ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಅವ್ಯವಸ್ಥೆ: ಅಧಿಕಾರಿಗಳಿಗೆ ತರಾಟೆ

ಮಾರುಕಟ್ಟೆಗೆ ಭೆಟಿ ನೀಡಿದ್ದ ಜಿಲ್ಲಾಧಿಕಾರಿ ಜಿ.ಸತ್ಯವತಿ ಎದುರು ಅಳಲು ತೋಡಿಕೊಂಡ ರೈತ ಮುಖಂಡರು
Last Updated 9 ಜೂನ್ 2018, 11:24 IST
ಅಕ್ಷರ ಗಾತ್ರ

ಕೋಲಾರ: ನಗರದ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾರುಕಟ್ಟೆಯ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಎಪಿಎಂಸಿಯಲ್ಲಿನ ಜಾಗದ ಸಮಸ್ಯೆಯಿಂದ ರೈತರಿಗೆ, ಮಂಡಿ ಮಾಲೀಕರಿಗೆ ಹಾಗೂ ವ್ಯಾಪಾರಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ನೀರು, ರಸ್ತೆ, ವಿಶ್ರಾಂತಿ ಕೊಠಡಿಯಂತಹ ಮೂಲಸೌಕರ್ಯಗಳಿಲ್ಲ. ಎಪಿಎಂಸಿ ಅವ್ಯವಸ್ಥೆಯ ಕೂಪವಾಗಿದೆ’ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಎಪಿಎಂಸಿಯಲ್ಲಿನ ಜಾಗವನ್ನು ಸದುಪಯೋಗಪಡಿಸಿಕೊಳ್ಳದೆ ಬೇಕಾಬಿಟ್ಟಿ ಮಳಿಗೆಗಳಿಗೆ ಪರವಾನಗಿ ನೀಡಿದ್ದೀರಿ. ಈಗ ಜಾಗದ ಸಮಸ್ಯೆ ಎಂದು ಸಬೂಬು ಹೇಳುತ್ತೀರಿ. ಎಪಿಎಂಸಿಗೆ ಸೇರಿದ 4 ಎಕರೆ ಜಾಗವನ್ನು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ (ನಾಫೆಡ್‌) ಏಕೆ ಬಿಟ್ಟು ಕೊಟ್ಟಿದ್ದೀರಿ?’ ಎಂದು ಪ್ರಶ್ನಿಸಿದರು.

‘ಎಪಿಎಂಸಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನನಗೆ ಸಲ್ಲಿಸಿ. ಎಪಿಎಂಸಿ ಆಡಳಿತ ಮಂಡಳಿಯು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳದೆ ಮೌನವಾಗಿರುವುದು ಈ ಅವಾಂತರಕ್ಕೆ ಕಾರಣ. ಮಾರುಕಟ್ಟೆಯಲ್ಲಿ ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ನೀವು ಏನು ಮಾಡುತ್ತಿದ್ದೀರಿ?’ ಎಂದು ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್‌ ವಿರುದ್ಧ ಹರಿಹಾಯ್ದರು.

ಸಂಚಾರ ಸಮಸ್ಯೆ: ‘ಎಪಿಎಂಸಿ ಆವರಣದಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶವಿಲ್ಲ. ಹೀಗಾಗಿ ಮಾರುಕಟ್ಟೆಯ ಅಕ್ಕಪಕ್ಕದ ಮಾಲೂರು ರಸ್ತೆ ಮತ್ತು ಸರ್ವಿಸ್‌ ರಸ್ತೆಯಲ್ಲಿ ತರಕಾರಿ ಸಾಗಣೆ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಇದರಿಂದ ಸಂಚಾರ ಸಮಸ್ಯೆ ಸೃಷ್ಟಿಯಾಗಿ ಇತರ ವಾಹನಗಳ ಓಡಾಟಕ್ಕೂ ಅಡ್ಡಿಯಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಹೇಳಿದರು.

‘ಚಾಲಕರು ಮಾರುಕಟ್ಟೆ ಆವರಣದಲ್ಲಿ ಕ್ರಮಬದ್ಧವಾಗಿ ವಾಹನಗಳನ್ನು ನಿಲ್ಲಿಸಬೇಕು. ಮಾಲೂರು ರಸ್ತೆ ಹಾಗೂ ಸರ್ವಿಸ್‌ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಬಾರದು. ಸಂಚಾರ ಸಮಸ್ಯೆಯ ನಿವಾರಣೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ’ ಎಂದು ತಿಳಿಸಿದರು.

ಅಧಿಕಾರಿಗಳ ಚೆಲ್ಲಾಟ: ‘ಎಪಿಎಂಸಿಯು ಏಷ್ಯಾ ಖಂಡದಲ್ಲೇ ಹೆಸರುವಾಸಿಯಾಗಿದೆ. ಮಾರುಕಟ್ಟೆಯಲ್ಲಿನ ಜಾಗದ ಸಮಸ್ಯೆ ಸಂಬಂಧ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ದೂರು ಕೊಟ್ಟು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದೆ ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಪ್ರತಿ ವರ್ಷ ಟೊಮೆಟೊ ಕೊಯ್ಲು ಆರಂಭವಾದಾಗ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತದೆ. ಆಗ ತರಕಾರಿ ವಾಹನಗಳು ಮಾರುಕಟ್ಟೆ ಪ್ರವೇಶಿಸುವುದೇ ಕಷ್ಟ. ವಾಹನ ದಟ್ಟಣೆಯಿಂದ ಸಾಕಷ್ಟು ಬಾರಿ ಟೊಮೆಟೊ ಹರಾಜು ತಪ್ಪಿ ರೈತರಿಗೆ ನಷ್ಟವಾಗುತ್ತಿದೆ. ಎಪಿಎಂಸಿ ಆಡಳಿತ ಮಂಡಳಿಗೆ ಸುಂಕದ ರೂಪದಲ್ಲಿ ಕೋಟಿಗಟ್ಟಲೇ ಆದಾಯ ಬರುತ್ತಿದೆ. ಆದರೆ, ಆಡಳಿತ ಮಂಡಳಿಯು ಮಾರುಕಟ್ಟೆ ಅಭಿವೃದ್ಧಿ ನಿರ್ಲಕ್ಷಿಸಿದೆ’ ಎಂದು ಆರೋಪಿಸಿದರು.

ರಕ್ತ ಹೀರುತ್ತಿದ್ದಾರೆ: ‘ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ನೈರ್ಮಲ್ಯ ಹೀಗೆ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ತರಕಾರಿಯೊಂದಿಗೆ ರಾತ್ರಿಯೇ ಮಾರುಕಟ್ಟೆಗೆ ಬರುವ ರೈತರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ. ಹೀಗಾಗಿ ಮಾರುಕಟ್ಟೆ ಆವರಣದ ಕಟ್ಟೆಗಳ ಮೇಲೆ ಅಥವಾ ವಾಹನಗಳಲ್ಲಿ ಮಲಗುವ ಪರಿಸ್ಥಿತಿ ಇದೆ. ರೈತರ ಹಿತ ಕಾಯಬೇಕಾದ ಅಧಿಕಾರಿಗಳು ಹಣದಾಸೆಗೆ ಮಂಡಿ ಮಾಲೀಕರು ಹಾಗೂ ದಲ್ಲಾಳಿಗಳ ಜತೆ ಸೇರಿ ರೈತರ ರಕ್ತ ಹೀರುತ್ತಿದ್ದಾರೆ’ ಎಂದು ಅಲವತ್ತುಕೊಂಡರು.

ಶಾಸಕರ ಮೌನ: ‘ನಗರದ ಸುತ್ತಮುತ್ತ ನೂರಾರು ಎಕರೆ ಸರ್ಕಾರಿ ಜಮೀನಿದೆ. ಆದರೂ ಅಧಿಕಾರಿಗಳು ಎಪಿಎಂಸಿ ವಿಸ್ತರಣೆಗೆ ಜಾಗ ಗುರುತಿಸುವ ಪ್ರಯತ್ನ ಮಾಡುತ್ತಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ರಾಜಕಾರಣಿಗಳಿಗೆ ಅಧಿಕಾರಿಗಳು ರಾತ್ರೋರಾತ್ರಿ ಜಮೀನು ಮಂಜೂರು ಮಾಡುತ್ತಾರೆ. ಆದರೆ, ರೈತರ ಅನುಕೂಲಕ್ಕೆ ಜಮೀನಿಲ್ಲ ಎನ್ನುತ್ತಾರೆ’ ಎಂದು ಹೇಳಿದರು.

‘ಎಪಿಎಂಸಿ ಸ್ಥಳಾಂತರಕ್ಕೆ ಜಿಲ್ಲಾಡಳಿತ ಶೀಘ್ರವೇ ಜಮೀನು ಗುರುತಿಸಬೇಕು. ಮಾರುಕಟ್ಟೆಯ ಪಕ್ಕದಲ್ಲೇ ಇರುವ ಇಫ್ಕೊ ಟೋಕಿಯೊ ಜಾಗದಲ್ಲಿ ತರಕಾರಿ ವಹಿವಾಟಿಗೆ ಕಲ್ಪಿಸಬಹುದು. ಆದರೆ, ಇಫ್ಕೊ ಟೋಕಿಯೊ ಸಂಸ್ಥೆ ಅಧ್ಯಕ್ಷರಾಗಿರುವ ಹಾಲಿ ಶಾಸಕ ಕೆ.ಶ್ರೀನಿವಾಸ
ಗೌಡರು ಈ ವಿಚಾರದಲ್ಲಿ ಮೌನವಾಗಿದ್ದಾರೆ. ಅವರಿಗೆ ರೈತಪರ ಕಾಳಜಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಮಾರುಕಟ್ಟೆಯಲ್ಲಿನ ಕಮಿಷನ್‌ ದಂಧೆ ಮತ್ತು ದಲ್ಲಾಳಿಗಳ ಹಾವಳಿ ತಪ್ಪಿಸಲು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಜತೆಗೆ ಮೂಲಸೌಕರ್ಯ ಸಮಸ್ಯೆ ಬಗೆಹರಿಸುತ್ತೇವೆ. ಬೇರೆಡೆ ಜಮೀನು ಗುರುತಿಸಿ ಸಾಧ್ಯವಾದಷ್ಟು ಬೇಗನೆ ಮಾರುಕಟ್ಟೆ ಸ್ಥಳಾಂತರ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ಕೃಷ್ಣೇಗೌಡ, ಮುರಳಿ, ರಂಜಿತ್‌, ಮಂಜುನಾಥ್‌, ಮಂಡಿ ಮಾಲೀಕರು ಹಾಗೂ ರೈತರು ಹಾಜರಿದ್ದರು.

ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ, ತೂಕದಲ್ಲಿ ಮೋಸ, ಕಮಿಷನ್‌ ದಂಧೆ, ಜಾಕ್‌ಪಾಟ್‌, ಮಂಡಿ ಮಾಲೀಕರ ಶೋಷಣೆಯಿಂದ ಅನ್ನದಾತರು ಹೈರಾಣಾಗಿದ್ದಾರೆ
ಕೆ.ನಾರಾಯಣಗೌಡ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT