ಸೋಮವಾರ, ಡಿಸೆಂಬರ್ 9, 2019
24 °C
‘ಕೆಂಪೇಗೌಡ ವಂಶಸ್ಥರ ಕೊಡುಗೆಗಳ’ ಕುರಿತು ವಿಚಾರ ಸಂಕಿರಣದಲ್ಲಿ ಡಿಸಿಎಂ ಜಿ.ಪರಮೇಶ್ವರ

ಪರ್ಯಾಯ ನಗರಗಳ ಅಭಿವೃದ್ಧಿ: ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ಯಾಯ ನಗರಗಳ ಅಭಿವೃದ್ಧಿ: ಚಿಂತನೆ

ಬೆಂಗಳೂರು: ಬೆಂಗಳೂರಿನ ಸುತ್ತಮುತ್ತ ಪರ್ಯಾಯ ನಗರಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ಮಾಡಬೇಕಾಗಿದೆ  ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಹೇಳಿದರು.

‘ಕರ್ನಾಟಕ ನಿರ್ಮಾಣದಲ್ಲಿ ಕೆಂಪೇಗೌಡರ ವಂಶಸ್ಥರ ಕೊಡುಗೆಗಳು’ ಕುರಿತು ಶನಿವಾರ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್‌ ಮತ್ತು ಕೃಷಿಕ ಸಾಹಿತ್ಯ ಪರಿಷತ್‌ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ನಗರದ ಜನಸಂಖ್ಯೆ 1.30 ಕೋಟಿಗೆ ಏರಿದೆ. ಇನ್ನೆಷ್ಟು ಜನಸಾಂದ್ರತೆ ತಡೆದುಕೊಳ್ಳಬಹುದು. ಒಂದು ವೇಳೆ ಕಾವೇರಿ ನೀರು ಪೂರೈಕೆ ಸ್ಥಗಿತಗೊಂಡರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಆಲೋಚಿಸಬೇಕು. ಈ ನಿಟ್ಟಿನಲ್ಲಿ ತುಮಕೂರು, ಕೋಲಾರ, ರಾಮನಗರ ನಗರಗಳ ಅಭಿವೃದ್ಧಿ ಮಾಡಬೇಕು’ ಎಂದರು.

‘ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃ ಎಂಬುದಷ್ಟೇ ಗೊತ್ತಿದೆ. ಅವರ ಬಗ್ಗೆ ಇನ್ನಷ್ಟು ತಿಳಿಸುವ ಕೆಲಸ ಆಗಬೇಕು’ ಎಂದು ಅವರು ಆಶಿಸಿದರು.

‘ವಿದೇಶದಲ್ಲಿ ಒಂದು ಗೋಡೆ ಕಟ್ಟಿದರೂ ಅದಕ್ಕೊಂದಿಷ್ಟು ಪ್ರಚಾರ ನೀಡಿ, ಆ ಪ್ರದೇಶಕ್ಕೆ ಪ್ರವೇಶ ಶುಲ್ಕ ಪಡೆದು ಇತಿಹಾಸ ಹೇಳುತ್ತಾರೆ. ನಮ್ಮ ಇತಿಹಾಸವೇನೋ ದೊಡ್ಡದಿದೆ. ಆದರೆ, ಅದನ್ನು ಇತರರಿಗೆ ತಿಳಿ ಹೇಳುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಆದರೆ, ಇದೇ ಮೊದಲ ಬಾರಿಗೆ ಕೆಂಪೇಗೌಡರಿಗೆ ನಮನ ಸಲ್ಲಿಸಲು ಅವಕಾಶ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಹುಲವಾಡಿ ಜಿ. ರಮೇಶ್ ಮಾತನಾಡಿ,‘ಪರಮೇಶ್ವರ್, ಕೆಂಪೇಗೌಡರ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡೇ ನಗರವನ್ನು ಅಭಿವೃದ್ಧಿ ಮಾಡಲಿ. ಈಗಾಗಲೇ ಘೋಷಿಸಿರುವ ಉಪನಗರಗಳಲ್ಲಿ ಸರಿಯಾದ ಮೂಲಸೌಲಭ್ಯ ಒದಗಿಸಬೇಕು. ಮುಖ್ಯವಾಗಿ ಸ್ವಚ್ಛ ನಗರ, ವಿಶಾಲ ರಸ್ತೆಗಳು, ಸಂಚಾರ ದಟ್ಟಣೆ ನಿಯಂತ್ರಣ ಮಾಡಬೇಕು ಎಂದು ಹೇಳಿದರು.

ಉಪನಗರ ಎಂದು ಘೋಷಣೆ ಮಾಡಿರುವ ನಗರಗಳಲ್ಲಿ ಉತ್ತಮ ಮೂಲಸೌಕರ್ಯ ನೀಡಿದರೆ ನಗರದ ಟ್ರಾಫಿಕ್, ನೀರಿನ ಸಮಸ್ಯೆ ಪರಿಹಾರ ಮಾಡಬಹುದು ಎಂದರು.

ಹಿರಿಯ ವಕೀಲ ಸಿ.ಎಚ್.ಹನುಮಂತರಾಯ, ಸಂಶೋಧಕ ಎಂ.ಜಿ.ನಾಗರಾಜು, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಎಲ್.ಎನ್. ಮುಕುಂದರಾಜ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎನ್.ಸತ್ಯಪ್ರಕಾಶ್, ನಾಡಪ್ರಭು ರಾಜ್ಯ ಒಕ್ಕಲಿಗರ ಕೇಂದ್ರದ ಅಧ್ಯಕ್ಷ ನಾಡಪ್ರಭು ಲಕ್ಕೇಗೌಡ ಅವರನ್ನು ಸನ್ಮಾನಿಸಲಾಯಿತು.

ವಿ.ವಿ.ಪುರ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಬೂದನೂರು ಪುಟ್ಟಸ್ವಾಮಿ ಅವರು, ‘ಕೆಂಪೇಗೌಡ ರಾಜವಂಶಸ್ಥರ ಸಂಕ್ಷಿಪ್ತ ಇತಿಹಾಸ ಮತ್ತು ಕೊಡುಗೆಗಳು’, ಸಾಹಿತಿ ಎಂ.ಎಸ್.ಶಶಿಕಲಾಗೌಡ ಅವರು ‘ಕೆಂಪೇಗೌಡರ ಕಾಲದ ಕುಣಿಗಲ್ ಸಂಕ್ಷಿಪ್ತ ಚರಿತ್ರೆ’, ಕೆಂಪೇಗೌಡ ರಾಜವಂಶ ಸಂಶೋಧನಾ ಮತ್ತು ಪ್ರಚಾರ ಪರಿಷತ್‌ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಅವರು,‘ಕರ್ನಾಟಕದ ನಿರ್ಮಾಣದಲ್ಲಿ ಕೆಂಪೇಗೌಡ ರಾಜವಂಶದ ರಾಣಿ ಕುಣಿಗಲ್ ವೆಂಕಟಕೃಷ್ಣಾಜಮ್ಮಣ್ಣಿ ಕೊಡುಗೆಗೆಗಳು’ ಕುರಿತು ವಿಚಾರ ಮಂಡಿಸಿದರು.

ಈ ವೇಳೆ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಪಾಂಡುಕುಮಾರ್, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ನಾಗರಾಜ್ ಇದ್ದರು.

ಬಿಬಿಎಂಪಿ ವಿಭಜನೆಗೆ ವಿರೋಧ: ಮನವಿ

ಬಿಬಿಎಂಪಿ ವಿಭಜನೆಯ ಚರ್ಚೆ ಮತ್ತೆ ಆರಂಭವಾಗಿದೆ. ಹಾಗೆ ವಿಭಜಿಸಬಾರದು ಎಂದು ಒತ್ತಾಯಿಸಿ ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿ ವತಿಯಿಂದ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು.

**

ನಮ್ಮ ನಾಡಿನ ಇತಿಹಾಸವೇನೋ ದೊಡ್ಡದಿದೆ. ಆದರೆ, ಅದನ್ನು ಇತರರಿಗೆ ತಿಳಿ ಹೇಳುವುದರಲ್ಲಿ ಹಿಂದೆ ಬಿದ್ದಿದ್ದೇವೆ.

– ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)