ಸೋಮವಾರ, ಜೂನ್ 21, 2021
27 °C

ಲೋಕವಿವೇಕ ಮತ್ತು ಮಮತೆಯ ರೂಪಕ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಲೋಕವಿವೇಕ ಮತ್ತು ಮಮತೆಯ ರೂಪಕ

ಪಡಸಾಲೆ ಎನ್ನುವುದು ಮನೆಯ ಮುಖ್ಯವಾದ ಭಾಗ. ಮೊಗಸಾಲೆ, ಹಜಾರ, ಮನೆಯ ಮುಂದಿನ ಭಾಗ, ಜಗಲಿ, ಹೊರಚಾವಡಿ, ದೇಗುಲದಲ್ಲಿ ಪ್ರವಾಸಿಗರು ಉಳಿಯುವ ಜಾಗ ಎಂಬೆಲ್ಲ ಅರ್ಥಗಳನ್ನು ‘ಪಡಸಾಲೆ’ ಶಬ್ದಕ್ಕೆ ಪದಕೋಶಗಳು ಹಚ್ಚಿವೆ. ಪಡಸಾಲೆಯ ವಿಶೇಷ ಇರುವುದು ಎಲ್ಲರನ್ನೂ ಒಳಗೊಳ್ಳುವಿಕೆಯ ಅದರ ಸಾಧ್ಯತೆಯಲ್ಲಿ. ಮನೆಯ ಅಂಗಗಳಾದ ಪೂಜಾಕೋಣೆ, ಅಡುಗೆಮನೆ, ಮಲಗುವ ಕೋಣೆ, ಉಗ್ರಾಣ – ಇವೆಲ್ಲ ಎಲ್ಲರೂ ಹೊಕ್ಕು ಬಳಸುವ ಭಾಗಗಳಲ್ಲ. ಪಡಸಾಲೆ ಹಾಗಲ್ಲ; ಹಿರಿಯರಿಂದ ಕಿರಿಯರವರೆಗೆ ಮನೆಯವರೆಲ್ಲ ಒಟ್ಟಿಗೆ ಕೂತು ಹರಟಿ ನಗುವ ಹಗುರಾಗುವ ಸ್ಥಳವಿದು. ಒಳಕೋಣೆಗಳ ಲಗುಬಿಗುಗಳೆಲ್ಲ ಸಡಿಲಗೊಂಡು, ಸಂಬಂಧಗಳ ಘಮ ಹಬ್ಬಿಕೊಂಡು ಎಲ್ಲರನ್ನೂ ತಬ್ಬಿಕೊಳ್ಳುವ ಸ್ಥಳ ಪಡಸಾಲೆ. ಹೊರಗಿನಿಂದ ಬಂದವರೊಂದಿಗೆ ಉಭಯಕುಶಲೋಪರಿ ನಡೆಯುವುದು ಹಾಗೂ ಅವರಿಗೆ ಆತಿಥ್ಯ ದೊರೆಯುವುದು ಇಲ್ಲಿಯೇ. ಗಾಳಿ– ಬೆಳಕು ಹೆಚ್ಚಿಗೆ ಆಡುವ ಸ್ಥಳ ಪಡಸಾಲೆ. ಜೀವಚೈತನ್ಯದ ರೂಪವಾದ ಗಾಳಿ–ಬೆಳಕು ಅರಿವಿನ ರೂಪಕವೂ ಹೌದು.

ಗಾಳಿ ಬೆಳಕಿನ ಗುಣ ಹೊಂದಿರುವ ‘ಪಡಸಾಲೆ’ ಎನ್ನುವುದರಲ್ಲಿನ ಶಾಲೆ ಇದೆಯಲ್ಲ – ಆ ಶಾಲೆಗೆ ಎರಡು ಅರ್ಥಗಳಿವೆ. ಒಂದು ಶಿಕ್ಷಣ ನೀಡುವ ಶಾಲೆ, ಇನ್ನೊಂದು ಸೀರೆ. ಒಂದು ಲೋಕವಿವೇಕ ಮತ್ತೊಂದು ಮಾತೃಮಮತೆಯ ರೂಪಕ. ಈ ಎರಡು ಸಾಧ್ಯತೆಗಳನ್ನೂ ಒಳಗೊಂಡಿರುವುದು ಪಡಸಾಲೆಯ ವಿಶೇಷ. ಮಕ್ಕಳಿಗೆ ಲೋಕವಿವೇಕದ ಕಲಿಕೆ ಹಾಗೂ ಕೌಟುಂಬಿಕ ಪ್ರೇಮದ ಅನುಭವ ಸಾಧ್ಯವಾಗುವುದು ಇಲ್ಲಿಯೇ. ಮನೆಮಂದಿಯನ್ನು ಕೌಟುಂಬಿಕ ಚೌಕಟ್ಟಿನ ಆರ್ದ್ರತೆಯಲ್ಲಿ ಹಿಡಿದಿಡುವುದು ಕೂಡ ಪಡಸಾಲೆಯೇ.

ವಿವೇಕ ಮತ್ತು ವಾತ್ಸಲ್ಯವನ್ನು ಒಳಗೊಂಡಿರುವ ಪಡಸಾಲೆಗೆ ಅತ್ಯುತ್ತಮ ಉದಾಹರಣೆ ಹನ್ನೆರಡನೇ ಶತಮಾನದ ಅನುಭವ ಮಂಟಪ. ಇದು ಕನ್ನಡ ಸಂಸ್ಕೃತಿಯ ಬಹುದೊಡ್ಡ ಪಡಸಾಲೆ. ಅಲ್ಲಮಗುರು, ಬಸವಣ್ಣ, ಅಕ್ಕ, ಸಿದ್ಧರಾಮ ಸೇರಿದಂತೆ ಶರಣರೆಲ್ಲರ ಅನುಭಾವದ ಸಾಮು ನಡೆಯುತ್ತಿದ್ದುದು ಈ ಮಹಾಮನೆಯಲ್ಲೇ. ಜಾತಿ ತಾರತಮ್ಯ, ಮಾತಿನ ಮದ, ಲಿಂಗಭೇದವನ್ನು ನಿರಾಕರಿಸಿದ ಅನುಭವ ಮಂಟಪದ ಮಾತಿನ ಕೂಟದಲ್ಲೇ ಕಾಯಕ ಸಂಸ್ಕೃತಿಯ, ಸಾಮಾಜಿಕ ಕ್ರಾಂತಿಯ ಪ್ರಣಾಲಿಕೆ ರೂಪುಗೊಂಡಿದ್ದು. ‘ಕೂಡಲಸಂಗಮದೇವಯ್ಯಾ, ನಿಮ್ಮ ಮಹಾಮನೆಯಲ್ಲಿ / ಮಡಿವಾಳನೂ ನಾನೂ ಕೂಡಿ ಸುಖದಲ್ಲಿ ಇದ್ದೆವಯ್ಯಾ’ ಎನ್ನುವ ಬಸವಣ್ಣನವರ ವಚನ ಅನುಭವ ಮಂಟಪದ ಸ್ವರೂಪವನ್ನು ಹೇಳುವಂತಿದೆ.

ನಮ್ಮ ಕಾಲದಲ್ಲೂ ಸಾಂಸ್ಕೃತಿಕ ಪಡಸಾಲೆಗಳು ಇಲ್ಲದೇನೂ ಇಲ್ಲ. ಧಾರವಾಡದ ‘ಮನೋಹರ ಗ್ರಂಥಮಾಲೆ’ಯ ಅಟ್ಟ ಒಂದು ಪ್ರಸಿದ್ಧ ಸಾಂಸ್ಕೃತಿಕ ಪಡಸಾಲೆ. ಗೋವಿಂದಾಚಾರ್ಯ ಭೀಮಾಚಾರ್ಯ ಜೋಶಿ (ಜಿ.ಬಿ. ಜೋಶಿ) ಅವರು ಬೆಳೆಸಿದ ‘ಗ್ರಂಥಮಾಲಾ’ದ ಚಟುವಟಿಕೆಗಳಿಗೆ ಅಟ್ಟವೇ ವೇದಿಕೆಯಾಗಿತ್ತು. ರಂ.ಶ್ರೀ. ಮುಗಳಿ, ಬೇಂದ್ರೆ, ಗೋಕಾಕರಂಥವರು ಅಟ್ಟದ ನಂಟು ಹೊಂದಿದ್ದರು. ಕೀರ್ತಿನಾಥ ಕುರ್ತಕೋಟಿ ಅಟ್ಟದ ಅಧ್ಯಕ್ಷರ ರೂಪದಲ್ಲಿ ಗ್ರಂಥಮಾಲೆಯ ಚಟುವಟಿಕೆಗಳನ್ನು ಬಹುಕಾಲ ಪೊರೆದರು. ಇತ್ತೀಚಿನ ವರ್ಷಗಳಲ್ಲಿ ಸಹೃದಯರ ಪಾಲಿಗೆ ವಾರ್ಷಿಕ ಪಡಸಾಲೆಯಾಗಿ ಗಮನಸೆಳೆದಿರುವ ‘ಧಾರವಾಡ ಸಾಹಿತ್ಯ ಸಂಭ್ರಮ’ ಅಟ್ಟದ ವಿಸ್ತರಣೆಯೇ ಆಗಿದೆ. (ಈ ಸಂಭ್ರಮ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಿರಡ್ಡಿ ಗೋವಿಂದರಾಜ ‘ನೆನಪುಗಳ ಪಡಸಾಲೆ’ಗೆ ಸಂದಿದ್ದಾರೆ.) ಡಿ.ವಿ. ಗುಂಡಪ್ಪನವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಧ್ಯಯನ ಗೋಷ್ಠಿ ಕೂಡ ಕನ್ನಡದ ಬಹುಮುಖ್ಯ ಸಾಂಸ್ಕೃತಿಕ ಪಡಸಾಲೆಗಳ ಸಾಲಿಗೆ ಸೇರುವಂತಹದ್ದು.

ಮೈಸೂರಿನ ‘ಕಾಫಿಹೌಸ್‌’, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳು ಹಾಗೂ ಸಂಸ ಬಯಲು ರಂಗಮಂದಿರ ಕನ್ನಡ ಸಾಂಸ್ಕೃತಿಕ ಚರಿತ್ರೆಯ ಕೆಲವು ಮುಖ್ಯವಾದ ಪಡಸಾಲೆಗಳು. ಪ್ರಭಾ ಟಾಕೀಸ್‌ನ ಸಮೀಪವಿದ್ದ ಕಾಫಿ ಹೌಸ್‌ ಅರವತ್ತರ ದಶಕದಲ್ಲಿ ಮೈಸೂರಿನ ಸಾಂಸ್ಕೃತಿಕ ವಲಯದ ಹಿರಿಯ ಕಿರಿಯರಿಗೆ ಬಹುಪ್ರಿಯವಾದ ಸ್ಥಳವಾಗಿತ್ತು. ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ರಾಜೀವ ತಾರಾನಾಥ, ಸದಾಶಿವ, ವಿ.ಕೆ. ನಟರಾಜ, ಜಿ.ಎಚ್‌. ನಾಯಕ, ಗಿರಿ – ಹೀಗೆ ಹಲವರು ಕಾಫಿ ಹೌಸ್‌ ಪರಿಸರವನ್ನು ಸಾಹಿತ್ಯ ಸಂವಾದಗಳಿಗೆ, ಹೊಸ ವಿಚಾರಗಳಿಗೆ ಕೇಂದ್ರವಾಗಿ ರೂಪಿಸಿದ್ದರು. ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳು ಹಾಗೂ ಸಂಸ ಬಯಲು ರಂಗಮಂದಿರ ಕೂಡ 60–70ರ ದಶಕದಲ್ಲಿ ಬೆಂಗಳೂರಿನ ಸಾಹಿತ್ಯ–ರಂಗಭೂಮಿಯ ಮನಸ್ಸುಗಳು ಗಿಜಿಗುಡುತ್ತಿದ್ದ ಪಡಸಾಲೆಗಳಾಗಿದ್ದವು. ಕಾಫಿ ಹೌಸ್‌ ಈಗಿಲ್ಲ; ಕಲಾಕ್ಷೇತ್ರದ ಆವರಣಕ್ಕೆ ಮೊದಲಿನ ಕಳೆಯಿಲ್ಲ.

ಮನೆಯ ತುಂಬ ಒಳಕೋಣೆಗಳಿರುವುದು ಈ ಹೊತ್ತಿನ ಆಧುನಿಕ ಮನೆಗಳ ವಿಶೇಷ. ನಡುಮನೆಯ ಸವಲತ್ತುಗಳೆಲ್ಲ ಒಳಕೋಣೆಗಳಲ್ಲೂ ಇವೆ. ಹಾಗಾಗಿ, ಕೋಣೆಯಿಂದಾಚೆಗೆ ಬರುವುದೆಂದರೆ ಅದು ಮನೆಯಿಂದ ಹೊರಗೆ ಬಂದಂತೆಯೇ. ಒಂದೊಂದು ಕೋಣೆಯಲ್ಲಿ ಇರುವವರದೂ ಒಂದೊಂದು ಜಗತ್ತು. ಅವರನ್ನೆಲ್ಲ ಪಡಸಾಲೆ ಎನ್ನುವ ಜೀವತಂತು ಬೆಸೆಯಬೇಕು. ಇಂದಿನ ಮನೆಗಳಲ್ಲೂ ‘ಲಿವಿಂಗ್ ರೂಂ’ ಹೆಸರಿನಲ್ಲಿ ಪಡಸಾಲೆಗಳು ರೂಪುಗೊಂಡರೂ ‘ಲಿವಿಂಗ್’ ಪದದಲ್ಲಿರುವ ಜೀವಂತಿಕೆ ಅಲ್ಲಿರುವುದು ಕಡಿಮೆ. ಆತಿಥೇಯರು ಕೂತು ಎದ್ದುಹೋಗುವ ಜಾಗಗಳಾಗಿ ಅವು ಬದಲಾಗಿವೆ.

ಮೈಸೂರಿನ ‘ಕಾಫಿ ಹೌಸ್‌’ ಸಂಸ್ಕೃತಿ ಕಳೆಗುಂದಿದ್ದರ ಬಗ್ಗೆ ಅನಂತಮೂರ್ತಿ ತಮ್ಮ ‘ಸುರಗಿ’ ಆತ್ಮಕಥೆಯಲ್ಲಿ ಬರೆಯುತ್ತಾರೆ. ‘ಬೈಟು ಕಾಫಿ ನಡುವೆ, ಸಿಗರೇಟ್ ಹೊಗೆಯಲ್ಲಿ ಆವೃತ್ತರಾಗಿ ನಮ್ಮದೇ ಒಂದು ಲೋಕವನ್ನು ಈ ಸ್ನೇಹಶೀಲ ‘ಕಾಫಿ ಹೌಸ್‌’ನಲ್ಲಿ ನಿರ್ಮಿಸಿಕೊಂಡಿದ್ದೆವು. ಆದರೆ ಇದು ಯಾವಾಗ ಅಸಾಧ್ಯವಾಯಿತು ಹೇಳುತ್ತೇನೆ. ಸಾಹಿತ್ಯದಲ್ಲಿ ಆಧುನಿಕತೆಯನ್ನು

ತರುತ್ತಿದ್ದ ಆ ಕಾಲದಲ್ಲಿ ಆಧುನಿಕವೆಂದು ನಾವು ತಿಳಿದಿದ್ದ ಜ್ಯೂಕ್ ಬಾಕ್ಸ್ ‘ಕಾಫಿ ಹೌಸ್‌’ಗೆ ಕಾಲಿಟ್ಟಿತು. ಅದರ ಏರುದನಿಯ ಸದ್ದಿನ ಗೌಜಿಗೆ ಆಕರ್ಷಿತರಾಗಿ ಯುವಜನರು ‘ಕಾಫಿ ಹೌಸ್‌’ನ್ನು ತುಂಬತೊಡಗಿದರು. ಆಧುನಿಕತೆಯೇ ಆಧುನಿಕ ಸಾಹಿತ್ಯ ಚರ್ಚೆ ನಡೆಸುತ್ತಿದ್ದ ಬೆತ್ತದ ಸುಖಾಸನಗಳನ್ನು ನಮ್ಮಿಂದ ದೋಚಿತು. ನಾವು ಪಾರ್ಕ್‌ಗಳ ಮರಗಳ ಬುಡ ಹುಡುಕಿದೆವು. ಕಾಫಿಯಿಲ್ಲದೆ ನಮ್ಮ ಚರ್ಚೆಗಳು ಕುಂದಿದವು’. ಈ ಮಾತು ನಮ್ಮ ಮನೆಗಳ ಪಡಸಾಲೆಗಳಿಗೂ ಹೊಂದುತ್ತದೆ. ಜ್ಯೂಕ್‌ ಬಾಕ್ಸ್‌ ಜಾಗದಲ್ಲಿ ಟೀವಿ ಬಂದಿದೆ. ನಮ್ಮ ಕೈಗಳಿಗೆ ಮೊಬೈಲ್‌ ಬಂದಿದೆ. ಮಮತೆಯನ್ನು ಟೀವಿಯ ಧಾರಾವಾಹಿಗಳಲ್ಲೂ ಲೋಕವಿವೇಕವನ್ನು ಮೊಬೈಲ್‌ಗಳಲ್ಲೂ ಕಂಡುಕೊಳ್ಳತೊಡಗಿದ್ದೇವೆ.

ಇವತ್ತಿನ ಫೇಸ್‌ಬುಕ್‌ ಕೂಡ ಒಂದು ಪಡಸಾಲೆಯೇ. ಸಮಸ್ಯೆಯಿರುವುದು ಈ ಪಡಸಾಲೆಯಲ್ಲಿನ ಸಂವಹನದಲ್ಲಿ. ಮುಖಪುಟದಲ್ಲಿ ಮುಖಗಳನ್ನು ನೋಡುತ್ತೇವೆ: ಆದರೆ, ಅವು ನಿಜಮುಖಗಳೋ ಮುಖವಾಡಗಳೋ ಎನ್ನುವುದು ಅರ್ಥವಾಗುವುದು ಕಷ್ಟ. ಮುಖಗಳ ಹಿಂದಿನ ಮನಸ್ಸುಗಳನ್ನು ಮುಟ್ಟುವುದು ಇನ್ನೂ ಕಷ್ಟ. ಇದರ ವ್ಯಾಪ್ತಿ ಜಗದಗಲ ಮುಗಿಲಗಲ ಇರುವುದು ಅದರ ಸಮಸ್ಯೆಯೂ ಆಗಿದೆ. ಈ ಪಡಸಾಲೆಯಲ್ಲಿಯೇ ನಾವು ತಿಳಿದೋ ತಿಳಿಯದೆಯೋ ನಂನಮ್ಮ ಒಳಕೋಣೆಗಳನ್ನು ರೂಪಿಸಿಕೊಂಡಿದ್ದೇವೆ. ಆ ಕಾರಣದಿಂದಲೇ ಅನೇಕ ಸಂದರ್ಭದಲ್ಲಿ ಮಾತು ಬರಹಗಳು ನಮ್ಮ ನಿಯಂತ್ರಣವನ್ನೂ ಮೀರಿ ದಾಖಲಾಗಿಬಿಡುತ್ತವೆ. ‘ನಾನು ಆಡುವ ಮಾತು ನನ್ನನ್ನೆ ಕಾಣಬಲ್ಲವೆ?’ ಎನ್ನುತ್ತಾರೆ ಅನಂತಮೂರ್ತಿ. ಹೀಗೆ ನಮ್ಮನ್ನು ನಾವು ಕಾಣುವುದು ಕೂತು ಮಾತನಾಡುವ ಒಡನಾಡುವ ಪಡಸಾಲೆಗಳಲ್ಲಿ ಸಾಧ್ಯ; ಫೇಸ್‌ಬುಕ್‌ನಂಥ ಮೊಗಸಾಲೆಗಳಲ್ಲಿ ಕಷ್ಟ.

ಪಡಸಾಲೆಗಳನ್ನು ಹೆಚ್ಚಿಸುವುದು ಈ ಹೊತ್ತಿನ ಅಗತ್ಯ. ಭೌತಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯೂ ಪಡಸಾಲೆಗಳನ್ನು ರೂಪಿಸಿಕೊಳ್ಳಬೇಕಿದೆ. ಮುಚ್ಚುಮರೆಗಳಿಲ್ಲದ, ಕಂಬಗಳಷ್ಟೇ ಇರುವ ಈ ಪಡಸಾಲೆಯಲ್ಲಿ ಎಲ್ಲರೂ ಕೂತು ಮಾತನಾಡಬೇಕಿದೆ. ಮುಕ್ತ ಮಾತು, ಮಮತೆ, ಸಹನೆ, ಸೌಹಾರ್ದ – ಪಡಸಾಲೆಯೆನ್ನುವುದು ‘ರಸಿಕರ ಕಂಗಳ ಸೆಳೆಯುವ ನೋಟ’.

ನಾವು–ನೀವು, ಅವರು–ಇವರು, ಪಡಸಾಲೆಯೊಳಗೆ ಎಲ್ಲರೂ ಮನುಷ್ಯರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.