ಬಾಯಲ್ಲಿ ನೀರೂರಿಸುವ ಹುಳಿಮಾವು

7
ಶತಮಾನಕ್ಕೂ ಹಳೆಯದಾದ ತಳಿ

ಬಾಯಲ್ಲಿ ನೀರೂರಿಸುವ ಹುಳಿಮಾವು

Published:
Updated:
ಬಾಯಲ್ಲಿ ನೀರೂರಿಸುವ ಹುಳಿಮಾವು

ಶ್ರೀನಿವಾಸಪುರ: ಶ್ರೀನಿವಾಸಪುರ ಎಂದೊಡನೆ ಮಾವಿನ ಹಣ್ಣಿನ ನೆನಪಾಗಿ ಬಾಯಲ್ಲಿ ನೀರೂರುತ್ತದೆ. ಇಲ್ಲಿ ಹಲವು ಜಾತಿಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತಿದೆ. ಅದರೊಂದಿಗೆ ಹಲವು ಶತಮಾನಗಳಷ್ಟು ಹಳೆಯದಾದ ನಾಟಿ ತಳಿ ಮಾವೂ ಇದೆ.

ಹಿಂದೆ ರಸ್ತೆಗಳ ಇಕ್ಕೆಲಗಳಲ್ಲಿ, ಗುಂಡು ತೋಪುಗಳಲ್ಲಿ ಹಾಗೂ ಕಂದಾಯ ಜಮೀನಲ್ಲಿ ಒಂದು ಶತಮಾನ ಮೀರಿದ ನಾಟಿ ಮಾವಿನ ಮರಗಳಿದ್ದವು. ದೊಡ್ಡ ಕಾಂಡ, ಎತ್ತರಕ್ಕೆ ಬೆಳೆದ ಕೊಂಬೆಗಳು, ಅಲ್ಲಿ ನೇತಾಡುವ ಹುಳಿ ಮಾವಿನ ಕಾಯಿ. ಮರ ಹತ್ತಬೇಕಾದರೆ ಎಂಟೆದೆ ಬೇಕಾಗಿತ್ತು. ಆದರೂ ಹತ್ತಿ ಕಾಯಿ ಕೀಳುವ ಗಂಡೆದೆಯ ಗಂಡುಗಳೂ ಇದ್ದರು.

ನಾರಿನಿಂದ ಕೂಡಿದ ನಾಟಿ ಕಾಯಿ ಉಪ್ಪಿನ ಕಾಯಿಗೆ ಹೇಳಿ ಮಾಡಿಸಿದಂತಿತ್ತು. ಉಪ್ಪಿನ ಕಾಯಿ ಪ್ರಿಯರು, ಕಾಡಿ ಬೇಡಿ ಮರ ಹತ್ತಿಸಿ ಕಾಯಿ ಕೀಳಿಸಿ ಕೊಂಡೊಯ್ಯುತ್ತಿದ್ದರು. ಬಲಿತ ಕಾಯಿಯನ್ನು ಕಿತ್ತು ಹಣ್ಣು ಮಾಡಿ ತಿನ್ನುತ್ತಿದ್ದರು. ಕಾಯಿ ಹಣ್ಣಾಗುವ ಕಾಲಕ್ಕೆ ಹಳ್ಳಿ ಮಕ್ಕಳು ಬೆಳಿಗ್ಗೆ ಮರದ ಕೆಳಗೆ ಹೋಗಿ ಉದುರಿದ ಕಾಯಿಗಳನ್ನು ಆರಿಸಿಕೊಂಡು ತಿನ್ನುತ್ತಿದ್ದರು. ಸ್ವಲ್ಪ ಹುಳಿ, ಸ್ವಲ್ಪ ಸಿಹಿ ರುಚಿಯ ನಾಟಿ ಮಾವಿನ ಕಾಯಿಯೆಂದರೆ ಮನುಷ್ಯರಿಗೆ ಮಾತ್ರವಲ್ಲ ಕೋತಿಗಳಿಗೂ ಪ್ರಿಯ.

ಅಧಿಕ ಇಳುವರಿ ತರುವ ಕಸಿ ಮಾಡಿದ ಮಾವಿನ ಗಿಡದ ನಾಟಿ ಶುರುವಾದ ಬಳಿಕ, ನಾಟಿ ಮಾವಿನ ಹಣ್ಣು ಮಹತ್ವ ಕಳೆದುಕೊಂಡಿತು. ಬೃಹತ್‌ ಗಾತ್ರದ ನಾಟಿ ಮಾವಿನ ಮರಗಳು ಕೊಡಲಿಗೆ ಆಹುತಿಯಾದವು. ರಸ್ತೆ ಬದಿಯ ಮರಗಳು ಪ್ರಭಾವಿಗಳು ಹಾಗೂ ಮರಗಳ್ಳರ ಪಾಲಾದವು. ಗುಂಡು ತೋಪಿನ ಮರಗಳ ಕತೆಯೂ ಅದೇ ಆಯಿತು. ಇಷ್ಟಾದರೂ ತಾಲ್ಲೂಕಿನ ಕೆಲವು ಕಡೆಗಳಲ್ಲಿ ನಾಟಿ ಮಾವಿನ ಮರಗಳು ಇನ್ನೂ ಜೀವಂತವಾಗಿವೆ. ಮರ ಹತ್ತಿ ಕಾಯಿ ಕೀಳುವುದನ್ನು ಬಿಡಲಾಗಿದೆ. ಬಿಟ್ಟ ಕಾಯಿ ಪ್ರಾಣಿ, ಪಕ್ಷಿಗಳಿಗೆ ಆಹಾರವಾಗುತ್ತಿದೆ. ಹೊಸ ತಲೆಮಾರಿನ ಜನರಿಗೆ ಈ ಮಾವಿನ ತಳಿಯ ಪರಿಚಯವೇ ಇಲ್ಲದಾಗಿದೆ. ಹಳ್ಳಿ ಸಮೀಪ ಮರವಿದ್ದರೆ, ಉದುರಿದ ಹಣ್ಣನ್ನು ಮಕ್ಕಳು ಆರಿಸಿಕೊಂಡು ಸವಿಯುತ್ತಾರೆ.

ನಾಟಿ ಮಾವಿನ ಮರದ ವಿಶೇಷವೆಂದರೆ, ಯಾವುದೇ ಔಷಧ ಸಿಂಪರಣೆ ಮಾಡದಿದ್ದರೂ, ದಟ್ಟವಾಗಿ ಹೂ ಬರುತ್ತದೆ. ಕಾಯಿ ಕಟ್ಟುತ್ತದೆ. ಫಸಲು ಉಳಿಯುತ್ತದೆ. ಇತರ ತಳಿ ಮಾವಿನ ಮರಗಳಂತೆ ಹೀಚು ಉದುರುವುದಿಲ್ಲ. ಅಧಿಕ ಇಳುವರಿ ಮಾವಿನ ಮರದಂತೆ ವರ್ಷ ಬಿಟ್ಟು ವರ್ಷ ಫಸಲು ಬರುವುದಿಲ್ಲ. ಪ್ರತಿ ವರ್ಷವೂ ಸಾಮಾನ್ಯ ಫಸಲು ಬರುತ್ತದೆ.

ತಾಲ್ಲೂಕಿನಲ್ಲಿ ಇತರ ಜಾತಿಯ ಮರಗಳು ತೇವಾಂಶದ ಕೊರತೆಯಿಂದ ಒಣಗುತ್ತಿದ್ದರೂ, ನಾಟಿ ಮಾವಿನ ಮರಗಳು ಮಾತ್ರ ಹಸಿರೆಲೆ ಹೊತ್ತು ನಳನಳಿಸುತ್ತಿವೆ. ಇದಕ್ಕೆ ಕಾರಣ ನೆಲದಾಳಕ್ಕೆ ಇಳಿದ ಬೇರು. ತಾಯಿ ಬೇರು ಕತ್ತರಿಸಿ ನಾಟಿ ಮಾಡುವ ಯಾವುದೇ ಸಸಿ ಎತ್ತರಕ್ಕೆ ಬೆಳೆಯುವುದಿಲ್ಲ. ನಾಟಿ ತಳಿಗೆ ಹೋಲಿಸಿದರೆ ದೀರ್ಘ ಕಾಲ ಉಳಿಯುವುದಿಲ್ಲ.

ಹುಳಿ ಮಾವಿನ ಹಣ್ಣಿನ ರುಚಿ ಹೊಸ ತಲೆಮಾರಿನ ಜನರಿಗೆ ಗೊತ್ತಿಲ್ಲ. ಅದರ ರುಚಿಯೇ ಬೇರೆ. ಬೀಜದ ಮೇಲಿನ ನಾರನ್ನು ಕಚ್ಚಿ ಚಪ್ಪರಿಸುವುದರ ಮಜಾನೆ ಬೇರೆ ಎಂಬುದು ರೋಣೂರು ಗ್ರಾಮದ ಹಿರಿಯ ನಾಗರಿಕ ನಾರೆಪ್ಪ ಅವರ ಅನುಭವದ ಮಾತು.

ನಾಟಿ ಮಾವಿನ ಮರದ ಹಲಗೆಗೆ ಹೆಚ್ಚಿನ ಬೇಡಿಕೆ ಇದೆ. ಈ ಬೇಡಿಕೆಯೇ ಈ ಮರದ ಅಳಿವಿಗೆ ಕಾರಣವಾಯಿತು. ಇಂದಿಗೆ ನಾಟಿ ಮಾವಿನ ಕಾಯಿ ಅಪ್ರಸ್ತುತವಾದರೂ, ಹಿರಿಯರಿಂದ ಬಂದ ತಳಿಯೊಂದನ್ನು ಕಣ್ಮರೆಯಾಗುವ ಮೊದಲು ಉಳಿಸಿಕೊಳ್ಳಬೇಕಾಗಿದೆ.

–ಆರ್‌.ಚೌಡರೆಡ್ಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry