ಜಿಲ್ಲೆಯಲ್ಲಿ ಶಾಂತಿಯುತ ಮತದಾನ

7
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗಯಲ್ಲಿ ಭದ್ರ

ಜಿಲ್ಲೆಯಲ್ಲಿ ಶಾಂತಿಯುತ ಮತದಾನ

Published:
Updated:
ಜಿಲ್ಲೆಯಲ್ಲಿ ಶಾಂತಿಯುತ ಮತದಾನ

ಕೋಲಾರ: ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದ್ದು, 14 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಜಿಲ್ಲೆಯ ಆರೂ ಮತಗಟ್ಟೆಗಳಲ್ಲಿ ನಿಗದಿತ ಸಮಯದಂತೆ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಮೊದಲ ಎರಡು ತಾಸು ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಮತದಾನ ಮಂದ ಗತಿಯಲ್ಲಿ ಸಾಗಿತ್ತು.

ಕೆಜಿಎಫ್‌ ಹೊರತುಪಡಿಸಿ ಇತರೆ ಐದೂ ಕಡೆ ತಹಶೀಲ್ದಾರ್‌ ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಕೆಜಿಎಫ್‌ನಲ್ಲಿ ಮಾತ್ರ ನಗರಸಭೆಯಲ್ಲಿ ಮತಗಟ್ಟೆ ತೆರೆಯಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಅರ್ಹ ಶಿಕ್ಷಕ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡಲಾಗಿತ್ತು.

10 ಗಂಟೆಯ ನಂತರ ಮತದಾನ ಪ್ರಕ್ರಿಯೆ ಚುರುಕುಗೊಂಡಿತು. ಜಿಲ್ಲೆಯ ಸರ್ಕಾರಿ, ಖಾಸಗಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿನ ಅರ್ಹ ಶಿಕ್ಷಕ ಮತದಾರರು ತಂಡೋಪತಂಡವಾಗಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.

ಸಮಯ ಕಳೆದಂತೆ ಮತಗಟ್ಟೆಗಳ ಬಳಿ ಮತದಾರರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕೋಲಾರ ತಾಲ್ಲೂಕಿನ ಮತಗಟ್ಟೆಯ ಬಳಿ ಮತದಾರರ ದೊಡ್ಡ ಸಾಲು ಕಂಡು ಬಂತು. ಮಹಿಳಾ ಹಾಗೂ ಪುರುಷ ಮತದಾರರು ಪ್ರತ್ಯೇಕ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತಗಟ್ಟೆ ಸಿಬ್ಬಂದಿಯು ಮತದಾರರ ಎಡಗೈ ಮಧ್ಯದ ಬೆರಳಿಗೆ ಶಾಹಿ ಗುರುತು ಹಾಕಿದರು.

ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಪ್ರಮುಖ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆಗಳಿಂದ ಸ್ವಲ್ಪ ದೂರದಲ್ಲಿ ಟೇಬಲ್‌ ಹಾಕಿ, ಮತದಾರರಿಗೆ ಅಭ್ಯರ್ಥಿಗಳ ಕ್ರಮಸಂಖ್ಯೆ ಹಾಗೂ ಇತರೆ ವಿವರಗಳನ್ನು ಒಳಗೊಂಡ ಕರಪತ್ರ ಕೊಟ್ಟು ಮತ ಯಾಚಿಸುತ್ತಿದ್ದ ದೃಶ್ಯ ಕಂಡುಬಂತು. ಅಲ್ಲದೇ, ಮತದಾರರಿಗೆ ಊಟ, ತಿಂಡಿ, ಕಾಫಿ, ಟೀ, ನೀರು, ಮಜ್ಜಿಗೆ ಹಾಗೂ ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು.

ಡಿ.ಸಿ ಸಿಡಿಮಿಡಿ: ಕೋಲಾರದ ಮತಗಟ್ಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಸತ್ಯವತಿ, ಮತಗಟ್ಟೆ ಬಳಿ ರಾಜಕೀಯ ಪಕ್ಷಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರಚಾರ ಮಾಡುತ್ತಿದ್ದುದಕ್ಕೆ ಸಿಡಿಮಿಡಿಯಾದರು. ಪಕ್ಷಗಳ ಮುಖಂಡರು ಹೆಚ್ಚಿನ ಪ್ರಮಾಣದಲ್ಲಿ ಟೇಬಲ್‌ ಮತ್ತು ಕುರ್ಚಿಗಳನ್ನು ಹಾಕಿದ್ದಕ್ಕೆ ಜಿಲ್ಲಾಧಿಕಾರಿ ಅಸಮಾಧಾನಗೊಂಡರು. ಬಳಿಕ ಸಿಬ್ಬಂದಿ ಮೂಲಕ ಟೇಬಲ್‌ ಮತ್ತು ಕುರ್ಚಿಗಳನ್ನು ತೆರವು ಮಾಡಿಸಿದರು.

ವಿಡಿಯೋ ಚಿತ್ರೀಕರಣ: ಪೊಲೀಸರು ಮತಗಟ್ಟೆಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿ ವ್ಯಕ್ತಿಯನ್ನು ತಪಾಸಣೆ ಮಾಡಿದ ನಂತರವಷ್ಟೇ ಒಳ ಹೋಗಲು ಅವಕಾಶ ನೀಡಿದರು. ಎಲ್ಲಾ ಮತಗಟ್ಟೆಗಳಲ್ಲೂ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಯಿತು. ಅಲ್ಲದೇ, ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಹಶೀಲ್ದಾರ್‌ಗಳ ನೇತೃತ್ವದ ಮಾದರಿ ಚುನಾವಣಾ ನೀತಿಸಂಹಿತೆ ತಂಡ ಮತ್ತು ಸಂಚಾರ ದಳದ (ಫ್ಲೈಯಿಂಗ್‌ ಸ್ಕ್ವಾಡ್‌) ಅಧಿಕಾರಿಗಳು ಹಾಗೂ ವೀಕ್ಷಕರು ನಿಯಮಿತವಾಗಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಮತ ಯಾಚನೆ: ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ, ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ, ನಗರಸಭೆ ಬಿಜೆಪಿ ಸದಸ್ಯ ಎಸ್‌.ಆರ್‌.ಮುರಳೀಗೌಡ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ರಾಜಕೀಯ ಮುಖಂಡರು ಮತದಾರರನ್ನು ಶಾಲಾ ವಾಹನಗಳಲ್ಲಿ ಮತಗಟ್ಟೆಗೆ ಕರೆತಂದು ಮತ ಹಾಕಿಸಿದರು.

12ಕ್ಕೆ ಎಣಿಕೆ: ಜಿಲ್ಲೆಯಲ್ಲಿ ಒಟ್ಟಾರೆ 3,403 ಮತದಾರರಿದ್ದು, 3,189 ಮಂದಿ ಮತ ಚಲಾಯಿಸಿದ್ದಾರೆ. 2,018 ಪುರುಷ ಮತದಾರರ ಪೈಕಿ 1,908 ಮಂದಿ ಹಾಗೂ 1,385 ಮಹಿಳಾ ಮತದಾರರಲ್ಲಿ 1,281 ಮಂದಿ ಮತ ಹಾಕಿದ್ದಾರೆ. ಸಂಜೆ 5ಕ್ಕೆ ಮತದಾನ ಪೂರ್ಣಗೊಂಡ ನಂತರ ಮತ ಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿನ ಆರ್.ಸಿ.ಕಾಲೇಜಿನ ಭದ್ರತಾ ಕೊಠಡಿಗೆ ಕೊಂಡೊಯ್ಯಲಾಯಿತು. ಆರ್‌.ಸಿ.ಕಾಲೇಜಿನಲ್ಲಿ ಜೂ.12ರಂದು ಮತ ಎಣಿಕೆ ನಡೆಯಲಿದೆ.

ಶೇ 5.47ರಷ್ಟು ಮತದಾನ ಹೆಚ್ಚಳ

2017ರ ಉಪ ಚುನಾವಣೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಶೇ 5.47ರಷ್ಟು ಹೆಚ್ಚಿನ ಮತದಾನವಾಗಿದೆ. ಉಪ ಚುನಾವಣೆಯಲ್ಲಿ ಶೇ 88.24ರಷ್ಟು ಮತದಾನವಾಗಿತ್ತು. ಪ್ರಸಕ್ತ ಚುನಾವಣೆಯಲ್ಲಿ ಶೇ 93.71ರಷ್ಟು ಮತದಾನವಾಗಿದೆ. ಮುಳಬಾಗಿಲು ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ 95.53ರಷ್ಟು ಮತದಾನವಾಗಿದೆ. ಕೋಲಾರ ತಾಲ್ಲೂಕಿನಲ್ಲಿ ಕಡಿಮೆ ಶೇ 92.12 ಮತದಾನವಾಗಿದೆ. ಉಳಿದಂತೆ ಮಾಲೂರು ಶೇ 95.18, ಶ್ರೀನಿವಾಸಪುರ ಶೇ 95.05, ಬಂಗಾರಪೇಟೆ ಶೇ 93.92 ಹಾಗೂ ಕೆಜಿಎಫ್‌ನಲ್ಲಿ ಶೇ 92.20 ಮತದಾನವಾಗಿದೆ.

ಜಿಲ್ಲೆಯ ಆರೂ ಮತಗಟ್ಟೆಗಳಲ್ಲಿ ಸಕಾಲಕ್ಕೆ ಮತದಾನ ಪ್ರಾರಂಭವಾಯಿತು. ಆರಂಭದಲ್ಲಿ ನಿಧಾನ ಗತಿಯಲ್ಲಿ ಸಾಗಿದ್ದ ಮತದಾನ 10 ಗಂಟೆಯ ನಂತರ ಚುರುಕುಗೊಂಡಿತು. ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಚುನಾವಣಾ ಅಕ್ರಮ ವರದಿಯಾಗಿಲ್ಲ 

ಜಿ.ಸತ್ಯವತಿ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry