ಸಿದ್ದರಾಮಯ್ಯ ನಡೆಗೆ ಅಸಮಾಧಾನ

7
ಕಾಂಗ್ರೆಸ್‌ ವರಿಷ್ಠರಿಗೆ ಸ್ಥಳೀಯ ನಾಯಕರಿಂದ ದೂರು?

ಸಿದ್ದರಾಮಯ್ಯ ನಡೆಗೆ ಅಸಮಾಧಾನ

Published:
Updated:
ಸಿದ್ದರಾಮಯ್ಯ ನಡೆಗೆ ಅಸಮಾಧಾನ

ಬೆಂಗಳೂರು: ಸಚಿವಾಕಾಂಕ್ಷಿಗಳ ಬಂಡಾಯ ಭುಗಿಲೆದ್ದಿರುವ ಬೆನ್ನಲ್ಲೆ ದೂರದ ಬಾದಾಮಿಯಲ್ಲಿ ಮೊಕ್ಕಾಂ ಮಾಡಿರುವ ಕಾಂಗ್ರೆಸ್ ಶಾಸಕಾಂಗದ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪಕ್ಷದ ಆಂತರಿಕ ವಲಯದಲ್ಲೇ ಅಸಮಾಧಾನ ವ್ಯಕ್ತವಾಗಿದೆ.

ಅತೃಪ್ತ ಶಾಸಕರನ್ನು ಸಮಾಧಾನಪಡಿಸಬೇಕಾದ ಸಿದ್ದರಾಮಯ್ಯ, ತಮಗೂ ಭಿನ್ನಮತಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಇದ್ದಾರೆ. ಅವರ ಈ ನಡೆ ಕೆಲವು ನಾಯಕರ ಅಸಹನೆಗೆ ಕಾರಣವಾಗಿದ್ದು, ಈ ವಿಷಯವನ್ನು ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದಾರೆ ಎಂದು ಗೊತ್ತಾಗಿದೆ.

ಸಿದ್ದರಾಮಯ್ಯ ಅವರು ಅತೃಪ್ತರನ್ನು ಕರೆದು ಮಾತನಾಡಿಸಿಲ್ಲ. ಬಾದಾಮಿ ಕ್ಷೇತ್ರದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ಪಕ್ಷದ ಆಂತರಿಕ ಸಂಘರ್ಷದಿಂದ ದೂರ ಉಳಿದಿದ್ದಾರೆ. ಅವರು ಬಾದಾಮಿಯಲ್ಲಿ ಐದು ದಿನ ಉಳಿಯುವ ಅವಶ್ಯಕತೆಯಾದರೂ ಏನು. ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮ ಆಗಿದ್ದರೂ, ಒಂದೆರಡು ದಿನ ಅಲ್ಲಿದ್ದು ವಾಪಸ್ ಬರಬೇಕಿತ್ತು ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಹರಿದಾಡುತ್ತಿದೆ.

ಅತೃಪ್ತರ ಅಸಮಾಧಾನ, ಬೆಂಬಲಿಗರ ಹೋರಾಟ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. 15–20 ಅತೃಪ್ತ ಶಾಸಕರ ಬಣ ಸಿದ್ಧವಾಗಿದೆ. ಈ ಬಣದಲ್ಲಿ ಅವರ ಜೊತೆ ಇದ್ದವರೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಪಕ್ಷದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಅವರು ದೂರ ಉಳಿಯಲು ಕಾರಣವೇನು ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ.

ಅಸಮಾಧಾನ ಶಮನ ಮಾಡಬೇಕಾದವರೇ ಹೀಗೆ ದೂರ ಉಳಿದರೆ ಹೇಗೆ. ಇದು ಹೀಗೆ, ಆದರೆ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ಮೈತ್ರಿ ಸರ್ಕಾರದ ಮೇಲೂ ಪರಿಣಾಮ ಬೀರಲಿದೆ ಎಂದೂ ಕೆಲವು ನಾಯಕರು ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ.

ಕಿರಿಯರಷ್ಟೇ ನೇತೃತ್ವ: ಪಕ್ಷದಲ್ಲಿ ಅತೃಪ್ತಿ ಹೊಗೆಯಾಡುತ್ತಿದ್ದು ಬಂಡಾಯ ಸ್ವರೂಪ ಪಡೆದುಕೊಳ್ಳುತ್ತಿದ್ದರೂ ಹಿರಿಯ ನಾಯಕರು ಕೇವಲ ಹೇಳಿಕೆಗೆ ಸೀಮಿತವಾಗಿರುವುದು ಎರಡನೇ ಹಂತದ ನಾಯಕರಲ್ಲಿ ಸಿಟ್ಟು ತರಿಸಿದೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಾವಾಯಿತು, ತಮ್ಮ ಪಾಡಾಯಿತು ಎಂಬಂತೆ ಇದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಕೂಡ ಇತ್ತ ಮುಖ ಹಾಕಿಲ್ಲ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಂ. ವೀರಪ್ಪ ಮೊಯಿಲಿ, ಬಿ.ಕೆ. ಹರಿಪ್ರಸಾದ್‌ ಯಾರೊಬ್ಬರೂ ಬಂಡಾಯ ಶಮನಕ್ಕೆ ಯತ್ನ ನಡೆಸಿಲ್ಲ.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಮಾತ್ರ ಅತೃಪ್ತರ ಜತೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಪಕ್ಷದ ಶಾಸಕರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಬಿಕ್ಕಟ್ಟು ಸೃಷ್ಟಿಯಾದ ಹೊತ್ತಿನಲ್ಲಿ ಹಿರಿಯರೆಲ್ಲ ತೆರೆಮರೆಗೆ ಸರಿದಿರುವುದು ಎರಡನೇ ಹಂತದ ನಾಯಕರ ಕೋಪಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.

*

ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ ಗರಂ 

ಬಾಗಲಕೋಟೆ: ‘ಪಕ್ಷದ ಹೈಕಮಾಂಡ್, ನನ್ನನ್ನು ದೆಹಲಿಗೆ ಬರೋಕೆ ಹೇಳಿರುವುದರ ಬಗ್ಗೆ ನಿಮ್ಮಲ್ಲಿ ಪತ್ರ ಏನಾದರೂ ಇದ್ದರೆ ಕೊಡಿ’ ಎಂದು ಮಾಧ್ಯಮದವರಿಗೆ ಶಾಸಕ ಸಿದ್ದರಾಮಯ್ಯ ಕೇಳಿದರು.

ಬಾದಾಮಿ ತಾಲ್ಲೂಕಿನ ಬೇಲೂರಿನಲ್ಲಿ ಶನಿವಾರ ಆ ಬಗ್ಗೆ ಎದುರಾದ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, ‘ನನಗ್ಯಾರೂ ದೆಹಲಿಗೆ ಬರೋಕೆ ಹೇಳಿಲ್ಲ. ನಾನೇಕೆ ಅಲ್ಲಿಗೆ ಹೋಗಲಿ? ನನಗೇನೂ ಗೊತ್ತಿಲ್ಲ. ನಾನು ಇನ್ನೂ ಮೂರು ದಿನ ಬಾದಾಮಿಯಲ್ಲೇ ಇರ್ತೀನಿ’ ಎಂದರು.

ಸಮ್ಮಿಶ್ರ ಸರ್ಕಾದಲ್ಲಿ ಸಚಿವ ಸ್ಥಾನ ಸಿಗದವರ ಬಂಡಾಯದ ಬಗ್ಗೆ ಕೇಳಿದಾಗ, ‘ದಮ್ಮಯ್ಯ ಅಂತೀನಿ. ನೋ ರಿಯಾಕ್ಷನ್. ನನ್ನನ್ನು ಏನೂ ಕೇಳ್ಬೇಡಿ; ಮಾತಾಡಬೇಕಾದಾಗ ನಾನೇ ಕರೆಯಿಸಿ ಪ್ರತಿಕ್ರಿಯೆ ಕೊಡ್ತೀನಿ. ಈಗ, ಕ್ಷೇತ್ರದ ಜನರ ಜೊತೆ ಮಾತನಾಡಲು ಬಿಡಿ’ ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ಸತತ ಮೂರನೇ ದಿನ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ, ಬೇಲೂರಿನಲ್ಲಿ ಮತದಾರರ ಕೃತಜ್ಞತಾ ಸಭೆ ನಡೆಸಿ ಅವರ ಅಹವಾಲು ಆಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry