ಬುಧವಾರ, ಜೂನ್ 23, 2021
23 °C

‘ಮುಂಗಾರುಪೂರ್ವ ಮಳೆ ಭರವಸೆ ಮೂಡಿಸಿದೆ’

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

‘ಮುಂಗಾರುಪೂರ್ವ ಮಳೆ ಭರವಸೆ ಮೂಡಿಸಿದೆ’

ಬೇಸಿಗೆ ಮುಗಿಯುವುದಕ್ಕೆ ಮೊದಲೇ ರಾಜ್ಯದಲ್ಲಿ ಮಳೆ ಆರಂಭವಾಯಿತು. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಬಂದ ಮುಂಗಾರುಪೂರ್ವ ಮಳೆ ರೈತರಲ್ಲಿ ಹರ್ಷ ಉಂಟು ಮಾಡಿದೆ. ‘ಜೂನ್‌ ತಿಂಗಳಿಡೀ ಉತ್ತಮ ಮಳೆ ಆಗುತ್ತದೆ. ಜುಲೈನಲ್ಲಿ ಕೆಲವು ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯ ಕೊರತೆ ಆದರೂ ಒಟ್ಟಾರೆ ಮುಂಗಾರು ಆಶಾದಾಯಕವಾಗಿದೆ. ಬೆಳೆ ಉತ್ತಮವಾಗುತ್ತದೆ, ಮಳೆ ಹೀಗೆಯೇ ಮುಂದುವರಿದರೆ ಎಲ್ಲ ಜಲಾಶಯಗಳು ಬೇಗನೆ ತುಂಬುತ್ತವೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌. ಶ್ರೀನಿವಾಸರೆಡ್ಡಿ.

* ಈ ವರ್ಷದ ಮುಂಗಾರು ರಾಜ್ಯಕ್ಕೆ ಆಶಾದಾಯಕವಾಗಿದೆಯೇ?

ಈ ಬಾರಿ ಮುಂಗಾರು ವಾಡಿಕೆಗಿಂತ 3– 4 ದಿನ ಮೊದಲೇ ರಾಜ್ಯವನ್ನು ಪ್ರವೇಶಿಸಿದೆ. ಮೇ 29ಕ್ಕೆ ಮುಂಗಾರು ಆರಂಭವಾಗಿ, ನಿಧಾನವಾಗಿ ಎಲ್ಲ ಪ್ರದೇಶಗಳಿಗೂ ವ್ಯಾಪಿಸಿದೆ. ಕಳೆದ ಒಂದೆರಡು ದಿನಗಳ ಮಳೆ ದಾಖಲೆಯನ್ನು ನೋಡಿದರೆ, ರಾಜ್ಯದಲ್ಲಿ ಸಂಪೂರ್ಣ ಎಂದರೆ, ಶೇ 100ರಷ್ಟು ಭಾಗದಲ್ಲಿ ಮುಂಗಾರು ವ್ಯಾಪಿಸಿದಂತಾಗಿದೆ. ಹಿಂದಿನ ವರ್ಷಗಳಲ್ಲಿ ಈ ವೇಳೆಗೆ ಶೇ 70 ರಷ್ಟು ವ್ಯಾಪಿಸುತ್ತಿತ್ತು. ಮಳೆಯ ಬಗ್ಗೆ ಮುನ್ಸೂಚನೆ ನೀಡುವ ದೇಶದ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳು ‘ದೇಶದಲ್ಲಿ ಈ ಬಾರಿ ಶೇ 97 ರಷ್ಟು ಮಳೆ ಆಗುತ್ತದೆ’ ಎಂಬ ಸೂಚನೆ ನೀಡಿವೆ. ಈ ಏಜೆನ್ಸಿಗಳ ಪೈಕಿ ಸೆಸ್ಕಾಫ್‌ ಪ್ರಕಾರ ದೇಶದ ಶೇ 50 ಭಾಗದಲ್ಲಿ ವಾಡಿಕೆಯಷ್ಟು, ಉಳಿದ ಭಾಗದಲ್ಲಿ ವಾಡಿಕೆಗಿಂತ ಶೇ 10 ರಷ್ಟು ಕಡಿಮೆ ಮಳೆ ಆಗಬಹುದು ಎಂದು ತಿಳಿಸಿದೆ. ಸ್ಕೈಮೆಟ್‌ ಎಂಬ ಖಾಸಗಿ ಏಜೆನ್ಸಿ ಪ್ರಕಾರ, ರಾಜ್ಯದ ಕೆಲವು ಕಡೆಗಳಲ್ಲಿ ಜೂನ್‌ನಲ್ಲಿ ಉತ್ತಮ ಮಳೆ ಆಗುತ್ತದೆ. ಆದರೆ, ಜುಲೈ ಮತ್ತು ಆಗಸ್ಟ್‌ನಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಆಗಬಹುದು ಎಂದು ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ನಾಲ್ಕು ತಿಂಗಳಿನ ಮುನ್ಸೂಚನೆಯಂತೆ ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲಿ ಶೇ 94 ರಷ್ಟು ಮಳೆ ಆಗುತ್ತದೆ. ಆದರೆ, ಯಾವ ತಿಂಗಳಲ್ಲಿ ಎಷ್ಟು ಪ್ರಮಾಣದ ಮಳೆ ಆಗಬಹುದು ಎಂಬುದನ್ನು ಹೇಳಿಲ್ಲ. ಎಲ್ಲ ಮಾಹಿತಿಯನ್ನು ಕ್ರೋಡೀಕರಿಸಿ ನೋಡಿದಾಗ ರಾಜ್ಯದ ಕೆಲವು ಭಾಗಗಳಲ್ಲಿ ಜುಲೈನಲ್ಲಿ ಮಳೆ ಕಡಿಮೆ ಆಗಬಹುದು.

* ಮುಂಗಾರಿನ ಉತ್ತಮ ಆರಂಭದಿಂದ ಕೃಷಿಯಲ್ಲಿ ಅಧಿಕ ಇಳುವರಿಯ ಸಾಧ್ಯತೆ ಇದೆಯೇ?

ಮುಂಗಾರುಪೂರ್ವ ಮಳೆ ಆಗಿರುವುದರಿಂದ ರೈತರಿಗೆ ಅನುಕೂಲ ಆಗಿದೆ. ಉತ್ತಮ ಕೃಷಿ ಚಟುವಟಿಕೆಗೆ ಪೀಠಿಕೆ ಆದಂತಾಗಿದೆ. ಮಳೆ ಎಷ್ಟು ಪ್ರಮಾಣದಲ್ಲಿ ಆಗಿದೆ ಎಂಬುದಕ್ಕಿಂತ ಮಳೆ ಹಂಚಿಕೆ ಯಾವ ರೀತಿ ಆಗಿದೆ ಎಂಬುದು ಕೃಷಿಯ ದೃಷ್ಟಿಯಿಂದ ಮಹತ್ವದ್ದು. ಬೆಳೆಗೆ ಎಷ್ಟು ಬೇಕೋ ಅಷ್ಟು ಬಂದರೆ ಕೃಷಿ ಉತ್ಪಾದಕತೆ ಹೆಚ್ಚಲು ಅನುಕೂಲವಾಗುತ್ತದೆ. ಮುಂಗಾರುಪೂರ್ವ ಮಳೆ ಸಂದರ್ಭದಲ್ಲೇ ಅಂದರೆ, ಮೇ ತಿಂಗಳಿನಲ್ಲೇ ರೈತರು 3.42 ಲಕ್ಷ ಹೆಕ್ಟೇರ್‌ ಪೈಕಿ 3.11 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ರೈತರು ಎಷ್ಟು ಚುರುಕಿನಿಂದ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ ಎಂಬುದಕ್ಕೆ ‘ವರುಣ ಮಿತ್ರ’ ಕಾಲ್‌ ಸೆಂಟರ್‌ಗೆ ಕರೆ ಮಾಡಿ ಮಳೆಯ ಬಗ್ಗೆ ಮಹಿತಿ ಪಡೆಯುತ್ತಿರುವುದೇ ನಿದರ್ಶನ. ಮೇ ತಿಂಗಳಲ್ಲಿ 1,23,327 ಮತ್ತು ಜೂನ್‌ನಲ್ಲಿ ಕೇವಲ 8 ದಿನಗಳಲ್ಲಿ 36,802 ಕರೆಗಳು ರೈತರಿಂದ ಬಂದಿದ್ದವು. ನಿರ್ದಿಷ್ಟ ದಿನ ಮಳೆ ಬರುತ್ತದೆಯೇ, ಬಿತ್ತನೆ ಮಾಡಬಹುದೇ, ತೇವಾಂಶ ಇದೆಯೇ ಎಂಬ ಮಾಹಿತಿಯನ್ನು ದಿನದ 24 ಗಂಟೆಗಳ ಕಾಲ ಪಡೆಯುತ್ತಾರೆ. ರಾತ್ರಿ ವೇಳೆಯಲ್ಲೂ ಕರೆ ಮಾಡುತ್ತಾರೆ. ಈಗ ಲಭ್ಯವಿರುವ ಮಾಹಿತಿ ಪ್ರಕಾರ ಈ ವರ್ಷ ಮುಂಗಾರು ಉತ್ತಮ ಆಗುವುದರಿಂದ ಕೃಷಿ ಚಟುವಟಿಕೆಯೂ ಉತ್ತಮವಾಗಿರುತ್ತದೆ.

* ಈಗ ಬರುತ್ತಿರುವ ಮಳೆಯಿಂದ ಜಲಾಶಯಗಳ ಸ್ಥಿತಿಗತಿ ಸುಧಾರಿಸಬಹುದೇ? 

ಹಿಂದಿನ ವರ್ಷ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆ ಆಗಿತ್ತು. ಆದರೆ, ಜೂನ್‌– ಜುಲೈನಲ್ಲಿ ಮಳೆ ಆಗಿರಲಿಲ್ಲ. ಇದರಿಂದ, ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆ ಆಗಿತ್ತು. ಈ ಬಾರಿ ಮೇ ತಿಂಗಳಿನಲ್ಲೇ ವಾಡಿಕೆಯ ಶೇ 51 ರಷ್ಟು ಮಳೆ ಆಗಿದ್ದರಿಂದ ಒಳಹರಿವು ಉತ್ತಮಗೊಳ್ಳಲು ವೇದಿಕೆ ಸೃಷ್ಟಿ ಆಯಿತು. ಕಳೆದ 10 ವರ್ಷಗಳಲ್ಲೇ ಜೂನ್‌ ತಿಂಗಳಲ್ಲಿ ಇಷ್ಟು ಮಳೆ ಆಗಿರಲಿಲ್ಲ. ಇದರಿಂದ ಕಾವೇರಿ, ತುಂಗಭದ್ರಾ, ಕೃಷ್ಣಾ ಜಲಾಶಯಗಳಿಗೆ ನೀರಿನ ಒಳಹರಿವು ವಾಡಿಕೆಗಿಂತ ಶೇ 50 ರಷ್ಟು ಹೆಚ್ಚಾಗಿದೆ. ಜುಲೈನಲ್ಲಿ ಉತ್ತಮ ಮಳೆಯಾದರೆ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತದೆ. ಒಂದು ವೇಳೆ ಜುಲೈನಲ್ಲಿ ವಾಡಿಕೆಗಿಂತ 4 ಮಿ.ಮೀ. ಮಳೆ ಕಡಿಮೆ ಆದರೂ 1 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹ ಕಡಿಮೆ ಆಗುತ್ತದೆ.

* ಎಷ್ಟು ಗ್ರಾಮಗಳಲ್ಲಿ ಮಳೆ ಮಾಪನ ಕೇಂದ್ರಗಳು ಇವೆ. ಇದರಿಂದ ರೈತರಿಗೆ ಆಗುತ್ತಿರುವ ಪ್ರಯೋಜನಗಳೇನು? 

ರಾಜ್ಯದಲ್ಲಿ 6,437 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಮಳೆ ಮಾಪನ ಕೇಂದ್ರಗಳು ಮತ್ತು 919 ಗ್ರಾಮಗಳಲ್ಲಿ ಹವಾಮಾನ ಮಾಪನ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದೇವೆ. ಅಲ್ಲಿಂದ ಮಳೆಯ ಪ್ರಮಾಣ ಮಾಹಿತಿ ಬರುತ್ತದೆ. ಅಲ್ಲದೆ, ಪ್ರತಿ 15 ನಿಮಿಷಗಳಿಗೊಮ್ಮೆ ಮಳೆಯ ಪ್ರಮಾಣ, ತೀವ್ರತೆ, ಉಷ್ಣಾಂಶ, ತೇವಾಂಶ, ಗಾಳಿಯ ವೇಗ ಮತ್ತು ದಿಕ್ಕುಗಳ ಬಗ್ಗೆ ದತ್ತಾಂಶ ಸಂಗ್ರಹಿಸಿ, ವಿಶ್ಲೇಷಣೆ ಮಾಡಿ, ವೈಜ್ಞಾನಿಕ ವರದಿ ತಯಾರಿಸಿ ಅಗತ್ಯವಿರುವ ಮಾಹಿತಿಯನ್ನು ರೈತರಿಗೆ ಎಸ್‌ಎಂಎಸ್‌ ಮೂಲಕ ತಲುಪಿಸುತ್ತೇವೆ. ‘ವರುಣ ಮಿತ್ರ’ದ ಮೂಲಕ ಕೃಷಿ ಚಟುವಟಿಕೆ ರೂಪಿಸಲು ಮತ್ತು ಬೆಳೆ ನಷ್ಟವನ್ನು ತಗ್ಗಿಸಲು ರೈತರಿಗೆ ನೆರವು ನೀಡುತ್ತಿದ್ದೇವೆ. ಇಸ್ರೊ ಮತ್ತು ಕೃಷಿ ಇಲಾಖೆ ನೆರವು ಪಡೆದು ಈ ಕೆಲಸ ಮಾಡುತ್ತಿದ್ದೇವೆ. ಬಿತ್ತನೆಯಿಂದ ಕಟಾವಿನ ಹಂತದವರೆಗೆ ಕಾಲಕಾಲಕ್ಕೆ ನಮ್ಮ ಕೇಂದ್ರದಿಂದ ಮಾಹಿತಿ ಪಡೆದು ಕೃಷಿ ಚಟುವಟಿಕೆ ನಡೆಸುವ ರೈತನಿಗೆ ಪ್ರತಿ ಎಕರೆಗೆ ₹ 5,160 ಉಳಿತಾಯ ಆಗುತ್ತದೆ ಎಂದು ಇಸ್ರೊ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

* ಹೊಸ ತಂತ್ರಜ್ಞಾನದ ನೆರವನ್ನು ರೈತರು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಿದ್ದಾರೆ? 

ವರ್ಷದಿಂದ ವರ್ಷಕ್ಕೆ, ದಿನದಿಂದ ದಿನಕ್ಕೆ ವರುಣಮಿತ್ರ ಸಹಾಯವಾಣಿ ಬಳಸುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಈ ಮೂಲಕ ಮಾಹಿತಿ ಪಡೆದ ಪ್ರತಿಯೊಬ್ಬ ರೈತನೂ ಸುಮಾರು 15 ರಿಂದ 20 ರೈತರಿಗೆ ವಿಷಯ ಮುಟ್ಟಿಸುತ್ತಾನೆ. 2011ರಲ್ಲಿ 6,585 ರೈತರು ಈ ಸೌಲಭ್ಯ ಪಡೆದಿದ್ದರೆ, 2013ರಲ್ಲಿ ಈ ಸಂಖ್ಯೆ 2,26,466ಕ್ಕೆ ಏರಿತು. 2017ರಲ್ಲಿ 12,98,810 ರೈತರು ಹೊಸ ತಂತ್ರಜ್ಞಾನದ ನೆರವು ಪಡೆದಿದ್ದಾರೆ.

(‘ವರುಣ ಮಿತ್ರ’ದ ಮಾಹಿತಿ ಪಡೆಯಲು ದೂರವಾಣಿ 9243345433)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.