ಗೊಬ್ಬರ ಕೊರತೆ ನೀಗಿಸಲು ಸೂಚನೆ

7
ಹೆಸ್ಕಾಂ ಸಿಬ್ಬಂದಿ ಕಾರ್ಯವೈಖರಿಗೆ ಬೇಸರ, ಅವಘಡ ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸಲು ಆಗ್ರಹ

ಗೊಬ್ಬರ ಕೊರತೆ ನೀಗಿಸಲು ಸೂಚನೆ

Published:
Updated:

ಮುಂಡಗೋಡ: ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ವಾಡಿಕೆಗಿಂತ 94 ಮಿ.ಮೀ ಹೆಚ್ಚು ಮಳೆಯಾಗಿದ್ದು, ಶೇ.30–35ರಷ್ಟು ಭತ್ತ ಹಾಗೂ ಮೆಕ್ಕೆಜೋಳದ ಬಿತ್ತನೆ ಕಾರ್ಯ ನಡೆದಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್‌.ಕುಲಕರ್ಣಿ ಹೇಳಿದರು.

ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಸದ್ಯ 302 ಕ್ವಿಂಟಲ್‌ ಭತ್ತ ಹಾಗೂ 260 ಕ್ವಿಂಟಲ್‌ ಮೆಕ್ಕೆಜೋಳ ಬೀಜಗಳ ಸಂಗ್ರಹವಿದೆ. ಉತ್ತಮ ಹದವಿರುವಾಗ ಡಿಎಪಿ ಗೊಬ್ಬರದ ಬೇಡಿಕೆ ಹೆಚ್ಚಿರುತ್ತದೆ ಎಂದರು.

ಕೆಲವೆಡೆ ಗೊಬ್ಬರದ ಕೊರತೆ ಉಂಟಾಗಿರುವ ದೂರು ಕೇಳಿಬಂದಿದ್ದು, ಎಲ್ಲ ಸೊಸೈಟಿಗಳಲ್ಲಿ ಎಷ್ಟು ಪ್ರಮಾಣದ ಗೊಬ್ಬರವಿದೆ ಎಂಬುದರ ಮಾಹಿತಿ ತರಿಸಿಕೊಂಡು ರೈತರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಗೊಬ್ಬರ ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಟಿ.ಪಾಟೀಲ ಕೃಷಿ ಅಧಿಕಾರಿಗೆ ಸೂಚಿಸಿದರು.

ವಿದ್ಯುತ್‌ ತಂತಿ ತುಂಡಾಗಿ ಬಿದ್ದರೂ ಹೆಸ್ಕಾಂನವರು ಗಮನಹರಿಸುವುದಿಲ್ಲ. ಅನಾಹುತವಾದ ನಂತರ ಪರಿಹಾರ ಕೊಡುವ ಬದಲು ಅವಘಡ ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಮುಖಂಡ ಪಿ.ಜಿ.ತಂಗಚ್ಚನ್‌ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಕೆಲವರು ಚವಡಳ್ಳಿ, ಕೊಪ್ಪ, ಇಂದೂರ ಸೇರಿದಂತೆ ಹಲವೆಡೆ ಲೈನ್‌ಮನ್‌ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಕರೆ ಮಾಡಿದರೂ ಸ್ವೀಕರಿಸದೇ, ನಿಷ್ಕಾಳಜಿ ತೋರುತ್ತಾರೆ. ಲೈನ್‌ಮನ್‌ಗಳು ಕಾರ್ಯನಿರ್ವಹಿಸುವ ಸ್ಥಳದಲ್ಲಿಯೇ ವಾಸ್ತವ್ಯ ಹೂಡಬೇಕು ಎಂದು ಆಗ್ರಹಿಸಿದರು.

ಹೆಸ್ಕಾಂ ಎಇಇ ವಿನಾಯಕ ಪೇಟ್ಕರ್‌ ಮಾತನಾಡಿ, ‘ಲೈನ್‌ಮನ್‌ಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು, ಪೋನ್ ಕರೆ ಸ್ವೀಕರಿಸಲು ಅಗತ್ಯ ಸೂಚನೆ ನೀಡಲಾಗುವುದು. ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಲೈನ್‌ಮನ್‌ಗಳ ಸಂಪರ್ಕ ಸಂಖ್ಯೆ ಪ್ರಕಟಿಸಲಾಗುವುದು’ ಎಂದರು. ಕಳೆದ ವರ್ಷ ಇಂಧನ ಇಲಾಖೆಯಿಂದ ನೀಡಿದ ಎಲ್‌ಇಡಿ ಬಲ್ಬ್‌ಗಳು ದೋಷಪೂರಿತವಾಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ, ಅಂತಹವುಗಳನ್ನು ಬದಲಿಸಿಕೊಡಲು ಇಲಾಖೆ ನಿರ್ಧರಿಸಿದೆ. ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆ ಜಾರಿಯಾಗಿದ್ದು, 2019ರ ಒಳಗೆ ಯಾವ ಮನೆಯೂ ವಿದ್ಯುತ್‌ ಸಂಪರ್ಕದಿಂದ ವಂಚಿತವಾಗಿರಬಾರದು ಎಂದು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಫಲಾನುಭವಿಗಳ ಪಟ್ಟಿ ನೀಡಲು ಸಂಬಂಧಿಸಿದ ಪಿಡಿಒಗಳಿಗೆ ಸೂಚಿಸಲಾಗಿದೆ. ಪಂಡಿತ ದೀನ ದಯಾಳ್‌ ಯೋಜನೆಯಲ್ಲಿದ್ದ ಫಲಾನುಭವಿಗಳನ್ನು ಹೊರತುಪಡಿಸಿ ಉಳಿದವರಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು

ಎಲ್‌.ಟಿ.ಪಾಟೀಲ, ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry