ಅಣ್ಣನ ಜನಪ್ರಿಯತೆಯೇ ಗೆಲುವಿಗೆ ಬಂಡವಾಳ: ಪ್ರಹ್ಲಾದ್‌

7

ಅಣ್ಣನ ಜನಪ್ರಿಯತೆಯೇ ಗೆಲುವಿಗೆ ಬಂಡವಾಳ: ಪ್ರಹ್ಲಾದ್‌

Published:
Updated:
ಅಣ್ಣನ ಜನಪ್ರಿಯತೆಯೇ ಗೆಲುವಿಗೆ ಬಂಡವಾಳ: ಪ್ರಹ್ಲಾದ್‌

ಬೆಂಗಳೂರು: ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಜಯನಗರ ಶಾಸಕ ಬಿ.ಎನ್‌. ವಿಜಯ್‌ಕುಮಾರ್‌ ಅವರಿಗೆ ವಿಧಿ ಕೊನೆ ಗಳಿಗೆಯಲ್ಲಿ ಕೈಕೊಟ್ಟಿತು. ಬದಲಾದ ಪರಿಸ್ಥಿತಿಯಲ್ಲಿ, ಈ ಕ್ಷೇತ್ರದ ಜವಾಬ್ದಾರಿ ಹೊತ್ತುಕೊಳ್ಳುವ ಹುಮ್ಮಸ್ಸಿನಲ್ಲಿರುವ ಅವರ ಸೋದರ ಬಿ.ಎನ್‌.ಪ್ರಹ್ಲಾದ್‌ (ಬಾಬು) ಚುನಾವಣೆ ಕುರಿತು ತಮ್ಮ ಅಭಿಪ್ರಾಯಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

*ಮೊದಲಿನಿಂದಲೂ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿಯೇ ಕೆಲಸ ಮಾಡಿರುವ ನೀವು, ರಾಜಕೀಯವಾಗಿ ಗುರುತಿಸಿಕೊಂಡಿದ್ದು ಕಡಿಮೆ. ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಬಗ್ಗೆ ಆತಂಕವಿಲ್ಲವೇ? 

ರಾಜಕೀಯಕ್ಕೆ ನಾನು ಹೊಸಬ. ಆದರೆ, ರಾಜಕೀಯವನ್ನು ಹತ್ತಿರದಿಂದಲೇ ನೋಡಿದ್ದೇನೆ, ಅರ್ಥೈಸಿಕೊಂಡಿದ್ದೇನೆ. ರಾಜಕೀಯ ದೃಷ್ಟಿಯಿಂದ ಇಲ್ಲಿಯವರೆಗೆ ಜನರನ್ನು ಸಂಘಟಿಸಿಲ್ಲದಿದ್ದರೂ, ಸಂಘದ ಕಾರ್ಯಕರ್ತನಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ.  ಹೀಗಾಗಿ, ಯಾವುದೇ ಆತಂಕವಿಲ್ಲ.

* ಅನುಕಂಪದ ಮತ ಪಡೆಯುವ ಉದ್ದೇಶದಿಂದಲೇ ಬಿಜೆಪಿ ನಿಮಗೆ ಟಿಕೆಟ್‌ ನೀಡಿದೆ. ಜಯನಗರ ಕ್ಷೇತ್ರದಲ್ಲಿ ನಿಮ್ಮ ಪರ ಅಲೆ ಇದೆಯೇ? ಅನುಕಂಪ ನಿಮ್ಮ ಹಾದಿಯನ್ನು ಸುಗಮವಾಗಿಸುತ್ತದೆಯೇ? 

ಖಂಡಿತವಾಗಿಯೂ ಅನುಕಂಪದ ಅಲೆ ನನ್ನ ಗೆಲುವಿಗೆ ನೆರವಾಗುತ್ತದೆ. ಕ್ಷೇತ್ರದ ಜನರೊಂದಿಗೆ ಅವರಿಗಿದ್ದ  ಒಡನಾಟ, ಅಭಿವೃದ್ಧಿ ಕೆಲಸಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಸತತ ಎರಡು ಬಾರಿ ಅವರನ್ನು ಆರಿಸಿದ್ದಾರೆ. ಅವರ ಕೆಲಸಗಳನ್ನೇ ಮುಂದುವರಿಸುವ ಅಭಿಲಾಷೆ ಹೊಂದಿರುವ ನನಗೂ ಈ ಕ್ಷೇತ್ರದ ಜನ ಆಶೀರ್ವಾದ ಮಾಡುತ್ತಾರೆ.

* ಕಳೆದ ಚುನಾವಣೆಯಲ್ಲಿ ಬಿಜೆಪಿ 12,348 ಮತಗಳಿಂದ ಕಾಂಗ್ರೆಸ್‌ ವಿರುದ್ಧ ಗೆದ್ದಿತ್ತು. ಈ ಬಾರಿ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಬಿಜೆಪಿ ಸೋಲಿಗೆ ಕಾರಣವಾಗಲಿದೆಯೇ? 

ಹಿಂದಿನ ಸಲ ಜೆಡಿಎಸ್‌ನಿಂದ ಮುಸ್ಲಿಂ ಸಮುದಾಯದ ಸಮೀವುಲ್ಲಾ ಸ್ಪರ್ಧಿಸಿದ್ದರು. ಅವರು ಸುಮಾರು 12 ಸಾವಿರ ಮತಗಳನ್ನು ಪಡೆದಿದ್ದರಿಂದ ಮತ ವಿಭಜನೆಯಾಗಿತ್ತು. ಈ ಬಾರಿ ಕಾಳೇಗೌಡರಿಗೆ ಜೆಡಿಎಸ್‌ ಟಿಕೆಟ್‌ ನೀಡಿತ್ತು. ಆದರೆ, ಕಾಂಗ್ರೆಸ್‌ ಜತೆಗಿನ ಮೈತ್ರಿಯಿಂದ ಅವರನ್ನು ತಟಸ್ಥಗೊಳಿಸಲಾಗಿದೆ. ಸದ್ಯ ಕಣದಲ್ಲಿರುವ ಅಭ್ಯರ್ಥಿ ನನಗೆ ಪ್ರತಿಸ್ಪರ್ಧಿ ಎನಿಸಿಲ್ಲ.

* ಕೊನೆ ಕ್ಷಣದಲ್ಲಿ ಪಕ್ಷದ ವರಿಷ್ಠರು ನಿಮ್ಮ ಪರ ಪ್ರಚಾರಕ್ಕೆ ಬಂದಿದ್ದಾರೆ. ನಿಮಗೆ ಟಿಕೆಟ್‌ ಸಿಕ್ಕಿರುವ ಬಗ್ಗೆ ಬಿಜೆಪಿಯೊಳಗೆ ವಿರೋಧವಿದೆಯೇ? 

ಆ ರೀತಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹಿಂದಿನ ಚುನಾವಣೆಗಳನ್ನೂ ನೋಡಿ, ಆಗಲೂ ವರಿಷ್ಠರು ಇಲ್ಲಿ ಪ್ರಚಾರ ನಡೆಸಿಲ್ಲ. ‘ಈ ಕ್ಷೇತ್ರದಲ್ಲಿ ಪ್ರಚಾರದ ಅಗತ್ಯವಿಲ್ಲ. ಇಲ್ಲಿಗೆ ವಿಜಯ್‌ಕುಮಾರ್‌ ಅಷ್ಟೇ ಸಾಕು’ ಎಂದು ಅನಂತ್‌ ಕುಮಾರ್‌ ಆಗ ಹೇಳುತ್ತಿದ್ದರು. ನಾನು ಇಲ್ಲಿ ಮೊದಲ ಬಾರಿ ಸ್ಪರ್ಧಿಸುತ್ತಿರುವುದರಿಂದ ಅನೇಕರು ನನ್ನ ಪರ ಪ್ರಚಾರ ಮಾಡಿದ್ದಾರೆ.

* ಜನ ನಿಮ್ಮನ್ನು ಏಕೆ ಗೆಲ್ಲಿಸಬೇಕು? 

ಉತ್ತಮ ಶಾಸಕ ಎಂಬ ಹಿರಿಮೆ ಅಣ್ಣನಿಗೆ ಎರಡು ಬಾರಿ ದೊರೆತಿದೆ. ಕ್ಷೇತ್ರದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಸಿಕೊಂಡು ಹೋಗುವುದಕ್ಕಾಗಿ ನನಗೆ ಮತ ನೀಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry