿಂಗಳಿಗೊಂದು ತಾಯಂದಿರ ಸಭೆ, ಪ್ರಬಂಧ ಮತ್ತು ಪತ್ರ ಲೇಖನ ಚಳವಳಿ, ಗುರೂಜಿ ಬಂದರು ಗುರುವಾರ, ಪಿಕ್‍ನಿಕ್ ಪಜಲ್ ಮುಂತಾದ ಯೋಜನೆಗಳನ್ನು ರೂಪಿಸಬೇಕು.

ಪ್ರಾಚಾರ್ಯರು ಹಾಗೂ ಉಪನ್ಯಾಸಕರು 8, 9 ಮತ್ತು 10ನೇ ತರಗತಿಗಳ ಬೋಧನೆಗೆ ಪೂರಕ ಪಠ್ಯ ರಚಿಸಬೇಕು. ಶೇ 40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಉಪನಿರ್ದೇಶಕರಿಗೆ ಸೂಚಿಸಿದರು.

ಜಿಲ್ಲೆಯ 284 ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ಡಿಡಿಪಿಐ ಜಿ.ರುದ್ರಪ್ಪ, ಬಿಇಒ ಎಂ.ಎ. ರಡ್ಡೇರ್, ಎಚ್.ಎಂ. ಖಾನ್, ಜಿಲ್ಲಾ ಪಂಚಾಯ್ತಿ ಸಿಇಒ ಮಂಜುನಾಥ ಚವ್ಹಾಣ ಇದ್ದರು.

ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ತೀರಾ ಕಳಪೆ ಸಾಧನೆ ಮಾಡಿದೆ. ಈಗಿನಿಂದಲೇ ಫಲಿತಾಂಶ ಸುಧಾರಣೆಗಾಗಿ ಶಾಲಾ ಹಂತದಲ್ಲಿ ಕ್ರಿಯಾಯೋಜನೆ ತಯಾರಿಸಿ

ಮಂಜುನಾಥ ಚವ್ಹಾಣ, ಜಿಲ್ಲಾ ಪಂಚಾಯ್ತಿ ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry