ಜಯನಗರ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ

7
ಇದೇ 11ರಂದು ಮತದಾನ

ಜಯನಗರ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ

Published:
Updated:
ಜಯನಗರ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಇದೇ 11ರಂದು ನಡೆಯಲಿದ್ದು, ಬಹಿರಂಗ ಪ್ರಚಾರ ಶನಿವಾರ ಮುಕ್ತಾಯವಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್. ವಿಜಯಕುಮಾರ್ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರದ ಮತದಾನ ಮುಂದೂಡಿಕೆಯಾಗಿತ್ತು. ವಿಜಯಕುಮಾರ್ ಸೋದರ ಬಿ.ಎನ್‌. ಪ್ರಹ್ಲಾದ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿ ಅನುಕಂಪದ ಆಧಾರದ ಮೇಲೆ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ.

ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಕಾಳೇಗೌಡ, ಸೌಮ್ಯಾರೆಡ್ಡಿಗೆ ಬೆಂಬಲ ಘೋಷಿಸಿ ಸ್ಪರ್ಧೆಯಿಂದ ನಿವೃತ್ತಿಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಕಣದಲ್ಲಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತದಾನ ನಡೆದಿತ್ತು. ಆಗ ಜೆಡಿಎಸ್‌–ಕಾಂಗ್ರೆಸ್ ಎದುರಾಳಿಗಳಾಗಿ ಸ್ಪರ್ಧಿಸಿದ್ದವು. ಕಾಂಗ್ರೆಸ್‌ನ ಮುನಿರತ್ನ ಗೆದ್ದಿದ್ದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೇಷರತ್ ಬೆಂಬಲ ನೀಡುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಘೋಷಿಸಿದರು. ಬಿಜೆಪಿಯನ್ನು ಮಣಿಸಲು ಮಿತ್ರ ಪಕ್ಷಗಳು ಒಂದಾಗಿರುವುದು ಹೊಸ ಬೆಳವಣಿಗೆಯಾಗಿದೆ.

ಪ್ರಚಾರದ ಅಬ್ಬರ: ಸೌಮ್ಯಾರೆಡ್ಡಿ ಹಾಗೂ ಅವರ ತಂದೆ ರಾಮಲಿಂಗಾರೆಡ್ಡಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿ ಮತ ಯಾಚಿಸಿದರು. ಆದರೆ, ಕಾಂಗ್ರೆಸ್‌ನ ನಾಯಕರು ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿಲ್ಲ.

ಬಿಜೆಪಿ ಅಭ್ಯರ್ಥಿ ಪರವಾಗಿ ಕೇಂದ್ರ ಸಚಿವ ಅನಂತ್ ಕುಮಾರ್‌, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕ ಆರ್. ಅಶೋಕ್ ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಒಗ್ಗಟ್ಟು: ಪ್ರಚಾರ ಸಭೆಗಳಲ್ಲಿ ಶನಿವಾರ ಪಾಲ್ಗೊಂಡ ಕೇಂದ್ರ ಸಚಿವ ಅನಂತ್‌ ಕುಮಾರ್, ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ಬಿಕ್ಕಟ್ಟು ಮುಂದುವರಿದಿದೆ. ಜೆಡಿಎಸ್‌ನಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಇದೆ. ಬಿಜೆಪಿಯಲ್ಲಿ ಮಾತ್ರ ಒಗ್ಗಟ್ಟು ಕಾಣಿಸುತ್ತಿದೆ ಎಂದು  ಹೇಳಿದರು.

ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದ ದಿವಂಗತ ಬಿ.ಎನ್ ವಿಜಯಕುಮಾರ್ ಜಯನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಅಧಿಕಾರದ ಆಸೆಗಾಗಿ ಹೊರಗಿನಿಂದ ಬಂದಿರುವ ಅಭ್ಯರ್ಥಿಗಳು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಕಾಂಗ್ರೆಸ್‌ನಲ್ಲಿ ಒಂದು ವಿಕೆಟ್ ಪತನಗೊಂಡಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಜಯಗೊಳ್ಳುವುದರೊಂದಿಗೆ ಎರಡನೇ ವಿಕೆಟ್ ಪತನಗೊಳ್ಳಲಿದೆ. ಬಿಜೆಪಿ ಗೆಲುವಿನೊಂದಿಗೆ ಸರ್ಕಾರ ಪತನದ ಕ್ಷಣಗಣನೆಯೂ ಆರಂಭವಾಗಲಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry