‘ಕೈ’ ಕೋಪ ಶಮನಕ್ಕೆ ಕುಮಾರಸ್ವಾಮಿ ರಂಗ ಪ್ರವೇಶ

7
ಸಚಿವ ಸ್ಥಾನ ಕೈತಪ್ಪಿದ ಕಾಂಗ್ರೆಸ್‌ ಶಾಸಕರ ಜತೆ ಮಾತುಕತೆ

‘ಕೈ’ ಕೋಪ ಶಮನಕ್ಕೆ ಕುಮಾರಸ್ವಾಮಿ ರಂಗ ಪ್ರವೇಶ

Published:
Updated:
‘ಕೈ’ ಕೋಪ ಶಮನಕ್ಕೆ ಕುಮಾರಸ್ವಾಮಿ ರಂಗ ಪ್ರವೇಶ

ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿರುವ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಅಸಮಾಧಾನದ ಬೇಗುದಿಯನ್ನು ತಣ್ಣಗಾಗಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಂಗ ಪ್ರವೇಶ ಮಾಡಿದ್ದಾರೆ.

ಶಾಸಕರ ಅತೃಪ್ತಿ ಬಂಡಾಯ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ, ಈ ಬೆಳವಣಿಗೆ ಸರ್ಕಾರದ ಸುಗಮ ನಡೆ ಹಾಗೂ ಆಡಳಿತ ವೈಖರಿಯ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕದಿಂದ ಮಧ್ಯಸ್ಥಿಕೆ ವಹಿಸಲು ಮುಂದಾದರು. ಮಿತ್ರ ಪಕ್ಷದ ಹಿರಿಯ ಮತ್ತು ಕಿರಿಯ ಶಾಸಕರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿ, ನಿಮ್ಮೆಲ್ಲ ನೋವು, ಭಾವನೆಗಳನ್ನು ರಾಹುಲ್ ಗಾಂಧಿ ಅವರ ಗಮನಕ್ಕೆ ತರುವುದಾಗಿ ವಾಗ್ದಾನ ನೀಡಿದರು ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ ಭಿನ್ನಮತೀಯ ಶಾಸಕರ ನೇತೃತ್ವ ವಹಿಸಿರುವ ಎಂ.ಬಿ. ಪಾಟೀಲರ ಮನೆಗೆ ಶುಕ್ರವಾರವೇ ದೌಡಾಯಿಸಿದ್ದ ಕುಮಾರಸ್ವಾಮಿ, ಅವರ ನೋವುಗಳನ್ನು ಆಲಿಸಿದರು.

‘ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ ಮಾತ್ರವಲ್ಲದೇ, 60ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರತ್ಯಕ್ಷ–ಪರೋಕ್ಷವಾಗಿ ನೆರವಾಗಿದ್ದೇನೆ. ಕಾಂಗ್ರೆಸ್‌ ಹೈಕಮಾಂಡ್‌ನ ಬೆನ್ನಿಗೆ ನಿಂತು ಐದು ವರ್ಷ ಕೆಲಸ ಮಾಡಿದ್ದೇನೆ. ಜಲಸಂಪನ್ಮೂಲ ಖಾತೆ ನೀಡುವ ಭರವಸೆಯನ್ನೂ ನೀಡಲಾಗಿತ್ತು. ಪಟ್ಟಿ ಅಖೈರುಗೊಳಿಸಿದ ಮಧ್ಯರಾತ್ರಿ 1 ಗಂಟೆಯವರೆಗೂ ಅದರಲ್ಲಿ ನನ್ನ ಹೆಸರಿತ್ತು. ಕೊನೆ ಹಂತದಲ್ಲಿ ಕೈಬಿಟ್ಟಿದ್ದಕ್ಕೆ ನನಗೆ ನೋವಾಗಿದೆ. ನೀವೇ ನನ್ನ ಸ್ಥಿತಿಯಲ್ಲಿದ್ದರೆ ಏನು ಮಾಡುತ್ತೀರಿ ಎಂದು ಪಾಟೀಲರು, ಕುಮಾರಸ್ವಾಮಿ ಅವರನ್ನೇ ಪ್ರಶ್ನಿಸಿದರು’ ಎಂದು ಮೂಲಗಳು ಹೇಳಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ನಿಮ್ಮ ನೋವು ನನಗೆ ಅರ್ಥವಾಗಿದೆ. ರಾಹುಲ್ ಗಾಂಧಿ ಅವರ ಗಮನಕ್ಕೆ ತರುವೆ’ ಎಂದು ಭರವಸೆ ಕೊಟ್ಟಿದ್ದಲ್ಲದೇ, ರಾಹುಲ್ ಆಪ್ತರಿಗೆ ಸಂದೇಶವನ್ನೂ ರವಾನಿಸಿದರು.

ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಕರೆ ಮಾಡಿದ ಕುಮಾರಸ್ವಾಮಿ, ‘ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು, ಜಾತ್ಯತೀತ ಶಕ್ತಿಗಳು ಒಂದಾಗಿ ಕೆಲಸ ಮಾಡಬೇಕು ಎಂಬುದು ನಿಮ್ಮ ಹಾಗೂ ನನ್ನ ಆಶಯ. ನಿಮ್ಮ ಪಕ್ಷದ ಹಿರಿಯ ನಾಯಕರ ಸಹಕಾರದಿಂದ ಅದು ಸಾಕಾರವಾಗಿದೆ. ನಿಮ್ಮಂತಹ ಹಿರಿಯರು ಸರ್ಕಾರದ ಜತೆಗಿದ್ದು, ಕೆಲಸ ಮಾಡಬೇಕು ಎಂಬುದು ನನ್ನ ಅಭಿಲಾಷೆ. ಜೂನ್ 13ರಂದು ಸಮನ್ವಯ ಸಮಿತಿ ಸಭೆ ಇದ್ದು, ಅಲ್ಲಿಯೂ ಚರ್ಚೆ ಮಾಡೋಣ. ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ನಾಯಕರು ಹೊಂಚು ಹಾಕಿರುವುದು ನಿಮಗೆ ಗೊತ್ತಿದೆ. ಈ ಹೊತ್ತಿನಲ್ಲಿ ಹಿರಿಯರಾದ ನೀವೆಲ್ಲ ಬೀದಿಗೆ ಇಳಿದರೆ ರಾಜ್ಯದ ಜನರಿಗೆ ತಪ್ಪು ಸಂದೇಶ ಹೋದಂತಾಗುತ್ತದೆ. ಇದಕ್ಕೆ ಅವಕಾಶ ನೀಡುವುದು ಬೇಡ. ನಾಲ್ಕು ಗೋಡೆಯೊಳಗೆ ಕುಳಿತು ಚರ್ಚಿಸೋಣ’ ಎಂದು ಮನವರಿಕೆ ಮಾಡುವ ಯತ್ನ ಮಾಡಿದರು.

ಹಿರಿಯ ಶಾಸಕ ಎಚ್.ಕೆ. ಪಾಟೀಲ, ಡಾ. ಸುಧಾಕರ್‌, ಎಂಟಿಬಿ ನಾಗರಾಜ್ ಅವರ ಜತೆಗೂ ಮಾತನಾಡಿದರು. ಸಚಿವ ಸ್ಥಾನ ಸಿಗದ ಕಾರಣಕ್ಕೆ ಬೇಸರಗೊಂಡಿರುವ ಆದರೆ, ಬಹಿರಂಗವಾಗಿ ಅಪಸ್ವರ ವ್ಯಕ್ತಪಡಿಸದ 20ಕ್ಕೂ ಹೆಚ್ಚು ಶಾಸಕರಿಗೆ ಕರೆ ಮಾಡಿದರು.

‘ಮೈತ್ರಿ ಸರ್ಕಾರ ಐದು ವರ್ಷ ಸುಭದ್ರವಾಗಿ ನಡೆಯುತ್ತದೆ. ಯಾರೊಬ್ಬರೂ ರಾಜೀನಾಮೆ ನೀಡುವುದು ಬೇಡ. ಅಂತಹ ಆಲೋಚನೆ ಸುಳಿಯುವುದು ಬೇಡ. ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ನಮ್ಮ ಪಕ್ಷದ ಶಾಸಕರಷ್ಟೇ ಅಲ್ಲದೇ, ನಿಮ್ಮೆಲ್ಲರ ಹಿತ ಕಾಪಾಡುವುದಾಗಿ ಮಾತುಕತೆ ವೇಳೆ ಭರವಸೆ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

*

‘ಕೆಲಸ ಮಾಡಲು ಖಾತೆ ಮುಖ್ಯವಲ್ಲ’ 

ಬೆಂಗಳೂರು: ಒಳ್ಳೆಯ ಕೆಲಸ ಮಾಡಲು ಇಂತಹ ಖಾತೆಯೇ ಬೇಕು ಎಂದು ಪಟ್ಟು ಹಿಡಿಯುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ಜಿ.ಟಿ. ದೇವೇಗೌಡ, ಸಿ.ಎಸ್. ಪುಟ್ಟರಾಜು ಇಂತಹದೇ ಖಾತೆ ಬೇಕು ಎಂದು ಬೇಡಿಕೆ ಇಟ್ಟಿದ್ದಾರಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ‘ಖಾತೆ ಹಂಚಿಕೆ ಮುನ್ನ ಇಂತಹ ಖಾತೆಯೇ ಬೇಕು ಎಂದು ಯಾರೂ ನನ್ನನ್ನು ಕೇಳಲಿಲ್ಲ. ಯಾರಿಗೆ ಯಾವ ಖಾತೆ ಹಂಚಿಕೆ ಮಾಡಬೇಕು ಎಂದು ಲೆಕ್ಕಾಚಾರ ಮಾಡಿ ಕೆಲವೊಮ್ಮೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಕೆಲಸ ಮಾಡಲು ಮನಸ್ಸಿದ್ದರೆ ಯಾವ ಖಾತೆಯಾದರೆ ಏನು’ ಎಂದು ಅವರು ಮರು ಪ್ರಶ್ನೆ ಹಾಕಿದರು.

ಉನ್ನತ ಶಿಕ್ಷಣ ಅಥವಾ ಸಣ್ಣ ನೀರಾವರಿ ಏನು ಸಣ್ಣ ಖಾತೆಗಳೇ? ಅವೂ ಉತ್ತಮ ಖಾತೆಗಳಾಗಿವೆ. ಮೊದಲು ಸಚಿವರಾಗಬೇಕು ಎಂದು ಪಟ್ಟು ಹಿಡಿಯುತ್ತಾರೆ. ಬಳಿಕ ಇಂತಹದೇ ಖಾತೆ ಬೇಕು, ವಿಧಾನಸೌಧದ ಮೂರನೇ ಮಹಡಿಯಲ್ಲಿ ಇಂತಹದೇ ಕೊಠಡಿ ಬೇಕು ಎಂದು ಹಟ ಮಾಡುತ್ತಾರೆ. ಅದಾದ ಬಳಿಕ ನಿರ್ದಿಷ್ಟ ಬಂಗಲೆ ಬೇಕು ಎಂದು ಕೇಳುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry