ಸೋಮವಾರ, ಡಿಸೆಂಬರ್ 9, 2019
22 °C
ಬೆಂಗಳೂರು ಕೇಂದ್ರ ವಿ.ವಿಯಿಂದ ಜಾಗತಿಕ ಭಾಷೆಗಳ ಕೋರ್ಸ್‌ ಪ್ರಾರಂಭ

ಹೊಸದಾಗಿ 4 ವಿದೇಶಿ ಭಾಷೆ ಕಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿನ ಜಾಗತಿಕ ಭಾಷೆಗಳ ವಿಭಾಗ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಅಲ್ಪಾವಧಿ ಮತ್ತು ಪೂರ್ಣಾವಧಿ ಕೋರ್ಸ್‌ಗಳನ್ನು ಪರಿಚಯಿಸಲು ತೀರ್ಮಾನಿಸಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಎಸ್.ಜಾಫೆಟ್‌, ‘ಹೀಬ್ರೂ, ಪೊಲಿಶ್, ಡಚ್ ಮತ್ತು ಥಾಯ್ ಭಾಷೆಗಳ ಕೋರ್ಸ್‌ಗಳನ್ನು ಹೊಸದಾಗಿ ಆರಂಭಿಸುತ್ತಿದ್ದೇವೆ. ವಿದೇಶಕ್ಕೆ ಹೋಗಿ ವೃತ್ತಿ ಪ್ರಾರಂಭಿಸುವ ಆಲೋಚನೆ ಇರುವವರು ಅಲ್ಲಿನ ಭಾಷೆ ಕಲಿಯುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅವರ ಸಂವಹನಕ್ಕೆ ಅನುಕೂಲವಾಗುವಂತೆ ಪಠ್ಯಕ್ರಮ ರೂಪಿಸಿ ತರಗತಿಗಳನ್ನು ನಡೆಸುತ್ತೇವೆ’ ಎಂದರು.

ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ವಿಭಾಗದ ಮುಖ್ಯಸ್ಥೆ ಜ್ಯೋತಿ ವೆಂಕಟೇಶ್, ‘ಫ್ರೆಂಚ್‌ ಭಾಷೆಯಲ್ಲಿ ಐದು ವರ್ಷದ ಸ್ನಾತಕೋತ್ತರ ಕೋರ್ಸ್‌ನ್ನು ಪರಿಚಯಿಸುತ್ತಿದ್ದೇವೆ. ಮೂರು ವರ್ಷ ಪೂರೈಸಿದ ನಂತರ ಹೊರಹೋಗುವ ಆಯ್ಕೆಯೂ ಇದೆ. ಹೀಗೆ ಹೋಗುವವರಿಗೆ ಪದವಿ ನೀಡುತ್ತೇವೆ. 5 ವರ್ಷ ಪೂರ್ಣಗೊಳಿಸಿದವರಿಗೆ ಸ್ನಾತಕೋತ್ತರ ಪದವಿ ನೀಡುತ್ತೇವೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಸ್ಪ್ಯಾನಿಷ್‌ ಮತ್ತು ಜರ್ಮನ್‌ ಭಾಷೆಗಳಲ್ಲಿ 5 ವರ್ಷಗಳ ಸ್ನಾತಕೋತ್ತರ ಪದವಿ ಪ್ರಾರಂಭಿಸುವ ಆಲೋಚನೆ ಇದೆ’ ಎಂದರು.

ಇದರೊಂದಿಗೆ ಪ್ರಾಥಮಿಕ ಕಲಿಕಾ ಅವಧಿಯ ಕೋರ್ಸ್‌ಗಳಾದ ಪ್ರಮಾಣ ಪತ್ರ 1 ಮತ್ತು 2, ಡಿಪ್ಲೊಮಾ 1 ಮತ್ತು 2ನ್ನು ಪ್ರಾರಂಭಿಸಿದ್ದೇವೆ. ಇಲ್ಲಿ ಜರ್ಮನ್, ಸ್ಪ್ಯಾನಿಷ್‌, ಕೊರಿಯನ್‌, ರಷ್ಯನ್, ಚೀನೀಸ್, ಇಟಾಲಿಯನ್ ಮತ್ತು ಅರೇಬಿಕ್ ಭಾಷೆಗಳನ್ನು ಕಲಿಸುತ್ತೇವೆ. ಇದರ ಕಲಿಕಾ ಅವಧಿಯನ್ನು ಎಂಟು ತಿಂಗಳಿನಿಂದ ನಾಲ್ಕು ತಿಂಗಳಿಗೆ ಕಡಿತಗೊಳಿಸಲಾಗಿದೆ. ಉನ್ನತ ಕಲಿಕಾ ಕೋರ್ಸ್‌ಗಳಾದ ಉನ್ನತ ಡಿಪ್ಲೊಮಾ ಮತ್ತು ಅಡ್ವಾನ್ಸ್ ಡಿಪ್ಲೊಮಾ ತರಗತಿಗಳು ಎಂದಿನಂತೆ ಎಂಟು ತಿಂಗಳು ಇರುತ್ತವೆ ಎಂದು ತಿಳಿಸಿದರು.

ಫ್ರೆಂಚ್‌ ಫಾರ್‌ ಹೋಟೆಲ್ ಮ್ಯಾನೇಜ್‌ಮೆಂಟ್:  ಹೋಟೆಲ್ ಮ್ಯಾನೇಜ್‌ಮೆಂಟ್‌ನ ಫ್ರೆಂಚ್ ಕೋರ್ಸ್‌ಗಳಿಗೆ ಸಹಕಾರಿಯಾಗುವ ‘ಬಾನ್‌ ಸೆಜುರ್‌’ ಪಠ್ಯಪುಸ್ತಕ ಶನಿವಾರ ಬಿಡುಗಡೆಗೊಳ್ಳಲಿದೆ. ಜಾಗತಿಕ ಭಾಷೆಗಳ ಕೇಂದ್ರದ ಮುಖ್ಯಸ್ಥೆ ಜ್ಯೋತಿ ವೆಂಕಟೇಶ್, ಲೇಖಕರಾದ ಡಾ. ಸುಮನ್ ವೆಂಕಟೇಶ್ ಮತ್ತು ಸಂತಾನ ಕೃಷ್ಣನ್ ಸಹಯೋಗದಲ್ಲಿ ಪುಸ್ತಕ ರಚಿಸಲಾಗಿದೆ.

ವಿತ್ತಾಧಿಕಾರಿ ನೇಮಕವೇ ಆಗಿಲ್ಲ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕಾರ್ಯನಿರ್ವಹಣೆ ಪ್ರಾರಂಭಿಸಿ ಒಂದು ವರ್ಷ ಕಳೆದಿದ್ದರೂ ಇಲಾಖೆ ಇಲ್ಲಿಗೆ ವಿತ್ತಾಧಿಕಾರಿಯನ್ನೇ ನೇಮಿಸಿಲ್ಲ. ಸದ್ಯ ಅವರ ಎಲ್ಲಾ ಕೆಲಸವನ್ನೂ ಕುಲಪತಿಯೇ ನಿರ್ವಹಿಸುತ್ತಿದ್ದಾರೆ.

ರಾಜ್ಯ ಸರ್ಕಾರದ ಉನ್ನತ ಶಿಕ್ಷಣದ ನಿಯಮಗಳ ಪ್ರಕಾರ, ಹಣಕಾಸು ಬಿಡುಗಡೆಗೆ ಸಹಿ ಹಾಕುವ ಅಧಿಕಾರ ಕುಲಪತಿಗೆ ಇಲ್ಲ. ಆದರೆ, ಇಲ್ಲಿ ವಿತ್ತಾಧಿಕಾರಿ ಇಲ್ಲದಿರುವುದರಿಂದ ಕುಲಪತಿ ಎಸ್. ಜಾಫೆಟ್‌ ನೇರವಾಗಿ ಹಣ ಬಿಡುಗಡೆಗೆ ಸಹಿ ಹಾಕುತ್ತಿದ್ದಾರೆ.

ವಿತ್ತಾಧಿಕಾರಿ ನೇಮಿಸುವಂತೆ ಒಂದು ವರ್ಷದ ಹಿಂದೆಯೇ ಉನ್ನತ ಶಿಕ್ಷಣ ಇಲಾಖೆಗೆ ಜಾಫೆಟ್‌ ಪತ್ರ ಬರೆದಿದ್ದಾರೆ. ಸಿಬ್ಬಂದಿ ಕೊರತೆಯಿಂದ ಇಲಾಖೆ ವಿತ್ತಾಧಿಕಾರಿಯನ್ನು ನೇಮಿಸಿಲ್ಲ. ಹೀಗಾಗಿ ಕುಲಪತಿಯೇ ಎಲ್ಲಾ ಚೆಕ್‌ಗಳಿಗೆ ಸಹಿ ಮಾಡುತ್ತಿದ್ದಾರೆ. ಇದು ಕಾನೂನು ಉಲ್ಲಂಘನೆ ಅಲ್ಲವೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ‘ಈ ಬಗ್ಗೆ ಹೆಚ್ಚಿನ ವಿಷಯ ತಿಳಿದಿಲ್ಲ. ವಿತ್ತಾಧಿಕಾರಿ ನೇಮಿಸಿದರೆ ಚೆಕ್‌ಗಳಿಗೆ ನಾನು ಸಹಿ ಮಾಡುವುದಿಲ್ಲ’ ಎಂದು ಜಾಫೆಟ್‌ ಸ್ಪಷ್ಟಪಡಿಸಿದರು.  ಕಟ್ಟಡಗಳ ಹಂಚಿಕೆ ಕುರಿತು ಕೇಂದ್ರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳ ಸಮನ್ವಯ ಮಾತುಕತೆ ನಡೆಸಲಾಗಿದೆ. ಇದೇ 16ರಂದು ಭೌತವಿಜ್ಞಾನ ಕಟ್ಟಡ ಹಾಗೂ ಆಗಸ್ಟ್‌ನಲ್ಲಿ ನ್ಯಾಚುರಲ್‌ ಸೈನ್ಸ್‌ ಕಟ್ಟಡವನ್ನು ತೆರವು ಮಾಡುವುದಾಗಿ ಬೆಂಗಳೂರು ವಿಶ್ವವಿದ್ಯಾಲಯ ಒಪ್ಪಿದೆ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)