ಫೈನಲ್‌ಗೆ ಭಾರತ ಮಹಿಳೆಯರು: ಪಾಕಿಸ್ತಾನ ತಂಡಕ್ಕೆ ನಿರಾಸೆ

7

ಫೈನಲ್‌ಗೆ ಭಾರತ ಮಹಿಳೆಯರು: ಪಾಕಿಸ್ತಾನ ತಂಡಕ್ಕೆ ನಿರಾಸೆ

Published:
Updated:
ಫೈನಲ್‌ಗೆ ಭಾರತ ಮಹಿಳೆಯರು: ಪಾಕಿಸ್ತಾನ ತಂಡಕ್ಕೆ ನಿರಾಸೆ

ಕ್ವಾಲಾಲಂಪುರ: ಪಾಕಿಸ್ತಾನ ವಿರುದ್ಧ ಅಧಿಪತ್ಯ ಸ್ಥಾಪಿಸಿದ ಭಾರತ ಮಹಿಳಾ ತಂಡದವರು ಏಷ್ಯಾ ಕಪ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಫೈನಲ್‌ ಪ್ರವೇಶಿಸಿದರು.

ಇಲ್ಲಿನ ಕಿನ್ರಾರಾ ಅಕಾಡೆಮಿ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಗೆದ್ದಿತು. ಎಡಗೈ ಸ್ಪಿನ್ನರ್ ಏಕ್ತಾ ಬಿಶ್ಟ್ ಅವರ ಪರಿಣಾಮಕಾರಿ ಬೌಲಿಂಗ್ ಹಾಗೂ ಸ್ಮೃತಿ ಮಂದಾನ–ಹರ್ಮನ್‌ಪ್ರೀತ್ ಕೌರ್ ಜೋಡಿಯ ಉತ್ತಮ ಬ್ಯಾಟಿಂಗ್ ಭಾರತ ತಂಡದ ಸುಲಭ ಜಯಕ್ಕೆ ಕಾರಣವಾಯಿತು.

ಉಭಯ ತಂಡಗಳಿಗೂ ಇದು ರೌಂಡ್‌ ರಾಬಿನ್ ಹಂತದ ಕೊನೆಯ ಪಂದ್ಯ ಆಗಿತ್ತು. ತಲಾ ಮೂರು ಪಂದ್ಯಗಳನ್ನು ಗೆದ್ದು ಆರು ಪಾಯಿಂಟ್ ಗಳಿಸಿದ್ದರಿಂದ ಫೈನಲ್‌ಗೆ ಪ್ರವೇಶಿಸಬೇಕಾದರೆ ಎರಡೂ ತಂಡಗಳಿಗೆ ಇಲ್ಲಿ ಜಯ ಅನಿವಾರ್ಯ ಆಗಿತ್ತು. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನವನ್ನು 72 ರನ್‌ಗಳಿಗೆ ನಿಯಂತ್ರಿಸಿದ ಭಾರತ 16.1 ಓವರ್‌ಗಳಲ್ಲಿ ಗುರಿ ಮುಟ್ಟಿತು.

ಸುಲಭ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲಿ ಎಡಗೈ ಸ್ಪಿನ್ನರ್‌ ಅನಮ್ ಆಮಿನ್ ಆಘಾತ ನೀಡಿದರು. ತಂಡದ ಮೊತ್ತ ಒಂದು ರನ್ ಆಗಿದ್ದಾಗ ಮಿಥಾಲಿ ರಾಜ್ ಅವರನ್ನು ಬೌಲ್ಡ್ ಮಾಡಿದ ಅವರು ತಮ್ಮ ಎರಡನೇ ಓವರ್‌ನಲ್ಲಿ ದೀಪ್ತಿ ಶರ್ಮಾ ಅವರ ವಿಕೆಟ್ ಕಬಳಿಸಿದರು. ಆಗ ಭಾರತದ ಖಾತೆಯಲ್ಲಿ ಇದ್ದದ್ದು ಐದು ರನ್ ಮಾತ್ರ.

ಈ ಸಂದರ್ಭದಲ್ಲಿ ಜೊತೆಗೂಡಿದ ಮಂದಾನ ಮತ್ತು ಕೌರ್‌ ಮೂರನೇ ವಿಕೆಟ್‌ಗೆ 65 ರನ್ ಸೇರಿಸಿದರು. ಗೆಲುವಿಗೆ ಮೂರು ರನ್ ಅಗತ್ಯವಿದ್ದಾಗ ಮಂದಾನ (38; 40 ಎ, 4 ಬೌಂ) ಔಟಾದರು. ಆದರೆ ಗೆಲುವಿನ ದಡ ಸೇರಲು ತಂಡಕ್ಕೆ ಇದರಿಂದ ಯಾವುದೇ ಅಡ್ಡಿಯಾಗಲಿಲ್ಲ. ಅನುಜಾ ಪಾಟೀಲ್ ಜೊತೆಗೂಡಿ ಕೌರ್‌ (34; 49 ಎ, 3 ಬೌಂ) ಜಯದ ರನ್ ಬಾರಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಆಟಗಾರ್ತಿಯರಿಗೆ ಯಾವುದೇ ಹಂತದಲ್ಲೂ ಭಾರತದ ಬೌಲರ್‌ಗಳನ್ನು ಸಮರ್ಪಕವಾಗಿ ಎದುರಿಸಲು ಆಗಲಿಲ್ಲ. ಮೊದಲ ರನ್ ಗಳಿಸಿದ ತಕ್ಷಣ ತಂಡ ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಟಗಾರ್ತಿ ನಹಿದಾ ಖಾನ್‌ ಮತ್ತು ಆರನೇ ಕ್ರಮಾಂಕದ ಸನಾ ಮಿರ್ ಅವರನ್ನು ಬಿಟ್ಟರೆ ಇತರ ಯಾರಿಗೂ ಎರಡಂಕಿ ಮೊತ್ತ ದಾಟಲು ಆಗಲಿಲ್ಲ.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 72 (ನಹಿದಾ ಖಾನ್‌ 18, ಸನಾ ಮಿರ್ 20; ಶಿಖಾ ಪಾಂಡೆ 6ಕ್ಕೆ1, ಅನುಜಾ ಪಾಟೀಲ್‌ 18ಕ್ಕೆ1, ಏಕ್ತಾ ಬಿಶ್ಟ್ 14ಕ್ಕೆ3, ಪೂನಮ್‌ ಯಾದವ್‌ 11ಕ್ಕೆ1, ದೀಪ್ತಿ ಶರ್ಮಾ 13ಕ್ಕೆ1).

ಭಾರತ:16.1 ಓವರ್‌ಗಳಲ್ಲಿಇ ಮೂರು ವಿಕೆಟ್‌ಗಳಿಗೆ 75 (ಸ್ಮೃತಿ ಮಂದಾನ 38, ಹರ್ಮನ್‌ಪ್ರೀತ್ ಕೌರ್‌ 34).

ಫಲಿತಾಂಶ:ಭಾರತಕ್ಕೆ ಏಳು ವಿಕೆಟ್‌ಗಳ ಜಯ; ಫೈನಲ್‌ ಪ್ರವೇಶ.

ಪಂದ್ಯಶ್ರೇಷ್ಠ : ಏಕ್ತಾ ಬಿಶ್ಟ್.

ಇಂದು ಬಾಂಗ್ಲಾ ಎದುರು ಪೈಪೋಟಿ

ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾ ದೇಶವನ್ನು ಎದುರಿಸಲಿದೆ. ಶನಿವಾರದ ಪಂದ್ಯದಲ್ಲಿ ಮಲೇಷ್ಯಾವನ್ನು 70 ರನ್‌ಗಳಿಂದ ಮಣಿಸಿದ ಬಾಂಗ್ಲಾದೇಶ ತಂಡ ಪಾಯಿಂಟ್ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿತು. ಈ ಮೂಲಕ ಇದೇ ಮೊದಲ ಬಾರಿ ಫೈನಲ್‌ಗೆ ಪ್ರವೇಶಿಸಿತು. ಹಾಲಿ ಚಾಂಪಿಯನ್‌ ಭಾರತ ನಿರಂತರ ಏಳನೇ ಬಾರಿ ಫೈನಲ್‌ಗೆ ತಲುಪಿದೆ.

ಪಂದ್ಯ ಆರಂಭ: 11.30 (ಭಾರತೀಯ ಕಾಲಮಾನ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry