ಬಿಇಒಗೆ ತಾ.ಪಂ. ಅಧ್ಯಕ್ಷೆ ತರಾಟೆ

7

ಬಿಇಒಗೆ ತಾ.ಪಂ. ಅಧ್ಯಕ್ಷೆ ತರಾಟೆ

Published:
Updated:

ರೋಣ: ಹೊಳೆಮಣ್ಣೂರು ಗ್ರಾಮದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ಪರಿಶೀಲಿಸುವಂತೆ ಸೂಚಿಸುತ್ತಾ ಬಂದಿದ್ದರೂ ನಿರ್ಲಕ್ಷ್ಯ ಧೋರಣೆ ತೋರಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ನಂಜುಂಡಯ್ಯ ಅವರನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮವ್ವ ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜರುಗಿದ ಕೆಡಿಪಿ ಸಭೆಯಲ್ಲಿ ನಂಜುಂಡಯ್ಯ ಅವರು ತಮ್ಮ ಇಲಾಖೆಯ ವರದಿಯನ್ನು ಮಂಡಿಸುವ ವೇಳೆ ಮಧ್ಯಪ್ರವೇಶಿಸಿ ಪ್ರೇಮವ್ವ ಮಾತನಾಡಿದರು.

‘ಕಳೆದ ಹಲವು ತಿಂಗಳುಗಳ ಹಿಂದೆಯೇ ಹೊಳೆಮಣ್ಣೂರಿಗೆ ಭೇಟಿ ನೀಡಿ ಅಲ್ಲಿ ಶಾಲೆಯ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದ್ದರೂ ಯಾಕೆ ಭೇಟಿ ನೀಡಿಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎನ್.ನಂಜುಂಡಯ್ಯ ‘ಕೆಲಸದ ಒತ್ತಡದಿಂದ ನಮಗೆ ಅಲ್ಲಿ ಭೇಟಿ ನೀಡಲು ಆಗಿರಲಿಲ್ಲ. ಖಂಡಿತವಾಗಿಯೂ ಹೊಳೆಮಣ್ಣೂರು ಗ್ರಾಮದ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುವೆ’ ಎಂದು ಭರವಸೆ ನೀಡಿದರು.

‘ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಎ.ತರಫದಾರ ಮಾತನಾಡಿ ಕಳೆದ ಹಲವು ತಿಂಗಳಿಂದ ಸವಡಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಿಲ್ಲದೆ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.ಮುಖ್ಯ ಶಿಕ್ಷಕರನ್ನು ಯಾವಾಗ ನೇಮಕ ಮಾಡುತ್ತಿರಿ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಎನ್.ನಂಜುಂಡಯ್ಯ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರಿಂದ ಆದೇಶ ಬಂದ ತಕ್ಷಣವೇ ನೇಮಕ ಮಾಡುವುದಾಗಿ ಸಬೂಬು ನೀಡಿದರು.

ನಂತರ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳನ್ನು ಬಿಟ್ಟರೇ ಬಹುತೇಕ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಇಂದಿರಾ ತೇಲಿ, ಕಾರ್ಯ ನಿರ್ವಾಹಕಾಧಿಕಾರಿ ಎಂ.ವಿ.ಚಳಗೇರಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry